ಕೆಪಿಎಸ್ಸಿ ಅಕ್ರಮ ತನಿಖೆ: ಅಲೋಕ್ ಕುಮಾರ್ ಬಗ್ಗೆ ಸುಪ್ರೀಂ ಕೋರ್ಟ್ಗೆ ತಪ್ಪು ಮಾಹಿತಿ; ರಾಜ್ಯಪಾಲರಿಗೆ ದೂರು
ಕೆಪಿಎಸ್ಸಿ ಅಕ್ರಮ ತನಿಖೆಗೆ ಎಸ್ಐಟಿ ರಚನೆ ವೇಳೆ, ಅಲೋಕ್ ಕುಮಾರ್ ಫೋನ್ ಟ್ಯಾಪಿಂಗ್ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್ಗೆ ಸರ್ಕಾರ ತಪ್ಪು ಮಾಹಿತಿ ನೀಡಿದೆ. ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ್ದರೂ, ತನಿಖೆ ಬಾಕಿ ಇದೆ ಎಂಬಂತೆ ಬಿಂಬಿಸಲಾಗಿದೆ. ಈ ಬಗ್ಗೆ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮುಖ್ಯಾಂಶಗಳು
- ಕೆಪಿಎಸ್ಸಿ ಅಕ್ರಮ ತನಿಖೆಗಾಗಿ ಎಸ್ಐಟಿ ರಚನೆ ವಿಚಾರ
- ಸುಪ್ರೀಂಕೋರ್ಟ್ನಲ್ಲಿ ಅಲೋಕ್ ಕುಮಾರ್ ಬಗ್ಗೆ ತಪ್ಪು ಮಾಹಿತಿ
- ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿಯಿಂದ ರಾಜ್ಯಪಾಲರಿಗೆ ದೂರು
ಬೆಂಗಳೂರು, ಅಕ್ಟೋಬರ್ 15: ಕೆಪಿಎಸ್ಸಿ ಅಕ್ರಮದ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ವಿಚಾರಕ್ಕೆ ಸಂಬಂಧಿಸಿದಂತೆ, ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರ ಬಗ್ಗೆ ಸುಪ್ರೀಂಕೋರ್ಟ್ಗೆ ರಾಜ್ಯ ಸರ್ಕಾರ ತಪ್ಪು ಮಾಹಿತಿ ನೀಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ.
ಫೋನ್ ಟ್ಯಾಪಿಂಗ್ ಪ್ರಕರಣದ ಬಗ್ಗೆ ಅಪೂರ್ಣ ಮಾಹಿತಿ ಆರೋಪ
ಅಲೋಕ್ ಕುಮಾರ್ ವಿರುದ್ಧದ ಫೋನ್ ಟ್ಯಾಪಿಂಗ್ ಪ್ರಕರಣದ ಕುರಿತು ಸುಪ್ರೀಂಕೋರ್ಟ್ಗೆ ಅಪೂರ್ಣ ಮಾಹಿತಿ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2024ರಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಿ ರಿಪೋರ್ಟ್ ಸಲ್ಲಿಸಿದ್ದು, ಅದನ್ನು ನ್ಯಾಯಾಲಯ ಅಂಗೀಕರಿಸಿದೆ. ಆದರೂ ಪ್ರಕರಣದ ತನಿಖೆ ಇನ್ನೂ ಬಾಕಿ ಇದೆ ಎಂಬ ಅರ್ಥ ಬರುವಂತೆ ಸುಪ್ರೀಂಕೋರ್ಟ್ಗೆ ಮಾಹಿತಿ ಸಲ್ಲಿಸಲಾಗಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ: ಕೆಪಿಎಸ್ಸಿ ಪಶು ವೈದ್ಯಾಧಿಕಾರಿಗಳ ನೇಮಕಾತಿ ಹಗರಣ: ಅಲೋಕ್ ಕುಮಾರ್ ನೇತೃತ್ವದ SIT ರಚನೆಗೆ ಸುಪ್ರೀಂಕೋರ್ಟ್ ತಡೆ
ಇನ್ನು ಸುಪ್ರೀಂಕೋರ್ಟ್ಗೆ ಈ ರೀತಿಯ ಮಾಹಿತಿ ಸಲ್ಲಿಸಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಲು ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಅಧಿಕಾರಿಯ ಪ್ರತಿಷ್ಠೆಗೆ ಹಾನಿಯಾಗುವ ಆತಂಕ
ಯಾವುದೇ ಅಧಿಕಾರಿಯ ವಿರುದ್ಧದ ಪ್ರಕರಣದ ಸ್ಥಿತಿಯನ್ನು ತಪ್ಪಾಗಿ ಚಿತ್ರಿಸಿರುವುದು ದೃಢಪಟ್ಟರೆ, ಅದು ಆ ಅಧಿಕಾರಿಯ ವೃತ್ತಿಪರ ಪ್ರತಿಷ್ಠೆಗೆ ಹಾನಿ ಉಂಟುಮಾಡುವುದಷ್ಟೇ ಅಲ್ಲದೆ, ಸರ್ಕಾರದ ನ್ಯಾಯಾಲಯದ ಸಲ್ಲಿಕೆಗಳ ವಿಶ್ವಾಸಾರ್ಹತೆಯ ಮೇಲೂ ಪರಿಣಾಮ ಬೀರಬಹುದು. ಆದ್ದರಿಂದ, ಸತ್ಯಾಂಶಗಳ ಪರಿಶೀಲನೆ, ಅಗತ್ಯ ತಿದ್ದುಪಡಿ ಮತ್ತು ಹೊಣೆಗಾರಿಕೆ ನಿಗದಿಪಡಿಸುವ ಕ್ರಮಗಳನ್ನು ವಿಳಂಬವಿಲ್ಲದೆ ಕೈಗೊಳ್ಳಲು ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸೂಚನೆ ನೀಡುವಂತೆ ಮನವಿ ಮಾಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




