ವಾಲ್ಮೀಕಿ ನಿಗಮ ಹಗರಣ: ಎಸ್​​ಐಟಿಯಿಂದ ಈವರೆಗೆ 85 ಕೋಟಿ ಮೌಲ್ಯದಷ್ಟು ಮುಟ್ಟುಗೋಲು

ವಾಲ್ಮೀಕಿ ನಿಗಮದಲ್ಲಾದ ಬಹುಕೋಟಿ ಹಗರಣ ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಗಿದೆ. ವಿಪಕ್ಷಗಳು ಈ ಬಗ್ಗೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಎಸ್​ಐಟಿ ಅಧಿಕಾರಿಗಳು ಪ್ರಕರಣದ ತನಿಖೆ ನಡೆಸಿದ್ದು, ಇದೀಗ 85 ಕೋಟಿ ರೂ. ಮೌಲ್ಯದಷ್ಟು ಎಸ್​​ಐಟಿ ಅಧಿಕಾರಿಗಳು ಮುಟ್ಟುಗೋಲು ಹಾಕಿದೆ.

ವಾಲ್ಮೀಕಿ ನಿಗಮ ಹಗರಣ: ಎಸ್​​ಐಟಿಯಿಂದ ಈವರೆಗೆ 85 ಕೋಟಿ ಮೌಲ್ಯದಷ್ಟು ಮುಟ್ಟುಗೋಲು
ವಾಲ್ಮೀಕಿ ನಿಗಮ ಹಗರಣ: ಎಸ್​​ಐಟಿಯಿಂದ ಈವರೆಗೆ 85 ಕೋಟಿ ಮೌಲ್ಯದಷ್ಟು ಮುಟ್ಟುಗೋಲು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Jul 19, 2024 | 6:28 PM

ಬೆಂಗಳೂರು, ಜುಲೈ 19: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಅಕ್ರಮವಾಗಿ ವರ್ಗಾವಣೆ ಪ್ರಕರಣದಲ್ಲಿ (Valmiki Development Corporation Scam) ಎಸ್​​ಐಟಿಯಿಂದ (SIT) ಈವರೆಗೆ 85 ಕೋಟಿ ರೂ. ಮೌಲ್ಯದಷ್ಟು ಮುಟ್ಟುಗೋಲು ಹಾಕಲಾಗಿದೆ. ನಗದು, ಬ್ಯಾಂಕ್​ನ ಹಣ ಸೇರಿದಂತೆ 2 ಕಾರುಗಳನ್ನು ಎಸ್​​ಐಟಿ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬೇರೆ ಬೇರೆ ಅಕೌಂಟ್​ಗಳಿಗೆ ಹಣ ವರ್ಗಾವಣೆ ಮಾಡಲಾಗಿದೆ.

18 ಅಕೌಂಟ್​ಗಳಿಗೆ 89 ಕೋಟಿ ರೂ. ಹಣ ವರ್ಗಾವಣೆ

ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ 187 ಕೋಟಿ 30 ಲಕ್ಷ ರೂ. ಹಣವಿತ್ತು. ಅದರಲ್ಲಿ 18 ಅಕೌಂಟ್​ಗಳಿಗೆ 89 ಕೋಟಿ ರೂ. ಹಣ ವರ್ಗಾವಣೆಯಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಕಲಾಪ ಸೋಮವಾರಕ್ಕೆ ಮುಂದೂಡಿಕೆಯಾದ್ದರಿಂದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈವರೆಗೂ 13 ಕೋಟಿ ರೂ. ಸಹ ಸೀಜ್ ಮಾಡಲಾಗಿದೆ. ರತ್ನಾಕರ ಬ್ಯಾಂಕ್ ನಿಂದ 5 ಕೋಟಿ ರೂ. ಹಣ ವಾಪಾಸ್ ಬಂದಿದೆ. ಒಟ್ಟು 85 ಕೋಟಿಗೂ ಅಧಿಕ ಹಣ ವಿವಿಧ ಹಂತದ ರಿಕವರಿಯಲ್ಲಿದೆ ಅಂತಾ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ವಾಲ್ಮೀಕಿ ನಿಗಮದಲ್ಲಿ ಅಕ್ರಮ ಆಗಿದೆ: ಆದ್ರೆ ಇದು ಸರ್ಕಾರಕ್ಕೆ ಸಂಬಂಧವಿಲ್ಲ ಎಂದ ಸಿಎಂ

