Namma Metro: ಡಿಸೆಂಬರ್​ನಲ್ಲಿ ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗ ಶುರು, 15 ನಿಮಿಷಕ್ಕೊಂದು ರೈಲು

ಬಹು ನಿರೀಕ್ಷಿತ ಚಾಲಕ ರಹಿತ ಮೆಟ್ರೋ ಹೊಂದಿರುವ ಹಳದಿ ಮಾರ್ಗ ಡಿಸೆಂಬರ್ ತಿಂಗಳಲ್ಲಿ ಆರಂಭವಾಗಲಿದ್ದು 15 ನಿಮಿಷಗಳಿಗೆ ಬಂದರಂತೆ ಒಟ್ಟು 8 ರೈಲುಗಳನ್ನು ಬಿಡಲಾಗುತ್ತೆ ಎಂದು ಬಿಎಂಆರ್​ಸಿಎಲ್ ತಿಳಿಸಿದೆ. ಮತ್ತಷ್ಟು ರೈಲು ಬೋಗಿಗಳು ಆಗಸ್ಟ್ ತಿಂಗಳಲ್ಲಿ ಬೆಂಗಳೂರು ತಲುಪುವ ನಿರೀಕ್ಷೆಯಿದೆ.

Namma Metro: ಡಿಸೆಂಬರ್​ನಲ್ಲಿ ಚಾಲಕ ರಹಿತ ಮೆಟ್ರೋ ಹಳದಿ ಮಾರ್ಗ ಶುರು, 15 ನಿಮಿಷಕ್ಕೊಂದು ರೈಲು
ಮೆಟ್ರೋ ಹಳದಿ ಮಾರ್ಗ
Follow us
|

Updated on: Jul 18, 2024 | 7:22 AM

ಬೆಂಗಳೂರು, ಜುಲೈ.18: ನಮ್ಮ ಮೆಟ್ರೋ ಹಳದಿ ಮಾರ್ಗದ (Yellow Line) ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಸುಮಾರು 19 ಕಿಲೋ ಮೀಟರ್ ಉದ್ದದ ಆರ್‌ವಿ ರಸ್ತೆ-ಬೊಮ್ಮಸಂದ್ರ ಮಾರ್ಗದಲ್ಲಿ ಚಾಲಕ ರಹಿತ ವಿದ್ಯುದ್ದೀಕರಣ ಮೆಟ್ರೋ (Namma Metro) ಸೇವೆಗೆ ಸಿದ್ಧವಾಗಿದೆ. ಇದೀಗ BMRCL ಅಧಿಕಾರಿಗಳು ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು ಹಳದಿ ಮಾರ್ಗವು ಈ ವರ್ಷದ ಅಂತ್ಯದ ವೇಳೆಗೆ ಶುರುವಾಗಲಿದೆ ಎಂದು ತಿಳಿಸಿದ್ದಾರೆ. ಪ್ರಾರಂಭಿಕವಾಗಿ 15 ನಿಮಿಷಗಳಿಗೆ ಒಂದರಂತೆ ಒಟ್ಟು ಎಂಟು ರೈಲುಗಳು ಸೇವೆಗೆ ಸಿದ್ಧವಿದೆ ಎಂದು ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) ಬುಧವಾರ ತಿಳಿಸಿದೆ.

ಈ ಹಿಂದೆ ಪ್ರತಿ 20 ನಿಮಿಷಗಳ ಆವರ್ತನದೊಂದಿಗೆ ಆರರಿಂದ ಏಳು ರೈಲುಗಳನ್ನು ಬಿಟ್ಟು ಹಳದಿ ಮಾರ್ಗ ಸಂಚಾರ ಆರಂಭಿಸಲು ಬಿಎಂಆರ್​ಸಿಎಲ್ ಸಿದ್ಧತೆ ನಡೆಸಿತ್ತು. ಆದರೆ ಇದೀಗ ಇದನ್ನು ಬದಲಾಯಿಸಲಾಗಿದೆ.

RV ರಸ್ತೆಯಿಂದ ಬೊಮ್ಮಸಂದ್ರಕ್ಕೆ ಸಂಪರ್ಕ ಕಲ್ಪಿಸುವ 5,745 ಕೋಟಿ ರೂ. ವೆಚ್ಚದ ಈ ಮಾರ್ಗದಲ್ಲಿ ಪ್ರಮುಖ ಸಿವಿಲ್ ಮತ್ತು ಸಿಸ್ಟಮ್ಸ್ ಕಾಮಗಾರಿಗಳು ಪೂರ್ಣಗೊಂಡಿವೆ. 19.15 ಕಿ.ಮೀ ಮಾರ್ಗದಲ್ಲಿ ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್, ಸಿಲ್ಕ್ ಬೋರ್ಡ್ ಜಂಕ್ಷನ್ ಮತ್ತು ಎಲೆಕ್ಟ್ರಾನಿಕ್ಸ್ ಸಿಟಿ ಸೇರಿದಂತೆ 16 ನಿಲ್ದಾಣಗಳಿವೆ.

