ಲೋಕಾಯುಕ್ತ ದಾಳಿ ವೇಳೆ ಚಿನ್ನಾಭರಣ ಬ್ಯಾಗ್ ಪಕ್ಕದ ಮನೆಗೆಸೆದ ಅಖ್ತರ್‌ ಅಲಿ, ಮುಂದೇನಾಯ್ತು?

ಕರ್ನಾಟಕದಾದ್ಯಂತ ಇಂದು (ಜುಲೈ 19) ಬೆಳ್ಳಂಬೆಳಗ್ಗೆ ಲೋಕಾಯುಕ್ತ 12 ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ಮಾಡಿದ್ದು, ಒಟ್ಟು 55 ಕಡೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದೆ. ಈ ವೇಳೆ ಅಧಿಕಾರಿಗಳ ನಿವಾಸದಲ್ಲಿ ಕೇಜಿಗಟ್ಟಲ್ಲೇ ಚಿನ್ನದ ಜೊತೆಗೆ ಆಸ್ತಿಪಾಸ್ತಿ ದಾಖಲೆಗಳು ಪತ್ತೆಯಾಗಿವೆ. ಇನ್ನು ಲೋಕಾಯುಕ್ತ ದಾಳಿ ವೇಳೆ ಅಧಿಕಾರಿಯೋರ್ವ ಚಿನ್ನಾಭರಣ ಇದ್ದ ಬ್ಯಾಗ್​ ಪಕ್ಕದ ಮನೆಗೆ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.

ಲೋಕಾಯುಕ್ತ ದಾಳಿ ವೇಳೆ ಚಿನ್ನಾಭರಣ ಬ್ಯಾಗ್ ಪಕ್ಕದ ಮನೆಗೆಸೆದ ಅಖ್ತರ್‌ ಅಲಿ, ಮುಂದೇನಾಯ್ತು?
ಅಖ್ತರ್‌ ಅಲಿ ಮನೆಯಲ್ಲಿ ಸಿಕ್ಕ ಚಿನ್ನ, ಹಣ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Jul 19, 2024 | 6:01 PM

ಬೆಂಗಳೂರು, (ಜುಲೈ 19): ಕರ್ನಾಟಕದ 54 ಕಡೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ (Lokayukta Raid) ನಡೆಸಿದ್ದು, ಈ ಸಂದರ್ಭ ಬೆಂಗಳೂರಿನಲ್ಲಿ ಭೂಮಾಪನ ಇಲಾಖೆ ಡೆಪ್ಯೂಟಿ ಕಂಟ್ರೋಲರ್ ಅಖ್ತರ್‌ ಅಲಿ ಎಂಬ ಅಧಿಕಾರಿಯ ಮನೆಗೆ ಲೋಕಾಯುಕ್ತ ದಾಳಿ ನಡೆಸಿದೆ. ಈ ವೇಳೆ ಅಖ್ತರ್‌ ಅಲಿ ಚಿನ್ನಾಭರಣ ಇದ್ದ ಬ್ಯಾಗ್​ ಅನ್ನು ಪಕ್ಕದ ಮನೆಗೆ ಎಸೆದು ಪಾರಾಗಲು ಯತ್ನಿಸಿದ್ದಾರೆ. ಇದನ್ನು ನೋಡಿದ ಲೋಕಾಯುಕ್ತ ಅಧಿಕಾರಿಗಳು ಪಕ್ಕದ ಮನೆಗೆ ಹೋಗಿ ಶೋಧ ನಡೆಸಿ ಚಿನ್ನಾಭರವಿದ್ದ ಬ್ಯಾಗ್​ ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪಕ್ಕದ ಮನೆಯ ಕಿಟಕಿಗೆ ಅಖ್ತರ್ ಆಲಿ ಮನೆ ಗೋಡೆ ಕನೆಕ್ಟ್‌ ಆಗಿದ್ದು, ಅಧಿಕಾರಿಗಳು ಮನೆಗೆ ಪ್ರವೇಶ ಮಾಡುತ್ತಿದ್ದಂತೆಯೇ ಅಖ್ತರ್ ಆಲಿ ಪಕ್ಕದ ಮನೆಯ ಕಿಟಕಿಯೊಳಗೆ ಚಿನ್ನ ಇದ್ದ ಬ್ಯಾಗ್ ಎಸೆದಿದ್ದ. ಪಕ್ಕದ ಮನೆಯ ಕಿಟಕಿಗೆ ಹತ್ತಿರದಲ್ಲೇ ಅಖ್ತರ್ ಆಲಿ ಮನೆಯ ಮೊದಲ ಅಂತಸ್ತು ಇದೆ. ಅಲ್ಲಿಂದ ಪಕ್ಕದ ಮನೆ ಕಿಟಕಿ ಒಳಗೆ ಬ್ಯಾಗ್‌ಗೆ ಚಿನ್ನ ತುಂಬಿ ಅಖ್ತರ್ ಆಲಿ ಎಸೆದಿದ್ದ. ಬ್ಯಾಗ್ ಎಸೆದಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ಅಧಿಕಾರಿಗಳು, ಕೂಡಲೇ ಹೋಗಿ ಪರಿಶೀಲನೆ ಮಾಡಿದಾಗ ಬ್ಯಾಗ್‌ನಲ್ಲಿ ಚಿನ್ನ ಇರುವುದು ಪತ್ತೆಯಾಗಿದೆ. ಕೂಡಲೇ ಬ್ಯಾಗನ್ನು ಲೋಕಾ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದ ಬ್ಯಾಗನ್ನು ಅಖ್ತರ್ ಆಲಿ ಮನೆಗೆ ತಂದು ಪರಿಶೀಲನೆ ಮಾಡಿದಾಗ, ಒಂದು ಬ್ಯಾಗ್ ತುಂಬಾ ಚಿನ್ನದ ಒಡವೆಗಳು ಇರುವುದು ಪತ್ತೆಯಾಗಿದೆ.

