AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ನಾಳೆಯಿಂದ 108 ಆಂಬುಲೆನ್ಸ್ ಸೇವೆ ಬಂದ್ ಭೀತಿ: “ಆಂಬುಲೆನ್ಸ್ ಮೇಲೆ ಅವಲಂಬಿತರಾಗಬೇಡಿ” ಎಂದ ಸಚಿವ ಯು.ಟಿ. ಖಾದರ್

ರಾಜ್ಯದಲ್ಲಿ 108 ಆಂಬುಲೆನ್ಸ್ ಸಿಬ್ಬಂದಿ 18 ವರ್ಷಗಳ ಸೇವೆ ನಂತರ ನ್ಯಾಯಯುತ ಬೇಡಿಕೆಗಳಿಗಾಗಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರಿಂದ ತುರ್ತು ಆಂಬುಲೆನ್ಸ್ ಸೇವೆಗಳು ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ನೌಕರರ ಬೆದರಿಕೆಗೆ ಬಗ್ಗುವುದಿಲ್ಲ ಎಂದು ಹೇಳಿದ್ದು, ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚಿಸಿದ್ದಾರೆ. ಈ ಬಿಕ್ಕಟ್ಟು ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಸೃಷ್ಟಿಸಿದೆ.

ರಾಜ್ಯದಲ್ಲಿ ನಾಳೆಯಿಂದ 108 ಆಂಬುಲೆನ್ಸ್ ಸೇವೆ ಬಂದ್ ಭೀತಿ: ಆಂಬುಲೆನ್ಸ್ ಮೇಲೆ ಅವಲಂಬಿತರಾಗಬೇಡಿ ಎಂದ ಸಚಿವ ಯು.ಟಿ. ಖಾದರ್
ಸಾಂದರ್ಭಿಕ ಚಿತ್ರ
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
| Edited By: |

Updated on: Oct 13, 2026 | 10:07 PM

Share

ಬೆಂಗಳೂರು, ಅ.13: ರಾಜ್ಯದಲ್ಲಿ 18 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರೂ ನ್ಯಾಯಯುತ ಬೇಡಿಕೆಗಳು ಈಡೇರಿಲ್ಲ ಎಂದು ಆಕ್ರೋಶಗೊಂಡಿರುವ ‘ಆರೋಗ್ಯ ಕವಚ 108’ ಆಂಬುಲೆನ್ಸ್ ನೌಕರರು ಬೃಹತ್ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ನಾಳೆಯಿಂದ ರಾಜ್ಯಾದ್ಯಂತ ತುರ್ತು ಆಂಬುಲೆನ್ಸ್ ಸೇವೆ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದ್ದು, ರೋಗಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇನ್ನೊಂದೆಡೆ ನೌಕರರ ಬೆದರಿಕೆಗೆ ತಲೆಬಾಗುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಖಾರವಾಗಿ ತಿರುಗೇಟು ನೀಡಿದ್ದು, “ಎರಡು ತಿಂಗಳು ಸಾರ್ವಜನಿಕರು 108 ಆಂಬುಲೆನ್ಸ್ ಸೇವೆ ಮೇಲೆ ಅವಲಂಬಿತರಾಗಬೇಡಿ” ಎಂದು ಹೇಳಿಕೆ ನೀಡಿರುವುದು ಹಗ್ಗಜಗ್ಗಾಟವನ್ನು ಮತ್ತಷ್ಟು ತೀವ್ರಗೊಳಿಸಿದೆ.

ಕನಿಷ್ಠ ವೇತನ ಸೇರಿದಂತೆ ವಿವಿಧ ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 108 ಆಂಬುಲೆನ್ಸ್ ಸಿಬ್ಬಂದಿ ಹೋರಾಟಕ್ಕೆ ಧುಮುಕಿದ್ದಾರೆ. ಸರ್ಕಾರಕ್ಕೆ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಲು ನಾಳೆ ರಾತ್ರಿ 10 ಗಂಟೆಯವರೆಗೆ ಗಡುವು ನೀಡಲಾಗಿದೆ. ಒಂದು ವೇಳೆ ಬೇಡಿಕೆ ಈಡೇರದಿದ್ದಲ್ಲಿ ನಾಳೆ ರಾತ್ರಿ 10 ಗಂಟೆಯ ನಂತರ ರಾಜ್ಯಾದ್ಯಂತ ನೌಕರರೆಲ್ಲರೂ ಸಾಮೂಹಿಕ ರಜೆ ಹಾಕಿ ಸೇವೆ ಬಂದ್ ಮಾಡುವುದಾಗಿ 108 ಆಂಬುಲೆನ್ಸ್ ನೌಕರರ ಸಂಘದ ಅಧ್ಯಕ್ಷ ಚಂದ್ರಣ್ಣ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ವಿಜಯಪುರದಲ್ಲಿ ಮೈಸುಡುವ ಬಿಸಿಲು: ನಿರ್ಜಲೀಕರಣದಿಂದ ಆಸ್ಪತ್ರೆಗೆ ಸೇರಿದ ನೂರಾರು ಮಕ್ಕಳು; ಪೋಷಕರಲ್ಲಿ ಹೆಚ್ಚಿದ ಆತಂಕ

“ಬ್ಲ್ಯಾಕ್‌ಮೇಲ್‌ಗೆ ಬಗ್ಗಲ್ಲ, ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ”: ಸಚಿವ ಯು.ಟಿ. ಖಾದರ್

