FSSAI ಅಡಿಯಲ್ಲಿ ಇನ್ಮುಂದೆ ಅಪಾಯಕಾರಿ ಹಣ್ಣು ಅಥವಾ ಕಾಯಿ ಮಾರಾಟ ಇಲ್ಲ: ದತ್ತೂರಿ ಹಣ್ಣು ಇ-ಕಾಮರ್ಸ್ ನಿಷೇಧ
ಆನ್‌ಲೈನ್‌ನಲ್ಲಿ ವಿಷಕಾರಿ ದತ್ತೂರಿ ಹಣ್ಣು, ಬೀಜಗಳು ಹಾಗೂ ನಕಲಿ ಉತ್ಪನ್ನಗಳ ಮಾರಾಟ ಹೆಚ್ಚಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆಹಾರ ಮತ್ತು ಔಷಧ ಆಡಳಿತ (FDA), ಅಮೆಜಾನ್ ಸೇರಿದಂತೆ ಹಲವು ಇ-ಕಾಮರ್ಸ್ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿದೆ. ದತ್ತೂರಿ ಸೇವನೆಯು ಮಾರಣಾಂತಿಕವಾಗಿರುವುದರಿಂದ, ಅಂತಹ ಅಪಾಯಕಾರಿ ಉತ್ಪನ್ನಗಳ ಮಾರಾಟ ತಡೆಯಲು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.

ಬೆಂಗಳೂರು, ಆ.24: ರಾಜ್ಯದಲ್ಲಿ ಇತ್ತಿಚಿನ ದಿನಗಳಲ್ಲಿ ನಕಲಿ ವಸ್ತುಗಳ ಮಾರಾಟ ನಡೆಯುತ್ತಿದೆ. ಹಲವು ಕಡೆ ಆರೋಗ್ಯ ಸಂರಕ್ಷಣಾ ಇಲಾಖೆ ಅಧಿಕಾರಿಗಳು ದಾಳಿಯನ್ನು ಮಾಡಿ ಜಪ್ತಿ ಕೂಡ ಮಾಡಿದ್ದಾರೆ. ಉಡುಪಿಯಲ್ಲಿ ಮೂರು ದಿನಗಳ ಹಿಂದೆ ಕೆಮಿಕಲ್ ಬಳಸಿ ಬಾಳೆಹಣ್ಣುಗಳನ್ನು ಹಣ್ಣಾಗಿಸುವ ದಂಧೆಯ ಮೇಲೆ ದಾಳಿಯನ್ನು ಮಾಡಿದ್ದರು. ಜತೆಗೆ ಅನೇಕ ಕಡೆ ತರಕಾರಿಗಳು ಸೇರಿದಂತೆ ನಕಲಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಇದೀಗ ಆನ್ಲೈನ್ಗಳಲ್ಲೂ ತೀವ್ರ ವಿಷಯುಕ್ತ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಮಾರಾಟ ಮಾಡುವುದು ಕಂಡು ಬಂದಿದೆ. ಈ ಕಾರಣಕ್ಕೆ ಪ್ರಾಣಾಪಾಯ ಉಂಟುಮಾಡಬಲ್ಲ ತೀವ್ರ ವಿಷಯುಕ್ತ ದತ್ತೂರಿ ಹಣ್ಣು ಹಾಗೂ ಬೀಜಗಳನ್ನು ಆನ್‌ಲೈನ್ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮುಕ್ತವಾಗಿ ಮಾರಾಟ ಮಾಡುತ್ತಿರುವುದನ್ನು ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯು ಗಂಭೀರವಾಗಿ ಪರಿಗಣಿಸಿದೆ.
ಅಮೆಜಾನ್ (Amazon) ಸೇರಿದಂತೆ ಹಲವು ಪ್ರಮುಖ ಇ-ಕಾಮರ್ಸ್ ಸಂಸ್ಥೆಗಳಲ್ಲಿ ದತ್ತೂರಿ ಹಣ್ಣು ಮತ್ತು ಬೀಜಗಳು ಮಾರಾಟವಾಗುತ್ತಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದ್ದು, ಅಧಿಕಾರಿಗಳು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ. ಈ ಕಾರಣಕ್ಕೆ ಕೆಲವೊಂದು ಕ್ರಮಗಳನ್ನು ಎಫ್‌ಡಿಎ ತೆಗೆದುಕೊಂಡಿದೆ.
