ಬಿಡದಿ ಜಮೀನು ವಿವಾದ: ‘ನನ್ನ ಹೆಸರಲ್ಲಿರೋದು 32 ಎಕರೆ ಮಾತ್ರ, ನೂರಲ್ಲ; ನೋವಾಗಿದ್ದರೆ ವಿಷಾದಿಸುವೆ ಎಂದ ಸಚಿವ
ಬಿಡದಿ ಸ್ಮಾರ್ಟ್ ಟೌನ್‌ಶಿಪ್ ಭೂಸ್ವಾಧೀನ ಕುರಿತು ರಾಜಕೀಯ ವಿವಾದ ಭುಗಿಲೆದ್ದಿದೆ. ಅನಿತಾ ಕುಮಾರಸ್ವಾಮಿ ಹೆಸರಿನಲ್ಲಿ 100 ಎಕರೆ ಜಮೀನಿದೆ ಎಂದು ಸಚಿವ ಎಂ.ಬಿ. ಪಾಟೀಲ್, ಆರೋಪಿಸಿದ್ದು, ಇದಕ್ಕೆ ಸ್ವತಃ ಅನಿತಾ ಸ್ಪಷ್ಟನೆ ನೀಡಿ ತಮ್ಮ ಹೆಸರಿನಲ್ಲಿ ಅಷ್ಟು ಜಮೀನು ಇಲ್ಲ ಎಂದಿದ್ದಾರೆ. ಇನ್ನೊಂದೆಡೆ ಸುಳ್ಳು ಆರೋಪಗಳಿಗೆ ಮಾನಹಾನಿ ಮೊಕದ್ದಮೆ ಹೂಡುವುದಾಗಿ ನಿಖಿಲ್ ಕುಮಾರಸ್ವಾಮಿ ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಎಂಬಿ ಪಾಟೀಲ್ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.

ಮುಖ್ಯಾಂಶಗಳು
- ಪತ್ನಿ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಬಿಡದಿಯಲ್ಲಿ 100 ಎಕರೆ ಜಮೀನಿದೆ ಎಂಬ ಆರೋಪ
- ಸ್ವತಃ ಅನಿತಾ ಕುಮಾರಸ್ವಾಮಿ ಅವರೇ ಎಕ್ಸ್ ಮೂಲಕ ಟ್ವೀಟ್ ಮಾಡಿ ಎಂ.ಬಿ ಪಾಟೀಲ್ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ
- ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದ ಎಂಬಿ ಪಾಟೀಲ್
ಬೆಂಗಳೂರು, ಜೂ.24: ಬಿಡದಿ ಸ್ಮಾರ್ಟ್ ಟೌನ್‌ಶಿಪ್ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಕುರಿತು ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಆರಂಭವಾಗಿರುವ ರಾಜಕೀಯ ಕೆಸರೆರಚಾಟ ಈಗ ಮತ್ತಷ್ಟು ಗಂಭೀರತೆ ಪಡೆದುಕೊಂಡಿದೆ. ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರ ಹೆಸರಿನಲ್ಲಿ ಬಿಡದಿಯಲ್ಲಿ 100 ಎಕರೆ ಜಮೀನಿದೆ ಎಂದು ಆರೋಪಿಸಿದ್ದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಹೆಚ್‌ಡಿಕೆ ಕುಟುಂಬ ಕಾನೂನು ಸಮರಕ್ಕೆ ಸಜ್ಜಾಗಿದೆ. ನಮ್ಮ ತಾಯಿಯವರ ಹೆಸರಿನಲ್ಲಿ ಆ ಪ್ರದೇಶದಲ್ಲಿ 100 ಎಕರೆ ಜಾಗ ಇದೆ ಎಂದು ಸಾಬೀತುಪಡಿಸಬೇಕು. ಒಂದು ವೇಳೆ ಸಾಬೀತುಪಡಿಸಲು ಆಗದಿದ್ದರೆ ಅವರು ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ, ಅವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲಾಗುವುದು ಎಂದು ನಿಖಿಲ್ ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಮತ್ತೊಂದೆಡೆ ಸ್ವತಃ ಅನಿತಾ ಕುಮಾರಸ್ವಾಮಿ ಅವರೇ ಎಕ್ಸ್ ಮೂಲಕ ಟ್ವೀಟ್ ಮಾಡಿ ಎಂ.ಬಿ ಪಾಟೀಲ್ ಅವರ ಹೇಳಿಕೆಯನ್ನು ತಳ್ಳಿಹಾಕಿದ್ದಾರೆ. ಇದರ ಬೆನ್ನಲ್ಲೇ ಎಚ್ಚೆತ್ತ ಬಿ ಪಾಟೀಲ್, ತಮ್ಮ ಮಾತಿನಿಂದ ನೋವಾಗಿದ್ದಾರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.
ಸಾಬೀತುಪಡಿಸದಿದ್ದರೆ ಮಾನಹಾನಿ ಮೊಕದ್ದಮೆ:
“ನಮ್ಮ ತಾಯಿಯವರ ಹೆಸರಿನಲ್ಲಿ ಆ ಪ್ರದೇಶದಲ್ಲಿ 100 ಎಕರೆ ಜಾಗ ಇದೆ ಎಂದು ಸಾಬೀತುಪಡಿಸಬೇಕು. ಒಂದು ವೇಳೆ ಸಾಬೀತುಪಡಿಸಲು ಆಗದಿದ್ದರೆ ಅವರು ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು. ಇಲ್ಲವಾದಲ್ಲಿ, ಅವರ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡಲಾಗುವುದು” ಎಂದು ಎಚ್ಚರಿಕೆ ನೀಡಿದ್ದಾರೆ. ಬಾಯಿಗೆ ಬಂದಂತೆ ನೂರಾರು ಎಕರೆ ಜಾಗವಿದೆ ಎಂದು ಸುಳ್ಳು ಆರೋಪ ಮಾಡುವುದು ಸಚಿವ ಸ್ಥಾನದಲ್ಲಿರುವವರಿಗೆ ಶೋಭೆ ತರುವುದಿಲ್ಲ ಎಂದು ಅವರು ಕಿಡಿ ಕಾರಿದ್ದಾರೆ.
