ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಫ್ರೀಡಂಪಾರ್ಕ್ನಲ್ಲಿ ರೈತ ಸಂಘಟನೆಗಳ ಪ್ರತಿಭಟನೆ
ತೆಲಂಗಾಣದಂತೆ ರಾಜ್ಯದಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು. ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡುವ ಯೋಜನೆ ಜಾರಿಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಬೆಂಗಳೂರು, ಫೆ.06: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ (Freedom Park) ರೈತ ಸಂಘಟನೆಗಳು ಪ್ರತಿಭಟನೆ (Protest) ನಡೆಸುತ್ತಿವೆ. ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ (Kuruburu Shantakumar) ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಭಾಗಿಯಾಗಿದೆ. ತೆಲಂಗಾಣ ಮಾದರಿಯಲ್ಲಿ ರಾಜ್ಯದಲ್ಲೂ ರೈತರ ಸಾಲಮನ್ನಾ ಮಾಡಬೇಕು. ತಮಿಳುನಾಡಿಗೆ ನೀರು ಹರಿಸಿದ್ದರಿಂದ ಕಾವೇರಿ ವ್ಯಾಪ್ತಿಯಲ್ಲಿ ಬೆಳೆನಾಶವಾಗಿದೆ. ಹೀಗಾಗಿ ರೈತರಿಗೆ ಎಕರೆಗೆ ಕನಿಷ್ಠ ₹25,000 ಪರಿಹಾರ ನೀಡಬೇಕು. ಬಗರ್ ಹುಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ನೀಡುವುದು ಸೇರಿ ಹಲವು ಬೇಡಿಕೆಗಳನ್ನು ಮುಂದಿನ ಬಜೆಟ್ನಲ್ಲೇ ಘೋಷಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ.
ಸಿದ್ದರಾಮಯ್ಯ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು
ಇನ್ನು ಪ್ರತಿಭಟನೆ ವೇಳೆ ಮಾತನಾಡಿದ ಕುರುಬೂರು ಶಾಂತಕುಮಾರ್, ರೈತರು ಆತ್ಮಹತ್ಯೆ ಮಾಡ್ಕೊಳ್ತಿದ್ದಾರೆ, ವಲಸೆ ಹೋಗ್ತಿದ್ದಾರೆ. ಇಷ್ಟೆಲ್ಲಾ ಕಷ್ಟದಲ್ಲಿದ್ದರೂ ಸರ್ಕಾರ ರೈತರ ಪರ ನಿಲ್ಲುತ್ತಿಲ್ಲ. ತೆಲಂಗಾಣದಲ್ಲಿ ರೈತರ ಸಾಲ ಕಾಂಗ್ರೆಸ್ ಮನ್ನಾ ಮಾಡಿದೆ. ಸಿದ್ದರಾಮಯ್ಯ ಸರ್ಕಾರ ರೈತರ ಸಾಲಮನ್ನಾ ಮಾಡಬೇಕು. ಬಜೆಟ್ನಲ್ಲಿ ರೈತರಿಗೆ ಹೆಚ್ಚಿನ ಅನುದಾನ ಕೊಡಲೇಬೇಕು ಎಂದು ಸಿದ್ದರಾಮಯ್ಯಗೆ ಆಗ್ರಹಿಸಿದರು.
ಇದನ್ನೂ ಓದಿ: ರಾಜ್ಯದ ಅತಿ ದೊಡ್ಡ ಕಬ್ಬನ್ ಪಾರ್ಕ್ ಸೆಂಟ್ರಲ್ ಲೈಬ್ರರಿಗೆ ಅನುದಾನ ಕೊರತೆ; ನಿರ್ವಹಣೆಗೆ ಪರದಾಡುತ್ತಿರುವ ಅಧಿಕಾರಿಗಳು
ಅನ್ನದಾತರ ಬೇಡಿಕೆಗಳೇನು?
- ತೆಲಂಗಾಣದಂತೆ ರಾಜ್ಯದಲ್ಲಿ ಸರ್ಕಾರ ರೈತರ ಸಾಲ ಮನ್ನಾ ಮಾಡಬೇಕು
- ರೈತರನ್ನು ಮದುವೆಯಾಗುವ ಹೆಣ್ಣುಮಕ್ಕಳಿಗೆ ಸರ್ಕಾರಿ ನೌಕರಿಯಲ್ಲಿ ಮೀಸಲಾತಿ ನೀಡುವ ಯೋಜನೆ ಜಾರಿಮಾಡಬೇಕು
- ತಮಿಳುನಾಡಿಗೆ ಕಾವೇರಿ ನೀರು ಹರಿಸಿ ಕಾವೇರಿ ಆಚ್ಚುಕಟ್ಟು ರೈತರಿಗೆ ವಂಚನೆ ಆಗಿದೆ. ಅವರಿಗೆ ಸರ್ಕಾರ ಕೂಡಲೇ ಎಕರೆಗೆ ಕನಿಷ್ಠ ₹25,000 ಪರಿಹಾರ ನೀಡಬೇಕು.
