108 ಆ್ಯಂಬುಲೆನ್ಸ್​ ವಾಹನ ಸಿಬ್ಬಂದಿಯಿಂದ ರಾಜೀನಾಮೆ ಎಚ್ಚರಿಕೆ: ಸೇವೆಯಲ್ಲಿ ವ್ಯತ್ಯಯವಾದರೆ ಸರ್ಕಾರವೇ ಹೊಣೆ ಎಂದ ಅಶೋಕ್​​

108 ಆ್ಯಂಬುಲೆನ್ಸ್ ಸಿಬ್ಬಂದಿ ಸೆಪ್ಟೆಂಬರ್ 20ರಿಂದ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ಹಿನ್ನೆಲೆಯಲ್ಲಿ, ತುರ್ತು ಸೇವೆಯಲ್ಲಿ ವ್ಯತ್ಯಯವಾದರೆ ಸರ್ಕಾರವೇ ನೇರ ಹೊಣೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಪುಟಗಟ್ಟಲೆ ಜಾಹೀರಾತು ಕೊಡೋದಕ್ಕೆ ಹಣವಿದೆ, ಸಾಧನಾ ಸಮಾವೇಶಗಳಿಗೆ ಹಣವಿದೆ. ಆದರೆ ಜನರ ಜೀವ ಉಳಿಸುವ 108 ಸಿಬ್ಬಂದಿಗೆ ನ್ಯಾಯ ಕೊಡಲು ಹಣವಿಲ್ಲವೇ? ಎಂದವರು ಪ್ರಶ್ನಿಸಿದ್ದಾರೆ.

108 ಆ್ಯಂಬುಲೆನ್ಸ್​ ವಾಹನ ಸಿಬ್ಬಂದಿಯಿಂದ ರಾಜೀನಾಮೆ ಎಚ್ಚರಿಕೆ: ಸೇವೆಯಲ್ಲಿ ವ್ಯತ್ಯಯವಾದರೆ ಸರ್ಕಾರವೇ ಹೊಣೆ ಎಂದ ಅಶೋಕ್​​
ಸರ್ಕಾರದ ವಿರುದ್ಧ ಅಶೋಕ್​​ ಕಿಡಿ
Image Credit source: Tv9 Kannada
Edited By:

Updated on: Sep 08, 2026 | 1:00 PM

ಬೆಂಗಳೂರು, ಸೆಪ್ಟೆಂಬರ್​​ 08: ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ 108 ಆ್ಯಂಬುಲೆನ್ಸ್​ ವಾಹನ ಸಿಬ್ಬಂದಿಯಿಂದ ಸೇವೆ ಬಂದ್ ಎಚ್ಚರಿಕೆ ಹಿನ್ನೆಲೆ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕ‌ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. 108 ‘ಆರೋಗ್ಯ ಕವಚ’ವೇ ಸಂಕಷ್ಟದಲ್ಲಿದೆ. 3,500ಕ್ಕೂ ಹೆಚ್ಚು 108 ಸಿಬ್ಬಂದಿ ಸೆಪ್ಟೆಂಬರ್ 20ರಿಂದ ಸಾಮೂಹಿಕ ರಾಜೀನಾಮೆ ನೀಡುವ ಎಚ್ಚರಿಕೆ ನೀಡಿದ್ದಾರೆ. ಹೀಗಿದ್ದರೂ ಸಿಬ್ಬಂದಿ ಬೇಡಿಕೆ ಈಡೇರಿಕೆ ಬಗ್ಗೆ ಸರ್ಕಾರದ ಮೌನವಾಗಿದೆ ಎಂದವರು ಕಿಡಿ ಕಾರಿದ್ದಾರೆ.

‘ಬೆದರಿಕೆ ಬೇಡ, ಮಾತುಕತೆ ನಡೆಸಿ’

