ಕರ್ನಾಟಕದಲ್ಲಿ ಕಿಡ್ನಿ ಕಾಯಿಲೆಯಿಂದ ಸಾಯುವವರ ಸಂಖ್ಯೆ ಮೂರು ಪಟ್ಟು ಏರಿಕೆ!
ಕಿಡ್ನಿ ಮತ್ತು ಮೂತ್ರ ಸಂಬಂಧಿತ ಕಾಯಿಲೆಗಳಿಂದ ಸಂಭವಿಸುವ ಸಾವುಗಳು ಕರ್ನಾಟಕದಲ್ಲಿ ಕಳೆದ ಒಂದು ದಶಕದಲ್ಲಿ ಮೂರು ಪಟ್ಟು ಹೆಚ್ಚಾಗಿರುವ ಆಘಾತಕಾರಿ ವಿಚಾರ ಬಯಲಾಗಿದೆ. ಎಂಸಿಸಿಡಿ ವರದಿ ಪ್ರಕಾರ, 2016ರಲ್ಲಿ 5,940 ಸಾವುಗಳು ಸಂಭವಿಸಿದ್ದರೆ, ಆ ಸಂಖ್ಯೆ 2025ರಲ್ಲಿ 18,730ಕ್ಕೆ ಏರಿಕೆಯಾಗಿದೆ. ಕಿಡ್ನಿ ವೈಫಲ್ಯವೇ ಈ ಸಾವುಗಳಿಗೆ ಪ್ರಮುಖ ಕಾರಣವಾಗಿದೆ.

ಮುಖ್ಯಾಂಶಗಳು
- ಕಿಡ್ನಿ ಸಂಬಂಧಿತ ಕಾಯಿಲೆಗಳಿಂದ ಮರಣ ಸಂಖ್ಯೆ 3 ಪಟ್ಟು ಹೆಚ್ಚಳ
- 45 ವರ್ಷ ಮೇಲ್ಪಟ್ಟವರಲ್ಲೇ ಹೆಚ್ಚಿನ ಸಾವು
- ಕಿಡ್ನಿ ಆರೋಗ್ಯದ ಬಗ್ಗೆ ಆಘಾತಕಾರಿ ವರದಿ ಪ್ರಕಟ
ಬೆಂಗಳೂರು, ಸೆಪ್ಟೆಂಬರ್ 29: ಕರ್ನಾಟಕದಲ್ಲಿ ಕಿಡ್ನಿ ಮತ್ತು ಮೂತ್ರ ಸಂಬಂಧಿತ ಕಾಯಿಲೆಗಳಿಂದ ಸಂಭವಿಸುತ್ತಿರುವ ಸಾವುಗಳ ಸಂಖ್ಯೆ ಕಳೆದ ಒಂದು ದಶಕದಲ್ಲಿ ಮೂರು ಪಟ್ಟು ಹೆಚ್ಚಾಗಿದೆ. 2016ರಲ್ಲಿ ಕಿಡ್ನಿ ಸಂಬಂಧಿತ ಕಾರಣಗಳಿಂದ 5,940 ಸಾವು ಸಂಭವಿಸಿದ್ದರೆ, 2025ರಲ್ಲಿ ಈ ಸಂಖ್ಯೆ 18,730ಕ್ಕೆ ಏರಿಕೆಯಾಗಿದೆ ಎಂದು ಮೆಡಿಕಲ್ ಸರ್ಟಿಫಿಕೇಷನ್ ಆಫ್ ಕಾಸ್ ಆಫ್ ಡೆತ್ (MCCD) ವರದಿ ಬಹಿರಂಗಪಡಿಸಿದೆ. 2025ರಲ್ಲಿ ವೈದ್ಯಕೀಯವಾಗಿ ದೃಢೀಕರಿಸಿದ ಒಟ್ಟು ಸಾವುಗಳ ಸಂಖ್ಯೆ ಸುಮಾರು 1.6 ಲಕ್ಷ. 2016ರಲ್ಲಿ ಈ ಸಂಖ್ಯೆ 1.4 ಲಕ್ಷಕ್ಕೂ ಹೆಚ್ಚು ಇತ್ತು. ಅಂದರೆ, ವೈದ್ಯಕೀಯವಾಗಿ ದೃಢೀಕರಿಸಿದ ಒಟ್ಟು ಸಾವಿನ ಪ್ರಮಾಣ ಶೇ 8ರಷ್ಟು ಮಾತ್ರ ಏರಿಕೆಯಾಗಿವೆ. ಆದರೆ ಕಿಡ್ನಿ ಮತ್ತು ಮೂತ್ರ ಸಂಬಂಧಿತ ಕಾಯಿಲೆಗಳಿಂದಾದ ಸಾವುಗಳಲ್ಲಿ ತೀವ್ರ ಏರಿಕೆ ಕಂಡುಬಂದಿದೆ.
