ಉತ್ತರ ಕರ್ನಾಟಕದಲ್ಲಿ ನಿಲ್ಲದ ಪ್ರವಾಹ ಭೀತಿ: ಮನೆಗಳಲ್ಲಿ ಉಕ್ಕುತ್ತಿರುವ ನೀರು, ಸೇತುವೆ ಕುಸಿತದ ಭೀತಿ, ದಾವಣಗೆರೆಯಲ್ಲಿ ಅಡಿಕೆ ತೋಟ ಜಲಾವೃತ

ಅಂತರ್ಜಲದ ಮಟ್ಟ ಹೆಚ್ಚಾಗುತ್ತಿರುವುದರಿಂದ ಭೂಮಿ ಕುಸಿಯುತ್ತಿದೆ. ನೀರು ಹೊರ ಹಾಕಲು ಕುಟುಂಬಗಳು ಹರಸಾಹಸ ಪಡುತ್ತಿವೆ.

ಉತ್ತರ ಕರ್ನಾಟಕದಲ್ಲಿ ನಿಲ್ಲದ ಪ್ರವಾಹ ಭೀತಿ: ಮನೆಗಳಲ್ಲಿ ಉಕ್ಕುತ್ತಿರುವ ನೀರು, ಸೇತುವೆ ಕುಸಿತದ ಭೀತಿ, ದಾವಣಗೆರೆಯಲ್ಲಿ ಅಡಿಕೆ ತೋಟ ಜಲಾವೃತ
ದಾವಣಗೆರೆಯಲ್ಲಿ ಅಡಿಕೆ ತೋಟ ಮುಳುಗಿದೆ.
Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 16, 2022 | 11:55 AM

ಬೆಂಗಳೂರು: ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನದಿಗಳು ಉಕ್ಕಿ ಹರಿಯುತ್ತಿದ್ದು ಪ್ರವಾಹ ಭೀತಿ ಕಡಿಮೆಯಾಗುತ್ತಿಲ್ಲ. ಗದಗ ಜಿಲ್ಲೆಯ ಅಂತೂರ-ಬೆಂತೂರ ಗ್ರಾಮದಲ್ಲಿ ಮನೆಮನೆಯಲ್ಲೂ ನೀರು ಉಕ್ಕುತ್ತಿದೆ. ನಿರಂತರ ನೀರು ಉಕ್ಕುತ್ತಿರುವುದರಿಂದ ಜನರಲ್ಲಿ ಆತಂಕ ಮನೆಮಾಡಿದೆ. ಅಂತರ್ಜಲದ ಮಟ್ಟ ಹೆಚ್ಚಾಗುತ್ತಿರುವುದರಿಂದ ಭೂಮಿ ಕುಸಿಯುತ್ತಿದೆ. ನೀರು ಹೊರ ಹಾಕಲು ಕುಟುಂಬಗಳು ಹರಸಾಹಸ ಪಡುತ್ತಿವೆ. ನಿರಂತರ ಮಳೆಗೆ ಕೆರೆಯು ಭರ್ತಿಯಾಗಿದ್ದು, ಗ್ರಾಮದಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಕೆರೆ ಖಾಲಿ ಮಾಡಿ ನಮ್ಮನ್ನು ಬದುಕಿಸಿ ಎಂದು ನೀರು ಕುಟುಂಬಗಳು ವಿನಂತಿಸುತ್ತಿವೆ. ಪ್ರಸ್ತುತ ಗ್ರಾಮಸ್ಥರೇ ಸ್ವಂತ ಖರ್ಚಿನಲ್ಲಿ ಐದು ಮೋಟರ್​ಗಳ ಮೂಲಕ ಕೆರೆ ನೀರು ಖಾಲಿ ಮಾಡುತ್ತಿದ್ದಾರೆ. ಶಾಸಕ ಎಚ್.ಕೆ.ಪಾಟೀಲ್ ಮತ್ತು ಜಿಲ್ಲಾಧಿಕಾರಿ ನಮ್ಮೂರಿಗೆ ಬಂದು ಪರಿಸ್ಥಿತಿ ನೋಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಅಡಿಕೆ ತೋಟಕ್ಕೆ ನೀರು

