ಮಗುವಿಗೆ ‘ಫಾರ್ಮುಲಾ ಫೀಡ್’ ಕೊಡುವ ಮುನ್ನ ಎಚ್ಚರ! ಬೆಂಗಳೂರಿನಲ್ಲಿ3.7 ಮೆಟ್ರಿಕ್ ಟನ್ ಮಿಸ್‌ಬ್ರ್ಯಾಂಡೆಡ್ ಶಿಶು ಆಹಾರ ವಶ
ಬೆಂಗಳೂರಿನ ಬ್ರಿಟಿಷ್ ಲೈಫ್‌ಸೈನ್ಸಸ್ ಸಂಸ್ಥೆಯಲ್ಲಿ ನಿಯಮ ಉಲ್ಲಂಘಿಸಿ ತಯಾರಿಸಲಾಗಿದ್ದ ಮಿಸ್‌ಬ್ರ್ಯಾಂಡೆಡ್ ಶಿಶು ಆಹಾರ ಉತ್ಪನ್ನಗಳನ್ನು FSSAI ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕಳಪೆ ಫಾರ್ಮುಲಾ ಫೀಡ್‌ಗಳಿಂದ ನವಜಾತ ಶಿಶುಗಳಿಗೆ ವಾಂತಿ, ಭೇದಿ ಮತ್ತು ಸೋಂಕು ತಗುಲುವ ಅಪಾಯವಿದ್ದು, ವೈದ್ಯರ ಸೂಕ್ತ ಮಾರ್ಗದರ್ಶನವಿಲ್ಲದೆ ಇಂತಹ ಉತ್ಪನ್ನಗಳನ್ನು ಬಳಸದಂತೆ ಮಕ್ಕಳ ತಜ್ಞರು ಪೋಷಕರಿಗೆ ಜಾಗೃತಿ ಮೂಡಿಸಿದ್ದಾರೆ.

ಮುಖ್ಯಾಂಶಗಳು
- ಬ್ರಿಟಿಷ್ ಲೈಫ್‌ಸೈನ್ಸಸ್ ಸಂಸ್ಥೆಯ ಮಿಸ್‌ಬ್ರ್ಯಾಂಡೆಡ್ ಶಿಶು ಆಹಾರ FSSAI ವಶಕ್ಕೆ.
- ನಿಯಮ ಉಲ್ಲಂಘಿಸಿದ ಕಳಪೆ ಫಾರ್ಮುಲಾ ಫೀಡ್ ವಿರುದ್ಧ ಕಾನೂನು ಕ್ರಮ.
- ವೈದ್ಯರ ಸಲಹೆಯಿಲ್ಲದೆ ಡಬ್ಬಿ ಹಾಲು ನೀಡದಂತೆ ಪೋಷಕರಿಗೆ ವೈದ್ಯರ ಎಚ್ಚರಿಕೆ.
ಬೆಂಗಳೂರು, ಸೆಪ್ಟೆಂಬರ್ 04: ನಗರದ ‘ಬ್ರಿಟಿಷ್ ಲೈಫ್‌ಸೈನ್ಸಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (ಎಫ್ಎಸ್ಎಸ್ಎಐ) ಹಠಾತ್ ದಾಳಿ ನಡೆಸಿದ್ದು, ನಿಯಮ ಉಲ್ಲಂಘಿಸಿ ತಯಾರಿಸಲಾಗಿದ್ದ ಬೃಹತ್ ಪ್ರಮಾಣದ ಶಿಶು ಆಹಾರ ಉತ್ಪನ್ನಗಳನ್ನು ವಶಕ್ಕೆ ಪಡೆದಿದೆ. ತಪಾಸಣೆ ವೇಳೆ ಮಿಸ್‌ಬ್ರ್ಯಾಂಡೆಡ್ ಹಾಗೂ ಲೇಬಲಿಂಗ್ ನಿಯಮಗಳನ್ನು ಗಾಳಿಗೆ ತೂರಿದ ಕಳಪೆ ಪೌಡರ್‌ಗಳು ಪತ್ತೆಯಾಗಿದ್ದು, ಅಧಿಕಾರಿಗಳು ‘ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006’ ರಡಿ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
3.7 ಮೆಟ್ರಿಕ್ ಟನ್ ನಷ್ಟು ಶಿಶು ಆಹಾರ ನಾಶ
ಪ್ರಾಧಿಕಾರದ ಪರಿಶೀಲನೆ ವೇಳೆ ಅಪಾರ ಪ್ರಮಾಣದ ತಪ್ಪು ಮುದ್ರೆ ಹಾಕಿದ ಹಾಗೂ ಅವಧಿ ಮುಗಿದಿದ್ದ ಉತ್ಪನ್ನಗಳು ಪತ್ತೆಯಾಗಿವೆ. ನವಜಾತ ಶಿಶುಗಳು ಮತ್ತು ಸಣ್ಣ ಮಕ್ಕಳ ಆರೋಗ್ಯದ ಮೇಲೆ ಇದು ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ನ್ಯಾಯಾಲಯದ ನಿರ್ದೇಶನದಂತೆ ಸುಮಾರು 3.7 ಮೆಟ್ರಿಕ್ ಟನ್ ತೂಕದ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡು ಸಂಪೂರ್ಣವಾಗಿ ನಾಶಪಡಿಸಿದ್ದಾರೆ. ಈ ಆಹಾರ ಪದಾರ್ಥಗಳು ಮರಳಿ ಮಾರುಕಟ್ಟೆಗೆ ಸರಬರಾಜಾಗುವುದನ್ನು ಅಥವಾ ಮರುಬಳಕೆಯಾಗುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ತಿಳಿಸಿದೆ.