ಕಿಡ್ನಿ ಸಂಬಂಧಿತ ಆರೋಗ್ಯ ಸಮಸ್ಯೆಗಳಿಗೆ ಕಾರಣವೇನು? ತಜ್ಞರು ಹೇಳುವುದೇನು?
ತಜ್ಞರ ಪ್ರಕಾರ, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಬೊಜ್ಜು ಸೇರಿದಂತೆ ಹಲವು ಅಪಾಯಕಾರಿ ಅಂಶಗಳ ಹೆಚ್ಚಳ ಇದಕ್ಕೆ ಕಾರಣವಾಗಿರಬಹುದು. ಜೀವನಶೈಲಿಯ ಬದಲಾವಣೆ ಸೇರಿದಂತೆ ಹಲವು ಕಾರಣಗಳ ಸಂಯೋಜನೆಯಿಂದ ಈ ಏರಿಕೆ ಕಂಡುಬಂದಿದೆ ಎಂದು ಯಶವಂತಪುರದ ಮಣಿಪಾಲ್ ಆಸ್ಪತ್ರೆ ಕನ್ಸಲ್ಟೆಂಟ್ ನೆಫ್ರಾಲಜಿಸ್ಟ್ ಡಾ. ದೀಪಕ್ ಚಿತ್ರಳ್ಳಿ ಹೇಳಿರುವುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆ ವರದಿ ಮಾಡಿದೆ.
‘ಮಧುಮೇಹ ನಿಯಂತ್ರಿಸದಿದ್ದರೆ ಕಿಡ್ನಿಗೆ ಹಾನಿ’
ಮಧುಮೇಹವನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಕಿಡ್ನಿಗೆ ಹಾನಿಯಾಗಬಹುದು ಅಥವಾ ಕಿಡ್ನಿ ವೈಫಲ್ಯ ಉಂಟಾಗಬಹುದು. ಮಧುಮೇಹ ಹೊಂದಿರುವ ಸುಮಾರು ಶೇ 40ರಷ್ಟು ಮಂದಿಯಲ್ಲಿ ಈ ಅಪಾಯ ಎದುರಾಗಬಹುದು ಎಂದು ಡಾ. ದೀಪಕ್ ಚಿತ್ರಳ್ಳಿ ತಿಳಿಸಿರುವುದನ್ನೂ ವರದಿ ಉಲ್ಲೇಖಿಸಿದೆ.
ಕಿಡ್ನಿಗೂ ಹೃದಯದ ಆರೋಗ್ಯಕ್ಕೂ ಇದೆ ನಂಟು
ಕಿಡ್ನಿ ಸಮಸ್ಯೆ ಮತ್ತಷ್ಟು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಕಿಡ್ನಿಯ ಕಾರ್ಯಕ್ಷಮತೆ ಕುಂದಿದಾಗ ರಕ್ತದೊತ್ತಡ ನಿಯಂತ್ರಣ ತಪ್ಪಬಹುದು. ಇದರಿಂದ ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗಬಹುದು. ಹೃದಯ ಸಂಬಂಧಿತ ಕಾಯಿಲೆಗಳು ಮತ್ತೆ ಕಿಡ್ನಿ ಸಮಸ್ಯೆಯನ್ನು ಮತ್ತಷ್ಟು ಉಲ್ಬಣಗೊಳಿಸಬಹುದು ಎಂದು ತಜ್ಞರು ಹೇಳಿದ್ದಾರೆ.
ವೈದ್ಯರ ಸಲಹೆಯಿಲ್ಲದೆ ಪ್ರೋಟೀನ್ ಸಪ್ಲಿಮೆಂಟ್ ತಗೊಳ್ಳುವುದು ಹಾನಿಕಾರಕವೇ?