ಆಂಬುಲೆನ್ಸ್ ನೌಕರರ ಮುಷ್ಕರದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ನೌಕರರ ವಿರುದ್ಧ ಕಠಿಣ ನಿಲುವು ತಳೆದಿದ್ದಾರೆ. “ಈ ವ್ಯವಸ್ಥೆಯನ್ನು ಸರಿಪಡಿಸಲು ಹೊಸ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು, ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲವೂ ಸರಿಯಾಗಲಿದೆ. ಡಿಸೆಂಬರ್‌ವರೆಗೆ ಸಮಯ ಕೊಡಿ ಎಂದು ಕೇಳಿದ್ದೇವೆ” ಎಂದಿದ್ದಾರೆ. “ಇವರ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ನಾನು ಅಥವಾ ಸರ್ಕಾರ ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ. ಇದು ಜಿವಿಕೆ (GVK) ಟೆಂಡರ್ ಕಂಪನಿ ಹಾಗೂ ನೌಕರರ ನಡುವಿನ ವಿಚಾರ. ರೋಗಿಗಳಿಗೆ ತೊಂದರೆಯಾದರೆ ಜಿವಿಕೆ ಸಂಸ್ಥೆಯ ಮೇಲೆಯೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ” ಎಂದು ಎಚ್ಚರಿಸಿದ್ದಾರೆ.

“ಜನಸಾಮಾನ್ಯರು ಮುಂದಿನ ಒಂದೆರಡು ತಿಂಗಳು 108 ಆಂಬುಲೆನ್ಸ್ ಮೇಲೆ ಅವಲಂಬಿತರಾಗಬೇಡಿ. ಸರ್ಕಾರಿ ಆಸ್ಪತ್ರೆಗಳಲ್ಲಿ 1000ಕ್ಕೂ ಹೆಚ್ಚು ಆಂಬುಲೆನ್ಸ್‌ಗಳಿವೆ, ಸಾರ್ವಜನಿಕರು ಪರ್ಯಾಯ ವ್ಯವಸ್ಥೆ ಬಳಸಿಕೊಳ್ಳಿ. ಸಿಬ್ಬಂದಿ ಇಲ್ಲದೆಯೂ ಸೇವೆ ನಡೆಸುವುದು ನಮಗೆ ಗೊತ್ತಿದೆ” ಎಂದು ಖಾದರ್ ಸ್ಪಷ್ಟಪಡಿಸಿದ್ದಾರೆ. ಆರೋಗ್ಯ ಇಲಾಖೆ ಹಾಗೂ ಆಂಬುಲೆನ್ಸ್ ಸಿಬ್ಬಂದಿ ನಡುವಿನ ಈ ಹಗ್ಗಜಗ್ಗಾಟದಿಂದಾಗಿ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ನಿರ್ಮಾಣವಾಗುವ ಆತಂಕ ಎದುರಾಗಿದ್ದು, ಸರ್ಕಾರ ನಾಳೆ ರಾತ್ರಿಯೊಳಗೆ ಸಿಬ್ಬಂದಿಯ ಮನವೊಲಿಸುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.
ಲಕ್ಷ್ಮಿ ನರಸಿಂಹ ಸ್ವಾಮಿ ಎಲ್.

ಲಕ್ಷ್ಮಿ ನರಸಿಂಹ ಸ್ವಾಮಿ. ಎಲ್ ಆದ ನಾನು ಮೂಲತಃ ಬೆಂಗಳೂರಿನವಾಗಿದ್ದು, ಪೂರ್ವ ತಾಲೂಕಿನ ದೊಡ್ಡಗುಬ್ಬಿ ಎಂಬ ಗ್ರಾಮದಲ್ಲಿ ವಾಸವಿದ್ದೇನೆ. ಕಳೆದ 6 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಬೆಂಗಳೂರು ವರದಿಗಾರನಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಐತಿಹಾಸಿಕ ಸರ್ಕಾರಿ ಕಲಾ ಕಾಲೇಜಿನಲ್ಲಿ ಸ್ನಾತಕ ಪದವಿ ಪೂರೈಸಿದ ಬಳಿಕ ಬೆಂಗಳೂರು ವಿಶ್ವವಿದ್ಯಾಲಯ (ಜ್ಞಾನಭಾರತಿ) ದಲ್ಲಿ M.A (ಪತ್ರಿಕೋದ್ಯಮ ಮತ್ತು ಸಂವಹನ) ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಡಿಯ ನಗರ ಪಾಲಿಕೆಗಳು, ಬೆಸ್ಕಾಂ, ಜಲಮಂಡಳಿ, ಆಹಾರ, ಆರೋಗ್ಯ, ಶಿಕ್ಷಣ ಸೇರಿ ವಿವಿಧ ಕ್ಷೇತ್ರಗಳಲ್ಲಿ ನಾಗರಿಕರಿಗೆ ಎದುರಾಗುವ ಸಮಸ್ಯೆಗಳಿಗೆ, ಸಂಕಷ್ಟಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈವರೆಗೂ ಶ್ರಮವಹಿಸಿದ್ದು, ಮುಂದಿನ ದಿನಗಳಲ್ಲೂ ನಾಗರಿಕರ ಸೇವೆಯನ್ನೂ ಮುಂದುವರೆಸುವ ಗುರಿಯೊಂದಿಗೆ ಉತ್ತಮ ಸಮಾಜಕ್ಕಾಗಿ ಬದ್ಧನಾಗಿದ್ದೇನೆ..

Read More