ಮಲ್ಲಿಕಾರ್ಜುನ ಖರ್ಗೆ ಮಾತಿಗೂ ಡೋಂಟ್ ಕೇರ್: ‘ಕೈ’ ಮನೆಯಲ್ಲಿ ನಿಲ್ಲದ ಬಣಗಳ ವಾರ್
ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವದ ಕುರಿತು ಹೈಕಮಾಂಡ್ ಸೂಚನೆ ಮೀರಿ ಬಣ ರಾಜಕೀಯ ಮುಂದುವರಿದಿದೆ. ಸಿದ್ದರಾಮಯ್ಯ 5 ವರ್ಷ ಸಿಎಂ ಆಗಬೇಕು ಎಂಬ ಯತೀಂದ್ರ ಹೇಳಿಕೆಗೆ ಗಣಿಗ ರವಿಕುಮಾರ್ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ. ಡಿ.ಕೆ. ಶಿವಕುಮಾರ್ ಸಿಎಂ ಆಗಲೇಬೇಕು ಎಂಬುದು ಅವರ ಬೆಂಬಲಿಗರ ನಿಲುವು. ಮಲ್ಲಿಕಾರ್ಜುನ ಖರ್ಗೆ ಅವರ ಒಗ್ಗಟ್ಟಿನ ಪಾಠವನ್ನೂ ಸ್ವಪಕ್ಷ ನಾಯಕರು ನಿರ್ಲಕ್ಷಿಸಿರೋದೀಗ ವಿರೋಧ ಪಕ್ಷಗಳಿಗೆ ಆಹಾರವಾಗುತ್ತಿದೆ.

ಬೆಂಗಳೂರು, ಫೆಬ್ರವರಿ 15: ನಾಯಕತ್ವ ವಿಚಾರವಾಗಿ ಬಹಿರಂಗ ಹೇಳಿಕೆಗಳನ್ನು ನೀಡದಂತೆ ಹೈಕಮಾಂಡ್ ಸೂಚನೆಯ ಬಳಿಕವೂ ರಾಜ್ಯ ಕಾಂಗ್ರೆಸ್‌ನಲ್ಲಿ ಬಣಗಳ ನಡುವಿನ ಸಂಘರ್ಷ ಮುಂದುವರಿದಿದೆ. ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಯತೀಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಗಣಿಗ ರವಿಕುಮಾರ್, ಯತೀಂದ್ರ ಸಿದ್ದರಾಮಯ್ಯ ಅವರೇ ನಮ್ಮ ಹೈಕಮಾಂಡ್ ಎಂದಿದ್ದಾರೆ. ನಮಗೆ ಹೈಕಮಾಂಡ್ ನೋಟಿಸ್ ಕೊಡಬಹುದು, ಆದ್ರೆ ಹೈಕಮಾಂಡ್ಗೆ ನಾವು ನೋಟಿಸ್ ಕೊಡಲು ಸಾಧ್ಯವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಯತೀಂದ್ರ ನಮ್ಮ ಹೈಕಮಾಂಡ್ ಅಂತಾ ಡಿಸಿಎಂ ಡಿ.ಕೆ. ಶಿವಕುಮಾರ್ ಅವರೇ ಹೇಳಿದ್ದಾರೆ. ಹೀಗಾಗಿ ನಾನೂ ಅದನ್ನೇ ಹೇಳುತ್ತೇನೆ, ಯತೀಂದ್ರ ನಮ್ಮ ಹೈಕಮಾಂಡ್ ಅನ್ನೋದನ್ನ ನೂರಕ್ಕೆ ನೂರರಷ್ಟು ಒಪ್ಪಿಕೊಳ್ತೇವೆ. ಯಾರೂ ಸ್ಟೇಟ್ಮೆಂಟ್ ಕೊಡಬೇಡಿ ಅಂತ ನಾಲ್ಕು ಬಾರಿ ಹೇಳಿದ್ರು. ಆದ್ರೂ ಸ್ಟೇಟ್ಮೆಂಟ್ ಕೊಡ್ತಿದ್ದಾರೆ ಅಂದ್ರೆ ಅವರೇ ಸುಪ್ರೀಂ. ಖರ್ಗೆಗಿಂತ ಜಾಸ್ತಿನಾ, ಡಿಕೆಗಿಂತ ಕಡಿಮೆನಾ ಅಂತಾ ಹೇಳಲು ಆಗಲ್ಲ. ಬೇಡ ಅಂದ್ರೂ ಮಾತನಾಡುತ್ತಿದ್ದಾರೆ ಅಂದ್ರೆ ಪವರ್ಫುಲ್ ಮ್ಯಾನ್ ಎಂದು ಹೇಳುವ ಮೂಲಕ ಪರೋಕ್ಷವಾಗಿ ಯತೀಂದ್ರ ವಿರುದ್ಧ ಗಣಿಗ ರವಿಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಬಜೆಟ್ ಮಂಡನೆಗೆ ಸಿಎಂ ಸಜ್ಜು, ಪಟ್ಟದ ಪಟ್ಟು ಮತ್ತಷ್ಟು ಗಟ್ಟಿಗೊಳಿಸಿದ ಡಿಕೆಶಿ; ದೂರ ಉಳಿದ ಮಲ್ಲಿಕಾರ್ಜುನ ಖರ್ಗೆ
ಡಿ.ಕೆ.ಶಿವಕುಮಾರ್ ಸಿಎಂ ಆಗಲೇಬೇಕು ಎಂದಿರುವ ಅವರು, ಡಿಕೆಶಿ, ಮುಖ್ಯಮಂತ್ರಿ ಆಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದಿದ್ದಾರೆ. ಡಿ.ಕೆ.ಶಿವಕುಮಾರ್ಗೆ ರಾಜಕೀಯ ತಂತ್ರಗಾರಿಕೆ, ಚಾಣಾಕ್ಷತನ ಇದೆ. ಯಾವಾಗ ಯಾವ ಪಾನ್ ಮೂವ್ ಮಾಡಿದ್ರೆ ಗೇಮ್ ಗೆಲ್ಲಬಹುದೆಂದು ಗೊತ್ತಿದೆ. ಬುದ್ಧಿವಂತಿಕೆ ಇರುವುದಕ್ಕೆ ಸೈಲೆಂಟಾಗಿ ಕಾಯಿನ್ ಮೂವ್ ಮಾಡ್ತಿದ್ದಾರೆ. ರಾಜಕಾರಣ ಅಂದಮೇಲೆ ಆಟ ಇರಲೇಬೇಕು, ಆಟ ಬಿಡಲು ಆಗಲ್ಲ. ನಮ್ಮದು ಐರ್ಲೆಂಡ್ ಟೀಂ ಅಲ್ಲ, ಬಲಿಷ್ಠ ಭಾರತ ಟೀಂ. ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆ ಡಿ.ಕೆ.ಶಿವಕುಮಾರ್ಗೆ ಇದ್ದು, ಪ್ರಶ್ನೆಗಳಿಗೆ ಅತೀ ಶೀಘ್ರದಲ್ಲೇ ಉತ್ತರ ಬರಲಿದೆ ಎಂದಿದ್ದಾರೆ.
ನಾಯಕತ್ವ ಗೊಂದಲದ ನಡುವೆ ಎಐಸಿಸಿ ಅಧ್ಯಕ್ಷ ಖರ್ಗೆ ನಾವೆಲ್ಲಾ ಜೊತೆಯಾಗಿ, ಒಗ್ಗಟ್ಟಾಗಿ ಹೋಗಬೇಕು ಎಂದು ಪಾಠ ಮಾಡಿದ್ದರು. ಭೀಮಣ್ಣ ಖಂಡ್ರೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ಭೀಮಣ್ಣ ಖಂಡ್ರೆ ಕಾಂಗ್ರೆಸ್ ಪಕ್ಷವನ್ನು ಬಿಟ್ಟು ಹೋಗಿದ್ದರು. ಆದ್ರೆ ಪಕ್ಷ ಬಿಟ್ಟು ಹೋದ್ರು ಅವರ ತತ್ವ, ಸಿದ್ಧಾಂತ ಒಂದೇಯಾಗಿತ್ತು. ಹೀಗಾಗಿ ನಾವೆಲ್ಲರೂ ಒಗ್ಗಟ್ಟಿನಿಂದ ಇರಬೇಕು ಎಂದು ಬಸವಣ್ಣನ ವಚನ ಹೇಳುವ ಮೂಲಕ ಸಂದೇಶ ನೀಡಿದ್ದರು. ಆದ್ರೆ ಸದ್ಯ ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್ ಸೂಚನೆಯನ್ನೂ ಮೀರಿ ಮಾತಾಡುತ್ತಿರೋದು ಬಣ ಬಡಿದಾಟವನ್ನು ಇಮ್ಮಡಿಗೊಳಿಸಿದೆ. ವಿಪಕ್ಷಗಳಿಗೂ ಆಹಾರವಾಗ್ತಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