ಇದನ್ನೂ ಓದಿ: ಕರ್ನಾಟಕದ 55 ಕಡೆ ಲೋಕಾಯುಕ್ತ ದಾಳಿ, ಅಧಿಕಾರಿಗಳ ಮನೆಯಲ್ಲಿ ತಲಾಶ್​

ದಾಳಿ ವೇಳೆ ಮನೆಯಲ್ಲೇ ಇದ್ದ ಅಖ್ತರ್ ಆಲಿಯ ಬಳಿಯಿಂದ ಸದ್ಯ ಕೆಲವು ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆದು ತಂಡ ಪರಿಶೀಲನೆ ಮಾಡುತ್ತಿದೆ. ಕೆಲವು ದಾಖಲೆಗಳನ್ನೂ ಪಕ್ಕದ ಮನೆಯ ಕಿಟಕಿಯ ಮೂಲಕ ಅಲಿ ತಳ್ಳಿರುವ ಶಂಕೆ ಇದೆ. ಹೀಗಾಗಿ ಪಕ್ಕದ ಮನೆಯನ್ನೂ ಶೋಧ ನಡೆಸಲಾಗಿದೆ. ಇದುವರೆಗೆ ಅಖ್ತರ್ ಅಲಿ ಮನೆಯಲ್ಲಿ 25 ಲಕ್ಷ ರೂ. ನಗದು, 2.20 ಕೆಜಿ ಚಿನ್ನಾಭರಣ, 2 ಕೆಜಿ ಬೆಳ್ಳಿ ವಸ್ತುಗಳು, ಐವತ್ತಕ್ಕೂ ಹೆಚ್ಚು ದುಬಾರಿ ವಾಚ್‌ಗಳು, ಲಕ್ಷಾಂತರ ಮೌಲ್ಯದ ಡೈಮಂಡ್ ಆಭರಣಗಳು ಪತ್ತೆಯಾಗಿವೆ.

ಇನ್ನು ಈ ಬಗ್ಗೆ ಲೋಕಾಯುಕ್ತ ಎಸ್‌ಪಿ ವಂಶಿಕೃಷ್ಣ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಇಂದು ಬೆಂಗಳೂರು ಸಿಟಿ ಘಟಕದಿಂದ ಮೂರು ಆಫೀಸರ್ಸ್ ಮನೆ ದಾಳಿ ಮಾಡಲಾಗಿದೆ. ಅಖ್ತರ್ ಅವರ ಮನೆಯಲ್ಲೂ ಚಿನ್ನಾಭರಣ ಸಿಕ್ಕಿದೆ. ಈಗಾಗಲೇ 2.2 ಕೆಜಿ ಚಿನ್ನಾಭರಣ, 25 ಲಕ್ಷ ಹಣ ಸಿಕ್ಕಿದೆ. ಅವರು ಚಿನ್ನದ ಬ್ಯಾಗನ್ನು ಪಕ್ಕದ ಮನೆಗೆ ಎಸೆದಿದ್ದರು. ಅದನ್ನು ಕೂಡ ನಮ್ಮ ಟೀಂ ರಿಕವರಿ ಮಾಡಿದೆ. ಸದ್ಯ ಇನ್ನೂ ಪರಿಶೀಲನೆ ಮುಂದುವರೆದಿದೆ. ಬಿ.ಕೆ ರಾಜ ಹಾಗೂ ರಮೇಶ್ ಕುಮಾರ್ ಅವರ ಮನೆಯಲ್ಲಿ ಪರಿಶೀಲನೆ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