ಅಲೋಕ್ ಕುಮಾರ್ ವಿರುದ್ಧ ಕದ್ದಾಲಿಕೆ ಪ್ರಕರಣ: ಬಿ ರಿಪೋರ್ಟ್ ತಿರಸ್ಕರಿಸಿದ ಸಿಬಿಐ
ಪ್ರಕರಣ ಸಂಬಂಧ ತನಿಖೆ ಮುಂದುವರಿಸಲು ಸೂಚಿಸಿರುವ ಕೋರ್ಟ್ ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ಆದೇಶಿಸಿದೆ.
ಬೆಂಗಳೂರು: ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ವಿರುದ್ಧ ದಾಖಲಾಗಿರುವ ಫೋನ್ ಕದ್ದಾಲಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ಅನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ. ಪ್ರಕರಣ ಸಂಬಂಧ ತನಿಖೆ ಮುಂದುವರಿಸಲು ಸೂಚಿಸಿರುವ ಕೋರ್ಟ್ ಅಂತಿಮ ವರದಿ ಸಲ್ಲಿಸಲು ಸಿಬಿಐಗೆ ಆದೇಶಿಸಿದೆ.
ಸಿಬಿಐ ಸಲ್ಲಿಸಿದ್ದ ಬಿ ರಿಪೋರ್ಟ್ಗೆ ಮತ್ತೋರ್ವ ಎಡಿಜಿಪಿ ಭಾಸ್ಕರ್ ರಾವ್ ತಕರಾರು ಸಲ್ಲಿಸಿದ್ದರು. ಸಿಬಿಐ ಸಲ್ಲಿಸಿರುವ ಬಿ ರಿಪೋರ್ಟ್ ಅನ್ನೇ ದೋಷಾರೋಪ ಪಟ್ಟಿಯಾಗಿ ಪರಿಗಣಿಸಿ ತನಿಖೆ ನಡೆಸಬೇಕು ಎಂದು ಭಾಸ್ಕರ್ ರಾವ್ ಕೋರಿದ್ದರು. ಈ ಅರ್ಜಿಯನ್ನೂ ಸಿಬಿಐ ನ್ಯಾಯಾಲಯ ತಿರಸ್ಕರಿಸಿದೆ. 17ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯಿತು. ಈ ಸಂಬಂಧ ಸಿಬಿಐನಿಂದಲೇ ಪ್ರಕರಣದ ಮರು ತನಿಖೆ ನಡೆಯಬೇಕು ಎಂದು ನ್ಯಾಯಾಲಯ ಸೂಚಿಸಿತು.
ಸಿಬಿಐ ಜೂನ್ 20ರಂದು ಸಲ್ಲಿಸಿದ್ದ ಬಿ ರಿಪೋರ್ಟ್ಗೆ ಆಕ್ಷೇಪ ವ್ಯಕ್ತಪಡಿಸಿ ಎಡಿಜಿಪಿ ಭಾಸ್ಕರ್ ರಾವ್ ಸೆಪ್ಟೆಂಬರ್ 1ರಂದು ತಕರಾರು ಅರ್ಜಿ ಸಲ್ಲಿಸಿದ್ದರು. ಟಿವಿ ಪತ್ರಕರ್ತ ಕುಶಾಲಾ ಸತ್ಯನಾರಾಯಣ ಅವರಿಗೆ ಟಿಲಿಫೋನ್ ಸಂಭಾಷಣೆಯ ಆಡಿಯೊ ಫೈಲ್ಗಳು ಹೇಗೆ ಸಿಕ್ಕಿತು ಎಂಬ ಬಗ್ಗೆ ಯಾವುದೇ ಆಧಾರಗಳು ಪತ್ತೆಯಾಗಿಲ್ಲ ಎಂದು ಸಿಬಿಐ ಹೇಳಿತ್ತು. ಭಾಸ್ಕರ್ ರಾವ್ ಮತ್ತು ಫಾರಾಜ್ ಅಹ್ಮದ್ ಬೆಂಗಳೂರು ಕಮಿಷನರ್ ಹುದ್ದೆಯ ಬಗ್ಗೆ ನಡೆಸಿದ್ದ ಖಾಸಗಿ ಸಂಭಾಷಣೆ ಈ ಆಡಿಯೊ ಫೈಲ್ಗಳಲ್ಲಿದ್ದವು.
