ಕಾವೇರಿ ಸೇರುತ್ತಿದೆ ಬೆಂಗಳೂರಿನ ತ್ಯಾಜ್ಯ ನೀರು: ಕಾರ್ಖಾನೆಗಳಿಗೆ ರಾಮಲಿಂಗಾರೆಡ್ಡಿ ಖಡಕ್ ಎಚ್ಚರಿಕೆ

ಬೆಂಗಳೂರಿನಲ್ಲಿ 4 ಲಕ್ಷ ಕೊಳವೆ ಬಾವಿಗಳಿದ್ದು, ಪ್ರತಿದಿನ 2500 MLD ಒಳಚರಂಡಿ ನೀರು ಹೊರಬರುತ್ತದೆ. ಅದರಲ್ಲಿ 1100 MLD ನೀರು ಸಂಸ್ಕರಣೆಯಾಗದೆ ನೇರವಾಗಿ ಕಾವೇರಿ ನದಿಗೆ ಸೇರುತ್ತಿದೆ. ತಮಿಳುನಾಡು NGTಗೆ ದೂರು ನೀಡಿದ ಹಿನ್ನೆಲೆ ನೀರು ಸಂಸ್ಕರಣೆಗೆ ಮುಂದಾಗಿದ್ದೇವೆ ಅಂತಾ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನೀಡಿದ್ದಾರೆ.

ಕಾವೇರಿ ಸೇರುತ್ತಿದೆ ಬೆಂಗಳೂರಿನ ತ್ಯಾಜ್ಯ ನೀರು: ಕಾರ್ಖಾನೆಗಳಿಗೆ ರಾಮಲಿಂಗಾರೆಡ್ಡಿ ಖಡಕ್ ಎಚ್ಚರಿಕೆ
ರಾಮಲಿಂಗಾರೆಡ್ಡಿ
Image Credit source: tv9 kannada
Edited By:

Updated on: Sep 10, 2026 | 6:49 PM

ಬೆಂಗಳೂರು, ಸೆಪ್ಟೆಂಬರ್​ 10: ‘ಬೆಂಗಳೂರು ಮಹಾನಗರದಲ್ಲಿ ಉತ್ಪತ್ತಿಯಾಗುತ್ತಿರುವ ಅಪಾರ ಪ್ರಮಾಣದ ಚರಂಡಿ ನೀರು ಸೂಕ್ತ ಸಂಸ್ಕರಣೆಯಿಲ್ಲದೆ ನೇರವಾಗಿ ಕಾವೇರಿ ನದಿಗೆ ಸೇರುತ್ತಿದ್ದು, ನದಿಗಳು ತೀವ್ರವಾಗಿ ಕಲುಷಿತಗೊಳ್ಳುತ್ತಿವೆ. ನಗರದಲ್ಲಿ ಸುಮಾರು 4 ಲಕ್ಷ ಕೊಳವೆಬಾವಿಗಳಿದ್ದು, ಪ್ರತಿದಿನ 2,500 ಎಂಎಲ್‌ಡಿ ಚರಂಡಿ ನೀರು ಹರಿದುಹೋಗುತ್ತಿದೆ. ಇದರಲ್ಲಿ ಸುಮಾರು 1,100 ರಿಂದ 1,147 ಎಂಎಲ್‌ಡಿಯಷ್ಟು ನೀರು ಯಾವುದೇ ಟ್ರೀಟ್‌ಮೆಂಟ್‌ ಇಲ್ಲದೆಯೇ ನದಿಗೆ ಸೇರುತ್ತಿರುವುದರಿಂದ ಸೆಕೆಂಡರಿ ಟ್ರೀಟ್‌ಮೆಂಟ್ ಮೂಲಕ ನೀರನ್ನು ಸಂಸ್ಕರಿಸಲು ಮುಂದಾಗಿದ್ದೇವೆ’ ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಎನ್‌ಜಿಟಿಗೆ ತಮಿಳುನಾಡು ದೂರು

