
ಬೆಂಗಳೂರು, ಜುಲೈ 30: ಕಟ್ಟಡ ತ್ಯಾಜ್ಯ ವಿಲೇವಾರಿ ಸೇರಿದಂತೆ ಕಸ ಸುರಿಯುವವರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕ್ರಮಕ್ಕೆ ಮುಂದಾಗಿದೆ. ಆ ಮೂಲಕ ನಗರದ ಅಂದ ಹಾಳಾಗದಂತೆ ವಹಿಸಲಾಗುತ್ತಿದೆ. ಇನ್ನು ಕಟ್ಟಡ ಅವಶೇಷಗಳನ್ನು ಎಲ್ಲೆಂದರಲ್ಲಿ ಸುರಿಯುವುದಕ್ಕೆ ಬ್ರೇಕ್ ಹಾಕಲು ಪಾಲಿಕೆ ಹೊಸ ನಿಯಮ ಜಾರಿಗೆ ಮುಂದಾಗಿದೆ. ಇನ್ಮುಂದೆ ಕಟ್ಟಡ ಅವಶೇಷ ವಿಲೇವಾರಿಗೂ (Demolition) ನಿಯಮಗಳು ಬರಲಿವೆ.
ಇನ್ಮುಂದೆ ಮನೆ ಅಥವಾ ಕಟ್ಟಡ ಡೆಮಾಲಿಷನ್ ಮಾಡುವವರು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಳ್ಳದೆ ಕಟ್ಟಡದ ಅವಶೇಷಗಳನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡಿದರೆ ದಂಡ ಬೀಳುವುದು ಖಚಿತ.
ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದ ರೈತರ ಹಿತರಕ್ಷಣೆಗೆ ದಿಟ್ಟ ಹೆಜ್ಜೆ ಇಟ್ಟ ಡಿಕೆ ಶಿವಕುಮಾರ್
ಈ ಅವಶೇಷಗಳ ವಿಲೇವಾರಿಗೆ ಸಂಬಂಧಿಸಿದ ಕಂಪನಿಯು ಪ್ರತಿ ಟನ್‌ಗೆ 760 ರೂ ದರ ನಿಗದಿಪಡಿಸಲಿದೆ. ನಗರದ ಸೌಂದರ್ಯ ಹಾಳಾಗದಂತೆ ತಡೆಯಲು ಮತ್ತು ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಲು ಈ ಹೊಸ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಮಾಧ್ಯಮದವರೊಂದಿಗೆ ಮಾತನಾಡಿದ್ದು, ‘ಬೆಂಗಳೂರಿನಲ್ಲಿ ಕಸ ವಿಲೇವಾರಿಗೆ ಮತ್ತಷ್ಟು ಕ್ರಮಕೈಗೊಳ್ಳಲಾಗುತ್ತೆ. ಖಾಸಗಿ ವಾಹನಗಳಲ್ಲಿ ಕಸದ ವಿಲೇವಾರಿ ಮಾಡಲಾಗುತ್ತೆ. ಇನ್ನೂ ಕೆಲವರು ಕಸವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಕುತ್ತಿದ್ದು, ಬಹಳ ಸಮಸ್ಯೆ ಆಗುತ್ತಿದೆ. ಹೀಗಾಗಿ ಇನ್ಮುಂದೆ ಯಾರೆಲ್ಲಾ ಕಸ ವಿಲೇವಾರಿ ಮಾಡುತ್ತಾರೋ, ಆ ಎಲ್ಲಾ ವಾಹನಗಳಿಗೆ ಜಿಪಿಎಸ್ ಹಾಕಬೇಕು. ಕಸವನ್ನು ವಿಲೇವಾರಿ ಮಾಡುವವರು ರಿಜಿಸ್ಟರ್ ಮಾಡಿಕೊಳ್ಳಬೇಕು. ಈ ಬಗ್ಗೆ ಪೊಲೀಸ್, ಸಾರಿಗೆ ಇಲಾಖೆ ಜೊತೆ ಸಭೆ ನಡೆಸಿ, ಶೀಘ್ರದಲ್ಲೇ ಈ ನಿಯಮ ಜಾರಿಗೆ ಬರುವಂತೆ ಮಾಡಲಾಗುವುದು’ ಎಂದು ಹೇಳಿದ್ದಾರೆ.
ಇನ್ನು ಬೆಂಗಳೂರಿನಲ್ಲಿ ಕುಡಿಯುವ ನೀರು ವಿಚಾರವಾಗಿ ಮಾತನಾಡಿದ ಅವರು, ‘ಬೆಂಗಳೂರಿನಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಬೇಕಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕಿದೆ. ಈಗಾಗಲೇ ಸಿಎಂ ಡಿಕೆ ಶಿವಕುಮಾರ್ ಜೊತೆಗೆ ಚರ್ಚೆ ಮಾಡಲಾಗಿದೆ. ಸರ್ಕಾರವೂ ಕುಡಿಯುವ ನೀರಿಗೆ ಆದ್ಯತೆ ಅಂತಾ ಹೇಳಿದೆ’ ಎಂದರು.
ವರದಿ: ಅರುಣ್ ಕುಮಾರ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.