ಬೆಂಗಳೂರಿನಲ್ಲಿದೆ ಭಾಷಾ ತಾರತಮ್ಯ: ಉತ್ತರ ಭಾರತದ ಮಹಿಳೆಯ ಆರೋಪ

ಉತ್ತರ ಭಾರತದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ತಾವು ಎದುರಿಸಿದ ಭಾಷಾ ತಾರತಮ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶಾನಿನಾನಿ ಎಂಬ ಎಕ್ಸ್​ ಬಳಕೆದಾರರು ತಾವು ಅನುಭವಿಸಿದ ತಾರತಮ್ಯದ ಬಗ್ಗೆ ಸರಣಿ ಟ್ವೀಟ್​​ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.

ಬೆಂಗಳೂರಿನಲ್ಲಿದೆ ಭಾಷಾ ತಾರತಮ್ಯ: ಉತ್ತರ ಭಾರತದ ಮಹಿಳೆಯ ಆರೋಪ
ಸಾಂದರ್ಭಿಕ ಚಿತ್ರ
Follow us
ವಿವೇಕ ಬಿರಾದಾರ
|

Updated on: Jul 18, 2024 | 11:07 AM

ಬೆಂಗಳೂರು, ಜುಲೈ 18: ಖಾಸಗಿ ಕ್ಷೇತ್ರದ ಕಂಪನಿಗಳ ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲಾತಿ (Job Reservation For Kannadigas In Private Companies) ನೀಡುವ ಮಸೂದೆ ವಿಚಾರ ರಾಜ್ಯದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಈ ನಡುವೆ ಉತ್ತರ ಭಾರತದ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ (Bengaluru) ತಾವು ಎದುರಿಸಿದ ಭಾಷಾ ತಾರತಮ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಶಾನಿನಾನಿ ಎಂಬ ಎಕ್ಸ್​ ಬಳಕೆದಾರರು ತಾವು ಅನುಭವಿಸಿದ ತಾರತಮ್ಯದ ಬಗ್ಗೆ ಸರಣಿ ಟ್ವೀಟ್​​ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ.

“ನಾನು ಕಳೆದ 1.5 ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದೇನೆ. ಪಂಜಾಬ್​​ನಲ್ಲಿ ನಾನು ವಿವಾಹವಾಗಿದ್ದೇನೆ. ನಾನು ಕಳೆದ ಒಂದು ವರ್ಷದಿಂದ ನನ್ನ ಸಂಪ್ರದಾಯವಾದ ಚೂರಾ ಬಳೆಗಳನ್ನು ಧರಿಸುತ್ತಿದ್ದೇನೆ. ಇದು ಉತ್ತರ ಭಾರತದ ಉಡುಪಾಗಿದೆ”.

“ಉತ್ತರ ಭಾರತದಿಂದ ಇಲ್ಲಿಗೆ ಬಂದ ನಾನು ಮನೆಯಿಂದ ಆಫಿಸ್​​ ಮತ್ತು ಆಫಿಸ್​ನಿಂದ ಮನೆಗೆ ಬರುವ ವೇಳೆ ಆಟೋ ಚಾಲಕರಿಂದ ಕಿರುಕುಳ ಅನುಭವಿಸಿದ್ದೇನೆ. ಆಟೋದಲ್ಲಿ ಸಂಚರಿಸುವಾಗ ಕನ್ನಡ ಬರದಿದ್ದರೆ ಇಲ್ಲಿ ಏಕೆ ಇದ್ದೀರಿ? ಎಂದು ಚಾಲಕರು ಪ್ರಶ್ನಿಸುತ್ತಾರೆ. ಅಲ್ಲದೆ ಕನ್ನಡ ಬರಲ್ಲ ಎಂಬ ಕಾರಣಕ್ಕೆ ನನ್ನಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಹಾಗೆ, “ನಾನು ಇಂಗ್ಲಿಷ್​ ಅಥವಾ ಹಿಂದಿಯಲ್ಲಿ ಮಾತನಾಡಿದರೂ ಅವರಿಗೆ ಅರ್ಥವಾಗದೆ ಸರಿಯಾಗಿ ಸ್ಪಂದಿಸುವುದಿಲ್ಲ” ಎಂದರು.