ಸಿಬಿಐ ವರದಿಯನ್ನು ಒಪ್ಪದ ಭಾಸ್ಕರ್ ರಾವ್, ಸರಿಯಾಗಿ ತನಿಖೆ ನಡೆಸಿಲ್ಲ ಎಂದು ಆಕ್ಷೇಪಿಸಿದ್ದರು. ತಾಂತ್ರಿಕ ಘಟಕದ (Technical Support Centre – TSC) ಹಸ್ತಕ್ಷೇಪ ಈ ಸೋರಿಕೆಯಲ್ಲಿದೆ. ಈ ಘಟಕವು ಅಂದಿನ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರ ಸುಪರ್ದಿಯಲ್ಲಿತ್ತು. ಹೀಗಾಗಿ ಅವರ ವಿರುದ್ಧ ತನಿಖೆ ನಡೆಸಬೇಕು ಎಂದು ಭಾಸ್ಕರ್ ರಾವ್ ಆಗ್ರಹಿಸಿದ್ದರು.
ಹೈದರಾಬಾದ್ನ ವಿಧಿ ವಿಜ್ಞಾನ ಕೇಂದ್ರದ ವರದಿ ಬರುವ ಮೊದಲೇ ಸಿಬಿಐ ಬಿ ರಿಪೋರ್ಟ್ ಹಾಕಿದೆ ಎಂಬುದು ಭಾಸ್ಕರ್ ರಾವ್ ಅವರ ಮತ್ತೊಂದು ಆಕ್ಷೇಪವಾಗಿತ್ತು. ಅಲೋಕ್ ಕುಮಾರ್ ಮತ್ತು ಇನ್ನೋರ್ವ ಪೊಲೀಸ್ ಅಧಿಕಾರಿ ಮೀರ್ಝಾ ಅಲಿ ರಾಜಾ ತಮ್ಮ ಫೋನ್ಗಳನ್ನು ಸಂಭಾಷಣೆಯ ನಂತರ ಫಾರ್ಮ್ಯಾಟ್ ಮಾಡಿದ್ದರಿಂದ ವಿವರ ಹೆಕ್ಕಲು ಸಾಧ್ಯವಾಗಿಲ್ಲ ಎಂದು ಸಿಬಿಐ ವಾದಿಸಿತ್ತು. ಇದನ್ನು ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದ ಭಾಸ್ಕರ್ ರಾವ್, ಸಿಬಿಐ ತಾನು ಪತ್ತೆ ಮಾಡಿರುವ ದಾಖಲೆಗಳನ್ನೂ ತನಿಖೆಗೆ ಪರಿಗಣಿಸುತ್ತಿಲ್ಲ ಎಂದು ಹೇಳಿದ್ದರು.
ಕಳೆದ ಆಗಸ್ಟ್ 2, 2019ರಲ್ಲಿ ಅಂದಿನ ಬೆಂಗಳೂರು ಪೊಲೀಸ್ ಕಮಿಷನರ್ ಅಲೋಕ್ ಕುಮಾರ್ ಅವರನ್ನು ವರ್ಗಾಯಿಸಿ, ಅವರ ಜಾಗಕ್ಕೆ ಭಾಸ್ಕರ್ ರಾವ್ ಅವರನ್ನು ನಿಯೋಜಿಸಲಾಗಿತ್ತು. ಈ ಬೆಳವಣಿಗೆಯಾದ ಕೇವಲ ಆರು ದಿನಗಳಲ್ಲಿ, ಅಂದರೆ ಆಗಸ್ಟ್ 8, 2019ರಲ್ಲಿ ಟೆಲಿಫೋನ್ ಸಂಭಾಷಣೆಯಿಂದ ಸೋರಿಕೆಯಾದ ಆಡಿಯೊ ತುಣುಕುಗಳನ್ನು ಸುದ್ದಿವಾಹಿನಿಯೊಂದು ಪ್ರಸಾರ ಮಾಡಿತ್ತು. ನಂತರದ ದಿನಗಳಲ್ಲಿ ಇದು ವಿವಾದದ ಸ್ವರೂಪ ಪಡೆದುಕೊಂಡು, ಸಿಬಿಐ ತನಿಖೆ ಆರಂಭವಾಗಿತ್ತು.
ಇದನ್ನೂ ಓದಿ: ADGP ಅಲೋಕ್ ಕುಮಾರ್ ಮಧುರ ಗಾಯನದ ವಿಡಿಯೋ ವೈರಲ್.. ಇದನ್ನೂ ಓದಿ: ನಮ್ಮ ಪ್ರಜಾಪ್ರಭುತ್ವ ರಾಷ್ಟ್ರ ಆಳಲ್ಪಡುತ್ತಿರುವುದು ಕಾನೂನುಗಳಿಂದ ಹೊರತು ಶಾಸ್ತ್ರಗಳಿಂದಲ್ಲ: ಉತ್ತರಾಖಂಡ ಹೈಕೋರ್ಟ್
Published On - 5:28 pm, Mon, 18 October 21