ರೈಲಿನಲ್ಲಿ 1 ಕೋಟಿ ರೂ. ಮೌಲ್ಯದ ಗಾಂಜಾ ಸರಬರಾಜು: ಆರೋಪಿಗಳು ಅರೆಸ್ಟ್
ಬೆಂಗಳೂರು ರೈಲ್ವೆ ಪೊಲೀಸರು 1 ಕೋಟಿ ರೂಪಾಯಿ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡು ಎಂಟು ಆರೋಪಿಗಳನ್ನು ಬಂಧಿಸಿದ್ದಾರೆ.ಆರೋಪಿಗಳು ರೈಲು ಮೂಲಕ ಆಂಧ್ರಪ್ರದೇಶ, ತಮಿಳುನಾಡು ಮತ್ತು ಓಡಿಶಾಗಳಿಗೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಹೊಸ ವರ್ಷದ ಹಿನ್ನೆಲೆಯಲ್ಲಿ ಪೊಲೀಸರು ಹೆಚ್ಚಿನ ಎಚ್ಚರಿಕೆ ವಹಿಸಿದ್ದಾರೆ ಮತ್ತು ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ನಡೆಸಿ ಅಪಾಯಕಾರಿ ಆಯುಧಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು, ಡಿಸೆಂಬರ್ 27: ರೈಲಿನಲ್ಲಿ (Train) ಕೆಜಿಗಟ್ಟಲೇ ಗಾಂಜಾ (Ganja) ಸರಬರಾಜು ಮಾಡುತ್ತಿದ್ದ ಎಂಟು ಮಂದಿ ಆರೋಪಿಗಳನ್ನು ಬೆಂಗಳೂರು ರೈಲ್ವೆ ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರೆ. ಆರೋಪಿಗಳ ಬಳಿ ಇದ್ದ, ಬರೊಬ್ಬರಿ 1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರು ಪೊಲೀಸರು ಅಲರ್ಟ್ ಆಗಿದ್ದು, ನಗರಕ್ಕೆ ಸಂಪರ್ಕ ಕಲ್ಪಿಸುವ ಹೆದ್ದಾರಿಗಳ ಚೆಕ್ಪೋಸ್ಟ್ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ.
ಹೀಗಾಗಿ, ಪೆಡ್ಲರ್ಗಳು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ಪೊಲೀಸ್ ಶ್ವಾನಕ್ಕೂ ವಾಸನೆ ಬಾರದ ರೀತಿ ರೈಲಿನಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದಾರೆ. ಪ್ರಶಾಂತಿ ಮತ್ತು ಹಟಿಯಾ ಎಕ್ಸ್ಪ್ರೆಸ್ ರೈಲಿನಲ್ಲಿ ಆಂದ್ರಪ್ರದೇಶ, ತಮಿಳುನಾಡು, ಓಡಿಶಾಕ್ಕೆ ಗಾಂಜಾ ಸರಬರಾಜು ಮಾಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪೆಡದ ಬೆಂಗಳೂರು ರೈಲ್ವೆ ಪೊಲೀಸರು ದಾಳಿ ಮಾಡಿ ತಪಾಸಣೆ ನಡೆಸಿದಾಗ ಆರೋಪಿಗಳ ಬಳಿ ಇದ್ದ ಟ್ರ್ಯಾಲಿ ಬ್ಯಾಗ್ಗಳಲ್ಲಿ ಗಾಂಜಾ ಪತ್ತೆಯಾಗಿದೆ. ಕೂಡಲೆ ಪೊಲೀಸರು ಆರೋಪಿಗಳನ್ನು ಬಂಧಿಸಿ, ಗಾಂಜಾವನ್ನು ಸೀಜ್ ಮಾಡಿದ್ದಾರೆ.
ರೌಡಿಶೀಟರ್‌ಗಳ ಮನೆಗಳ ಮೇಲೆ ಸಿಸಿಬಿ ರೇಡ್
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಸಿಸಿಬಿ ಅಧಿಕಾರಿಗಳು ಬೆಂಗಳೂರಿನಲ್ಲಿ ರೌಡಿಶೀಟರ್‌ಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಯಲಹಂಕ ಠಾಣಾ ವ್ಯಾಪ್ತಿಯ ವಿಲ್ಸನ್ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್ ಸಹಚರ, ರೌಡಿಶೀಟರ್ ಪುನೀತ್ ಸೇರಿದಂತೆ 20ಕ್ಕೂ ಅಧಿಕ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.
ದಾಳಿಯಲ್ಲಿ ರೌಡಿಶೀಟರ್ ಪುನೀತ್ ಮನೆಯಲ್ಲಿ ಲಾಂಗ್, ಡ್ಯಾಗರ್ ಪತ್ತೆಯಾಗಿದೆ. ಸಿಸಿಬಿ ಪೊಲೀಸರು ಹತ್ತಕ್ಕೂ ಅಧಿಕ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಸಿಬಿ ರೌಡಿಶೀಟರ್ ಪುನೀತ್ನನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿದೆ.
3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ
ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಇಬ್ಬರು ವಿದೇಶಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿದ್ದರು. ಬಂಧಿತರ ಬಳಿಯಿದ್ದ 3 ಕೋಟಿ ಮೌಲ್ಯದ ಸಿಂಥೆಟಿಕ್ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಹೊಸ ವರ್ಷಾಚರಣೆಗೆಂದು ಆರೋಪಿಗಳು ಸೋಲದೇವನಹಳ್ಳಿ ಬಳಿ ಡ್ರಗ್ಸ್ ಸಂಗ್ರಹಿಸಿದ್ದರು.
ಈ ವಿಚಾರ ತಿಳಿಸಿದ ಸಿಸಿಬಿ ಅಧಿಕಾರಿಗಳು ಡ್ರಗ್ಸ್ ಸಂಗ್ರಹಿಸಿಟ್ಟಿದ್ದ ಮನೆ ಮೇಲೆ ದಾಳಿ ಮಾಡಿದರು. ದಾಳಿ ವೇಳೆ, 1 ಕೆಜಿ 520 ಗ್ರಾಂ ಎಂಡಿಎಂಎ ಕ್ರಿಸ್ಟಲ್, 202 ಗ್ರಾಂ ಕೊಕೇನ್, 12 ಗ್ರಾಂ ಎಂಡಿಎಂಎ ಎಕ್ಸೆಟೆಸಿ ಪಿಲ್ಸ್ ಪತ್ತೆಯಾಗಿವೆ. ಕೂಡಲೆ ಸಿಸಿಬಿ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿ, ಮಾದಕ ವಸ್ತು ಜಪ್ತಿ ಮಾಡಿದ್ದರು.
ಆರೋಪಿಗಳು ಹೊಸ ವರ್ಷಾಚರಣೆ ದಿನದಂದು ಬೆಂಗಳೂರಿನಲ್ಲಿ ಮಾರಲು ಸಜ್ಜಾಗಿದ್ದರು. ಇನ್ನು, ಆರೋಪಿಗಳು ಮುಂಬೈನಿಂದ ಬೆಂಗಳೂರಿಗೆ ಡ್ರಗ್ಸ್ ತರಿಸುತ್ತಿದ್ದರು. ಈ ವಿದೇಶಿ ಡ್ರಗ್ ಪೆಡ್ಲರ್ಗಳು ಮೆಡಿಕಲ್ ವೀಸಾದಡಿ ಭಾರತಕ್ಕೆ ಬಂದಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