ಸಿಬ್ಬಂದಿಯ ಸಮಸ್ಯೆಗಳನ್ನು ಬಗೆಹರಿಸುವ ಬದಲು, ಮುಷ್ಕರ ಮಾಡಿದರೆ ಕಠಿಣ ಕ್ರಮ, ಟೆಂಡರ್ ರದ್ದು ಎಂದು ಬೆದರಿಸುವುದು ನಿಮ್ಮ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಗೆ ಸಾಕ್ಷಿ.ಶೇ.45ರ ಹೆಚ್ಚುವರಿ ವೇತನ ಕಡಿತ, 12 ಗಂಟೆಗಳ ಕೆಲಸದ ಆರೋಪ, ಕರ್ತವ್ಯದ ವೇಳೆ ಮೃತಪಟ್ಟ ಸಿಬ್ಬಂದಿಯ ಕುಟುಂಬಗಳಿಗೆ 50 ಲಕ್ಷ ಪರಿಹಾರದ ಬೇಡಿಕೆ ಸಂಬಂಧ ಸರ್ಕಾರದ ಉತ್ತರವೇನು? ಪುಟಗಟ್ಟಲೆ ಜಾಹೀರಾತು ಕೊಡೋದಕ್ಕೆ ಹಣವಿದೆ, ಸಾಧನಾ ಸಮಾವೇಶಗಳಿಗೆ ಹಣವಿದೆ. ಆದರೆ ಜನರ ಜೀವ ಉಳಿಸುವ 108 ಸಿಬ್ಬಂದಿಗೆ ನ್ಯಾಯ ಕೊಡಲು ಹಣವಿಲ್ಲವೇ? ಸೆಪ್ಟೆಂಬರ್ 20ರ ನಂತರ 108 ಸೇವೆಗೆ ಯಾವುದೇ ವ್ಯತ್ಯಯ ಉಂಟಾದರೆ, ಅದಕ್ಕೆ ನೇರ ಹೊಣೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಆರೋಗ್ಯ ಸಚಿವ ಯು.ಟಿ. ಖಾದರ್ ಅವರೇ ಆಗುತ್ತಾರೆ. ಹೀಗಾಗಿ ಬೆದರಿಕೆ ಬೇಡ, ಮಾತುಕತೆ ನಡೆಸಿ. 108 ಸಿಬ್ಬಂದಿಯ ನ್ಯಾಯಸಮ್ಮತ ಬೇಡಿಕೆಗಳನ್ನು ತಕ್ಷಣ ಈಡೇರಿಸಿ ಎಂದು ಅಶೋಕ್​​ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಆರೋಗ್ಯ ಇಲಾಖೆ ವಿರುದ್ಧ 108 ಆ್ಯಂಬುಲೆನ್ಸ್ ನೌಕರರ ಸಮರ: ಸಿಬ್ಬಂದಿಗೆ ಆರೋಗ್ಯ ಸಚಿವರಿಂದ ಖಡಕ್​​ ಎಚ್ಚರಿಕೆ

ಮತ್ತೊಂದೆಡೆ ಆ್ಯಂಬುಲೆನ್ಸ್ ಚಾಲಕರಿಂದ ಮುಷ್ಕರಕ್ಕೆ ಕರೆ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ.ಖಾದರ್, ಆ್ಯಂಬುಲೆನ್ಸ್ ಸಿಬ್ಬಂದಿಗೂ ಆರೋಗ್ಯ ಇಲಾಖೆಗೂ ನೇರ ಸಂಪರ್ಕವಿಲ್ಲ ಎಂದು ಪುನರುಚ್ಛರಿಸಿದ್ದಾರೆ. ಟೆಂಡರ್ ಪಡೆದ ಕಂಪನಿ ಚಾಲಕರನ್ನು ನಿಯೋಜನೆ ಮಾಡಿದ್ದು, ಅವರ ಸಂಪೂರ್ಣ ಜವಾಬ್ದಾರಿ ಕಂಪನಿಗೆ ಸೇರುತ್ತೆ. ಆ್ಯಂಬುಲೆನ್ಸ್ ಸಿಬ್ಬಂದಿ ಪ್ರತಿಭಟಿಸಿ ಜನರಿಗೆ ಸಮಸ್ಯೆ ಆಯ್ತು ಅಂದ್ರೆ ಮುಲಾಜಿಲ್ಲದೇ ಅವರು ಮತ್ತು ಕಂಪನಿ ಮೇಲೆ ಕ್ರಮ ಆಗುತ್ತದೆ. 108 ಆ್ಯಂಬುಲೆನ್ಸ್​ ತುರ್ತು ಸೇವೆ ಬಹಳ ಮುಖ್ಯ. ಅಧಿವೇಶನದಲ್ಲಿ 100 ಆ್ಯಂಬುಲೆನ್ಸ್‌ಗೆ ಅನುಮತಿ ಸಿಕ್ಕಿದೆ. ಗುತ್ತಿಗೆ ಆಧಾರದಲ್ಲಿ 250 ಆ್ಯಂಬುಲೆನ್ಸ್​ಗಳ ಪಡೆಯುತ್ತೇವೆ. ನಗರ ಭಾಗದಲ್ಲಿ 15 ನಿಮಿಷಕ್ಕೆ ಮತ್ತು ಗ್ರಾಮೀಣದಲ್ಲಿ 20 ನಿಮಿಷಕ್ಕೆ ಆ್ಯಂಬುಲೆನ್ಸ್ ತಲುಪಬೇಕು ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 1:00 pm, Tue, 8 September 26

Loading...
Unable to load recommendations.
Follow Us