ಕೇವಲ ಆಟೋ ರಿಕ್ಷಾ ಚಾಲಕರು ಮಾತ್ರವಲ್ಲದೆ ಬೆಸ್ಕಾಂ ಅಧಿಕಾರಿಗಳು ಕೂಡ ತಮ್ಮ ದೂರಿಗೆ ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪ ಮಾಡಿದ್ದಾರೆ. “ವಿದ್ಯುತ್​ ವ್ಯತ್ಯಯದ ಬಗ್ಗೆ ದೂರು ನೀಡಲು ನಾನು ಬೆಸ್ಕಾಂಗೆ ಕರೆ ಮಾಡಿದ್ದೆ. ಈ ವೇಳೆ ಅಲ್ಲಿನ ಅಧಿಕಾರಿ “No Hindi, No English, Only Kannada” ನಾವು ಕನ್ನಡಿಗರ ದೂರುಗಳನ್ನು ಮಾತ್ರ ಸ್ವೀಕರಿಸುತ್ತೇವೆ ಎಂದು ಕರೆ ಕಟ್​ ಮಾಡಿದರು” ಎಂದು ಆರೋಪಿಸಿದರು.

“ಇಲ್ಲಿ ನನಗೆ ಸಾಕಷ್ಟು ತೊಂದರೆಯಾಗುತ್ತಿದೆ. ಅಲ್ಲದೆ ನನಗೆ ನನ್ನ ಮನೆಯ ನೆನಪು ಕಾಡುತ್ತಿದೆ. ಹೀಗಾಗಿ ನಾನು ಗುರುಗ್ರಾಮಕ್ಕೆ ಬಂದಿದ್ದೇನೆ. ಗುರುಗ್ರಾಮಕ್ಕೆ ಬಂದ ನಂತರ ನನಗೆ ಹೆಚ್ಚಿನ ಶಕ್ತಿ ಬಂದಿದೆ. ಒಳ್ಳೆಯ ಆಹಾರವನ್ನು ಸೇವಿಸುತ್ತೇನೆ, ನಾನು ಬಯಸಿದಲ್ಲೆಲ್ಲಾ ನಾನು ಪ್ರಯಾಣಿಸಬಹುದು. ಆಟೋದವರ ಯಾವುದೇ ಕೆಟ್ಟ ಸಂಭಾಷಣೆಗಳಿಲ್ಲ” ಎಂದರು.

ಶಾನಿನಾನಿ ಅವರ ಟ್ವೀಟ್​ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ವೈರಲ್​​ ಆಗಿದೆ. ಅನೇಕ ನೆಟ್ಟಿಗರು ಪರ-ವಿರೋಧದ ಕಾಮೆಂಟ್​​​ ಮಾಡಿದ್ದಾರೆ.

“ಜನರು ಕೇವಲ ತಮ್ಮ ಮಾತೃಭಾಷೆಯನ್ನು ಪ್ರೀತಿಸುವುದು ಕಲಿಯುವುದರ ಜೊತೆಗೆ ಇತರ ಭಾರತೀಯ ಭಾಷೆಗಳನ್ನು ದ್ವೇಷಿಸಲು ಕಲಿಸಲಾಗುತ್ತದೆ. ಉತ್ತರದಲ್ಲಿ, ಹಿಂದಿಯೇತರ ಜನರು ಇಂಗ್ಲಿಷ್ ತಿಳಿದಿದ್ದರೂ ಸಹ ಹಿಂದಿ ತಿಳಿಯಬೇಕೆಂದು ಅನೇಕರು ನಿರೀಕ್ಷಿಸುತ್ತಾರೆ. ಈ ಕೋಮುವಾದವು ಒಂದು ಹಂತವನ್ನು ತಲುಪಿದೆ. ಜನರು ಸ್ಥಳೀಯ ಭಾಷೆ ತಿಳಿದಿಲ್ಲವೆಂದು ಹೆಮ್ಮೆಪಡುತ್ತಾರೆ ಆದರೆ ಫ್ರೆಂಚ್, ಜರ್ಮನ್ ಇತ್ಯಾದಿಗಳನ್ನು ಕಲಿಯಲು ಉತ್ಸುಕರಾಗಿದ್ದಾರೆ” ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