ಕಾಂಬೋಡಿಯಾದಲ್ಲಿ ಸಿಲುಕಿಕೊಂಡ 5000 ಭಾರತೀಯರು; ಡಾಟಾ ಎಂಟ್ರಿ ಉದ್ಯೋಗದ ಆಸೆ ತೋರಿಸಿ ಸೈಬರ್ ಕ್ರೈಂಗೆ ಬಳಕೆ
5,000ಕ್ಕೂ ಹೆಚ್ಚು ಭಾರತೀಯರು ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿದ್ದಾರೆ, ಅಲ್ಲಿ ಅವರನ್ನು ಅವರ ಇಚ್ಛೆಗೆ ವಿರುದ್ಧವಾಗಿ ಕೂಡಿ ಹಾಕಿ ಭಾರತದ ಜನರಿಗೆ ಸೈಬರ್ ವಂಚನೆ ಮಾಡಲು ಬಳಸಿಕೊಳ್ಳಲಾಗುತ್ತಿದೆ. ವಂಚಕರು ಕಳೆದ ಆರು ತಿಂಗಳಲ್ಲಿ ಭಾರತದಲ್ಲಿ ಕನಿಷ್ಠ 500 ಕೋಟಿ ರೂಪಾಯಿಗಳನ್ನು ವಂಚಿಸಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ.
ಬೆಂಗಳೂರು, ಮಾರ್ಚ್.30: ಉದ್ಯೋಗದ ಆಸೆ ಮೇಲೆ ಕಾಂಬೋಡಿಯಾಕ್ಕೆ (Cambodia) ತೆರಳಲು ಪ್ಲಾನ್ ಮಾಡ್ತಿದ್ದರೆ ಕೂಡಲೇ ನಿಲ್ಲಿಸಿ. ಏಕೆಂದರೆ ಕಳೆದ 6 ತಿಂಗಳಲ್ಲಿ ಕಾಂಬೋಡಿಯಾದಲ್ಲಿ 5000 ಭಾರತೀಯರು ಒತ್ತೆಯಾಳಾಗಿ ಕೆಲಸ ಮಾಡುತ್ತಿದ್ದಾರೆ. ಡೇಟಾ ಎಂಟ್ರಿ (Data Entry) ಉದ್ಯೋಗದ ಆಮಿಷವೊಡ್ಡಿ ಸೈಬರ್ ಕ್ರೈಂ (Cyber Crime) ಕೆಲಸಕ್ಕೆ ಭಾರತೀಯರನ್ನು ಬಳಸಿಕೊಳ್ಳಲಾಗುತ್ತಿದೆ. ಆನ್ಲೈನ್ ವಂಚನೆ ಮಾಫಿಯಾ ಜಾಲದಲ್ಲಿ ದ.ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಸಿಲುಕಿಕೊಂಡಿದ್ದಾರೆ. ದುಷ್ಕರ್ಮಿಗಳು ಮೊದಲಿಗೆ ಕಾಂಬೋಡಿಯಾದಲ್ಲಿ ಭಾರತೀಯರನ್ನು ಕೂಡಿ ಹಾಕಿ ವಂಚನೆಗೆ ಒಪ್ಪಿಸಿ ಬಳಿಕ ಸೈಬರ್ ವಂಚನೆ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ತಮ್ಮ ಇಚ್ಛೆಗೆ ವಿರುದ್ಧವಾಗಿ ಮತ್ತು ಒತ್ತಾಯಪೂರ್ವಕವಾಗಿ ತವರಿನ ಜನರಿಗೆ ಸೈಬರ್ ವಂಚನೆ ಎಸಗುವಂತೆ ಕಾಂಬೋಡಿಯಾ ದುಷ್ಕರ್ಮಿಗಳು ಭಾರತೀಯರಿಗೆ ಹಿಂಸೆ ನೀಡುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕಳೆದ ಆರು ತಿಂಗಳಲ್ಲಿ ವಂಚಕರು ಭಾರತದಲ್ಲಿನ ಜನರಿಗೆ ಕನಿಷ್ಠ ಪಕ್ಷ ರೂ. 500 ಕೋಟಿ ವಂಚಿಸಿದ್ದಾರೆ ಎಂದು ಸರಕಾರ ಅಂದಾಜಿಸಿದೆ. ಇಡಿ ಅಧಿಕಾರಿಗಳ ಸೋಗಿನಲ್ಲಿ ಬೆದರಿಕೆಯೊಡ್ಡಿ ಹಣ ಕೀಳುವುದು, ಜಾಲತಾಣಗಳಲ್ಲಿ ನಕಲಿ ಖಾತೆ ತೆರೆದು ಭಾರತೀಯರಿಗೆ ವಂಚನೆ, ಕ್ರಿಪ್ಟೋಕರೆನ್ಸಿ, ಷೇರುಮಾರುಕಟ್ಟೆ ಹೂಡಿಕೆ ಹೆಸರಲ್ಲಿ ವಂಚನೆ ಮಾಡಿಸಲಾಗುತ್ತಿದೆ. ಭಾರತೀಯರಿಂದಲೇ ಭಾರತದ ಜನರಿಗೆ ಒತ್ತಾಯಪೂರ್ವಕವಾಗಿ ವಂಚನೆ ಮಾಡಿಸಲಾಗುತ್ತಿದೆ.