ದಾವಣಗೆರೆ: ಜಿಲ್ಲೆಯಲ್ಲಿಯೂ ಮಳೆ ನಿರಂತರ ಸುರಿಯುತ್ತಿದ್ದು ಅಡಿಕೆ ತೋಟಗಳು ಜಲಾವೃತಗೊಂಡಿವೆ. ಕೆರೆಯ ಹಿನ್ನೀರಿನಲ್ಲಿ ಅಡಿಕೆ ತೋಟಗಳು ಮುಳುಗಿವೆ. ಕೆರೆಯಾಗಳಹಳ್ಳಿ ಅಡಿಕೆ ತೋಟವು ಸಂಪೂರ್ಣ ಜಲಾವೃತಗೊಂಡಿದೆ. ಅಣಜಿ ಕೆರೆಯು ಭರ್ತಿಯಾಗಿದ್ದು ಹಿನ್ನೀರಿನಲ್ಲಿ ಸುಮಾರು 300 ಎಕರೆ ಅಡಿಕೆ ತೋಟಗಳು ಜಲಾವೃತಗೊಂಡಿವೆ. ರೈತರು ತೆಪ್ಪ ಬಳಸಿ ಅಡಿಕೆ‌ ಕೊಯ್ಲು ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಖಾನಾಪುರ: ಕುಸಿದ ಸೇತುವೆ

ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲೂಕಿನ ಪಾರಿಶ್ವಾಡ ಗ್ರಾಮದಲ್ಲಿ ಮಲಪ್ರಭಾ ಸೇತುವೆಯು 10 ಅಡಿಯಷ್ಟು ಕುಸಿದಿದೆ. ವಾಹನ ಸವಾರರು ಜೀವ ಕೈಲಿ ಹಿಡಿದೇ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರಕ್ಕೆ ಜಿಲ್ಲಾಡಳಿತ ನಿಷೇಧ ಹಾಕಿದೆ. ಯಾವಾಗ ಬೇಕಾದರೂ ಸೇತುವೆ ಕೊಚ್ಚಿಕೊಂಡು ಹೋಗುವ ಆತಂಕ ಇದೆ. ಸೇತುವೆ ಕೊಚ್ಚಿ ಹೋದರೆ ಸುಮಾರು 30ಕ್ಕೂ ಹೆಚ್ಚು ಗ್ರಾಮಗಳ ಸಂಪರ್ಕ ಕಡಿತಗೊಳ್ಳುತ್ತದೆ. ಸಮಸ್ಯೆ ಬಗ್ಗೆ ಶಾಸಕಿ ಅಂಜಲಿ ಗಮನಕ್ಕೆ ತಂದರೂ ದುರಸ್ತಿ ಮಾಡಿಲ್ಲ ಎಂದು ಗ್ರಾಮಸ್ಥರು ಶಾಸಕಿ ಅಂಜಲಿ ನಿಂಬಾಳ್ಕರ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕಲಬುರ್ಗಿ: ಬೆಳೆಹಾನಿ ಪರಿಹಾರ ಬಿಡುಗಡೆ

ಕಲಬುರ್ಗಿ: ಜಿಲ್ಲೆಯಲ್ಲಿ ಮಳೆಯಿಂದಾಗಿ ವ್ಯಾಪಕ ಬೆಳೆ ಹಾನಿಯಾಗಿದ್ದು, ರಾಜ್ಯ ಸರ್ಕಾರವು 2ನೇ ಕಂತಿನಲ್ಲಿ ₹ 43.70 ಕೋಟಿ ಬೆಳೆ ಪರಿಹಾರ ಬಿಡುಗಡೆ ಮಾಡಿದೆ. ಕಲಬುರಗಿ ಜಿಲ್ಲೆಯ 50,158 ರೈತರಿಗೆ ಬೆಳೆ ಹಾನಿ ಪರಿಹಾರ ಘೋಷಣೆಯಾಗಿದ್ದು, ಬೆಳೆ ಹಾನಿ ಪರಿಹಾರದ ಹಣವು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಮಾಹಿತಿ ನೀಡಿದ್ದಾರೆ. ಕಳೆದ ಜುಲೈ-ಆಗಸ್ಟ್​ನಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚಿನ ಮಳೆಯಾಗಿತ್ತು. ಜಿಲ್ಲೆಯಲ್ಲಿ 1.11 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಮೊದಲನೇ ಕಂತಿನಲ್ಲಿ ಜಿಲ್ಲೆಗೆ ₹ 30.79 ಕೋಟಿ ಪರಿಹಾರ ಬಂದಿತ್ತು. ಎರಡನೇ ಕಂತಿನಲ್ಲಿ 83,645 ರೈತರಿಗೆ ₹ 74.49 ಕೋಟಿ ಪರಿಹಾರ ಬಿಡುಗಡೆ ಮಾಡಿದೆ.

Published On - 11:55 am, Fri, 16 September 22