Dr K Bhujang Shetty: ಅಂಧರ ಬಾಳಿಗೆ ಕಣ್ಣಾಗಿದ್ದ ನೇತ್ರ ತಜ್ಞ ಡಾ. ಕೆ. ಭುಜಂಗ ಶೆಟ್ಟಿರಿಂದಲೂ ಕಣ್ಣು ದಾನವಾಯ್ತು
ಡಾ ರಾಜ್‌ಕುಮಾರ್ ಅವರಿಗೆ ಕಣ್ಣು ದಾನ ಮಾಡಲು ಪ್ರೇರೇಪಣೆ ನೀಡಿದ ಭುಜಂಗ ಶೆಟ್ಟಿ ಅವರು ನಾರಾಯಣ ನೇತ್ರಾಲಯಕ್ಕೆ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಬೆಂಗಳೂರು: ನಾರಾಯಣ ನೇತ್ರಾಲಯದ ಮುಖ್ಯಸ್ಥ, ಖ್ಯಾತ ನೇತ್ರ ತಜ್ಞ ಡಾ.ಕೆ.ಭುಜಂಗ ಶೆಟ್ಟಿ(69)(Dr K Bhujang Shetty) ಮೇ 19ರಂದು ನಿಧನರಾಗಿದ್ದಾರೆ. ಡಾ ರಾಜ್‌ಕುಮಾರ್(Dr Rajkumar) ಅವರಿಗೆ ಕಣ್ಣು ದಾನ ಮಾಡಲು ಪ್ರೇರೇಪಣೆ ನೀಡಿದ ಭುಜಂಗ ಶೆಟ್ಟಿ ಅವರು ನಾರಾಯಣ ನೇತ್ರಾಲಯಕ್ಕೆ ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ(Eye Donation). ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದ ಇವರು ತಮ್ಮ ಕಣ್ಣುಗಳನ್ನೂ ದಾನ ಮಾಡಿ ಕಣ್ಣಿಲ್ಲದವರಿಗೆ ಬೆಳಕಾಗಿದ್ದಾರೆ.
ಎಂದಿನಂತೆ ಮೇ 19ರಂದು ಕೂಡ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ನೀಡಿದ್ದ ಡಾ.ಭುಜಂಗ ಶೆಟ್ಟಿ ಅವರು ಆಸ್ಪತ್ರೆಯಿಂದ ಮನೆಗೆ ವಾಪಸಾದ ಬಳಿಕ ಸಂಜೆ 6 ಗಂಟೆ ಸುಮಾರಿಗೆ ತೀವ್ರ ಹೃದಯಾಘಾತವಾಗಿತ್ತು. ಕೂಡಲೇ ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.
ಡಾ.ಕೆ.ಭುಜಂಗ ಶೆಟ್ಟಿ ಅವರು ವರನಟ ಡಾ. ರಾಜ್‌ಕುಮಾರ್, ಡಾ. ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವರ ನೇತ್ರದಾನ ಪ್ರಕ್ರಿಯೆಯಲ್ಲಿ ಮಹತ್ವದ ಪಾತ್ರವಹಿಸಿದ್ದರು. ನೇತ್ರದಾನದ ಬಗ್ಗೆ ರಾಜ್ಯಾದ್ಯಂತ ಜಾಗೃತಿ ಮೂಡಿಸಿದ್ದರು. ಸಾವಿರಾರು ಅಂಧರಿಗೆ ದೃಷ್ಠಿ ನೀಡಿದ್ದರು.
ಇದನ್ನು ಓದಿ: ಅಣ್ಣಾವ್ರ ಜೊತೆ ಡಾ. ಭುಜಂಗ ಶೆಟ್ಟಿಗೆ ಒಡನಾಟ ಬೆಳೆದಿದ್ದು ಹೇಗೆ? ಇಲ್ಲಿದೆ ಹಳೆಯ ದಿನಗಳ ಕಥೆ
ಭುಜಂಗ ಶೆಟ್ಟಿ ಅವರು 1978 ರಲ್ಲಿ ತಮ್ಮ ಎಂಬಿಬಿಎಸ್ ಮಾಡಿದ ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದರು. ಅವರು ಎಂಬತ್ತರ ದಶಕದಲ್ಲಿ ಸಣ್ಣ ಕ್ಲಿನಿಕ್‌ನಲ್ಲಿ ನೇತ್ರಶಾಸ್ತ್ರವನ್ನು ಪ್ರಾರಂಭಿಸಿದರು. ಭವಿಷ್ಯದ ಅಗತ್ಯಗಳನ್ನು ಪೂರೈಸುವ ದೂರದೃಷ್ಟಿ ಹೊಂದಿದ್ದ ಅವರು ಅಭಿವೃದ್ಧಿಯಲ್ಲಿ ಉತ್ಸಾಹ ತೋರಿದರು. ಅದರಂತೆ ಕ್ಲೀನಿಕ್ ಅನ್ನು ಅಕ್ಟೋಬರ್ 1993 ರಲ್ಲಿ ಪ್ರಸ್ತುತ ಕಟ್ಟಡಕ್ಕೆ ಸ್ಥಳಾಂತರಿಸಿದರು.
ನಂತರ ಕಣ್ಣಿನ ಕ್ಲಿನಿಕ್ ಕಣ್ಣಿನ ಆಸ್ಪತ್ರೆಯಾಗಿ ಮಾರ್ಪಟ್ಟಿತು ಮತ್ತು ವರ್ಷದಿಂದ ವರ್ಷಕ್ಕೆ ಬೆಳೆಯಲು ಪ್ರಾರಂಭಿಸಿತು. ಗುಣಮಟ್ಟದ ಕಣ್ಣಿನ ಆರೈಕೆಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಆಧುನಿಕ ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಯಿತು. ಇದಕ್ಕೆ ನಿರಂತರ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದರು. ಆ ಮೂಲಕ ನಾರಾಯಣ ನೇತ್ರಾಲಯವನ್ನು ಕರ್ನಾಟಕದ ಅತಿದೊಡ್ಡ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಾಗಿ ಪರಿವರ್ತಿಸಲು ಕಾರಣರಾಗಿದ್ದರು. ಅವರು ಕಣ್ಣಿನ ಪೊರೆ ಮತ್ತು ಫಾಕೋಎಮಲ್ಸಿಫಿಕೇಶನ್ ಶಸ್ತ್ರಚಿಕಿತ್ಸಕರಾಗಿದ್ದರು. ಅವರು ನಾರಾಯಣ ನೇತ್ರಾಲಯದ ಅಧ್ಯಕ್ಷರೂ ಆಗಿದ್ದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