BMTC ಗುಜರಿ ವಸ್ತುಗಳ ಮಾರಾಟದಲ್ಲಿ ಅಕ್ರಮ: ಕಳ್ಳ ಲೆಕ್ಕ ನೀಡಿದ ಅಧಿಕಾರಿಗಳು
ಬೃಹತ್ ಬೆಂಗಳೂರು ಮಹಾನಗರ ಸಾರಿಗೆ (BMTC)ಯಲ್ಲಿನ ಭ್ರಷ್ಟಾಚಾರ ಬಯಲಿಗೆ ಬಂದಿದೆ. ನಿಗಮದ ಗುಜರಿ ವಸ್ತುಗಳ ಮಾರಾಟದ ವೇಳೆ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಸಾರಿಗೆ (BMTC)ಯಲ್ಲಿನ ಭ್ರಷ್ಟಾಚಾರ ಬಯಲಿಗೆ ಬಂದಿದೆ. ನಿಗಮದ ಗುಜರಿ ವಸ್ತುಗಳ ಮಾರಾಟದ ವೇಳೆ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ನಿಗಮದಲ್ಲಿ ಗುಜರಿ ವಸ್ತುಗಳ ಮಾರಾಟದ ವೇಳೆ ವೀಡಿಯೋ ಚಿತ್ರೀಕರಣ ಮಾಡುವುದು ಕಡ್ಡಾಯ. ಆದರೆ ಗುಜರಿ ವಸ್ತುಗಳ ತೂಕದ ವೇಳೆ ಅಧಿಕಾರಿಗಳು ಅರ್ಧ ವೀಡಿಯೋ ಚಿತ್ರೀಕರಣ ಮಾಡಿದ್ದಾರೆ. ಈ ಮೂಲಕ ತೂಕದಲ್ಲಿ ಗೋಲ್ಮಾಲ್ ಮಾಡಿ ಗುಜರಿ ವಸ್ತುಗಳನ್ನು ಕದ್ದಿರುವ ಆರೋಪ ಕೇಳಿಬಂದಿದೆ. ಭದ್ರತಾ ಜಾಗೃತ ದಳ ವಿಭಾಗದ ಭೂತರಾಜು, ಉಪಮುಖ್ಯ ಭದ್ರತಾ ಮತ್ತು ಜಾಗೃತಾಧಿಕಾರಿ ಪಾಪಣ್ಣ ಕೋಟ್ಯಾಂತರ ರೂಪಾಯಿ ಅಕ್ರಮ ಎಸಗಿದ್ದಾರೆ ಎನ್ನಲಾಗುತ್ತಿದೆ.
ಅರ್ಧ ವಿಡಿಯೋ ಚಿತ್ರೀಕರಣ ಮಾಡಿದಾಗ ಅಧಿಕಾರಿಗಳು ನಿಗಮಕ್ಕೆ 32,89,052 ರೂ. ಆದಾಯ ತೋರಿಸಿದ್ದರು. ಚಿತ್ರೀಕರಣ ಆಫ್ ಮಾಡಿದಾಗ ಬಿಎಂಟಿಸಿಗೆ 13,89,785 ರೂ. ಆದಾಯ ನೀಡಿದ್ದಾರೆ. ಈ ಪ್ರಕರಣದ ಬಗ್ಗೆ ಸಾಕ್ಷಿ ಸಮೇತ ಅಧಿಕಾರಿಗಳ ಮೇಲೆ ದೂರು ಇದೆ. ಈ ಬಗ್ಗೆ ಅಧಿಕಾರಿಗಳಿಗೆ ಬಿಎಂಟಿಸಿ ಕೇವಲ ನೋಟೀಸ್ ನೀಡಿ ಸುಮ್ಮನಾಗಿದೆ.
ಹೊರಗುತ್ತಿಗೆ ನೌಕರರ ವಿಚಾರದಲ್ಲೂ ಗೋಲ್ಮಾಲ್
ಇಷ್ಟೇ ಅಲ್ಲ ಹೊರಗುತ್ತಿಗೆ ನೌಕರರ ವಿಚಾರದಲ್ಲೂ ಗೋಲ್ಮಾಲ್ ನಡೆದಿದೆ. ಹೊರಗುತ್ತಿಗೆಗೆ ಬಂದ ಸಿಬ್ಬಂದಿ ಸಂಖ್ಯೆ ನಮೂದು ಮಾಡೋದ್ರಲ್ಲೂ ಅಕ್ರಮ ನಡೆದಿದೆ. ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿ ಲೆಕ್ಕ ತಪ್ಪು ತೋರಿಸಿ ಅಧಿಕಾರಿಗಳು ಲಕ್ಷ ಲಕ್ಷ ಹಣ ಪೀಕಿದ್ದಾರೆ.
KSRTC ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ನೇಮಕಾತಿಯಲ್ಲಿ ಅಕ್ರಮ
ರಾಜ್ಯ ಸಾರಿಗೆ ಇಲಾಖೆಯ ಮೋಟಾರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಯ ನೇಮಕಾತಿಯಲ್ಲಿ ಅಕ್ರಮ ನಡೆದಿದೆ. ಅಭ್ಯರ್ಥಿಗಳು ನಕಲಿ ಸರ್ಟಿಫಿಕೇಟ್ ನೀಡಿ ಕೆಲಸ ಗಟ್ಟಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಈ 20 ಜನರ ಸರ್ಟಿಫಿಕೇಟ್ ಟಿವಿ9ಗೆ ಲಭ್ಯವಾಗಿವೆ. 2016ರಲ್ಲಿ 150 ಮೋಟರ್ ವೆಹಿಕಲ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಕೆಪಿಎಸ್‌ಸಿ ಪರೀಕ್ಷೆ ನಡೆದಿತ್ತು. ಸಾರಿಗೆ ಇಲಾಖೆ ಪರೀಕ್ಷೆಯ ನಂತರ ದಾಖಲೆಗಳ ಪರಿಶೀಲನೆ ಮಾಡಿದ್ದರು. ಈ ವೇಳೆ ಅಭ್ಯರ್ಥಿಗಳು ನಕಲಿ ಸರ್ಟಿಫಿಕೇಟ್ ನೀಡಿ, ಒಂದೊಂದು ಪೋಸ್ಟ್ಗು ಒಂದೊಂದು ಕೋಟಿ ರುಪಾಯಿ ಡೀಲ್ ಆಗಿರುವ ಆರೋಪ ಕೇಳಿಬಂದಿದೆ.
