KPSC ಪಶುವೈದ್ಯಾಧಿಕಾರಿ ಪರೀಕ್ಷಾ ಮೇಲ್ವಿಚಾರಕರಾಗಿದ್ದ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ದೆಹಲಿಗೆ ತೆರಳಲು ಟಿಕೆಟ್‌ ಬುಕ್ ಮಾಡಿದ್ದ ಅವರು ವಿಮಾನ ನಿಲ್ದಾಣಕ್ಕೆ ತೆರಳಿದ ಬಳಿಕ ಮೊಬೈಲ್‌ ಸ್ವಿಚ್‌ ಆಫ್‌ ಆಗಿದ್ದು, ಕುಟುಂಬದವರ ಸಂಪರ್ಕಕ್ಕೂ ಸಿಗುತ್ತಿಲ್ಲ. ಇ.ಡಿ ದಾಳಿ ಬೆನ್ನಲ್ಲೇ ಈ ಬೆಳವಣಿಗೆ ಆಗಿರುವುದು ಅನುಮಾನಕ್ಕೆ ಕಾರಣವಾಗಿದೆ.

KPSC ಪಶುವೈದ್ಯಾಧಿಕಾರಿ ಪರೀಕ್ಷಾ ಮೇಲ್ವಿಚಾರಕರಾಗಿದ್ದ ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆ
ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್
Image Credit source: tv9
Edited By:

Updated on: Aug 22, 2026 | 10:52 AM

ಮುಖ್ಯಾಂಶಗಳು

  • ವಿಮಾನ ನಿಲ್ದಾಣದಿಂದ ಐಎಎಸ್ ಅಧಿಕಾರಿ ನಾಪತ್ತೆ
  • ಮೊಬೈಲ್ ಸ್ವಿಚ್ ಆಫ್, ಕುಟುಂಬಕ್ಕೂ ಸಂಪರ್ಕವಿಲ್ಲ
  • KPSC ಅಕ್ರಮ, ಇಡಿ ದಾಳಿ ಬೆನ್ನಲ್ಲೇ ನಾಪತ್ತೆ

ಬೆಂಗಳೂರು, ಆಗಸ್ಟ್ 22: ಕರ್ನಾಟಕದ ಐಎಎಸ್‌ (IAS Officer) ಅಧಿಕಾರಿ ಜ್ಞಾನೇಂದ್ರ ಕುಮಾರ್ ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ಇದೀಗ ಕುತೂಹಲ ಮೂಡಿಸಿದೆ. ಬೆಂಗಳೂರಿನ (Bengaluru) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಿದ್ದ ಅವರು ಗುರುವಾರ ಬೆಳಗ್ಗೆ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿಕೊಂಡಿದ್ದು, ಬಳಿಕ ಅವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಜ್ಞಾನೇಂದ್ರ ಕುಮಾರ್ ದೆಹಲಿಗೆ ತೆರಳಲು ವಿಮಾನದ ಟಿಕೆಟ್‌ ಬುಕ್ ಮಾಡಿದ್ದರು ಎನ್ನಲಾಗಿದೆ. ದೆಹಲಿಗೆ ತೆರಳುವುದಾಗಿ ತಿಳಿಸಿ ವಿಮಾನ ನಿಲ್ದಾಣಕ್ಕೆ ಹೋಗಿದ್ದರೂ, ಅಲ್ಲಿಂದ ಅವರು ವಿಮಾನ ಏರಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ವಿಮಾನ ನಿಲ್ದಾಣದವರೆಗೆ ಅವರ ಚಲನವಲನವನ್ನು ಪೊಲೀಸರು ಟ್ರ್ಯಾಕ್‌ ಮಾಡಿದ್ದು, ಬಳಿಕ ಮೊಬೈಲ್‌ ಸಂಪರ್ಕ ಕಡಿತಗೊಂಡಿದೆ ಎಂದು ತಿಳಿದುಬಂದಿದೆ.