- ಕಬ್ಬಿನ ಎಫ್ ಆರ್ ಪಿ ದರ ರೈತನ ಹೊಲದಲ್ಲಿನ ದರ ಎಂದು ಬದಲಾಗಬೇಕು
- ಕಬ್ಬು ಕಟಾವು ಸಾಗಣಿಕೆ ದರ ಕಾರ್ಖಾನೆಗಳು ಮನ ಬಂದಂತೆ ಕಡಿತ ಮಾಡಿವೆ. ಕಡಿತ ಮಾಡಿರು ಹೆಚ್ಚುವರಿ ಹಣ ರೈತರಿಗೆ ವಾಪಸ್ ಕೊಡಿಸಬೇಕು.
- ಟನ್ ಕಬ್ಬಿಗೆ ರೂ-150 ಹೆಚ್ಚುವರಿ ದರ ಕೂಡಲೇ ಕಾರ್ಖಾನೆಗಳು ರೈತರಿಗೆ ಪಾವತಿಸಬೇಕು. ಇಲ್ಲವೇ ಸರ್ಕಾರವೇ ರೈತರಿಗೆ ಹೆಚ್ಚುವರಿ ದರ ಪಾವತಿಸಬೇಕು
- ಆಕಸ್ಮಿಕ, ಅಪಘಾತ ಸಾವು, ಆತ್ಮಹತ್ಯೆಗೆ ಒಳಗಾದ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ನೀಡಿ
- ರಾಜ್ಯದ ಎಲ್ಲಾ ಹೋಬಳಿ ಕೇಂದ್ರಗಳಲ್ಲಿ ಎಂ ಎಸ್ ಪಿ ಖರೀದಿ ಕೇಂದ್ರ ತೆರೆಯಬೇಕು
- ರೈತರು ಬೆಳೆದ ಸಿರಿಧಾನ್ಯಗಳನ್ನು ಉತ್ಪಾದನಾ ವೆಚ್ಚಕ್ಕೆ ಬೆಂಬಲ ಬೆಲೆ, ಹೆಚ್ಚುವರಿ ಬೆಲೆ ನಿಗದಿ ಮಾಡಬೇಕು. ಅದನ್ನು ಸರ್ಕಾರವೇ ಕಡ್ಡಾಯವಾಗಿ ಖರೀದಿಸುವಂತೆ ವ್ಯವಸ್ಥೆ ಜಾರಿಗೆ ಬರಬೇಕು
- ರೈತರ ಎಲ್ಲಾ ಬೆಳೆಗಳಿಗೆ ಬೆಳೆ ವಿಮೆ ಜಾರಿಯಾಗಬೇಕು, ಬೆಳೆ ವಿಮೆ ಪದ್ದತಿಯ ಕೆಲವು ನೀತಿ ಬದಲಾಗಬೇಕು.
- ಬೆಳೆನಷ್ಟಕ್ಕೆ ಪರಿಹಾರ ವೈಜ್ಞಾನಿಕವಾಗಿ ಸಂಪೂರ್ಣ ನಷ್ಟ ಸಿಗುವಂತಾಗಬೇಕು.
- ಕೃಷಿ ಸಾಲ ನೀತಿ ಬದಲಾಗಬೇಕು. ಎಲ್ಲಾ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಬಡ್ಡಿ ರಹಿತ ಸಾಲ ನೀಡುವಂತೆ ಆಗಬೇಕು.
- ಎಲ್ಲಾ ರೈತರಿಗೂ ಕೇವಲ ಪಹಣಿ ಪತ್ರ ಆಧರಿಸಿ ಕನಿಷ್ಠ 5 ಲಕ್ಷ ಆಧಾರ ರಹಿತ ಬಡ್ಡಿ ಇಲ್ಲದೆ ಸಾಲ ಕೊಡಿಸುವಂತೆ ಮಾಡಿ
- ರಾಷ್ಟ್ರೀಯ ರೈತ ದಿನ ಡಿಸೆಂಬರ್ 23 ರಂದು, ರೈತರ ಹಬ್ಬದ ರೀತಿ ಆಚರಿಸಲು ಕ್ರಮ
- ಕೃಷಿಗೆ ಬಳಸುವ ಕೀಟನಾಶಕ, ರಸಗೊಬ್ಬರ, ಉಪಕರಣಗಳು, ಟ್ಯಾಕ್ಟರ್ ಬಿಡಿಭಾಗಗಳ ಜಿ ಎಸ್ಟಿ ತೆರಿಗೆ ರದ್ದುಗೊಳಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು.
- 8 ಲಕ್ಷಕ್ಕೂ ಹೆಚ್ಚು ಬಗರ್ ಹುಕ್ಕುಂ ಸಾಗುವಳಿ ರೈತರಿಗೆ ಸಾಗುವಳಿ ಪತ್ರ ನೀಡಬೇಕು.
- ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ರಾಜ್ಯದಲ್ಲಿ ರದ್ದಾಗಬೇಕು.
- 60 ವರ್ಷ ತುಂಬಿದ ರೈತರಿಗೆ ಮಾಸಿಕ ಭತ್ಯೆ ಕನಿಷ್ಠ ರೂ 10,000 ಪಿಂಚಣಿ ಯೋಜನೆ ಜಾರಿಗೆ ತರಬೇಕು
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