ಜಿಬಿಎ ಇಂಜಿನಿಯರ್‌ಗಳ ಮೇಲೆ ಹೆಲ್ಮೆಟ್, ಪೆಪ್ಪರ್ ಸ್ಪ್ರೇ ದಾಳಿ: ಹಲ್ಲೆಗೆ ಹೆದರದೆ ಮತ್ತೆ ಅಖಾಡಕ್ಕಿಳಿದ ಜಿಬಿಎ ಪಡೆ
ಬೆಂಗಳೂರಿನ ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಇಂಜಿನಿಯರ್‌ಗಳ ಮೇಲೆ ಭೀಕರ ಹಲ್ಲೆ ನಡೆದಿದೆ. ಅಧಿಕಾರಿಗಳಿಗೆ ಹೆಲ್ಮೆಟ್‌ನಿಂದ ಹೊಡೆದು, ಪೆಪ್ಪರ್ ಸ್ಪ್ರೇ ಎರಚಲಾಗಿದೆ. ಈ ಘಟನೆ ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ. ಪೊಲೀಸ್ ಬಂದೋಬಸ್ತ್‌ನಲ್ಲಿ ಮತ್ತೆ ಕಾರ್ಯಾಚರಣೆ ನಡೆಸಿ, ಎಲ್ಲಾ ಅಕ್ರಮ ಒತ್ತುವರಿಗಳನ್ನು ಯಶಸ್ವಿಯಾಗಿ ತೆರವುಗೊಳಿಸಲಾಯಿತು.

ಬೆಂಗಳೂರು, ಜು. 21: ರಾಜಧಾನಿ ಬೆಂಗಳೂರಿನ ಶಿವಾಜಿನಗರ ಪ್ರದೇಶದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಇಂಜಿನಿಯರ್‌ಗಳ ಮೇಲೆ ಹೆಲ್ಮೆಟ್ ಹಾಗೂ ಪೆಪ್ಪರ್ ಸ್ಪ್ರೇ ಬಳಸಿ ಭೀಕರ ಹಲ್ಲೆ ನಡೆಸಿರುವ ಘಟನೆ ಮಂಗಳವಾರ ನಡೆದಿದೆ. ಈ ಕೃತ್ಯದ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ರಾಜಕೀಯ ಆಕ್ರೋಶಕ್ಕೆ ಕಾರಣವಾಗಿದೆ.
ಶಿವಾಜಿನಗರದಲ್ಲಿ ಫುಟ್‌ಪಾತ್ ತೆರವುಗೊಳಿಸಲು ಹೋದ ವೇಳೆ, ಕೆಲವರು ಗುಂಪು ಸೇರಿಸಿಕೊಂಡು ಜಿಬಿಎ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾಧವ ರಾವ್, ಸಹಾಯಕ ಅಭಿಯಂತರ ಗೌತಮ್ ಅವರ ಮೇಲೆ ಹೆಲ್ಮೆಟ್‌ಗಳಿಂದ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾರೆ. ಇಷ್ಟಕ್ಕೇ ನಿಲ್ಲದ ಕಿಡಿಗೇಡಿಗಳು, ಸ್ಥಳದಲ್ಲಿದ್ದ ಮಹಿಳಾ ಇಂಜಿನಿಯರ್ ರುಚಿತಾ ಅವರ ಮುಖಕ್ಕೆ ಪೆಪ್ಪರ್ ಸ್ಪ್ರೇ ಎರಚಿದ್ದಾರೆ. ಅಲ್ಲದೆ ಕಾರ್ಯಾಚರಣೆಯಲ್ಲಿದ್ದ ಜೆಸಿಬಿ ಚಾಲಕನಿಗೂ ಸ್ಪ್ರೇ ಎರಚಲು ಯತ್ನಿಸಿದ್ದಾರೆ. ಹಲ್ಲೆಗೊಳಗಾದ ಅಧಿಕಾರಿಗಳು ತಕ್ಷಣವೇ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲು ನಿರ್ಧರಿಸಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
‘ಓಟ್ ಬ್ಯಾಂಕ್‌ಗಾಗಿ ಸರ್ಕಾರ ಮೌನ’: ಆರ್. ಅಶೋಕ್
ಅಧಿಕಾರಿಗಳ ಮೇಲೆ ನಡೆದ ಈ ಮಾರಣಾಂತಿಕ ದಾಳಿಯನ್ನು ತೀವ್ರವಾಗಿ ಖಂಡಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯ ಸರ್ಕಾರದ ವಿರುದ್ಧ ತಮ್ಮ ಎಕ್ಸ್ ಖಾತೆಯಲ್ಲಿ ಸರಣಿ ವಾಗ್ದಾಳಿ ನಡೆಸಿದ್ದಾರೆ. “ಶಿವಾಜಿನಗರದಲ್ಲಿ ಒತ್ತುವರಿ ತೆರವು ವೇಳೆ ಅಧಿಕಾರಿಯ ಮೇಲೆಯೇ ಹಲ್ಲೆ ನಡೆದಿರುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಸಾಕ್ಷಿ. ಬೇರೆ ಭಾಗಗಳಲ್ಲಿ ತೆರವು ವೇಳೆ ಕ್ಯಾಮೆರಾ ಮುಂದೆ ‘ರೀಲ್ಸ್’ ಮಾಡುವ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರೇ, ಈಗ ನಿಮ್ಮ ಮೌನ ಏಕೆ? ನಿಮ್ಮ ಓಟ್ ಬ್ಯಾಂಕ್ ರಾಜಕೀಯವೇ ಕಾನೂನಿಗಿಂತ ದೊಡ್ಡದಾಗಿದೆಯೇ?” ಎಂದು ಆರ್. ಅಶೋಕ್ ಪ್ರಶ್ನಿಸಿದ್ದಾರೆ.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್
