
ಬೆಂಗಳೂರು, ಆಗಸ್ಟ್ 21: ಬೆಂಗಳೂರಿನಲ್ಲಿ (Bengaluru) ಫುಟ್‌ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ಮುಂದುವರಿದಿದ್ದರೂ, ಅಧಿಕಾರಿಗಳು ತೆರವುಗೊಳಿಸಿದ ಕೆಲವೇ ದಿನಗಳಲ್ಲಿ ಅದೇ ಜಾಗದಲ್ಲಿ ಮತ್ತೆ ಅಂಗಡಿ-ಮುಂಗಟ್ಟುಗಳು ತಲೆ ಎತ್ತುತ್ತಿರುವುದು ಕಂಡುಬಂದಿದೆ. ಜಯನಗರ, ಗಾಂಧಿ ಬಜಾರ್, ಸಿದ್ದಾಪುರ ಹಾಗೂ ಮಲ್ಲೇಶ್ವರಂ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ತೆರವುಗೊಂಡ ಜಾಗ ಮತ್ತೆ ಒತ್ತುವರಿಯಾಗಿರುವುದು ಗಮನಕ್ಕೆ ಬಂದಿದೆ.
ಪಾದಚಾರಿಗಳ ಸುಗಮ ಸಂಚಾರಕ್ಕಾಗಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ, ಅಕ್ರಮ ಶೆಡ್‌ಗಳು, ಮೆಟ್ಟಿಲುಗಳು, ಅಂಗಡಿ ಸಾಮಗ್ರಿಗಳು ಸೇರಿದಂತೆ ವಿವಿಧ ರೀತಿಯ ಅತಿಕ್ರಮಣಗಳನ್ನು ತೆರವುಗೊಳಿಸುತ್ತಿವೆ. ಆದರೆ ಕಾರ್ಯಾಚರಣೆ ಮುಗಿಸಿ ಅಧಿಕಾರಿಗಳು ಸ್ಥಳದಿಂದ ತೆರಳಿದ ಬಳಿಕ ಮತ್ತೆ ವ್ಯಾಪಾರ ಚಟುವಟಿಕೆಗಳು ಆರಂಭವಾಗುತ್ತಿರುವುದು ಪಾಲಿಕೆಯ ಕಾರ್ಯವೈಖರಿಯ ಮೇಲೆಯೇ ಪ್ರಶ್ನೆ ಮೂಡಿಸಿದೆ.
ಜಯನಗರ 4ನೇ ಬ್ಲಾಕ್‌ನ ಮುಖ್ಯರಸ್ತೆಯಲ್ಲಿ ವಾರದ ಹಿಂದಷ್ಟೇ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಬೀದಿಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿದರೂ ಇದೀಗ ಅದೇ ಸ್ಥಳದಲ್ಲಿ ಮತ್ತೆ ವ್ಯಾಪಾರ ಸಾಮಗ್ರಿಗಳು ಹಾಗೂ ಅಂಗಡಿಗಳು ಕಾಣಿಸಿಕೊಂಡಿವೆ. ಫುಟ್‌ಪಾತ್ ಮೇಲೆಯೇ ವ್ಯಾಪಾರ ನಡೆಯುತ್ತಿರುವುದರಿಂದ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ವಾಹನ ಸವಾರರು ಹಾಗೂ ಸ್ಥಳೀಯ ನಿವಾಸಿಗಳಿಗೂ ತೊಂದರೆಯಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಮ್ಹಾನ್ಸ್ ಆಸ್ಪತ್ರೆ ಸಮೀಪದ ಸಿದ್ದಾಪುರ ಮುಖ್ಯರಸ್ತೆಯಲ್ಲೂ ಇದೇ ಪರಿಸ್ಥಿತಿ ಕಂಡುಬಂದಿದೆ. ಕೆಲ ದಿನಗಳ ಹಿಂದೆ ಜಿಬಿಎ ಅಧಿಕಾರಿಗಳು ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ 40ಕ್ಕೂ ಹೆಚ್ಚು ಅಂಗಡಿಗಳನ್ನು ತೆರವುಗೊಳಿಸಿದ್ದರು.