ಅವರ ಮೊಬೈಲ್‌ ಫೋನ್‌ ಸ್ವಿಚ್‌ ಆಫ್‌ ಆಗಿರುವ ಹಿನ್ನೆಲೆಯಲ್ಲಿ ದೆಹಲಿ ಕಡೆಗೆ ತೆರಳಿರುವ ಸಾಧ್ಯತೆಯನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆದರೆ, ಅವರ ಕುಟುಂಬದವರ ಸಂಪರ್ಕಕ್ಕೂ ಅಧಿಕಾರಿ ಸಿಗದಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಜ್ಞಾನೇಂದ್ರ ಕುಮಾರ್ ಅವರಿಗೆ ಈ ಹಿಂದೆ ಆರೋಗ್ಯ ಸಮಸ್ಯೆ ಇತ್ತು ಎಂಬ ಮಾಹಿತಿಯೂ ಲಭ್ಯವಾಗಿದೆ. ಸದ್ಯ ಅವರು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSME) ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದೆ ಕರ್ನಾಟಕ ಲೋಕಸೇವಾ ಆಯೋಗದಲ್ಲಿ (KPSC) ಸೇವೆ ಸಲ್ಲಿಸಿದ್ದರು.

ಹಿರಿಯ ಅಧಿಕಾರಿಗಳ ಮಾಹಿತಿ ಮೇರೆಗೆ ಪೊಲೀಸರಿಂದ ಶೋಧ

ಜ್ಞಾನೇಂದ್ರ ಕುಮಾರ್ ನಾಪತ್ತೆಯಾಗಿರುವ ಬಗ್ಗೆ ಹಿರಿಯ ಐಎಎಸ್‌ ಅಧಿಕಾರಿಯೊಬ್ಬರು ನಗರ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್ ಅವರಿಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಯ ಚಲನವಲನದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ.
IAS Officer Missing In Bengaluru: ಬೆಂಗಳೂರು ವಿಮಾನ ನಿಲ್ದಾಣದಿಂದ ಐಎಎಸ್ ಅಧಿಕಾರಿ ನಿಗೂಢವಾಗಿ ನಾಪತ್ತೆ
ವಿಮಾನ ನಿಲ್ದಾಣದದಿಂದ ಅವರು ಎಲ್ಲಿಗೆ ತೆರಳಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ಮುಂದಾಗಿದ್ದಾರೆ. ವಿಮಾನ ನಿಲ್ದಾಣದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಗಳು ಸೇರಿದಂತೆ ಲಭ್ಯವಿರುವ ಮಾಹಿತಿಯನ್ನು ಪರಿಶೀಲಿಸಲಾಗುತ್ತಿದೆ.

KPSC ಪರೀಕ್ಷಾ ಅಕ್ರಮದ ಬೆನ್ನಲ್ಲೇ ನಾಪತ್ತೆ

ಜ್ಞಾನೇಂದ್ರ ಕುಮಾರ್ ಅವರ ನಾಪತ್ತೆ ಪ್ರಕರಣವು ಇತ್ತೀಚೆಗೆ ಬೆಳಕಿಗೆ ಬಂದಿರುವ KPSC ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷಾ ಅಕ್ರಮದ ಹಿನ್ನೆಲೆಯಲ್ಲಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದ ಅಕ್ರಮದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದರು.

ಈ ಪ್ರಕರಣದಲ್ಲಿ ಜ್ಞಾನೇಂದ್ರ ಕುಮಾರ್ ಅವರು ಹಿಂದೆ KPSCಯಲ್ಲಿ ಕಾರ್ಯನಿರ್ವಹಿಸಿದ್ದ ಅವಧಿಯಲ್ಲಿನ ಪಾತ್ರ ಸೇರಿದಂತೆ ಹಲವು ಅಂಶಗಳನ್ನು ತನಿಖಾ ಸಂಸ್ಥೆಗಳು ಪರಿಶೀಲಿಸುತ್ತಿವೆ ಎಂಬ ಮಾಹಿತಿ ಇದೆ. ED ದಾಳಿ ನಡೆದ ಮರುದಿನವೇ ಅವರು ನಾಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಇದನ್ನೂ ಓದಿ: ಕೆಪಿಎಸ್​ಸಿ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್​​ಗೆ ಇಡಿ ಶಾಕ್​: ಪಶುವೈದ್ಯಾಧಿಕಾರಿ ಹುದ್ದೆಗೆ ಆಯ್ಕೆಯಾದವರ ಮನೆಗಳ ಮೇಲೂ ದಾಳಿ

ಅಧಿಕಾರಿಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದು, ಅವರ ನಾಪತ್ತೆಯ ಹಿಂದಿನ ನಿಖರ ಕಾರಣ ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:41 am, Sat, 22 August 26

Loading...
Unable to load recommendations.
Follow Us