ಡೆಲಿವರಿ ಬಾಯ್ಗೆ ಬೆದರಿಸಿ ತಡ ರಾತ್ರಿ ಹಣ ಪೀಕಿದ ಗುಂಪು: ದೂರು ನೀಡದಂತೆಯೂ ಬೆದರಿಕೆ
ಬೆಂಗಳೂರಿನಲ್ಲಿ ಡೆಲಿವರಿ ಬಾಯ್ಗಳನ್ನು ಗುರಿಯಾಗಿಸಿ ತಡರಾತ್ರಿ ಲೂಟಿ ಮಾಡುವ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ನೆಕ್ಸಸ್ ಮಾಲ್ ಬಳಿ, 19 ವರ್ಷದ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿ, ಆನ್‌ಲೈನ್ ಮೂಲಕ 49 ಸಾವಿರ ರೂ. ಹಣವನ್ನು ದುಷ್ಕರ್ಮಿಗಳು ಬಲವಂತವಾಗಿ ವರ್ಗಾಯಿಸಿಕೊಂಡಿದ್ದಾರೆ. ದೂರು ನೀಡದಂತೆ ಬೆದರಿಕೆಯೊಡ್ಡಿದರೂ, ಕುಟುಂಬದವರ ಸಲಹೆಯ ಮೇರೆಗೆ ಯುವಕ ದೂರು ದಾಖಲಿಸಿದ್ದಾನೆ.

ಬೆಂಗಳೂರು, ಏಪ್ರಿಲ್ 09: ತಡ ರಾತ್ರಿಯೂ ಕೆಲಸ ಮಾಡುವ ಡೆಲಿವರಿ ಬಾಯ್ಗಳನ್ನೇ ಟಾರ್ಗೆಟ್ ಮಾಡಿ ದೋಚುವ ಪ್ರಕರಣಗಳು ಬೆಂಗಳೂರಲ್ಲಿ (Bengaluru) ಮೇಲಿಂದ ಮೇಲೆ ನಡೆಯುತ್ತಿದ್ದು, ಇವುಗಳ ಸಾಲಿಗೆ ಮತ್ತೊಂದು ಕೇಸ್ ಸೇರ್ಪಡೆಯಾಗಿದೆ. ನಗರದ ನೆಕ್ಸಸ್ ಮಾಲ್ ಬಳಿ ನಿಂತಿದ್ದ 19 ವರ್ಷದ ಡೆಲಿವರಿ ಬಾಯ್ನ ಬೆದರಿಸಿರುವ ಮೂರು ಮಂದಿಯ ಗುಂಪು, ಆನ್‌ಲೈನ್ ಮೂಲಕ 49 ಸಾವಿರ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿರುವ ಬಗ್ಗೆ ದೂರು ದಾಖಲಾಗಿದೆ. ಯುವಕನ ಮೇಲೆ ಹಲ್ಲೆ ನಡೆಸಿರುವ ಬಗ್ಗೆಯೂ ಆರೋಪಿಸಲಾಗಿದೆ.
ಮಾರ್ಚ್ 31ರ ರಾತ್ರಿ ಸುಮಾರು 1:30ರ ವೇಳೆಗೆ ನಡೆದಿರುವ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಉತ್ತರ ಪ್ರದೇಶ ಮೂಲದ ಹಾಲಿ ಸುದ್ದಗುಂಟೆಪಾಳ್ಯದ ತಾವರೆಕೆರೆಯಲ್ಲಿ ವಾಸವಾಗಿರುವ ಗೋಪಿಕಿಶನ್ ಎಂಬ ಯುವಕನಿಂದ ಆರೋಪಿಗಳು ಹಣ ಪೀಕಿದ್ದು, ವಿದ್ಯಾರ್ಥಿಯಾಗಿರುವ ಈತ ಶಿಕ್ಷಣ ಸಂಬಂಧ ಹಣಕ್ಕಾಗಿ ಪಾರ್ಟ್ ಟೈಂ ಡೆಲಿವರಿ ಬಾಯ್ ಆಗಿ ಕೆಲಸಮಾಡುತ್ತಿದ್ದ ಎಂಬುದು ತಿಳಿದುಬಂದಿದೆ. ಗೋಪಿಕಿಶನ್ ಹಾಗೂ ಅವನ ಸ್ನೇಹಿತ ಓಂಕಾರ್ ನೆಕ್ಸಸ್ ಮಾಲ್ ಹೊರಗೆ ಆರ್ಡರ್‌ಗಾಗಿ ಕಾಯುತ್ತಿದ್ದಾಗ ಬಂದ ಮೂವರು ದುಷ್ಕರ್ಮಿಗಳು ಅವರ ಮೇಲೆ ದಾಳಿ ನಡೆಸಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟಿರುವ ದುರುಳರು ಮುಖ ಹಾಗೂ ಕೈಗಳ ಭಾಗಕ್ಕೆ ಹಲ್ಲೆ ನಡೆಸಿದ್ದಾರೆ. ನಗದು ಸಿಗದಿದ್ದಾಗ, ಗೋಪಿಕಿಶನ್‌ನ ಮೊಬೈಲ್ ಕಸಿದುಕೊಂಡು ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ಪಾಸ್‌ವರ್ಡ್ ಕೇಳಿ, ಬಲವಂತವಾಗಿ 49 ಸಾವಿರ ರೂಪಾಯಿ ಹಣವನ್ನು ತಮ್ಮ ಖಾತೆಗೆ ಆರೋಪಿಗಳು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಉದ್ಯಮಿಗೆ ಬೆದರಿಸಿ ಹಣ ಸುಲಿಗೆ; ನಗರಸಭೆ ಮಾಜಿ ಸದಸ್ಯ ಅಂದರ್, ಮತ್ತೋರ್ವ ವಶಕ್ಕೆ
ದೂರು ನೀಡದಂತೆ ಬೆದರಿಕೆ
ಡೆಲಿವರಿ ಬಾಯ್ನಿಂದ ಹಣ ಪೀಕಿದ ಬಳಿಕ ಈ ಸಂಬಂಧ ದೂರು ಕೊಡಬಾರದು ಎಂದು ಆರೋಪಿಗಳು ಬೆದರಿಕೆ ಹಾಕಿದ್ದರು. ಆದರೂ ಕುಟುಂಬದವರು ಹಾಗೂ ಸ್ನೇಹಿತರ ಸಲಹೆಯ ಮೇರೆಗೆ ಅಂತಿಮವಾಗಿ ಗೋಪಿಕಿಶನ್ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:28 pm, Thu, 9 April 26