ಶಿವಾಜಿನಗರದಲ್ಲಿ ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದ ಜಿಬಿಎ (GBA) ಅಧಿಕಾರಿಯ ಮೇಲೆ ನಡೆದ ಮಾರಣಾಂತಿಕ ಹಲ್ಲೆ ಅತ್ಯಂತ ಖಂಡನೀಯ. ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಅಧಿಕಾರಿಯ ಮೇಲೆಯೇ ಈ ರೀತಿಯ ಹಲ್ಲೆ ನಡೆಯುವುದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಹದಗೆಟ್ಟಿದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.… pic.twitter.com/4N6ToThaiA
— R. Ashoka (@RAshokaBJP) July 21, 2026
“ಕಾನೂನು ಪಾಲನೆ ಮಾಡುವ ಅಧಿಕಾರಿಗಳಿಗೆ ರಕ್ಷಣೆ ನೀಡಲಾಗದ ಸರ್ಕಾರವಿದ್ದರೆ ದುಷ್ಕರ್ಮಿಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ. ಶಿವಾಜಿನಗರದಲ್ಲಿ ಒತ್ತುವರಿ ತೆರವು ಮಾಡಲು ಸರ್ಕಾರಕ್ಕೆ ಧೈರ್ಯವಿಲ್ಲವೇ? ರಾಜ್ಯದಲ್ಲಿ ಎರಡು ರೀತಿಯ ಕಾನೂನು ಇದೆಯೇ? ತಕ್ಷಣವೇ ದೋಷಿಗಳನ್ನು ಬಂಧಿಸಿ ಅಧಿಕಾರಿಗಳಿಗೆ ರಕ್ಷಣೆ ನೀಡಿ” ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಶಿವಾಜಿನಗರ ಹಲ್ಲೆ ಪ್ರಕರಣ: ಇವರು ಜೀವನೋಪಾಯಕ್ಕಾಗಿ ಕಷ್ಟಪಟ್ಟು ದುಡಿಯುವ ಬಡಜನರಲ್ಲ, ಸಮಾಜಘಾತುಕರು; ಸಚಿವ ಕೃಷ್ಣಭೈರೇಗೌಡ ಕಿಡಿ
ಪೋಲಿಸ್ ಬಂದೋಬಸ್ತ್‌ನಲ್ಲಿ ಮತ್ತೆ ಬಿರುಸಿನ ಕಾರ್ಯಚರಣೆ:
ಇದರ ನಡುವೆ ಮಧ್ಯಾಹ್ನದ ವೇಳೆಗೆ ಜಿಬಿಎ ಆಡಳಿತ ಮಂಡಳಿ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಬೃಹತ್ ಕಾರ್ಯಾಚರಣೆಯನ್ನು ಪುನಃ ಆರಂಭಿಸಿತು. ಕೇಂದ್ರ ಮಹಾನಗರ ಪಾಲಿಕೆ ಆಯುಕ್ತ ಜಗದೀಶ್ ಹಾಗೂ ಜಿಬಿಎ ಯೂನಿಯನ್ ಅಧ್ಯಕ್ಷ ಅಮೃತ್ ರಾಜ್ ಅವರ ನೇತೃತ್ವದಲ್ಲಿ, ಸ್ಥಳಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿ ತೆರವು ಕಾರ್ಯ ಮುಂದುವರಿಸಲಾಯಿತು. ಹಲ್ಲೆಗೆ ಜಗ್ಗದೆ, ಸ್ಥಳದಲ್ಲಿದ್ದ ಉಳಿದ ಅಕ್ರಮ ಅಂಗಡಿ ಮುಂಗಟ್ಟು ಹಾಗೂ ಒತ್ತುವರಿ ಜಾಗಗಳನ್ನು ಜೆಸಿಬಿ ಯಂತ್ರಗಳ ಮೂಲಕ ಸಂಪೂರ್ಣವಾಗಿ ಧ್ವಂಸಗೊಳಿಸಿ ಫುಟ್‌ಪಾತ್ ಮುಕ್ತಗೊಳಿಸಲಾಯಿತು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