ಪರಿಶೀಲನಾ ಹಂತದಲ್ಲಿ ನಡೆದಿತ್ತು ಸಾಲು ಸಾಲು ಅಕ್ರಮಗಳು ಸುಳ್ಳು ದಾಖಲೆಯನ್ನು ಸಾರಿಗೆ ಇಲಾಖೆಗೆ ನೀಡಿದ್ದ ಹಲವು ಅಭ್ಯರ್ಥಿಗಳು 2016ರಲ್ಲಿ ನಡೆದ ಪರೀಕ್ಷೆಗೆ 2019ರಲ್ಲಿ 129 ಸಂಭವನೀಯ ಪಟ್ಟಿ ಪ್ರಕಟಿಸಲಾಗಿತ್ತು. ಪಟ್ಟಿಯಲ್ಲಿ ಅಕ್ರಮ ಎಸಗಿದ್ದ ಅಭ್ಯರ್ಥಿಗಳ ಹೆಸರೇ ಇತ್ತು. ಈ ಹಿನ್ನೆಲೆ ನೊಂದ ಅಭ್ಯರ್ಥಿಗಳು 2019ರಲ್ಲೇ ಕೆಎಟಿಗೆ ಹಾಗು ಹೈಕೋರ್ಟ್ ಹೋಗಿದ್ದರು. 2021ರಲ್ಲಿ ಹೈಕೋರ್ಟ್ ಅಭ್ಯರ್ಥಿಗಳ ಕೋರಿಕೆಯಂತೆ ಲಿಸ್ಟ್ ವಾಪಸ್ ಪಡೆಯುವಂತೆ ಆದೇಶ ಹೊರಡಿಸಿತ್ತು. ಕೋರ್ಟ್ ಆದೇಶದದನ್ವಯ ಸಾರಿಗೆ ಇಲಾಖೆ ಪಟ್ಟಿ ವಾಪಸ್ ಪಡೆದಿತ್ತು.
ಅಕ್ರಮ ಆಗಿದ್ದು ಹೇಗೆ?
ಹುದ್ದೆಗಳನ್ನು ಅಲಂಕರಿಸಲು ಕಡ್ಡಾಯವಾಗಿದ್ದ ಕೆಲ ಷರತ್ತುಗಳು
22.10.2013ರಲ್ಲಿನ ವೃಂದ ಮತ್ತು ನೇಮಕಾತಿ ನಿಯಮದನ್ವಯ ಅಭ್ಯರ್ಥಿ LMV (ಪೆಟ್ರೋಲ್, ಡೀಸೆಲ್) Heavy Vehicle (ಬಸ್ಸು, ಲಾರಿ) ಇವುಗಳನ್ನು ರಿಪೇರಿ ಮಾಡಲು ಕಡ್ಡಾಯವಾಗಿ ಕಲಿತಿರಬೇಕು. ಯಾವುದಾದರೂ ಸರ್ವೀಸ್ ಸ್ಟೇಷನ್ ಅಥವಾ ಗ್ಯಾರೇಜ್‌ನಲ್ಲಿ ಕೆಲಸ ಮಾಡಿರಬೇಕು. ಕನಿಷ್ಟ 1 ವರ್ಷವಾದರೂ ಸೇವಾನುಭವ ಪಡೆದಿರಬೇಕು ಎಂದು ನಿಯಮವಿದೆ.
ಆದರೆ 2019ರಲ್ಲಿ ಬಿಡುಗಡೆ ಮಾಡಲಾದ 129 ಅಭ್ಯರ್ಥಿಗಳಿಗೆ ಸೇವಾನುಭವ ಇರಲಿಲ್ಲ. ಸೇವಾನುಭವ ಇರೋದಾಗಿ ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡಿದ್ರಾ? ನಕಲಿ ಸ್ಯಾಲರಿ ಸರ್ಟಿಫಿಕೇಟ್, ನಕಲಿ ಹಾಜರಾತಿ, ನಕಲಿ ಗ್ಯಾರೇಜ್ ಸರ್ಟಿಫಿಕೇಟ್ಗಳನ್ನು ವಾಮ ಮಾರ್ಗದಲ್ಲಿ ಮಾಡಿಸಿಕೊಳ್ಳಲಾಗಿತ್ತು. ಇದೇ ಸುಳ್ಳು ದಾಖಲೆಗಳನ್ನು ನೀಡಿ ಸಾರಿಗೆ ಇಲಾಖೆಯನ್ನು ವಂಚಿಸಲಾಗಿತ್ತು. ಸಾರಿಗೆ ಇಲಾಖೆಯ ಅಧಿಕಾರಿಗಳೂ ಇದಕ್ಕೆ ಸಾಥ್ ನೀಡ್ದಿದ್ದರು ಎಂಬ ಅನುಮಾನ ಮೂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:38 am, Sun, 5 February 23