ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಇಸ್ಲಾಂ ಕಾನ್ಫರೆನ್ಸ್: ಸಿಡಿದೆದ್ದ ಹಿಂದೂ ಸಂಘಟನೆಗಳು, ಗೃಹ ಸಚಿವ ಹೇಳಿದ್ದೇನು?
ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೆ.5 ಮತ್ತು 6ರಂದು ನಡೆಯಲಿರುವ ಇಸ್ಲಾಂ ಕಾನ್ಫರೆನ್ಸ್ ಸದ್ಯ ವಿವಾದಕ್ಕೆ ಕಾರಣವಾಗಿದೆ. ಈ ಕಾರ್ಯಕ್ರಮದಲ್ಲಿ ವಿದೇಶಿ ಮೌಲ್ವಿಗಳು ಭಾರತೀಯ ವೀಸಾ ನಿಯಮಗಳನ್ನು ಉಲ್ಲಂಘಿಸಿ ಭಾಗವಹಿಸುತ್ತಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಹಿಂದೂ ಪರ ಹೋರಾಟಗಾರ ತೇಜಸ್ ಗೌಡರು ಬೆಂಗಳೂರು ಪೊಲೀಸ್ ಕಮಿಷನರ್‌ಗೆ ದೂರು ನೀಡಿದ್ದಾರೆ.

ಬೆಂಗಳೂರು, ಸೆಪ್ಟೆಂಬರ್ 03: ನಗರದ ಅರಮನೆ ಮೈದಾನದಲ್ಲಿ ಸೆ.5 ಮತ್ತು 6ರಂದು ಇಸ್ಲಾಂ ಕಾನ್ಫರೆನ್ಸ್ (Islam Conference) ನಡೆಯಲಿದೆ. ಸದ್ಯ ಈ ಕಾರ್ಯಕ್ರಮಕ್ಕೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್‌ಗೆ ಹಿಂದೂ ಪರ ಹೋರಾಟಗಾರ ತೇಜಸ್ ಗೌಡ (Tejas Gowda) ದೂರು ನೀಡಿದ್ದಾರೆ.
ಸೆ.5, 6ರಂದು ಅರಮನೆ ಮೈದಾನದಲ್ಲಿ ಇಸ್ಲಾಂ ಕಾನ್ಫರೆನ್ಸ್ ನಡೆಯಲಿದ್ದು, ವಿದೇಶಿ ಮೌಲ್ವಿಗಳು ಭಾಗಿಯಾಗಲಿದ್ದಾರೆ. ಭಾರತ ಸರ್ಕಾರದ ವೀಸಾ ನಿಯಮದಂತೆ ಪ್ರವಾಸಿ ವೀಸಾ, ಮಿಷನರಿ ವೀಸಾ, ಸಮ್ಮೇಳನ ವೀಸಾ ಮತ್ತು ಇತರ ವಿಧಗಳ ವೀಸಾದವರು ಭಾರತದಲ್ಲಿ ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸುವಂತಿಲ್ಲ.
ಧಾರ್ಮಿಕ ಭಾಷಣಗಳನ್ನು ನಡೆಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇಂತಹ ಉಲ್ಲಂಘನೆಯು ನಮ್ಮ ದೇಶದ ಸುರಕ್ಷತೆ ಮತ್ತು ಸಾಂವಿಧಾನಿಕ ಮೌಲ್ಯಗಳಿಗೆ ಹಾನಿಯನ್ನುಂಟು ಮಾಡಬಹುದು. ಹೀಗಾಗಿ ವೀಸಾ ನಿಯಮ ಉಲ್ಲಂಘನೆ ಆಗದಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ತೇಜಸ್ ಗೌಡ ದೂರು ನೀಡಿದ್ದಾರೆ.