ನಗರದಲ್ಲಿ BWSSB ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜೊತೆ ವಿಶೇಷ ಸಭೆ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ರಾಮಲಿಂಗಾರೆಡ್ಡಿ, ‘ಬೆಂಗಳೂರಿನಿಂದ ಕಾವೇರಿ ನದಿಗೆ ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರನ್ನು ಹರಿಬಿಡಲಾಗುತ್ತಿದೆ ಎಂದು ಆರೋಪಿಸಿ ತಮಿಳುನಾಡು ಸರ್ಕಾರವು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ದೂರು ನೀಡಿದೆ. ಈ ಹಿನ್ನೆಲೆ ತ್ಯಾಜ್ಯ ನೀರನ್ನು ಕಡ್ಡಾಯವಾಗಿ ಸಂಸ್ಕರಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ’ ಎಂದು ಸಚಿವರು ತಿಳಿಸಿದರು.

ಕಲರ್ ಫ್ಯಾಕ್ಟರಿಗಳ ವಿದ್ಯುತ್ ಕಡಿತಕ್ಕೆ ಸೂಚನೆ

‘ಮನೆಗಳ ಚರಂಡಿ ನೀರನ್ನು ಸಮರ್ಪಕವಾಗಿ ಎಸ್‌ಟಿಪಿಗಳಿಗೆ ಸಂಪರ್ಕಿಸದೆ, ಸ್ಯಾನಿಟರಿ ಲೈನ್ ಬದಲಿಗೆ ನೇರವಾಗಿ ಒಳಚರಂಡಿಗಳಿಗೆ ಬಿಡಲಾಗುತ್ತಿದೆ. ಜೊತೆಗೆ ಬಣ್ಣದ ಕಾರ್ಖಾನೆಗಳು ತ್ಯಾಜ್ಯವನ್ನು ಸಂಸ್ಕರಿಸದೆ ನೇರವಾಗಿ ಹರಿಬಿಡುತ್ತಿವೆ. ಇಂತಹ ನಿಯಮಬಾಹಿರ ಕಾರ್ಖಾನೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುವುದು. ನದಿಗಳ ಅಕ್ಕಪಕ್ಕದಲ್ಲಿರುವ ಎಲ್ಲಾ ಕಾರ್ಖಾನೆಗಳು ಕಡ್ಡಾಯವಾಗಿ ತ್ಯಾಜ್ಯ ನೀರನ್ನು ಸಂಸ್ಕರಿಸಿಯೇ ಹೊರಬಿಡಬೇಕು’ ಎಂದು ರಾಮಲಿಂಗಾರೆಡ್ಡಿ ಖಡಕ್​​ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಗ್ ಅಪ್ಡೇಟ್: 100 ದಿನದ ಸಂಭ್ರಮದಲ್ಲಿ ಸಿಎಂ ಮಹತ್ವದ ಘೋಷಣೆ

‘ನದಿ ಮೂಲಗಳ ರಕ್ಷಣೆಗಾಗಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳೊಂದಿಗೆ ಶೀಘ್ರದಲ್ಲೇ ಪ್ರತ್ಯೇಕ ಸಭೆ ನಡೆಸಲಾಗುವುದು. ಅಲ್ಲದೆ, ಕೊಳಚೆ ನೀರನ್ನು ಸಂಸ್ಕರಣೆ ಮಾಡದೆ ನದಿ ಹಾಗೂ ಜಲಮೂಲಗಳಿಗೆ ಬಿಡುವ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೂ ಕಟ್ಟುನಿಟ್ಟಿನ ನೋಟಿಸ್ ಜಾರಿ ಮಾಡಲಾಗುವುದು’ ಎಂದು ಅವರು ಹೇಳಿದ್ದಾರೆ.

Ramalingareddy on Pollution: ಪರಿಸರಕ್ಕೆ ಹಾನಿ ಮಾಡ್ತಿರೋ ಕಂಪನಿಗಳ ವಿರುದ್ಧ ಸಿಡಿದೆದ್ದ ಸಚಿವ ರಾಮಲಿಂಗಾರೆಡ್ಡಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us