FSSAI ಮತ್ತು FDA ನಿಯಮಗಳ ಅನುಮತಿಯಿಲ್ಲದೆ ಅಪಾಯಕಾರಿ ದತ್ತೂರಿ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದಕ್ಕೆ ಸಂಬಂಧಿಸಿದಂತೆ ಎಫ್‌ಡಿಎ ಆಯುಕ್ತರು ಅಮೆಜಾನ್ ಸೇರಿದಂತೆ ಹಲವು ಇ-ಕಾಮರ್ಸ್ ವೇದಿಕೆಗಳಿಗೆ ನೋಟಿಸ್ ಜಾರಿಗೊಳಿಸಿದ್ದರು. ನೋಟಿಸ್ ಬೆನ್ನಲ್ಲೇ ಅಮೆಜಾನ್ ಪ್ರತಿನಿಧಿಗಳು ಇಲಾಖೆಯ ಅಧಿಕಾರಿಗಳ ಮುಂದೆ ಹಾಜರಾಗಿ ದಾಖಲೆಗಳ ಪರಿಶೀಲನೆಗೆ ಒಳಪಟ್ಟಿದ್ದಾರೆ.
ವಿಚಾರಣೆ ವೇಳೆ ತನಿಖಾಧಿಕಾರಿಗಳ ಪ್ರಶ್ನೆಗಳಿಗೆ ಸ್ಪಷ್ಟ ಹಾಗೂ ತೃಪ್ತಿಕರ ಉತ್ತರ ನೀಡಲು ಅಸಮರ್ಥರಾದ ಅಮೆಜಾನ್ ಪ್ರತಿನಿಧಿಗಳು, ಸೂಕ್ತ ಸ್ಪಷ್ಟನೆ ಸಲ್ಲಿಸಲು ಹೆಚ್ಚುವರಿ ಕಾಲಾವಕಾಶ ಕೋರಿ ತೆರಳಿದ್ದಾರೆ. ಕೇವಲ ಅಮೆಜಾನ್ ಮಾತ್ರವಲ್ಲದೆ, ಇತರೆ ಎಲ್ಲಾ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಯಾವುದೇ ರೀತಿಯ ವಿಷಕಾರಿ ಗಿಡಮೂಲಿಕೆ ಅಥವಾ ಬೀಜಗಳು ಮಾರಾಟವಾಗದಂತೆ ತಡೆಯಲು ತನಿಖೆಯನ್ನು ವಿಸ್ತರಿಸಲಾಗಿದೆ.
ಇದನ್ನೂ ಓದಿ: H1N1 ಫ್ಲೂ ಆತಂಕ: ಆರೋಗ್ಯ ಇಲಾಖೆಯಿಂದ ಪೋಷಕರು, ಶಾಲೆಗಳಿಗೆ ಶೀಘ್ರ ಹೊಸ ಮಾರ್ಗಸೂಚಿ
ದತ್ತೂರಿ ಏಕೆ ಅಪಾಯಕಾರಿ?
ದತ್ತೂರಿ (Datura) ಅತ್ಯಂತ ವಿಷಕಾರಿ ಸಸ್ಯವಾಗಿದ್ದು, ಇದರ ಹಣ್ಣು ಅಥವಾ ಬೀಜಗಳನ್ನು ಸೇವಿಸಿದರೆ ಮನುಷ್ಯರಿಗೆ ತೀವ್ರ ಸ್ವರೂಪದ ನರಮಂಡಲದ ಹಾನಿ ಉಂಟಾಗುತ್ತದೆ ಹಾಗೂ ಪ್ರಾಣಾಪಾಯ (ಸಾವು) ಸಂಭವಿಸುವ ಸಾಧ್ಯತೆ ಅತ್ಯಧಿಕವಾಗಿರುತ್ತದೆ. ಇಂತಹ ಡೆಡ್ಲಿ ವಸ್ತುವನ್ನು ಯಾವುದೇ ವೈದ್ಯಕೀಯ ಪರೀಕ್ಷೆ ಅಥವಾ ಧೃಡೀಕರಣವಿಲ್ಲದೆ ಆನ್‌ಲೈನ್‌ನಲ್ಲಿ ಸುಲಭವಾಗಿ ತಲುಪಿಸುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




