ಮನೆ ಮುಂದೆ ನಿಲ್ಲಿಸುವ ವಾಹನಗಳಿಗೂ ಪಾರ್ಕಿಂಗ್ ಶುಲ್ಕ ವಿವಾದ: ಸಿಎಂಗೆ ಪತ್ರ ಬರೆದ ಸಚಿವ ರಾಮಲಿಂಗಾರೆಡ್ಡಿ
ಮನೆ ಮುಂದೆ ನಿಲ್ಲಿಸುವ ವಾಹನಗಳಿಗೂ ಪಾರ್ಕಿಂಗ್ ಶುಲ್ಕ ವಿಧಿಸುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಹೊಸ ನಿಯಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಈ ನಿಯಮ ಹಿಂಪಡೆಯುವಂತೆ ಸಚಿವ ರಾಮಲಿಂಗಾರೆಡ್ಡಿ ಅವರು ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಬೆಂಗಳೂರಿನ ಶಾಸಕರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡುವಂತೆಯೂ ಮನವಿ ಮಾಡಿದ್ದಾರೆ.

ಮುಖ್ಯಾಂಶಗಳು
- ಮನೆ ಮುಂದೆ ನಿಲ್ಲಿಸುವ ವಾಹನಗಳಿಗೂ ಪಾರ್ಕಿಂಗ್ ಶುಲ್ಕ
- ವಿವಾದಕ್ಕೆ ಕಾರಣವಾಗಿರುವ ಜಿಬಿಎಯ ಹೊಸ ನಿರ್ಧಾರ
- ಪಾರ್ಕಿಂಗ್ ಶುಲ್ಕ ವಿಧಿಸದಂತೆ ಸಿಎಂಗೆ ರಾಮಲಿಂಗಾರೆಡ್ಡಿ ಪತ್ರ
ಬೆಂಗಳೂರು, ಆಗಸ್ಟ್ 24: ಗ್ರೇಟರ್ ಬೆಂಗಳೂರು ಪ್ರಾಧಿಕಾರ ಜಾರಿಗೊಳಿಸಿರುವ ಹೊಸ ಪಾರ್ಕಿಂಗ್ ನಿಯಮಗಳು ನಗರದ ವಾಹನ ಸವಾರರಿಗೆ ತೀವ್ರ ಆಘಾತ ಉಂಟು ಮಾಡಿವೆ. ಮನೆ ಮುಂದೆ ವಾಹನ ನಿಲ್ಲಿಸಲು ತಿಂಗಳಿಗೆ 15 ಸಾವಿರ ರೂ ಶುಲ್ಕ ಪಾವತಿಸಿ ಪಾಸ್ ಪಡೆಯಬೇಕೆಂಬ ನಿಯಮಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಈ ವಿಚಾರವಾಗಿ ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಚಿವ ರಾಮಲಿಂಗರೆಡ್ಡಿ ಪತ್ರ ಬರೆದಿದ್ದಾರೆ. ಮನೆ ಮುಂದಿನ ವಾಹನಗಳಿಗೆ ಪಾರ್ಕಿಂಗ್ ಶುಲ್ಕ ವಿಧಿಸದಂತೆ ಅವರು ಸಲಹೆ ನೀಡಿದ್ದಾರೆ.
ಸಚಿವ ರಾಮಲಿಂಗರೆಡ್ಡಿ ಪತ್ರದಲ್ಲೇನಿದೆ?
ಬೆಂಗಳೂರು ನಗರದಲ್ಲಿ ರಸ್ತೆ, ಬದಿಯ ವಾಹನ ನಿಲುಗಡೆಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಪ್ರಸ್ತಾಪಿಸಲಾಗಿದೆ. ವಾರ್ಷಿಕವಾಗಿ 15,000 ರಿಂದ 25,000ದ ವರೆಗೆ ಶುಲ್ಕ ವಿಧಿಸುವ ಪ್ರಸ್ತಾವನೆ ಕುರಿತು ಸಾರ್ವಜನಿಕರಿಂದ ವಿವಿಧ ಅಭಿಪ್ರಾಯಗಳು, ಆತಂಕಗಳು ವ್ಯಕ್ತವಾಗುತ್ತಿವೆ. ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ರಸ್ತೆ ಬದಿಯ ಪಾರ್ಕಿಂಗ್ನಿಂದ ಉಂಟಾಗುತ್ತಿರುವ ಸಂಚಾರ ಸಮಸ್ಯೆಯನ್ನು ನಿಯಂತ್ರಿಸುವ ಅಗತ್ಯವಿರುವುದು ಸತ್ಯ. ಆದರೆ, ಈ ಸಂದರ್ಭದಲ್ಲಿ ಸಾಮಾನ್ಯ ನಾಗರಿಕರ ಆರ್ಥಿಕ ಪರಿಸ್ಥಿತಿಯನ್ನೂ ಪರಿಗಣಿಸುವುದು ಅತ್ಯಂತ ಮಹತ್ವದ್ದಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿಫಲ ನೀತಿಗಳ ಫಲವಾಗಿ ಈಗಾಗಲೇ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್, ಜಿಎಸ್‌ಟಿ, ಟೋಲ್ ಸೇರಿದಂತೆ ವಿವಿಧ ವೆಚ್ಚಗಳ ಹೆಚ್ಚಳದಿಂದ ಮಧ್ಯಮ ವರ್ಗ ಮತ್ತು ಸಾಮಾನ್ಯ ಕುಟುಂಬಗಳು ಆರ್ಥಿಕ ಒತ್ತಡವನ್ನು ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ವಾಹನ ಹೊಂದಿರುವುದಕ್ಕಾಗಿ ಹೆಚ್ಚುವರಿಯಾಗಿ ಪಾರ್ಕಿಂಗ್ ಶುಲ್ಕ ವಿಧಿಸುವುದು ಮತ್ತೊಂದು ಆರ್ಥಿಕ ಹೊರೆಯಾಗುವ ಸಾಧ್ಯತೆಯಿದೆ ಎಂದು ರಾಮಲಿಂಗಾರೆಡ್ಡಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಸಭೆ ನಡೆಸಿ ಮುಂದಿನ ತೀರ್ಮಾನಕ್ಕೆ ಮನವಿ
ಕರ್ನಾಟಕ ಸರ್ಕಾರವು ಸಾಮಾನ್ಯ ಜನರ ಜೀವನಮಟ್ಟ ಸುಧಾರಿಸಲು ಹಾಗೂ ಆರ್ಥಿಕವಾಗಿ ನೆರವಾಗಲು ವಿವಿಧ ಜನಪರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದೆ. ಇಂತಹ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ವಾಸಿಸುವ ಕುಟುಂಬಗಳ ಮೇಲೆ ಮತ್ತೊಂದು ಅನಿವಾರ್ಯ ಆರ್ಥಿಕ ಹೊರ ಬೀಳದಂತೆ ಎಚ್ಚರಿಕೆ ವಹಿಸುವುದು ಸೂಕ್ತ. ಬೆಂಗಳೂರು ನಗರದಲ್ಲಿ ದೊಡ್ಡ ನಿವೇಶನ ಅಥವಾ ಸ್ವಂತ ಮನೆ ಹೊಂದಿರುವ ಕೆಲವರು ತಮ್ಮ ವಾಹನಗಳನ್ನು ಮನೆಯ ಆವರಣದಲ್ಲೇ ನಿಲ್ಲಿಸಲು ಸಾಧ್ಯವಾಗಬಹುದು. ಆದರೆ ಬಹುತೇಕ ಮಧ್ಯಮ ವರ್ಗದ ಕುಟುಂಬಗಳು ಸೀಮಿತ ಜಾಗದ ಮನೆಗಳು ಅಥವಾ ಅಪಾರ್ಟ್‌ಮೆಂಟ್ಗಳಲ್ಲಿ ವಾಸಿಸುತ್ತಿದ್ದು, ತಮ್ಮ ವಾಹನಗಳನ್ನು ಮನೆಯೊಳಗೆ ನಿಲ್ಲಿಸಲು ಅಗತ್ಯವಾದ ಸ್ಥಳದ ಕೊರತೆಯನ್ನು ಎದುರಿಸುತ್ತಿದ್ದಾರೆ. ಹೊಸ ಕಟ್ಟಡ ನಿರ್ಮಾಣದ ನಿಯಮಗಳಲ್ಲಿ ಪಾರ್ಕಿಂಗ್ ವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿರುವುದು ಸ್ವಾಗತಾರ್ಹ. ಆದರೆ ಬೆಂಗಳೂರಿನ ಹಳೆಯ ಕಟ್ಟಡಗಳು ಮತ್ತು ಹಳೆಯ ವಸತಿ ಪ್ರದೇಶಗಳಲ್ಲಿ ಇಂದಿನ ವಾಹನಗಳ ಸಂಖ್ಯೆಗೆ ಅನುಗುಣವಾದ ಪಾರ್ಕಿಂಗ್ ಸೌಲಭ್ಯಗಳನ್ನು ಕಲ್ಪಿಸುವುದು ಬಹುತೇಕ ಸಂದರ್ಭಗಳಲ್ಲಿ ಸಾಧ್ಯವಾಗುವುದಿಲ್ಲ. ಹೀಗಾಗಿ ಬೆಂಗಳೂರಿನ ಶಾಸಕರು ಮತ್ತು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮುಂದಿನ ತೀರ್ಮಾನ ಮಾಡುವಂತೆ ಸಿಎಂಗೆ ರಾಮಲಿಂಗಾರೆಡ್ಡಿ ಮನವಿ ಮಾಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:58 pm, Mon, 24 August 26




