ಬೆಂಗಳೂರು, ಏಪ್ರಿಲ್ 04: ಎಫ್ಐಆರ್ ದಾಖಲಿಸಿದ್ದಕ್ಕೆ ಮನನೊಂದು ಬಿಜೆಪಿ ಕಾರ್ಯಕರ್ತ ಆತ್ಮಹತ್ಯೆ (death) ಮಾಡಿಕೊಂಡಿರುವಂತಹ ಘಟನೆ ಬೆಂಗಳೂರಿನ ನಾಗವಾರದ ಕಚೇರಿಯಲ್ಲಿ ನಡೆದಿದೆ. ವಿನಯ್ ಸೋಮಯ್ಯ(35) ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ಕಾರ್ಯಕರ್ತ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಡೆತ್ನೋಟ್ ಪೋಸ್ಟ್ ಮಾಡಿದ್ದ ವಿನಯ್, ರಾಜಕೀಯ ಪ್ರೇರಿತ FIRನಿಂದ ಮನನೊಂದಿದ್ದೇನೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬರೆದುಕೊಂಡಿದ್ದರು. ಸದ್ಯ ವಿನಯ್ ಸೋಮಯ್ಯ ಆತ್ಮಹತ್ಯೆ ಹಿಂದೆ ಸಾಕಷ್ಟು ಅನುಮಾನಗಳು ಹುಟ್ಟಿಕೊಂಡಿವೆ.
ಮೃತ ವಿನಯ್ ವಾಟ್ಸ್ಆ್ಯಪ್ ಗ್ರೂಪ್ ಒಂದರ ಅಡ್ಮಿನ್ ಆಗಿದ್ದರು. ಆ ಗ್ರೂಪ್ನಲ್ಲಿ ಇತ್ತೀಚೆಗೆ ಕಾಂಗ್ರೆಸ್ ಶಾಸಕರೊಬ್ಬರ ಬಗ್ಗೆ ಅಪಹಾಸ್ಯ ಪೋಸ್ಟ್ ಮಾಡಿರುವ ಆರೋಪ ಕೇಳಿಬಂದಿತ್ತು. ಹಾಗಾಗಿ ಕಾಂಗ್ರೆಸ್ ಮುಖಂಡ ಓರ್ವ ನೀಡಿದ ದೂರು ಆಧರಿಸಿ ವಿನಯ್ ವಿರುದ್ಧ ಮಡಿಕೇರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಬಳಿಕ ವಿನಯ್ ನಿರೀಕ್ಷಣಾ ಜಾಮೀನು ಕೂಡ ಪಡೆದಿದ್ದರು. ಬಳಿಕ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ನಿನ್ನೆ ರಾತ್ರಿ ಪೋಸ್ಟ್ ಮಾಡಿದ್ದರು.
ನನ್ನ ಆತ್ಮಹತ್ಯೆಗೆ ವಿರಾಜಪೇಟೆ ಶಾಸಕ ಪೊನ್ನಣ್ಣ ಆಪ್ತ ತೆನ್ನೀರಾ ಮಹೀನಾ ಕಾರಣ ಎಂದು ವಿನಯ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ರಾಜಕೀಯ ದ್ವೇಷಕ್ಕೆ ನಮ್ಮ ಜೀವನದ ಜೊತೆ ಆಟ ಆಡಿದ್ದಾರೆ. ನನ್ನ ಮೇಲೆ ಎಫ್ಐಆರ್ ದಾಖಲಿಸಿ ಕಿಡಿಗೇಡಿ ಎಂದು ಕೊಡಗು ಜಿಲ್ಲೆಯಲ್ಲಿ ನನ್ನ ಬಗ್ಗೆ ತೆನ್ನೀರಾ ಅಪಪ್ರಚಾರ ಮಾಡಿದ್ದಾನೆ. ತೆನ್ನೀರಾ ಈ ಹಿಂದೆಯೂ ಹಲವರ ಆತ್ಮಹತ್ಯೆಗೆ ಕಾರಣವಾಗಿದ್ದಾನೆ ಎಂದಿದ್ದಾರೆ.
