ಅಪಘಾತದಲ್ಲಿ ಬಿದ್ದ ಮಹಿಳೆಗೆ ಸಹಾಯದ ನಾಟಕ; ಕಣ್ಣೆದುರೇ ಲ್ಯಾಪ್‌ಟಾಪ್ ಬ್ಯಾಗ್ ಎಗರಿಸಿದ ಕದೀಮ!
ಬೆಂಗಳೂರಿನ ಹೆಣ್ಣೂರು ರಿಂಗ್ ರಸ್ತೆಯ ಅಂಡರ್‌ಪಾಸ್ ಬಳಿ ಸ್ಕೂಟರ್‌ನಿಂದ ಬಿದ್ದು ಗಾಯಗೊಂಡ ಮಹಿಳೆಗೆ ಸಾರ್ವಜನಿಕರು ಸಹಾಯ ಮಾಡುತ್ತಿದ್ದ ಸಂದರ್ಭದಲ್ಲಿ ಖದೀಮನೊಬ್ಬ ಲ್ಯಾಪ್‌ಟಾಪ್ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ. ಬ್ಯಾಗ್‌ನಲ್ಲಿ ಲ್ಯಾಪ್‌ಟಾಪ್, ಇಯರ್‌ಬಡ್ಸ್ ಸೇರಿದಂತೆ ಸುಮಾರು 94 ಸಾವಿರ ರೂಪಾಯಿ ಮೌಲ್ಯದ ವಸ್ತುಗಳಿದ್ದವು. ಘಟನೆಗೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮುಖ್ಯಾಂಶಗಳು
- ಅಪಘಾತದಲ್ಲಿ ಸ್ಕೂಟರ್‌ನಿಂದ ಬಿದ್ದ ಮಹಿಳೆಗೆ ಸಹಾಯಕ್ಕೆ ಧಾವಿಸಿದ ಜನರು.
- ಜನರ ಗಮನ ಬೇರೆಡೆ ಇದ್ದಾಗ ಲ್ಯಾಪ್‌ಟಾಪ್ ಬ್ಯಾಗ್ ಎಗರಿಸಿ ಪರಾರಿಯಾದ ಖದೀಮ.
- ಸುಮಾರು 94 ಸಾವಿರ ರೂಪಾಯಿ ಮೌಲ್ಯದ ವಸ್ತು ಕಳವು, ಬಾಣಸವಾಡಿ ಪೊಲೀಸರಿಂದ ತನಿಖೆ.
ಬೆಂಗಳೂರು, ನವೆಂಬರ್ 18: ಅಪಘಾತದಲ್ಲಿ ಬಿದ್ದ ಮಹಿಳೆಗೆ ಸಹಾಯ ಮಾಡಲು ಜನರು ಧಾವಿಸಿದರೆ, ಅದನ್ನೇ ದುರುಪಯೋಗಪಡಿಸಿಕೊಂಡ ಕಳ್ಳನೊಬ್ಬ ಆಕೆಯ ಲ್ಯಾಪ್‌ಟಾಪ್ ಬ್ಯಾಗ್ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಗರದ ಹೆಣ್ಣೂರು ರಿಂಗ್ ರಸ್ತೆಯ ಅಂಡರ್‌ಪಾಸ್ ಬಳಿ ಈ ಘಟನೆ ನಡೆದಿದ್ದು, ಸಾರ್ವಜನಿಕರ ಸೋಗಿನಲ್ಲಿ ಬಂದ ಕಳ್ಳನ ಕೃತ್ಯ ಅಚ್ಚರಿ ಮೂಡಿಸಿದೆ. ಸ್ಕೂಟರ್‌ನಿಂದ ಬಿದ್ದು ಗಾಯಗೊಂಡಿದ್ದ ಮಹಿಳೆಗೆ ಸ್ಥಳೀಯರು ನೆರವಾಗುತ್ತಿದ್ದ ಸಂದರ್ಭದಲ್ಲಿ ಜನರ ಗುಂಪಿನಲ್ಲೇ ಸೇರಿಕೊಂಡ ವ್ಯಕ್ತಿಯೊಬ್ಬ ಆಕೆಯ ಬ್ಯಾಗ್ ಎಗರಿಸಿದ್ದಾನೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ ಸುಮಾರು 94 ಸಾವಿರ ರೂಪಾಯಿ ಎಂದು ಅಂದಾಜಿಸಲಾಗಿದೆ.