ವೈದ್ಯರ ಎಚ್ಚರಿಕೆ ಏನು?
ಸಮಯಕ್ಕಿಂತ ಮುಂಚಿತವಾಗಿ (ಪ್ರೀ-ಟರ್ಮ್) ಜನಿಸುವ ಅಥವಾ ತಾಯಿಯ ಹಾಲು ಸಿಗದ ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಯಲ್ಲಿ ಪರ್ಯಾಯ ಆಹಾರವಾಗಿ ವೈದ್ಯರ ಸಲಹೆಯಂತೆ ಈ ಫಾರ್ಮುಲಾ ಪೌಡರ್ ಅನ್ನು ಶಿಶುಗಳಿಗೆ ನೀಡಲಾಗುತ್ತದೆ.
ಕೆ.ಸಿ. ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ರಘುನಂದನ್, ಯಾವಾಗಲೂ ತಾಯಿಯ ಹಾಲೇ ಮಗುವಿಗೆ ಪ್ರಥಮ ಆದ್ಯತೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಡಬ್ಬಿ ಹಾಲನ್ನು ಉತ್ತೇಜಿಸುವುದಿಲ್ಲ ಎಂದಿದ್ದಾರೆ. ನವಜಾತ ಶಿಶು ತಜ್ಞೆ ಡಾ. ರಶ್ಮಿ ಮಾತನಾಡಿ, ವೈದ್ಯರ ಸಲಹೆ ಇಲ್ಲದೆ ಇಂತಹ ಫಾರ್ಮುಲಾ ಫೀಡ್ ನೀಡಬಾರದು. ಕಳಪೆ ಅಥವಾ ನಿಯಮ ಉಲ್ಲಂಘಿಸಿದ ಆಹಾರ ನೀಡಿದರೆ ಶಿಶುಗಳಿಗೆ ವಾಂತಿ, ಭೇದಿ, ಇನ್ಫೆಕ್ಷನ್ ಹಾಗೂ ಬೆಳವಣಿಗೆಯಲ್ಲಿ ತೀವ್ರ ತೊಂದರೆ ಕಾಣಿಸಿಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.
ಇದನ್ನೂ ಓದಿ ಸಿಹಿ ತಿಂಡಿ, ಬೇಕರಿ ಘಟಕಗಳ ಮೇಲೆ ದಾಳಿ: ಕೋವಾ ಸೇರಿ 5.99 ಲಕ್ಷ ಮೌಲ್ಯದ ಆಹಾರ ಪದಾರ್ಥ ವಶಕ್ಕೆ
ಸಾಮಾನ್ಯವಾಗಿ ಮೊದಲ ಆಯ್ಕೆ ತಾಯಿ ಹಾಲು, ಅದು ಸಾಧ್ಯವಾಗದಿದ್ದರೆ ತಾಯಿ ಹಾಲನ್ನೇ ಬಾಟಲಿಯಲ್ಲಿ ನೀಡುವುದು. ಇವೆರಡೂ ಸಾಧ್ಯವಾಗದಿದ್ದಾಗ ಮಾತ್ರ ವೈದ್ಯಕೀಯ ಮಾರ್ಗದರ್ಶನದೊಂದಿಗೆ ಫಾರ್ಮುಲಾ ಫೀಡ್ ಬಳಸಬೇಕು. ಮಾರುಕಟ್ಟೆಯಲ್ಲಿ ಸಿಗುವ ಡಬ್ಬಿ ಹಾಲಿನ ವಿಚಾರದಲ್ಲಿ ಪೋಷಕರು ಅತ್ಯಂತ ಜಾಗರೂಕರಾಗಿರುವುದು ಅಗತ್ಯ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:07 am, Fri, 4 September 26




