AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಲ್ಲಿ ಮಳೆರಾಯನ ಆರ್ಭಟ: ಜಲಾವೃತಗೊಂಡ ಅಂಡರ್‌ಪಾಸ್‌, ನೀರಿನಲ್ಲೇ ತೇಲಿದ ಕಾರು!

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಪಣತ್ತೂರು ಅಂಡರ್‌ಪಾಸ್ ಜಲಾವೃತಗೊಂಡು ಕಾರು ತೇಲಿದೆ. ಚಾಮರಾಜಪೇಟೆಯಲ್ಲಿ ಅಂಗಡಿಗಳಿಗೆ ನೀರು ನುಗ್ಗಿ ಲಕ್ಷಾಂತರ ರೂ. ಹಾನಿಯಾಗಿದೆ. ಕೋಲಾರ ಹಾಗೂ ಮೈಸೂರಿನಲ್ಲೂ ಮಳೆಯಿಂದ ಹಾನಿ ಸಂಭವಿಸಿದ್ದು, ಅಕ್ಟೋಬರ್ 22ರವರೆಗೆ ರಾಜ್ಯದ ಹಲವೆಡೆ ಮಳೆ ಮುಂದುವರಿಯುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

ಬೆಂಗಳೂರಲ್ಲಿ ಮಳೆರಾಯನ ಆರ್ಭಟ: ಜಲಾವೃತಗೊಂಡ ಅಂಡರ್‌ಪಾಸ್‌, ನೀರಿನಲ್ಲೇ ತೇಲಿದ ಕಾರು!
ಬೆಂಗಳೂರಿನಾದ್ಯಂತ ಭಾರಿ ಮಳೆ
ಭಾವನಾ ಹೆಗಡೆ
|

Updated on: Oct 17, 2026 | 7:38 AM

Share

ಮುಖ್ಯಾಂಶಗಳು

  • ಬೆಂಗಳೂರಿನಲ್ಲಿ ನಿನ್ನೆ ಸುರಿದ ಭಾರಿ ಮಳೆಗೆ ಪಣತ್ತೂರು ಅಂಡರ್‌ಪಾಸ್ ಜಲಾವೃತಗೊಂಡಿದೆ.
  • ಚಾಮರಾಜಪೇಟೆಯ 7 ಅಂಗಡಿಗಳಿಗೆ ಮಳೆ ನೀರು ನುಗ್ಗಿ ಲಕ್ಷಾಂತರ ಹಾನಿಯಾಗಿದೆ.
  • ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಬೆಂಗಳೂರು, ಅಕ್ಟೋಬರ್ 17: ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮಳೆಯ ಆರ್ಭಟ ತೀವ್ರಗೊಂಡಿದ್ದು, ಸಾರ್ವಜನಿಕರ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ನಗರದಲ್ಲಿ ನಿನ್ನೆ ಸುರಿದ ಧಾರಾಕಾರ ಮಳೆಗೆ ಪ್ರಮುಖ ರಸ್ತೆಗಳು ಹಾಗೂ ಅಂಡರ್‌ಪಾಸ್‌ಗಳು ಜಲಾವೃತಗೊಂಡು ವಾಹನ ಸವಾರರು ತೀವ್ರ ಪರದಾಟ ನಡೆಸಿದರು.

ಜಲಾವೃತಗೊಂಡ ಪಣತ್ತೂರು ಅಂಡರ್‌ಪಾಸ್

ಪಣತ್ತೂರಿನ ರೈಲ್ವೆ ಅಂಡರ್‌ಪಾಸ್‌ನಲ್ಲಿ ನೀರು ಹರಿದುಹೋಗಲು ಮಾರ್ಗವಿಲ್ಲದೆ ಮಣ್ಣು ತುಂಬಿಕೊಂಡಿದ್ದರಿಂದ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ಇದರ ಪರಿಣಾಮವಾಗಿ ಅಂಡರ್‌ಪಾಸ್‌ನಲ್ಲಿ ಸಿಲುಕಿದ ಕಾರೊಂದು ನೀರಿನಲ್ಲೇ ತೇಲಿದ್ದು, ಅದೃಷ್ಟವಶಾತ್ ಚಾಲಕ ಹಾಗೂ ಪ್ರಯಾಣಿಕರು ಪಾರಾಗಿದ್ದಾರೆ. ಬೈಕ್ ಸವಾರನೊಬ್ಬ ಕೂಡ ನೀರಿನ ಸೆಳೆತದಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದು, ರಸ್ತೆಯುದ್ದಕ್ಕೂ ಸಾಲು ಸಾಲು ಟ್ರಾಫಿಕ್ ಜಾಮ್ ಉಂಟಾಗಿತ್ತು.