ನೀರು ನಿಂತ ರಸ್ತೆಯಲ್ಲಿ ಸ್ಕೂಟರ್‌ನಿಂದ ಬಿದ್ದ ಮಹಿಳೆ
39 ವರ್ಷದ ಪದ್ಮಾವತಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದಾರೆ. ನವೆಂಬರ್ 5ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ ಕಂಪನಿಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ಕೂಟರ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಹೆಣ್ಣೂರು ರಿಂಗ್ ರಸ್ತೆಯ ಅಂಡರ್‌ಪಾಸ್ ಬಳಿ ಮಳೆ ನೀರು ನಿಂತಿತ್ತು. ರಸ್ತೆಯಲ್ಲಿದ್ದ ಗುಂಡಿಯನ್ನು ತಪ್ಪಿಸಲು ಪ್ರಯತ್ನಿಸಿದಾಗ ಸ್ಕೂಟರ್ ನಿಯಂತ್ರಣ ತಪ್ಪಿ ಪದ್ಮಾವತಿ ರಸ್ತೆಗೆ ಬಿದ್ದಿದ್ದಾರೆ. ಇದರಿಂದ ಅವರಿಗೆ ಗಾಯಗಳಾಗಿದ್ದು, ಸ್ಕೂಟರ್ ಕೂಡ ಕೆಳಗೆ ಬಿದ್ದಿದೆ.
ಘಟನೆ ಕಂಡ ಕೆಲ ವಾಹನ ಸವಾರರು ತಕ್ಷಣ ನೆರವಿಗೆ ಧಾವಿಸಿದ್ದಾರೆ. ಕೆಲವರು ಮಹಿಳೆಯನ್ನು ಮೇಲೆತ್ತಲು ಸಹಾಯ ಮಾಡಿದರೆ, ಮತ್ತೊಬ್ಬರು ಸ್ಕೂಟರ್ ಎತ್ತಲು ಮುಂದಾಗಿದ್ದಾರೆ.
ಸಹಾಯ ಮಾಡುವ ನೆಪದಲ್ಲಿ ಬಂದು ಲ್ಯಾಪ್‌ಟಾಪ್ ಬ್ಯಾಗ್ ಕಳವು!
ಇದೇ ಸಮಯದಲ್ಲಿ ಜನರ ಗುಂಪಿನಲ್ಲಿ ಸೇರಿಕೊಂಡ ಅಪರಿಚಿತ ವ್ಯಕ್ತಿಯೊಬ್ಬ ಮಹಿಳೆಯ ಲ್ಯಾಪ್‌ಟಾಪ್ ಬ್ಯಾಗ್ ಎಗರಿಸಿ ಯಾರಿಗೂ ಅನುಮಾನ ಬಾರದಂತೆ ಸ್ಥಳದಿಂದ ಪರಾರಿಯಾಗಿದ್ದಾನೆ. ಕೆಲವೇ ನಿಮಿಷಗಳ ಬಳಿಕ ಬ್ಯಾಗ್ ಕಾಣೆಯಾಗಿರುವುದನ್ನು ಗಮನಿಸಿದ ಪದ್ಮಾವತಿ ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಸ್ಥಳದಲ್ಲಿದ್ದವರೂ ಕಳ್ಳನಿಗಾಗಿ ಹುಡುಕಾಡಿದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಕಳುವಾದ ಬ್ಯಾಗ್‌ನಲ್ಲಿ ಕಂಪನಿಗೆ ಸೇರಿದ ಸುಮಾರು 85 ಸಾವಿರ ರೂಪಾಯಿ ಮೌಲ್ಯದ ಲ್ಯಾಪ್‌ಟಾಪ್, 3 ಸಾವಿರ ರೂಪಾಯಿ ಮೌಲ್ಯದ ಇಯರ್‌ಬಡ್ಸ್, 6 ಸಾವಿರ ರೂಪಾಯಿ ಮೌಲ್ಯದ ಬ್ಯಾಗ್, ಕಚೇರಿ ಗುರುತಿನ ಚೀಟಿ, ಚಾರ್ಜರ್ ಹಾಗೂ ನಗದು ಹಣ ಇತ್ತು. ಒಟ್ಟಾರೆ ಸುಮಾರು 94 ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಕಳುವಾಗಿವೆ.
ಬಾಣಸವಾಡಿ ಪೊಲೀಸರಿಂದ ತನಿಖೆ
ಗಾಯಗಳಿಂದ ಚೇತರಿಸಿಕೊಳ್ಳುತ್ತಿದ್ದ ಪದ್ಮಾವತಿ ಆರಂಭದಲ್ಲಿ ಕಳೆದುಹೋದ ವಸ್ತುಗಳನ್ನು ತಾವೇ ಹುಡುಕಲು ಪ್ರಯತ್ನಿಸಿದ್ದರು. ಬಳಿಕ ನವೆಂಬರ್ 14ರಂದು ಬಾಣಸವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 303ರ ಅಡಿಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಅಪಘಾತದ ಸಂದರ್ಭದಲ್ಲಿ ಸಹಾಯಕ್ಕೆ ಬಂದವರನ್ನೇ ನಂಬುವುದು ಕಷ್ಟ ಎನ್ನುವಂತಹ ಈ ಘಟನೆ ಇದೀಗ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