ವೀಸಾ ನಿಯಮ ಉಲ್ಲಂಘನೆ ಮಾಡದಂತೆ ಕ್ರಮಕ್ಕೆ ಸೂಚನೆ: ಗೃಹ ಸಚಿವ
ಈ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಸಂಘಟಕರಿಗೆ ಪೊಲೀಸ್ ಆಯುಕ್ತರ ಮೂಲಕ ಮಾಹಿತಿ ನೀಡಲಾಗಿದೆ. ವೀಸಾ ನಿಯಮ ಉಲ್ಲಂಘನೆ ಮಾಡದಂತೆ ಕ್ರಮಕ್ಕೆ ಸೂಚಿಸಲಾಗಿದೆ. ವಿದೇಶಿ ಧರ್ಮ ಗುರುಗಳು ಭಾಗವಹಿಸಲು ಅವಕಾಶ ಇಲ್ಲ, ಅಲ್ಲದೇ ಭಾಷಣವನ್ನು ಮಾಡುವಂತಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜಮೀರ್ ಅಹಮ್ಮದ್ ಗೆ ಕೊಟ್ಟ ಸಾಲದ ಪಿನ್ ಟು ಪಿನ್ ಡೀಟೈಲ್ಸ್ ಬಿಚ್ಚಿಟ್ಟ KGF ಬಾಬು
ನಿಯಮ ಉಲ್ಲಂಘಿಸಬಾರದೆಂದು ಸಂಘಟಕರಿಗೆ ಸೂಚಿಸಲಾಗಿದೆ. ಇಡೀ ಕಾರ್ಯಕ್ರಮದ ಮೇಲೆ ರಾಜ್ಯ ಸರ್ಕಾರ ನಿಗಾ ಇಡಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ ಭಾಗವಹಿಸುತ್ತಾರೆ. ಹೀಗಾಗಿ ಗಮನ ಹರಿಸಿರುತ್ತೇವೆ. ವಿರೋಧ ಪಕ್ಷಗಳಿಗಿಂತ 10 ಪಟ್ಟು ನಮಗೆ ಜವಾಬ್ದಾರಿ ಇದೆ ಎಂದಿದ್ದಾರೆ.
ಧರ್ಮಗುರುಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ: ಸಚಿವ ಜಮೀರ್ ಅಹ್ಮದ್ ಖಾನ್
ಇನ್ನು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದ್ದು, ಮಿಲಾದ್ ಉನ್ ನಬಿ ಪ್ರತಿ ವರ್ಷ ಕಾರ್ಯಕ್ರಮ ಮಾಡುತ್ತೇವೆ. ಬೆಂಗಳೂರಿನಲ್ಲಿ ಮೂರು ಪಂಗಡಗಳು ಮಾಡುತ್ತಿದ್ದವು. ಈ ಬಾರಿ ಎಲ್ಲರೂ ಒಟ್ಟಿಗೆ ಸೇರಿ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮತ್ತೆ ಸದ್ದು ಮಾಡುತ್ತಿದೆ ಭೋವಿ ಅಭಿವೃದ್ಧಿ ನಿಗಮ ಅವ್ಯವಹಾರ: ಏನಿದು ಪ್ರಕರಣ? ಈವರೆಗೆ ಏನೇನಾಯ್ತು? ಇಲ್ಲಿದೆ ವಿವರ
ಮೆಕ್ಕಾ, ಮದೀನಾ, ಯೆಮನ್ನಿಂದ ಧರ್ಮಗುರುಗಳು ಬರ್ತಿದ್ದಾರೆ. ಟೂರಿಸ್ಟ್ ವೀಸಾದಲ್ಲಿ ಮೂವರು ಧರ್ಮ ಗುರುಗಳು ಬರುತ್ತಿರುವುದರಿಂದ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಬೇರೆ ಬೇರೆ ಚರ್ಚೆ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಅನ್ನೋ ಚರ್ಚೆ ನಡೆದಿದೆ. ಅವರು ಟೂರಿಸ್ಟ್ ವೀಸಾದಲ್ಲಿ ಬರ್ತಿರುವುದರಿಂದ ಹಾಜರಾಗಲು ಆಗಲ್ಲ ಎಂದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:57 pm, Wed, 3 September 25