ಚಾಮರಾಜಪೇಟೆಯಲ್ಲಿ ಅಂಗಡಿಗಳಿಗೆ ನೀರು

ಚಾಮರಾಜಪೇಟೆಯಲ್ಲಿ ಮಳೆಯ ರೌದ್ರನರ್ತನಕ್ಕೆ ಮಳಿಗೆಗಳಿಗೆ ಮಳೆ ನೀರು ನುಗ್ಗಿದೆ. ಜ್ಯುವೆಲ್ಲರಿ, ಟೈಲರಿಂಗ್, ಟ್ಯಾಟೂ ಹಾಗೂ ಗಿಫ್ಟ್ ಶಾಪ್ ಸೇರಿದಂತೆ ಒಟ್ಟು 7 ಅಂಗಡಿಗಳಿಗೆ ನೀರು ಹೊಕ್ಕ ಪರಿಣಾಮ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಹಾನಿಗೊಳಗಾಗಿವೆ. ಇತ್ತ ದಾಸರಹಳ್ಳಿ, ಬಾಗಲಗುಂಟೆ, ಚಿಕ್ಕಬಾಣಾವರ, ಸೋಲದೇವನಹಳ್ಳಿ ಹಾಗೂ ಮಾದನಾಯಕನಹಳ್ಳಿಯಲ್ಲಿ ಸಂಜೆ ಮಳೆಗೆ ಸವಾರರು ರಸ್ತೆ ಬದಿಯಲ್ಲೇ ವಾಹನಗಳನ್ನು ನಿಲ್ಲಿಸಿ ಆಶ್ರಯ ಪಡೆಯುವಂತಾಯಿತು.

ಇದನ್ನೂ ಓದಿ Karnataka Weather Forecast: ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಿಗೆ ಅಕ್ಟೋಬರ್ 22ರವರೆಗೆ ಯೆಲ್ಲೋ ಅಲರ್ಟ್ ಘೋಷಣೆ!

ಜಿಲ್ಲೆಗಳಲ್ಲೂ ಮುಂದುವರಿದ ಕಷ್ಟ-ನಷ್ಟ

ಕೋಲಾರ: ನಂದಂಬಳ್ಳಿಯಲ್ಲಿ 40-50 ವರ್ಷಗಳ ಹಳೆಯ ಅಂಗನವಾಡಿ ಕಟ್ಟಡಕ್ಕೆ ನೀರು ನುಗ್ಗಿದ್ದು, ಕಟ್ಟಡ ಕುಸಿಯುವ ಭೀತಿಯ ನಡುವೆಯೇ ಪುಟ್ಟ ಮಕ್ಕಳು ನೀರಿನಲ್ಲೇ ನಿಂತು ಬಿಸಿಯೂಟ ಸೇವಿಸುವ ದುಸ್ಥಿತಿ ಎದುರಾಯಿತು. ಇತ್ತ ಕೆಜಿಎಫ್‌ನ ಹೈಗ್ರೌಂಡ್ಸ್‌ನಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ರೈತ ಮುರುಗನ್ ಅವರಿಗೆ ಸೇರಿದ ಸುಮಾರು 70,000 ರೂ. ಮೌಲ್ಯದ ಸೀಮೆಹಸು ಸಾವನ್ನಪ್ಪಿದೆ. ಮೈಸೂರು: ಸಿದ್ದಲಿಂಗಪುರದಲ್ಲಿ ನಾಲೆ ಉಕ್ಕಿ ಹರಿದಿದ್ದು, ಅದನ್ನು ದಾಟುವ ಯತ್ನದಲ್ಲಿ ಒಂದು ಎತ್ತು ನೀರಿನ ಪಾಲಾಗಿದೆ.

ಮುಂದಿನ 3 ದಿನ ಯೆಲ್ಲೋ ಅಲರ್ಟ್!

ರಾಜ್ಯದಲ್ಲಿ ಮುಂದಿನ 3 ದಿನಗಳ ಕಾಲ ಮಳೆ ಅಬ್ಬರ ಮುಂದುವರಿಯಲಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ಯೆಲ್ಲೋ ಅಲರ್ಟ್ ಘೋಷಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಭಾವನಾ ಹೆಗಡೆ
ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More