ಆದರೆ ಕಾರ್ಯಾಚರಣೆ ನಡೆದ ಕೇವಲ 10 ದಿನಗಳಲ್ಲೇ ಫುಟ್‌ಪಾತ್ ಮೇಲೆ ಮತ್ತೆ 10ಕ್ಕೂ ಹೆಚ್ಚು ಅಂಗಡಿಗಳು ತಲೆ ಎತ್ತಿವೆ. ಒತ್ತುವರಿ ಮಾಡಿದವರಿಂದ ದುಪ್ಪಟ್ಟು ದಂಡ ವಸೂಲಿ ಮಾಡುವ ಎಚ್ಚರಿಕೆ ನೀಡಿದ್ದರೂ, ದಂಡಕ್ಕೂ ಹೆದರದೆ ಮತ್ತೆ ವ್ಯಾಪಾರ ನಡೆಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಮಲ್ಲೇಶ್ವರಂ 18ನೇ ಕ್ರಾಸ್‌ನಲ್ಲಿ ಸುಮಾರು 15 ದಿನಗಳ ಹಿಂದಷ್ಟೇ ದೊಡ್ಡ ಪ್ರಮಾಣದಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ ನಡೆಸಲಾಗಿತ್ತು. ಹಲವು ಬೀದಿಬದಿ ವ್ಯಾಪಾರಿಗಳ ಅಂಗಡಿಗಳನ್ನು ತೆರವುಗೊಳಿಸಿ, ಪಾದಚಾರಿಗಳ ಸಂಚಾರಕ್ಕೆ ಜಾಗ ಕಲ್ಪಿಸಲಾಗಿತ್ತು.
ಆದರೆ ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆಯಲ್ಲಿ ಮತ್ತೆ ಅದೇ ಸ್ಥಳದಲ್ಲಿ ಹೂವು, ಪೂಜಾ ಸಾಮಗ್ರಿ ಹಾಗೂ ಬಟ್ಟೆ ಮಳಿಗೆಗಳು ಕಾಣಿಸಿಕೊಂಡಿವೆ. ಫುಟ್‌ಪಾತ್ ಮೇಲೆ ವ್ಯಾಪಾರ ನಡೆಯುತ್ತಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ಮತ್ತೆ ಅಡ್ಡಿಯಾಗಿದೆ.
ಒತ್ತುವರಿ ತೆರವು ಕಾರ್ಯಾಚರಣೆ ನಡೆಸುವುದರ ಜತೆಗೆ ತೆರವುಗೊಂಡ ಜಾಗದಲ್ಲಿ ಮತ್ತೆ ಅತಿಕ್ರಮಣವಾಗದಂತೆ ನೋಡಿಕೊಳ್ಳುವುದು ಕೂಡ ಪಾಲಿಕೆ ಅಧಿಕಾರಿಗಳ ಜವಾಬ್ದಾರಿಯಾಗಿದೆ. ತೆರವುಗೊಂಡ ಕೆಲವೇ ದಿನಗಳಲ್ಲಿ ಮತ್ತೆ ಒತ್ತುವರಿ ನಡೆಯುತ್ತಿರುವುದು ಕಾರ್ಯಾಚರಣೆಯ ಪರಿಣಾಮಕಾರಿತ್ವದ ಬಗ್ಗೆ ಪ್ರಶ್ನೆ ಮೂಡಿಸಿದೆ.
ಇದನ್ನೂ ಓದಿ: ಇನ್ಮುಂದೆ ಫುಟ್‌ಪಾತ್‌ನಲ್ಲಿ ಬೈಕ್ ಓಡಿಸಿದ್ರೆ 5 ಸಾವಿರ ರೂ ದಂಡ! ಸಾರಿಗೆ ಸಚಿವರಿಗೆ ಕೃಷ್ಣಬೈರೇಗೌಡ ಪತ್ರ
ತೆರವುಗೊಂಡ ಪ್ರದೇಶಗಳಲ್ಲಿ ಮತ್ತೆ ಅತಿಕ್ರಮಣಕ್ಕೆ ಅವಕಾಶ ನೀಡದಂತೆ ಆಯಾ ವಲಯದ ಸಹಾಯಕ ಅಭಿಯಂತರರು ನಿಗಾ ವಹಿಸಬೇಕು. ಕರ್ತವ್ಯಲೋಪ ಕಂಡುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:44 am, Fri, 21 August 26