
ಬೆಂಗಳೂರು, ಆಗಸ್ಟ್ 21: ರಾಜಧಾನಿ ಬೆಂಗಳೂರಿನ ಮೇಲಿನ ಜನಸಂಖ್ಯೆ, ಸಂಚಾರ ಮತ್ತು ಮೂಲಸೌಕರ್ಯದ ಒತ್ತಡವನ್ನು ತಗ್ಗಿಸುವ ಮಹತ್ವಾಕಾಂಕ್ಷೆಯೊಂದಿಗೆ ರೂಪಿಸಲಾಗಿರುವ ಬಿಡದಿ ‘ಗ್ರೇಟರ್ ಬೆಂಗಳೂರು ಸಮಗ್ರ ಉಪನಗರ ಯೋಜನೆ’ (greater bengaluru authority) ಇದೀಗ ನಿರ್ಣಾಯಕ ಹಂತ ತಲುಪಿದೆ. ಸುಮಾರು ₹18,133 ಕೋಟಿ ವೆಚ್ಚದ, 7,481 ಎಕರೆಗೂ ಹೆಚ್ಚು ವ್ಯಾಪ್ತಿಯ ಬೃಹತ್ ಯೋಜನೆ ಇದಾಗಿದ್ದು, ಒಂದೆಡೆ ಭವಿಷ್ಯದ ಬೆಂಗಳೂರಿನ ಹೊಸ ಬೆಳವಣಿಗೆಯ ಕೇಂದ್ರ ಎಂಬ ನಿರೀಕ್ಷೆ ಮೂಡಿಸಿದ್ದರೆ, ಮತ್ತೊಂದೆಡೆ ಭೂಸ್ವಾಧೀನ, ರೈತರ ಬದುಕು, ಪರಿಹಾರ ಮತ್ತು ಕಾನೂನಾತ್ಮಕ ಪ್ರಶ್ನೆಗಳ ಕಾರಣದಿಂದ ತೀವ್ರ ವಿರೋಧಕ್ಕೂ ಕಾರಣವಾಗಿದೆ. ಈ ಎಲ್ಲಾ ಪರ-ವಿರೋಧದ ಅಭಿಪ್ರಾಯಗಳನ್ನು ಸಮಗ್ರವಾಗಿ ಪರಿಶೀಲಿಸಿ ಮುಂದಿನ ಹೆಜ್ಜೆ ಇಡುವ ಉದ್ದೇಶದಿಂದ ರಾಜ್ಯ ಸರ್ಕಾರ ಇದೀಗ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.
ವಿಶ್ರಾಂತ ಮುಖ್ಯ ನ್ಯಾಯಮೂರ್ತಿ ನರೇಂದ್ರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಸಮಿತಿಯಲ್ಲಿ ವಿಶ್ರಾಂತ ಮುಖ್ಯ ಕಾರ್ಯದರ್ಶಿ ಎಸ್.ವಿ. ರಂಗನಾಥ್ ಹಾಗೂ ವಿಶ್ರಾಂತ ಅಪರ ಮುಖ್ಯ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಸದಸ್ಯರಾಗಿದ್ದು, ಪ್ರಸನ್ನ ಕುಮಾರ್ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ. ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಆಕ್ಷೇಪಗಳು, ಭೂಸ್ವಾಧೀನ ಪ್ರಕ್ರಿಯೆ ಹಾಗೂ ಕಾನೂನಾತ್ಮಕ ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ 30 ದಿನಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಸಮಿತಿಗೆ ಗಡುವು ನೀಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಫುಟ್ಪಾತ್ ಒತ್ತುವರಿ ತೆರವು ಮಾಡಿದರೂ ಮತ್ತೆ ಅತಿಕ್ರಮಣ: ತೆರವುಗೊಂಡ ಜಾಗ ಒಂದೇ ವಾರದಲ್ಲಿ ಯಥಾಸ್ಥಿತಿಗೆ!
ಬೆಂಗಳೂರು ನಗರದಲ್ಲಿ ಅತಿಯಾದ ಸಾರಿಗೆ ಒತ್ತಡ ಕಡಿಮೆ ಮಾಡಲು ಮತ್ತು ನಾಗರಿಕರಿಗೆ ವಸತಿ, ಉದ್ಯೋಗ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒಂದೇ ಸೂರಿನಡಿ ಒದಗಿಸುವ ಪರಿಕಲ್ಪನೆಯೊಂದಿಗೆ ‘ವರ್ಕ್-ಲೈವ್-ಪ್ಲೇ’ ಮಾದರಿಯಲ್ಲಿ ಈ ಸಮಗ್ರ ಉಪನಗರವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಯೋಜನಾ ವ್ಯಾಪ್ತಿಯ ಕೆಂಚನಕುಪ್ಪೆ, ವಡೇರಹಳ್ಳಿ, ಮಂಡಲಹಳ್ಳಿ, ಕೆ.ಜಿ. ಗೊಲ್ಲರಪಾಳ್ಯ, ಬನ್ನಿಗಿರಿ, ಅಲ್ಲಾಳಸಂದ್ರ ಮತ್ತು ಹೊಸೂರು ಸೇರಿದಂತೆ 7 ಗ್ರಾಮಗಳ 5,461 ಎಕರೆ 05 ಗುಂಟೆ ಪ್ರದೇಶಕ್ಕೆ ಈಗಾಗಲೇ ಅಂತಿಮ ಅಧಿಸೂಚನೆ ಹೊರಡಿಸಲಾಗಿದ್ದು, ಭೂಮಾಲೀಕರಿಗೆ ಪರಿಹಾರ ನೀಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
ಇದನ್ನೂ ಓದಿ: ಮನೆ ಮುಂದೆ ವಾಹನ ಪಾರ್ಕಿಂಗ್‌ಗೆ ಶುಲ್ಕ: ಜಿಬಿಎ ನಿಯಮಕ್ಕೆ ಸಿಟಿ ಮಂದಿ ಕಿಡಿ
ಇನ್ನು ಭೂಸ್ವಾಧೀನಕ್ಕೆ ಸಂಬಂಧಿಸಿದ ಆಕ್ಷೇಪಗಳ ಪರಿಶೀಲನೆಗೂ ಸೂಚಿಸಲಾಗಿದೆ. ವಿವಿಧ ವಲಯಗಳಿಂದ ಕೇಳಿಬಂದಿರುವ ಆಕ್ಷೇಪಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಭೂಸ್ವಾಧೀನ ಪ್ರಕ್ರಿಯೆ ಸೇರಿದಂತೆ ಯೋಜನೆಯ ವಿವಿಧ ಆಯಾಮಗಳ ಕುರಿತು, ಸಾರ್ವಜನಿಕರ ಅಭಿಪ್ರಾಯ ಮತ್ತು ಆಕ್ಷೇಪಗಳನ್ನು ಪರಿಗಣಿಸಿ ಸಮಿತಿ ಆಳವಾಗಿ ಅಧ್ಯಯನ ನಡೆಸಿ ಬಳಿಕ ಸರ್ಕಾರಕ್ಕೆ ಶಿಫಾರಸು ನೀಡಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:00 pm, Fri, 21 August 26