AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ತಂದೆಗೆ ಔಷಧಿ ತರಲು ಹೋಗಿದ್ದ ಬಾಲಕನ ಮೇಲೆ ಹರಿದ ಖಾಸಗಿ ಬಸ್; ದುರಂತ ಅಂತ್ಯ ​

ಬೆಂಗಳೂರಿನ ಹೆಣ್ಣೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ತಂದೆಗೆ ಔಷಧಿ ತರಲು ಹೋಗಿದ್ದ ಬಾಲಕ ರಸ್ತೆ ದಾಟುವಾಗ ಇದ್ದಕ್ಕಿದ್ದಂತೆ ತಲೆಸುತ್ತಿ ಬಿದ್ದು, ಹಿಂಬದಿಯಿಂದ ಬಂದ ಖಾಸಗಿ ಬಸ್ ಹರಿದು ದಾರುಣವಾಗಿ ಸಾವನ್ನಪ್ಪಿದ್ದಾನೆ. ರಸ್ತೆ ಕಾಮಗಾರಿಯೇ ಮಗನ ಸಾವಿಗೆ ಕಾರಣವೆಂದು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಹೆಣ್ಣೂರು ಸಂಚಾರಿ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.

ಬೆಂಗಳೂರು: ತಂದೆಗೆ ಔಷಧಿ ತರಲು ಹೋಗಿದ್ದ ಬಾಲಕನ ಮೇಲೆ ಹರಿದ ಖಾಸಗಿ ಬಸ್; ದುರಂತ ಅಂತ್ಯ  ​
ಮೃತ ಬಾಲಕ, ಖಾಸಗಿ ಬಸ್​Image Credit source: tv9 kannada
ರಾಚಪ್ಪಾಜಿ ನಾಯ್ಕ್
| Edited By: |

Updated on: May 02, 2026 | 7:56 PM

Share

ಬೆಂಗಳೂರು, ಮೇ 02: ತಂದೆಗೆ ಔಷಧಿ ತರಲೆಂದು ಮನೆಯಿಂದ ಹೊರಟಿದ್ದ ಹನ್ನೊಂದು ವರ್ಷದ ಬಾಲಕನೊಬ್ಬ ದಾರುಣವಾಗಿ ಅಪಘಾತಕ್ಕೀಡಾಗಿ ಮೃತಪಟ್ಟಿರುವ (death) ಹೃದಯವಿದ್ರಾವಕ ಘಟನೆ ನಗರದ ಹೆಣ್ಣೂರು ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ರಸ್ತೆ ದಾಟುತ್ತಿದ್ದ ವೇಳೆ ತಲೆಸುತ್ತಿ ಬಿದ್ದ ಬಾಲಕನ ಮೇಲೆ ಖಾಸಗಿ ಬಸ್​​ ಹರಿದು ಮೃತಪಟ್ಟಿದ್ದಾನೆ. ವರುಣ್ (11) ಮೃತ ಬಾಲಕ. ಮಗ‌ನ ಭವಿಷ್ಯದ ಕನಸು ಕಾಣುತ್ತಿದ್ದ ಕಂದನನ್ನು ಕಳೆದುಕೊಂಡ ಪೋಷಕರು ಇದೀಗ ಗೋಳಾಡುವಂತಾಗಿದೆ. ಸಾವಿಗೆ ರಸ್ತೆ ಕಾಮಗಾರಿಯೇ ಕಾರಣ ಅಂತಾ ಆಕ್ರೋಶ‌ ಹೊರಹಾಕಿದ್ದಾರೆ.

ನಡೆದಿದ್ದೇನು?

ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ವರುಣ್ ಎಂಬ 11 ವರ್ಷದ ಬಾಲಕ ತನ್ನ ತಂದೆಗೆ ಔಷಧಿ ತರಲು ಹೋದಾಗ ಈ ದುರಂತ ಸಂಭವಿಸಿದೆ. ಬಾಲಕ ರಸ್ತೆ ದಾಟಲು ಬ್ಯಾರಿಕೇಡ್ ಬಳಿ ನಿಂತಿದ್ದ. ಇದ್ದಕ್ಕಿದ್ದ ಹಾಗೆ ತಲೆಸುತ್ತಿ ಹಿಂದಕ್ಕೆ ಬಿದ್ದಿದ್ದಾನೆ. ಬಾಲಕ ಬಿದ್ದ ತಕ್ಷಣ, ಅದೇ ರಸ್ತೆಯಲ್ಲಿ ಬರುತ್ತಿದ್ದ ಖಾಸಗಿ ಬಸ್‌ನ ಹಿಂಬದಿ ಚಕ್ರ ಆತನ ಎದೆಯ ಮೇಲೆ ಹರಿದಿದೆ. ಪರಿಣಾಮ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಬಿಸಿಲಿನ ತಾಪಕ್ಕೆ ಹೀಟ್ ಸ್ಟ್ರೋಕ್ ಆಗಿ ಬಾಲಕ ತಲೆಸುತ್ತಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಇನ್ನು ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎದೆ ಝಲ್ ಎನ್ನಿಸುವಂತಿದೆ.

ರಸ್ತೆ ಕಾಮಗಾರಿಯ ಅವ್ಯವಸ್ಥೆಗೆ ಪೋಷಕರು ಆಕ್ರೋಶ

ಇನ್ನು ಘಟನೆ ಸಂಬಂಧ ಬಾಲಕನ‌ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಣ್ಣೂರು-ಬಾಗಲೂರು ಮುಖ್ಯ ರಸ್ತೆಯಲ್ಲಿ ಕಳೆದ ಕೆಲ ತಿಂಗಳಿಂದ ವೈಟ್ ಟ್ಯಾಪಿಂಗ್ ಕಾಮಗಾರಿ ನಡೆಯುತ್ತಿದೆ. ಇದರಿಂದ ಸ್ಥಳೀಯರಿಗೆ ಸಾಕಷ್ಟು ಸಮಸ್ಯೆ ಉಂಟಾಗಿದ್ದು, ಕೆಲ ದಿನಗಳ ಹಿಂದಷ್ಟೇ ಅಪಘಾತದಲ್ಲಿ ಡೆಲಿವರಿ ಬಾಯ್ ಕೂಡ ಮೃತಪಟ್ಟಿದ್ದ. ಅಲ್ಲದೇ ಕಾಮಗಾರಿ ಹಿನ್ನೆಲೆ ಎರಡೂ ಬದಿಯ ವಾಹನಗಳು ಒಂದೇ ರಸ್ತೆಯಲ್ಲಿ ಸಂಚರಿಸುತ್ತಿದ್ದು, ರಸ್ತೆ ದಾಟಲು ಸಮಸ್ಯೆ, ಕಿರಿಕಿರಿ ಆಗುತ್ತಿದೆ. ಈ ವೈಟ್ ಟ್ಯಾಪಿಂಗ್​ನಿಂದ ನನ್ನ ಮಗನನ್ನ ಕಳೆದುಕೊಂಡೆವು ಅಂತಾ ಮೃತ ಬಾಲಕನ ತಾಯಿ ಆಕ್ರೋಶ‌ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಗೃಹಿಣಿ ಅನುಮಾನಾಸ್ಪದ ಸಾವು, ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರ ಆರೋಪ

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಸಂಚಾರಿ ಪೊಲೀಸರು ಈಗಾಗಲೇ ಬಸ್ ಚಾಲಕನನ್ನ ಅರೆಸ್ಟ್ ಮಾಡಿದ್ದಾರೆ. ಸಿಸಿಟಿವಿ ದೃಶ್ಯ ನೋಡಿದರೆ ಬಸ್ ಚಾಲಕನದ್ದು ತಪ್ಪು ಅಂತಾ ಮೇಲ್ನೋಟಕ್ಕೆ ಕಂಡುಬರದಿದ್ದರೂ, ಸಾವು ಸಂಭವಿಸಿರುವುದರಿಂದ ಕಾನೂನಿನ ಪ್ರಕಾರ ಕ್ರಮ ಜರುಗಿಸಲಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸಿದ್ದಾರೆ. ಬಾಲಕ ತಲೆಸುತ್ತಿ ಬಿದ್ದಿದ್ದು ಏಕೆ? ಆರೋಗ್ಯ ಸಮಸ್ಯೆ ಇತ್ತಾ? ಅಥವಾ ಹೀಟ್ ಸ್ಟ್ರೋಕ್ ಆಗಿತ್ತಾ? ಎಂಬ ಎಲ್ಲಾ ಆಯಾಮದಲ್ಲಿ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us