ಇದನ್ನೂ ಓದಿ: Anwar Manippady: ಅನ್ವರ್ ಮಾಣಿಪ್ಪಾಡಿಗೆ ವಿದೇಶಿ ವ್ಯಕ್ತಿಗಳಿಂದ ಬೆದರಿಕೆ ಕರೆ, ವಕ್ಫ್ ಮಸೂದೆಗೆ ಅನುಮೋದನೆ ಬೆನ್ನಲ್ಲೇ ಕೃತ್ಯ
ಅಭಿವೃದ್ಧಿ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ ನನ್ನ ಮೇಲೆ ಕೇಸ್ ದಾಖಿಲಿಸಿದರು. ಜಾಮೀನು ಸಿಕ್ಕಿದ್ದರು ನನ್ನ ಸ್ನೇಹಿತನ ಮನೆಗೆ ಹೋಗಿ ಪೊಲೀಸರು ವಿಚಾರಿಸಿದ್ದಾರೆ. ವಿರಾಜಪೇಟೆ ಶಾಸಕ ಪೊನ್ನಣ್ಣ ಆದೇಶದಂತೆ ಇದೆಲ್ಲಾ ಮಾಡಿದ್ದಾರೆ. ಯಾರೋ ಹಾಕಿದ ಫೋಟೋಗೆ ನಮ್ಮ ಮೇಲೆ ಎಫ್ಐಆರ್ ಮಾಡಿದ್ದಾರೆ. ನಮ್ಮ ಮೇಲೆ ರೌಡಿಶೀಟ್ ಓಪನ್ ಮಾಡುವ ಹುನ್ನಾರ ನಡೆದಿದೆ. ಇವರಿಗೆ ಸರಿಯಾದ ಶಿಕ್ಷೆಯಾದರೆ ನನ್ನ ಸಾವಿಗೆ ನ್ಯಾಯ ಸಿಗುತ್ತೆ ಎಂದು ವಿನಯ್ ಡೆತ್ನೋಟ್ನಲ್ಲಿ ಉಲ್ಲೇಖಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದು, ಘಟನೆ ಸಂಬಂಧ ಡಿಸಿಪಿ ತನಿಖೆ ಮಾಡುತ್ತಾರೆ. ವರದಿಯಲ್ಲಿ ಏನು ಬರುತ್ತೋ ಅದರ ಮೇಲೆ ಕ್ರಮ ಕೈಗೊಳ್ಳುತ್ತೇವೆ. ಸಾಮಾಜಿಕ ಜಾಲತಾಣದಲ್ಲಿ ಬಂದಿದ್ದೆಲ್ಲಾ ಸತ್ಯ ಇರುವುದಿಲ್ಲ. ಪರಿಶೀಲನೆ ನಡೆಸಿ ಸತ್ಯಾಂಶ ಇದ್ದರೇ ಕ್ರಮ ತೆಗೆದುಕೊಳ್ಳುತ್ತೇವೆ. ಅಂಥದ್ದೇನಾದರೂ ಯಾರದ್ದಾದ್ರು ಪ್ರಭಾವ ಇದ್ದರೆ ಪರಿಶೀಲಿಸುತ್ತೇವೆ. ಎಫ್ಐಆರ್ ಆದ ತಕ್ಷಣ ಪೊಲಿಸರು ತನಿಖೆ ಆರಂಭಿಸುತ್ತಾರೆ. ತನಿಖೆ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ತಾರೆ ಎಂದು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಟಿವಿ9ಗೆ ಕಾಂಗ್ರೆಸ್ ವಕ್ತಾರ ತೆನ್ನೀರ ಮಹಿನಾ ಹೇಳಿಕೆ ನೀಡಿದ್ದು, ವಿನಯ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧ ಇಲ್ಲ. ವಿನಯ್ ಯಾರೆಂಬುದು ನನಗೆ ಗೊತ್ತಿಲ್ಲ. ಇದುವರೆಗೂ ನಾನು ಭೇಟಿ ಆಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Bangalore Karaga: ಬೆಂಗಳೂರು ಕರಗ ಮಹೋತ್ಸವ ಇಂದಿನಿಂದ ಶುರು, ಯಾವಾಗ ಏನೇನು ಕಾರ್ಯಕ್ರಮ? ಇಲ್ಲಿದೆ ವಿವರ
ಶಾಸಕ ಪೊನ್ನಣ್ಣ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದರು. ಇದರ ವಿರುದ್ಧ ನಾನು ಮಡಿಕೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಹೈಕೋರ್ಟ್ನಿಂದ ಬಿಜೆಪಿಯವರು ತಡೆಯಾಜ್ಞೆಯನ್ನು ತಂದಿದ್ದರು. ಅಲ್ಲಿಗೆ ಆ ಪ್ರಕರಣವನ್ನು ನಾವು ಬಿಟ್ಟುಬಿಟ್ಟಿದ್ದೆವು. ಆತ್ಮಹತ್ಯೆಗೆ ಬಿಜೆಪಿಯವರೇ ಏನೋ ಕುಮ್ಮಕ್ಕು ನೀಡಿರಬೇಕು. ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್ ಬಗ್ಗೆ ತನಿಖೆಯಾಗಲಿ ಎಂದಿದ್ದಾರೆ.
ಬೆಂಗಳೂರಿನಲ್ಲಿ ಟಿವಿ9ಗೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿಕೆ ನೀಡಿದ್ದು, ಆತ್ಮಹತ್ಯೆಗೆ ಶರಣಾದ ವಿನಯ್ ಯಾರೆಂದು ನನಗೆ ಗೊತ್ತಿಲ್ಲ. ವಿನಯ್ ಆತ್ಮಹತ್ಯೆ ಹಿಂದೆ ನನ್ನ ಆಪ್ತ ತೆನ್ನೀರಾ ಕೈವಾಡ ಇಲ್ಲ. ತೆನ್ನೀರಾ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ. ತೆನ್ನೀರಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಇರ್ತಾರೆ. ನನ್ನ ವಿರುದ್ಧ ಹೇಳಿಸಿ ಯಾರೋ ಆರೋಪ ಮಾಡಿಸಿರಬಹುದು. ವಿನಯ್ ಆತ್ಮಹತ್ಯೆಗೂ ನನಗೂ ಯಾವುದೇ ಸಂಬಂಧವಿಲ್ಲ. ಅವರ ಆತ್ಮಹತ್ಯೆ ನನಗೆ ಬೇಸರ ತಂದಿದೆ ಎಂದಿದ್ದಾರೆ.
ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆಗೂ ಮುನ್ನ ವಾಟ್ಸಾಪ್ ಗ್ರೂಪ್ನಲ್ಲಿ ಮಾಡಿದ್ದ ಕಡೆಯ ಮೆಸೇಜ್ಯನ್ನು ಮಾಜಿ ಸಂಸದ ಪ್ರತಾಪ್ ಸಿಂಹ ತಮ್ಮ ಸೊಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟೆ
ಕರ್ನಾಟಕದಲ್ಲಿ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:52 pm, Fri, 4 April 25