ಜಯದೇವ ಆಸ್ಪತ್ರೆ, 39 ಮೀಟರ್ ಎತ್ತರದ ಭಾರತದ ಅತಿ ಎತ್ತರದ ಮೆಟ್ರೋ ನಿಲ್ದಾಣವು ಇಂಟರ್ ಚೇಂಜ್ ಸ್ಟೇಷನ್ ಆಗಲಿದೆ. ಅಂಡರ್‌ಪಾಸ್, ರಸ್ತೆ, ಫ್ಲೈಓವರ್, ಹಳದಿ ಲೈನ್ ಪ್ಲಾಟ್‌ಫಾರ್ಮ್, ಕಾನ್ಕೋರ್ಸ್ ಮತ್ತು ಪಿಂಕ್ ಲೈನ್ ಪ್ಲಾಟ್‌ಫಾರ್ಮ್ ಸೇರಿದಂತೆ ಈ ಜಂಕ್ಷನ್ ಆರು ಹಂತಗಳನ್ನು ಹೊಂದಿದೆ.

ಇದನ್ನೂ ಓದಿ: ಮೆಟ್ರೋದಲ್ಲಿ ಪಟ್ಟಾಂಗ ಹೊಡೆಯುತ್ತಾ ಯುವತಿಯರ ಮೇಕಪ್; ಉಸ್ಸಪ್ಪಾ ಎಂದ ಯುವಕರು

ಫೆಬ್ರವರಿಯಲ್ಲಿ ಚೀನಾದಿಂದ ಬಂದ ಆರು ಬೋಗಿಗಳನ್ನು ರೈಲಿನೊಂದಿಗೆ ಅಳವಡಿಸಿ ಜೂನ್ 13 ರಂದು ಹಳದಿ ಮಾರ್ಗದಲ್ಲಿ ಪೂರ್ಣ ಪ್ರಮಾಣದ ಪ್ರಯೋಗವನ್ನು ಮಾಡಲಾಗಿತ್ತು.

ಆಸಿಲೇಷನ್ ಟ್ರಯಲ್ಸ್ ಮತ್ತು ಸೇಫ್ಟಿ ಕ್ಲಿಯರೆನ್ಸ್ ಸೇರಿದಂತೆ ಟ್ರಯಲ್ ರನ್‌ಗಳು ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಡಿಸೆಂಬರ್‌ನಲ್ಲಿ ವಾಣಿಜ್ಯ ಕಾರ್ಯಾಚರಣೆಗಳು ಪ್ರಾರಂಭವಾಗಬಹುದು.

ಚೀನಾದ CRRC Nanjing Puzhen Co Ltd 216 ಕೋಚ್‌ಗಳನ್ನು (36 ರೈಲುಗಳು) BMRCL ಗೆ 1,578 ಕೋಟಿ ರೂ.ಗೆ ಪೂರೈಸುತ್ತಿದೆ. ಹನ್ನೆರಡು ಕೋಚ್‌ಗಳನ್ನು ಚೀನಾದಲ್ಲಿ ತಯಾರಿಸಲಾಗಿದೆ, ಉಳಿದವುಗಳನ್ನು ಸಿಆರ್‌ಆರ್‌ಸಿಯ ಭಾರತೀಯ ಪಾಲುದಾರ, ಟಿಟಾಗರ್ ರೈಲ್ ಸಿಸ್ಟಮ್ ಲಿಮಿಟೆಡ್ (ಟಿಆರ್‌ಎಸ್‌ಎಲ್) ಪಶ್ಚಿಮ ಬಂಗಾಳದಲ್ಲಿ ಜೋಡಿಸಲಾಗಿದೆ. ಮೇ 18 ರಂದು ಟಿಆರ್ಎಸ್ಎಲ್ ಉತ್ಪಾದನೆಯನ್ನು ಪ್ರಾರಂಭಿಸಿತು.

ಟಿಆರ್‌ಎಸ್‌ಎಲ್‌ನಿಂದ ಆರು ಬೋಗಿಗಳ ಮೊದಲ ರೈಲು ಆಗಸ್ಟ್ 10 ಅಥವಾ 15 ರೊಳಗೆ ಬೆಂಗಳೂರು ತಲುಪುವ ನಿರೀಕ್ಷೆಯಿದೆ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ ಮಹೇಶ್ವರ್ ರಾವ್ ತಿಳಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