ಬಿಜೆಪಿ-ಜೆಡಿಎಸ್​ನಿಂದ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ಪ್ರಸ್ತಾಪ ಮಾಡಿದ್ದು, ನಿಯಮ 69ರಡಿ ಚರ್ಚೆಗೆ ಸ್ಪೀಕರ್ ಅವಕಾಶ ಮಾಡಿಕೊಟ್ಟಿದ್ದಾರೆ. ಹಾಗಾಗಿ ಆ ಬಗ್ಗೆ ವಿಪಕ್ಷದವರು ಸದನದಲ್ಲಿ ಚರ್ಚಿಸಿದ್ದಾರೆ. ಮೂರು ದಿನಗಳ ಅಕ್ರಮ ಪ್ರಕರಣದ ಸದನದಲ್ಲಿ ಚರ್ಚೆ ಮಾಡಿದರು. ಯಾವುದೇ ವಿಚಾರ ಪ್ರಸ್ತಾಪ ಮಾಡಿದರೂ ಉತ್ತರ ಕೊಡುವ ಹಕ್ಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವಾಲ್ಮೀಕಿ ನಿಗಮದಲ್ಲಿ 89 ಕೋಟಿ 65 ಲಕ್ಷ ರೂ ಅವ್ಯವಹಾರ ಆಗಿದೆ ಅಂತಾ ಇಡಿ ಇತ್ತೀಚೆಗೆ ಮಾಧ್ಯಮ ಪ್ರಕಟಣೆ ಹೊರಡಿಸಿತ್ತು. ಅಲ್ಲದೇ, ನಾಲ್ಕು ರಾಜ್ಯಗಳ 23 ಕಡೆ ದಾಳಿ ಮಾಡಿತ್ತು. 18 ನಕಲಿ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗಿದ್ದು ನಂತ್ರ ಆ ನಕಲಿ ಖಾತೆಗಳಿಂದ ನಗದು ವಿತ್ ಡ್ರಾ ಮಾಡಲಾಗಿತ್ತು.

ಇದನ್ನೂ ಓದಿ: ಬಿಜೆಪಿ ಅವಧಿಯಲ್ಲಿನ 21 ಹಗರಣ ಪಟ್ಟಿ ಬಿಚ್ಚಿಟ್ಟ ಸಿದ್ದರಾಮಯ್ಯ: ಯಾವುವು? ಇಲ್ಲಿದೆ ನೋಡಿ

ಇದಕ್ಕೆ ಸಂಬಂಧ ಪಟ್ಟಂತೆ ನಾಗೇಂದ್ರ ಮತ್ತು ಬಸನಗೌಡ ದದ್ದಲ್ ಮನೆಯಲ್ಲಿ ದಾಖಲೆ ಪತ್ತೆಯಾಗಿದೆ ಅಂತಾ ಇಡಿ ಉಲ್ಲೇಖಿಸಿತ್ತು. ಜೊತೆಗೆ, ವಾಲ್ಮೀಕಿ ನಿಗಮದ ಹಣವನ್ನ ಚುನಾವಣೆಗೆ ಬಳಸಲಾಗಿದೆ ಎಂಬ ಸ್ಫೋಟಕ ಮಾಹಿತಿಯೂ ಬಹಿರಂಗವಾಗಿತ್ತು. ಅದರಲ್ಲೂ ಚುನಾವಣೆಯಲ್ಲಿ ಮದ್ಯ ಖರೀದಿ ಮಾಡಲು ಈ ಹಣ ಬಳಕೆ ಮಾಡಲಾಗಿತ್ತು. ಐಷಾರಾಮಿ ಕಾರುಗಳು, ಲ್ಯಾಂಬೋರ್ಗೀನಿ ಕಾರು ಖರೀದಿಗೆ ಹಣ ಬಳಸಿದ್ದಾರೆ ಅಂತಾ ಇಡಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.