ಟ್ವೀಟ್ ಮೂಲಕ ಎಂ.ಬಿ ಪಾಟೀಲ್ಗೆ ಉತ್ತರ ಕೊಟ್ಟ ಅನಿತಾ ಕುಮಾರಸ್ವಾಮಿ:
ಎಂ.ಬಿ ಪಾಟೀಲ್ ಅವರ ಈ ಹೇಳಿಕೆಯ ವಿರುದ್ಧ ಅನಿತಾ ಕುಮಾರಸ್ವಾಮಿ ಎಕ್ಸ್ ಮೂಲಕ ಗುಡುಗಿದ್ದಾರೆ. “ನನ್ನ ಹೆಸರಿನಲ್ಲಿ ಬಿಡದಿಯಲ್ಲಿ ಇರುವುದು ಕೇವಲ 32 ಎಕರೆ ಜಮೀನು, ಸಚಿವರು ಹೇಳುತ್ತಿರುವಂತೆ 100 ಎಕರೆ ಅಲ್ಲ. ರಾಜಕೀಯ ದುರುದ್ದೇಶಕ್ಕಾಗಿ ಮನೆಯವರನ್ನು ಮತ್ತು ಮಹಿಳೆಯರನ್ನು ಎಳೆದು ತಂದು ಸುಳ್ಳು ಪ್ರಚಾರ ಮಾಡುವುದು ಯಾರಿಗೂ ಒಳ್ಳೆಯದಲ್ಲ. ವೈಯಕ್ತಿಕ ವಿಚಾರಗಳ ಬಗ್ಗೆ ಚರ್ಚಿಸುವ ಕೀಳು ಮಟ್ಟಕ್ಕೆ ಯಾರೂ ಹೋಗಬಾರದು. ಅನಗತ್ಯವಾಗಿ ನನ್ನ ಹಾಗೂ ನನ್ನ ಕುಟುಂಬದ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿದರೆ ಕಾನೂನಿನ ಮೂಲಕವೇ ತಕ್ಕ ಉತ್ತರ ಕೊಡುತ್ತೇನೆ” ಎಂದು ಎಚ್ಚರಿಸಿದ್ದರು.
ಇಲ್ಲಿದೆ ನೋಡಿ ಎಕ್ಸ್ ಪೋಸ್ಟ್:
ನನ್ನ ಹೆಸರಿನಲ್ಲಿರುವುದು 32 ಎಕರೆ ಜಮೀನು, ಸಚಿವರಾದ ಶ್ರೀ ಎಂ.ಬಿ.ಪಾಟೀಲ್ ಅವರು ಹೇಳಿರುವಂತೆ 100 ಎಕರೆ ಅಲ್ಲ. ರಾಜಕೀಯ ದುರುದೇಶಕ್ಕಾಗಿ ಮನೆಯವರನ್ನು ಎಳೆದು ತಂದು ಸುಳ್ಳು ಪ್ರಚಾರ ಮಾಡುವುದು ಯಾರಿಗೂ ಶೋಭೆ ತರುವುದಿಲ್ಲ. 1/2
— ಅನಿತಾ ಕುಮಾರಸ್ವಾಮಿ | Anitha Kumaraswamy (@Anitha_JDS) June 24, 2026
ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದ ಸಚಿವ ಎಂ.ಬಿ.ಪಾಟೀಲ್:
ಎಂ.ಬಿ.ಪಾಟೀಲ್ ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಹಿಂದೆ ಸ್ವತಃ ಹೆಚ್.ಡಿ.ಕುಮಾರಸ್ವಾಮಿ ಅವರೇ ತಮ್ಮ ಪತ್ನಿಯ ಹೆಸರಿನಲ್ಲಿ ಬಿಡದಿಯಲ್ಲಿ ಜಮೀನಿದೆ ಎಂದು ಹೇಳಿದ್ದರು. ಬಿಡದಿಯಲ್ಲಿ ಅನಿತಾ ಅವರು 100 ಎಕರೆ ಜಮೀನು ತೆಗೆದುಕೊಂಡಿದ್ದಾರೆ ಎಂಬ ಚರ್ಚೆ ರಾಜಕೀಯ ವಲಯದಲ್ಲಿತ್ತು. ಒಂದು ವೇಳೆ ಅಲ್ಲಿ ಅಷ್ಟು ಜಮೀನು ಇಲ್ಲದಿದ್ದರೆ ಅವರು ಆಗಲೇ ಸ್ಪಷ್ಟೀಕರಣ ನೀಡಬೇಕಿತ್ತು. ನಮ್ಮ ಭೂಮಿ ಇಲ್ಲ ಎಂದು ಹೇಳಿದರೆ ಇಲ್ಲಿಗೆ ಮುಗಿಯಿತು. ಅನಿತಾ ಕುಮಾರಸ್ವಾಮಿ ಅವರ ಮೇಲೆ ನನಗೆ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರು ನಮಗೆ ಸಹೋದರಿ ಇದ್ದಂತೆ. ನನ್ನ ಮಾತಿನಿಂದ ಅವರಿಗೆ ನೋವಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ” ಎಂದು ಹೇಳಿದರು.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:03 pm, Wed, 24 June 26



