ಯಲ್ಲಮ್ಮನ ಪಾದುಕೆ ಸರ್ಪ ನುಂಗಿದೆ ಎಂಬ ವದಂತಿ: ಭೀಮಾ ನದಿ ತೀರದಲ್ಲಿ ಪೂಜೆಗೆ ಮುಗಿಬಿದ್ದ ಮಹಿಳೆಯರು
ಸವದತ್ತಿಯಲ್ಲಿ ಯಲ್ಲಮ್ಮನ ಪಾದುಕೆಯನ್ನು ಸರ್ಪ ನುಂಗಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ, ಯಾದಗಿರಿಯ ಭೀಮಾ ನದಿ ತೀರದಲ್ಲಿ 3 ಸಾವಿರಕ್ಕೂ ಅಧಿಕ ಮಹಿಳೆಯರು ಜಮಾಯಿಸಿ ಗಂಗಾ ಪೂಜೆ ಸಲ್ಲಿಸಿ ಹೊಸ ಪಾದುಕೆ ಧರಿಸಿದ್ದಾರೆ. ಯಲ್ಲಮ್ಮನ ಪಾದುಕೆ ಕುರಿತ ವದಂತಿ ಒಬ್ಬರಿಂದ ಒಬ್ಬರಿಗೆ ಶೀಘ್ರವಾಗಿ ಹರಡಿದ್ದೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಹಿಳೆಯರು ಸೇರಲು ಕಾರಣವಾಗಿರುವ ಮಾಹಿತಿ ಇದೆ. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರ ಆಗಮನದಿಂದ ಭೀಮಾನದಿ ತೀರದಲ್ಲಿ ಜನಜಂಗುಳಿಯೇ ಉಂಟಾಗಿತ್ತು.

ಯಾದಗಿರಿ, ನವೆಂಬರ್ 18: ಸವದತ್ತಿಯಲ್ಲಿ ಯಲ್ಲಮ್ಮನ ಪಾದುಕೆ ಸರ್ಪ ನುಂಗಿದೆ ಎಂಬ ವದಂತಿ ಹರಡಿರುವ ಹಿನ್ನೆಲೆ ಯಾದಗಿರಿಯಲ್ಲಿ ಸಾವಿರಾರು ಮಹಿಳೆಯರು ಭೀಮಾ ನದಿಯತ್ತ ದೌಡಾಯಿಸಿದ್ದಾರೆ. ಕೊರಳಲ್ಲಿ ಧರಿಸಿದ್ದ ಯಲ್ಲಮ್ಮನ ಹಳೆಯ ಪಾದುಕೆಯನ್ನು ಬಿಚ್ಚಿ ಹಾಲು, ತುಪ್ಪ, ಹೂವು, ಹಣ್ಣುಗಳೊಂದಿಗೆ ಗಂಗಾ ಪೂಜೆ ನೆರವೇರಿಸಿದ ಬಳಿಕ ಹೊಸ ಪಾದುಕೆಯನ್ನು ಧರಿಸಿದ್ದಾರೆ. ದೇವರ ಕಾರ್ಯ ಹಾಗೂ ಮದುವೆ ಸಂದರ್ಭದಲ್ಲಿ ಮಹಿಳೆಯರು ಯಲ್ಲಮ್ಮನ ಪಾದುಕೆ ಧರಿಸುವ ಸಂಪ್ರದಾಯವಿದೆ. ಆದರೆ ಈಗ ಯಲ್ಲಮ್ಮನ ಪಾದುಕೆ ಸರ್ಪ ನುಂಗಿದೆ ಎಂಬ ವದಂತಿ ಹಿನ್ನೆಲೆ ಹೊಸ ಪಾದುಕೆ ಧರಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಯಾದಗಿರಿ ಜಿಲ್ಲೆಯ ವಿವಿಧ ಭಾಗಗಳಿಂದ ಬಂದ 3 ಸಾವಿರಕ್ಕೂ ಅಧಿಕ ಮಹಿಳೆಯರು ಭೀಮಾ ನದಿಯತ್ತ ಮುಖ ಮಾಡಿದ್ದರು.
ಸಾವಿರಾರು ಮಂದಿಯಿಂದ ಪೂಜೆ ಸಲ್ಲಿಕೆ
ಇನ್ನು ನದಿಗೆ ಬಂದ ಮಹಿಳೆಯರು ಮೊದಲು ಸ್ನಾನ ಮಾಡಿ ಗಂಗೆ ಪೂಜೆ ಸಲ್ಲಿಸಿದ್ದು, ಕೊರಳಿಗೆ ಧರಿಸಿದ್ದ ಹಳೆಯ ಚರ್ಮದ ಪಾದುಕೆಯನ್ನು ತೆಗೆದು ನದಿಗೆ ಬಿಟ್ಟು ಹೊಸ ಪಾದುಕೆ ಧರಿಸಿದ್ದಾರೆ. ಇನ್ನು ಕೆಲವರು ಬಂಗಾರದ ಪಾದುಕೆಗಳನ್ನ ನದಿ ನೀರಿನಲ್ಲಿ ಶುಚಿಗೊಳಿಸಿ ಪುನಃ ಧಾರಣೆ ಮಾಡಿದ್ದಾರೆ. ಉಟ್ಟು ಬಂದ ಹಳೆಯ ಸೀರೆಯನ್ನು ಅಲ್ಲೇ ಬಿಟ್ಟು ಹೊಸ ಸೀರೆ ಧರಿಸಿ ಮನೆಗಳತ್ತ ಹಿಂತಿರುಗಿದ ದೃಶ್ಯಗಳು ಕಂಡುಬಂದಿವೆ. ಯಲ್ಲಮ್ಮನ ಜೊತೆಗೆ ತಮಗೂ ಒಳ್ಳೆಯದಾಗಲಿ ಎಂಬ ಸಂಕಲ್ಪದಿಂದ ಸಾವಿರಾರು ಮಂದಿ ಪೂಜೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಲಾರಿ- ಕಾರು ಮಧ್ಯೆ ಭೀಕರ ರಸ್ತೆ ಅಪಘಾತ: ಮೂವರು ದುರ್ಮರಣ
ಯಲ್ಲಮ್ಮನ ಪಾದುಕೆ ಕುರಿತ ವದಂತಿ ಒಬ್ಬರಿಂದ ಒಬ್ಬರಿಗೆ ಶೀಘ್ರವಾಗಿ ಹರಡಿದ್ದೇ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಮಹಿಳೆಯರು ಸೇರಲು ಕಾರಣವಾಗಿರುವ ಮಾಹಿತಿ ಇದೆ. ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರ ಆಗಮನದಿಂದ ಭೀಮಾನದಿ ತೀರದಲ್ಲಿ ಜನಜಂಗುಳಿಯೇ ಉಂಟಾಗಿತ್ತು. ಏಕಾಏಕಿ ಆಗಮಿಸಿದ ಇಷ್ಟೊಂದು ಮಹಿಳೆಯರನ್ನು ಕಂಡು ಪೊಲೀಸರು ಕೂಡ ಅಚ್ಚರಿಪಟ್ಟ ಪ್ರಸಂಗಕ್ಕೂ ಘಟನೆ ಸಾಕ್ಷಿಯಾಯಿತು. ದಿನವಿಡೀ ನದಿ ತೀರದಲ್ಲಿ ಪೂಜೆ ಪುನಸ್ಕಾರಗಳು ನೆರವೇರಿದ್ದು, ಯಲ್ಲಮ್ಮನ ಮೇಲಿನ ಭಕ್ತಿಗೆ ಪ್ರತೀಕದಂತೆ ಕಂಡುಬಂತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