ಯುವಕರಲ್ಲಿ ವೈದ್ಯರ ಸಲಹೆಯಿಲ್ಲದೆ ಪ್ರೋಟೀನ್ ಸಪ್ಲಿಮೆಂಟ್ ಬಳಸುತ್ತಿರುವ ಬಗ್ಗೆಯೂ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಪ್ರಮಾಣೀಕರಣವಿಲ್ಲದ ಉತ್ಪನ್ನಗಳಲ್ಲಿ ಕಿಡ್ನಿಗೆ ಹಾನಿ ಉಂಟುಮಾಡುವ ಅಂಶಗಳು ಇರಬಹುದು. ಇಂತಹ ಉತ್ಪನ್ನಗಳ ನಿರಂತರ ಬಳಕೆಯಿಂದ ಗಂಭೀರ ಅಪಾಯ ಎದುರಾಗಬಹುದು ಎಂದು ಡಾ. ಚಿತ್ರಳ್ಳಿ ಹೇಳಿದ್ದಾರೆ.
ಎಂಸಿಸಿಡಿ ವರದಿ ಪ್ರಕಾರ, 2025ರಲ್ಲಿ ಜನನಾಂಗ ಮತ್ತು ಮೂತ್ರಾಂಗ ವ್ಯವಸ್ಥೆಗೆ ಸಂಬಂಧಿಸಿದ ಕಾಯಿಲೆಗಳಿಂದ 18,730 ವೈದ್ಯಕೀಯವಾಗಿ ದೃಢೀಕರಿಸಿದ ಸಾವುಗಳು ಸಂಭವಿಸಿವೆ. ಇದು ಒಟ್ಟು ವೈದ್ಯಕೀಯವಾಗಿ ದೃಢೀಕರಿಸಿದ ಸಾವುಗಳ ಶೇ 11.8ರಷ್ಟಾಗಿದೆ. ರಕ್ತಪರಿಚಲನಾ ಮತ್ತು ಉಸಿರಾಟದ ಕಾಯಿಲೆಗಳ ನಂತರ ಇದು ಮೂರನೇ ಅತಿ ದೊಡ್ಡ ಸಾವಿನ ಕಾರಣವಾಗಿದೆ.
ಇದನ್ನೂ ಓದಿ: ಹೃದಯದ ಆರೋಗ್ಯಕ್ಕೆ ದೊಡ್ಡ ಬದಲಾವಣೆ ಬೇಡ, ದಿನನಿತ್ಯದ ಈ ಸಣ್ಣ ಅಭ್ಯಾಸಗಳೇ ಮುಖ್ಯ
2018ರ ಬಳಿಕ ಕಿಡ್ನಿ ಮತ್ತು ಮೂತ್ರ ಸಂಬಂಧಿತ ಕಾಯಿಲೆಗಳ ಸಾವುಗಳಲ್ಲಿ ಏರಿಕೆ ವೇಗ ಪಡೆದುಕೊಂಡಿದೆ. 2019ರಲ್ಲಿ 7,402 ಸಾವುಗಳು ದಾಖಲಾಗಿದ್ದರೆ, 2021ರಲ್ಲಿ 9,884, 2022ರಲ್ಲಿ 13,569 ಮತ್ತು 2024ರಲ್ಲಿ 17,689 ಸಾವುಗಳು ದಾಖಲಾಗಿವೆ. 2018ರಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಅದನ್ನು ಹೊರತುಪಡಿಸಿ 2012ರಿಂದ ಈ ವಿಭಾಗದ ಸಾವುಗಳ ಪ್ರಮಾಣ ಪ್ರತಿ ವರ್ಷವೂ ಹೆಚ್ಚಾಗಿದೆ.
ಕಿಡ್ನಿ ವೈಫಲ್ಯ: 45 ವರ್ಷ ಮೇಲ್ಪಟ್ಟವರೇ ಹೆಚ್ಚು
ಕಿಡ್ನಿ ವೈಫಲ್ಯದಿಂದ ಮೃತಪಟ್ಟವರಲ್ಲಿ ಹಿರಿಯರ ಪ್ರಮಾಣವೂ ಹೆಚ್ಚಿದೆ. 45 ವರ್ಷ ಮೇಲ್ಪಟ್ಟವರು ಒಟ್ಟು ಕಿಡ್ನಿ ವೈಫಲ್ಯದ ಸಾವುಗಳ ಶೇ 87.8ರಷ್ಟಿದ್ದಾರೆ. 70 ವರ್ಷ ಮೇಲ್ಪಟ್ಟವರಲ್ಲೇ 5,648 ಸಾವುಗಳು ದಾಖಲಾಗಿವೆ. ಇದು ಕಿಡ್ನಿ ವೈಫಲ್ಯದ ಒಟ್ಟು ಸಾವುಗಳ ಶೇ 37.7ರಷ್ಟಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




