ಬೆಂಗಳೂರು ಮೆಟ್ರೋಗೆ ‘ಬಂಗಾಳ ಎಲೆಕ್ಷನ್ ಶಾಕ್’: 10 ಸಾವಿರ ಕಾರ್ಮಿಕರು ನಾಪತ್ತೆ, ಪಿಂಕ್-ಬ್ಲೂ ಲೈನ್ ಕಾಮಗಾರಿ ಬಂದ್!
ಬೆಂಗಳೂರಿನ ನಮ್ಮ ಮೆಟ್ರೋ ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳ ಉದ್ಘಾಟನೆಗೆ ಪಶ್ಚಿಮ ಬಂಗಾಳದ ಚುನಾವಣೆ ಭಾರಿ ಹಿನ್ನಡೆ ತಂದಿದೆ. ಮತದಾನ ಮಾಡಲು ಸ್ವಗ್ರಾಮಗಳಿಗೆ ತೆರಳಿದ 10 ಸಾವಿರಕ್ಕೂ ಹೆಚ್ಚು ಬಂಗಾಳಿ ಕಾರ್ಮಿಕರು ಮರಳಿ ಬಾರದ ಕಾರಣ ಕಾಮಗಾರಿಗಳು ಸ್ಥಗಿತಗೊಂಡಿವೆ. ಜೂನ್‌ನಲ್ಲಿ ಆರಂಭವಾಗಬೇಕಿದ್ದ ಕಾಳೇನ ಅಗ್ರಹಾರ-ತಾವರೆಕೆರೆ ಮಾರ್ಗ ಹಾಗೂ ಡಿಸೆಂಬರ್‌ನ ಸಿಲ್ಕ್ ಬೋರ್ಡ್-ಕೆ.ಆರ್. ಪುರಂ ಮೆಟ್ರೋ ಕಾಮಗಾರಿ ವಿಳಂಬವಾಗುವ ಸಂಪೂರ್ಣ ವಿವರ ಇಲ್ಲಿದೆ.

ಬೆಂಗಳೂರು, ಮೇ 28: ನಗರದ ಜನತೆಯ ಬಹುನಿರೀಕ್ಷಿತ ನಮ್ಮ ಮೆಟ್ರೋ (BMRCL) ಪಿಂಕ್ ಮತ್ತು ಬ್ಲೂ ಲೈನ್ ಮಾರ್ಗಗಳ ಉದ್ಘಾಟನೆಗೆ ಪಶ್ಚಿಮ ಬಂಗಾಳದ ಚುನಾವಣೆ ದೊಡ್ಡ ಮಟ್ಟದ ಬ್ರೇಕ್ ಹಾಕಿದೆ. ಮತದಾನ ಮಾಡಲು ಸ್ವಗ್ರಾಮಗಳಿಗೆ ತೆರಳಿದ ಸುಮಾರು 10 ಸಾವಿರಕ್ಕೂ ಹೆಚ್ಚು ಬಂಗಾಳಿ ಕಾರ್ಮಿಕರು ಇನ್ನು ಬೆಂಗಳೂರಿಗೆ ಮರಳಿ ಬಾರದ ಹಿನ್ನೆಲೆಯಲ್ಲಿ ಮೆಟ್ರೋ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿವೆ.
ಮುಖ್ಯಾಂಶಗಳು
- ಬಂಗಾಳ ಎಲೆಕ್ಷನ್‌ಗೆ ಹೋದ ಹತ್ತು ಸಾವಿರ ಮೆಟ್ರೋ ಕಾರ್ಮಿಕರು ಮರಳಿ ಬಂದಿಲ್ಲ.
- ಕೆಲಸಗಾರರಿಲ್ಲದೆ ಪಿಂಕ್ ಮತ್ತು ಬ್ಲೂ ಲೈನ್ ಕಾಮಗಾರಿಗಳು ಸಂಪೂರ್ಣ ಸ್ಥಗಿತಗೊಂಡಿವೆ.
- ಜೂನ್ ಮತ್ತು ಡಿಸೆಂಬರ್ ತಿಂಗಳ ಮೆಟ್ರೋ ಉದ್ಘಾಟನೆ ಮತ್ತಷ್ಟು ವಿಳಂಬವಾಗುವ ಆತಂಕವಿದೆ.
ವೋಟ್ ಹಾಕಲು ಹೋದವರು ಬರಲೇ ಇಲ್ಲ!
ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 23 ಮತ್ತು 29 ರಂದು ಎರಡು ಹಂತಗಳಲ್ಲಿ ವಿಧಾನಸೌಧ ಚುನಾವಣೆ ನಡೆದು, ಮೇ 4 ರಂದು ಫಲಿತಾಂಶ ಕೂಡ ಪ್ರಕಟವಾಗಿದೆ. ನಮ್ಮ ಮೆಟ್ರೋ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಬಹುತೇಕ ಕಾರ್ಮಿಕರು ಪಶ್ಚಿಮ ಬಂಗಾಳದವರಾಗಿದ್ದಾರೆ. ಚುನಾವಣೆಯಲ್ಲಿ ಮತ ಚಲಾಯಿಸಲು ಬೆಂಗಳೂರಿನಿಂದ ಹೋದ ಸಾವಿರಾರು ಕಾರ್ಮಿಕರು ವಾರಗಳು ಕಳೆದರೂ ಇನ್ನು ಕೆಲಸಕ್ಕೆ ಹಾಜರಾಗಿಲ್ಲ. ಪರಿಣಾಮವಾಗಿ, ಮೆಟ್ರೋ ನಿಲ್ದಾಣಗಳು ಹಾಗೂ ಹಳಿ ಅಳವಡಿಸುವ ಆಯಕಟ್ಟಿನ ಜಾಗಗಳಲ್ಲಿ ಕೆಲಸ ಮಾಡಲು ಆಳುಗಳಿಲ್ಲದೆ ಬಿಎಂಆರ್‌ಸಿಎಲ್ ಪರದಾಡುತ್ತಿದೆ.
ಯಾವ ಮಾರ್ಗಗಳಿಗೆ ಅಡ್ಡಿ?
ಬಿಎಂಆರ್‌ಸಿಎಲ್ ಯೋಜನೆ ಪ್ರಕಾರ ಮುಂಬರುವ ಜೂನ್ ಮತ್ತು ಡಿಸೆಂಬರ್ ತಿಂಗಳಲ್ಲಿ ಪ್ರಮುಖ ಮಾರ್ಗಗಳನ್ನು ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆದಿತ್ತು.ಈ ವರ್ಷದ ಜೂನ್ ತಿಂಗಳೊಳಗೆ ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗಿನ 6 ಎಲಿವೇಟೆಡ್ ಮೆಟ್ರೋ ಸ್ಟೇಷನ್‌ಗಳನ್ನು (ಪಿಂಕ್ ಲೈನ್) ಓಪನ್ ಮಾಡಲು ಪ್ಲಾನ್ ಮಾಡಲಾಗಿತ್ತು. ಈ ವರ್ಷದ ಡಿಸೆಂಬರ್ ವೇಳೆಗೆ ಮೊದಲ ಹಂತದ ಸಿಲ್ಕ್ ಬೋರ್ಡ್‌ನಿಂದ ಕೆ.ಆರ್. ಪುರಂ ವರೆಗಿನ 19.75 ಕಿ.ಮೀ ಮಾರ್ಗವನ್ನು ( ಬ್ಲೂ ಲೈನ್) ಸಾರ್ವಜನಿಕರಿಗೆ ಮುಕ್ತಗೊಳಿಸಲು ಗಡುವು ವಿಧಿಸಲಾಗಿತ್ತು.
ಆದರೆ ಕಾರ್ಮಿಕರ ಕೊರತೆಯಿಂದಾಗಿ ಈ ಎರಡೂ ಮಾರ್ಗಗಳ ಗಡುವು ಅಸಾಧ್ಯವೆಂಬಂತಾಗಿದೆ. ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪರ್ಯಾಯ ಕಾರ್ಮಿಕರ ವ್ಯವಸ್ಥೆ ಮಾಡಬೇಕು, ಇಲ್ಲದಿದ್ದರೆ ನಿಗದಿತ ಸಮಯಕ್ಕೆ ಮೆಟ್ರೋ ಸಿಗುವುದು ಕಷ್ಟ ಎಂದು ಸ್ಥಳೀಯ ನಿವಾಸಿ ರಘುರಾಮ್ ಹಾಗೂ ಮೆಟ್ರೋ ಪ್ರಯಾಣಿಕ ರಾಘವೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಬಂಗಾಳ ಚುನಾವಣೆಯ ಬಿಸಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ತಟ್ಟಿದ್ದು, ನಮ್ಮ ಮೆಟ್ರೋದ ಪಿಂಕ್ ಮತ್ತು ಬ್ಲೂ ಲೈನ್ ಕಾಮಗಾರಿಗಳು ಮತ್ತಷ್ಟು ವಿಳಂಬವಾಗುವುದರಲ್ಲಿ ಯಾವುದೇ ಅನುಮಾನವಿಲ್ಲದಂತಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.