ಇದನ್ನೂ ಓದಿ:Lok Sabha Elections: ಚುನಾವಣಾ ಕಣದಲ್ಲಿ ಕೋಟಿ ಕೋಟಿ ಹಣ: ಈವರೆಗೆ ಸೀಜ್ ಆದ ಮೊತ್ತ ಕೇಳಿದ್ರೆ ಬೆಚ್ಚಿ ಬೀಳುತ್ತೀರಿ!
ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಒತ್ತಾಯಪೂರ್ವಕವಾಗಿ ಭಾರತದಲ್ಲಿನ ಜನರಿಗೆ ವಂಚಿಸಲು ಬಳಸಿಕೊಳ್ಳಲಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಪಾರ್ಸೆಲ್ ಗಳಲ್ಲಿ ನಾವು ಕೆಲವು ಸಂಶಯಾಸ್ಪದ ವಸ್ತುಗಳನ್ನು ಪತ್ತೆ ಹಚ್ಚಿದ್ದೇವೆ ಎಂದು ಕಾನೂನು ಜಾರಿ ಪ್ರಾಧಿಕಾರದ ಅಧಿಕಾರಿಗಳ ಸೋಗಿನಲ್ಲಿ ಜನರನ್ನು ಸುಲಿಯಲೂ ಬಳಸಿಕೊಳ್ಳಲಾಗುತ್ತಿದೆ. ಈವರೆಗೆ ಕಾಂಬೋಡಿಯಾದಲ್ಲಿ ಸಿಲುಕಿಕೊಂಡಿದ್ದ ಮೂವರು ಬೆಂಗಳೂರು ನಿವಾಸಿಗಳನ್ನು ಮರಳಿ ಭಾರತಕ್ಕೆ ಕರೆ ತರಲಾಗಿದೆ. ಕಳೆದ ವರ್ಷ ಡಿಸೆಂಬರ್ 30ರಂದು ಒಡಿಶಾದಲ್ಲಿನ ರೂರ್ಕೆಲಾ ಪೊಲೀಸರು ಸೈಬರ್ ಅಪರಾಧ ಗುಂಪನ್ನು ಭೇದಿಸಿದ ನಂತರ ಈ ವಿಷಯ ಬೆಳಕಿಗೆ ಬಂದಿದ್ದು, ಕಾಂಬೋಡಿಯಾಗೆ ಜನರನ್ನು ಸಾಗಿಸುವ ಕೃತ್ಯದಲ್ಲಿ ಭಾಗಿಯಾಗಿದ್ದ ಆರೋಪದಲ್ಲಿ ಎಂಟು ಮಂದಿಯನ್ನು ಬಂಧಿಸಲಾಗಿತ್ತು.
ಇನ್ನು ಈ ಘಟನೆ ಸಂಬಂಧ ಭಾರತೀಯರನ್ನು ರಕ್ಷಿಸಲು ಗೃಹ ಸಚಿವಾಲಯವು ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಹಾಗೂ ಇನ್ನಿತರ ರಕ್ಷಣಾ ತಜ್ಞರು ಸಭೆ ನಡೆಸಿದ್ದಾರೆ.
ಕಾಂಬೋಡಿಯಾದಲ್ಲಿ ನಡೆಯುತ್ತಿರುವ ಸೈಬರ್ ಅಪರಾಧದಿಂದ ಕಳೆದ ಆರು ತಿಂಗಳಲ್ಲಿ ಭಾರತೀಯರು ರೂ. 500 ಕೋಟಿ ನಷ್ಟ ಅನುಭವಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದು, ಏಜೆಂಟ್ ಗಳ ಜನರನ್ನು, ಬಹುತೇಕ ದೇಶದ ದಕ್ಷಿಣ ಭಾಗದ ಜನರನ್ನು ಬಲೆಗೆ ಕೆಡವಿಕೊಳ್ಳುತ್ತಿದ್ದು, ಅವರನ್ನೆಲ್ಲ ಡಾಟಾ ಎಂಟ್ರಿ ಉದ್ಯೋಗದ ನೆಪದಲ್ಲಿ ಕಾಂಬೋಡಿಯಾಗೆ ರವಾನಿಸುತ್ತಿದ್ದಾರೆ. ಅಲ್ಲಿ ಅವರನ್ನು ಸೈಬರ್ ವಂಚನೆಗೆ ಒತ್ತಾಯಪೂರ್ವಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಸಭೆ ಬಳಿಕ ಅಧಿಕಾರಿಗಳು ಮಾಹಿತಿ ನೀಡಿದ್ದರು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