ಬೆಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಿಂದ 5 ಹೊಸ ರೂಟ್‌ಗಳಿಗೆ ವಿಮಾನ ಸೇವೆ ಆರಂಭ!
ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚಳಿಗಾಲದ ವೇಳಾಪಟ್ಟಿಯಡಿ ಐದು ಹೊಸ ಮಾರ್ಗಗಳಿಗೆ ವಿಮಾನ ಸೇವೆಗಳನ್ನು ವಿಸ್ತರಿಸುವುದಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಘೋಷಿಸಿದೆ. ನೇಪಾಳದ ಕಠ್ಮಂಡು ಸೇರಿದಂತೆ ಕೊಯಮತ್ತೂರು, ಗೋವಾ, ಜೋಧ್‌ಪುರ್ ಹಾಗೂ ಮಧುರೈಗೆ ಹೊಸ ವಿಮಾನಗಳ ಸಂಚಾರ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.

ಮುಖ್ಯಾಂಶಗಳು
- ಬೆಂಗಳೂರಿನಿಂದ 5 ಹೊಸ ಮಾರ್ಗಗಳಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸೇವೆ.
- ನೇಪಾಳದ ಕಠ್ಮಂಡು ನಗರಕ್ಕೆ ನೇರ ಅಂತರರಾಷ್ಟ್ರೀಯ ವಿಮಾನಯಾನ ಆರಂಭ.
- ಕೊಯಮತ್ತೂರು, ಗೋವಾ, ಜೋಧ್‌ಪುರ್ ಹಾಗೂ ಮಧುರೈಗೆ ದೈನಂದಿನ ವಿಮಾನಗಳು.
ಬೆಂಗಳೂರು, ಅಕ್ಟೋಬರ್ 10: ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ಚಳಿಗಾಲದ ವೇಳಾಪಟ್ಟಿಯಡಿ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊಸದಾಗಿ ಐದು ಮಾರ್ಗಗಳಿಗೆ ವಿಮಾನ ಸೇವೆಗಳನ್ನು ವಿಸ್ತರಿಸುವುದಾಗಿ ಘೋಷಿಸಿದೆ. ಪ್ರಯಾಣಿಕರ ಬೇಡಿಕೆ ಮತ್ತು ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ಈ ಹೊಸ ವಿಮಾನಗಳನ್ನು ಪರಿಚಯಿಸಲಾಗುತ್ತಿದ್ದು, ಇದು ಬೆಂಗಳೂರಿನಿಂದ ದೇಶ ಹಾಗೂ ವಿದೇಶಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಲಿದೆ.
ಹೊಸ ವೇಳಾಪಟ್ಟಿಯಲ್ಲೇನಿದೆ?
ಹೊಸ ವೇಳಾಪಟ್ಟಿಯ ಪ್ರಕಾರ, ಬೆಂಗಳೂರಿನಿಂದ ನೇಪಾಳದ ರಾಜಧಾನಿ ಕಠ್ಮಂಡು ನಗರಕ್ಕೆ ನೇರ ಅಂತರರಾಷ್ಟ್ರೀಯ ವಿಮಾನಯಾನ ಸೇವೆ ಆರಂಭವಾಗಲಿದೆ. ಇದರೊಂದಿಗೆ ದೇಶೀಯ ವಿಮಾನಯಾನ ಜಾಲವನ್ನು ಬಲಪಡಿಸಲು ಬೆಂಗಳೂರಿನಿಂದ ಕೊಯಮತ್ತೂರು, ಗೋವಾ (ಮೋಪಾ), ಜೋಧ್‌ಪುರ್ ಹಾಗೂ ಮಧುರೈ ನಗರಗಳಿಗೆ ಹೊಸದಾಗಿ ದೈನಂದಿನ ವಿಮಾನ ಸೇವೆಗಳನ್ನು ಆರಂಭಿಸಲಾಗುತ್ತಿದೆ. ಇದು ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವಿನ ವ್ಯಾಪಾರ, ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ವಿನಿಮಯಕ್ಕೆ ಹೆಚ್ಚು ಸಹಕಾರಿಯಾಗಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಪ್ರಮುಖ ತಾಣಗಳಿಗೆ ಪ್ರಯಾಣ ಸುಲಭ
ಈ ಹೊಸ ಮಾರ್ಗಗಳ ಸೇರ್ಪದೆಯೊಂದಿಗೆ ಏರ್ ಇಂಡಿಯಾ ಎಕ್ಸ್‌ಪ್ರೆಸ್ ತನ್ನ ದೈನಂದಿನ ಒಟ್ಟು ವಿಮಾನಗಳ ಹಾರಾಟದ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲಿದೆ. ಮುಂಬರುವ ಚಳಿಗಾಲದಲ್ಲಿ ಪ್ರಯಾಣಿಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಹಾಗೂ ತಡೆರಹಿತ ವಿಮಾನಯಾನ ಸೌಲಭ್ಯ ಒದಗಿಸುವುದು ಸಂಸ್ಥೆಯ ಮುಖ್ಯ ಗುರಿಯಾಗಿದೆ. ಬೆಂಗಳೂರು ಕೇಂದ್ರಸ್ಥಾನದಿಂದ ಕಾರ್ಯನಿರ್ವಹಿಸುತ್ತಿರುವ ವಿಮಾನಯಾನ ಸಂಪರ್ಕಗಳು ವೃದ್ಧಿಸುತ್ತಿರುವುದರಿಂದ, ಐಟಿ ರಾಜಧಾನಿಯ ಜನರಿಗೆ ಹಾಗೂ ಉದ್ಯಮಿಗಳಿಗೆ ವಿಶ್ವದ ವಿವಿಧ ಪ್ರಮುಖ ತಾಣಗಳಿಗೆ ಪ್ರಯಾಣಿಸುವುದು ಇನ್ನಷ್ಟು ಸುಲಭವಾಗಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:10 am, Sat, 10 October 26




