AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SSLC ತೃತೀಯ ಭಾಷೆಗೆ ಗ್ರೇಡ್​​ ವಿವಾದ: ರಾಜ್ಯಪಾಲರ ನಿಲುವಿಗೆ ಕರವೇ ಕೆಂಡ; ಸೋಮವಾರ ರಾಜಭವನ ಮುತ್ತಿಗೆಗೆ ಕರೆ

SSLC ಹಿಂದಿ ಪರೀಕ್ಷೆಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರ ಮರುಪರಿಶೀಲಿಸುವಂತೆ ರಾಜ್ಯಪಾಲರು ಪತ್ರ ಬರೆದಿರುವುದು ಕರವೇ ಆಕ್ರೋಶಕ್ಕೆ ಕಾರಣವಾಗಿದೆ. ಇದು ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಿದೆ ಎಂದು ನಾರಾಯಣಗೌಡ ಕಿಡಿ ಕಾರಿದ್ದಾರೆ. ರಾಜ್ಯಪಾಲರ ನಡೆ ಹಿಂದಿ ಸಾಮ್ರಾಜ್ಯಶಾಹಿಯ ಕುತಂತ್ರ ಎಂದಿರುವ ಕರವೇ, ಈ ಹಸ್ತಕ್ಷೇಪವನ್ನು ಖಂಡಿಸಿ ಸೋಮವಾರ ರಾಜಭವನ ಮುತ್ತಿಗೆಗೆ ಕರೆ ನೀಡಿದೆ. ಕನ್ನಡಿಗರ ತೆರಿಗೆ ಹಣದಿಂದ ನಡೆಯುವ ರಾಜಭವನ ತಿಂದು ಮನೆಗೆ ಕನ್ನ ಹಾಕುವುದು ಸರಿಯಲ್ಲ ಎಂದು ಎಚ್ಚರಿಸಿದೆ.

SSLC ತೃತೀಯ ಭಾಷೆಗೆ ಗ್ರೇಡ್​​ ವಿವಾದ: ರಾಜ್ಯಪಾಲರ ನಿಲುವಿಗೆ ಕರವೇ ಕೆಂಡ; ಸೋಮವಾರ ರಾಜಭವನ ಮುತ್ತಿಗೆಗೆ ಕರೆ
ರಾಜ್ಯಪಾಲರ ನಿಲುವಿಗೆ ಕರವೇ ಕೆಂಡImage Credit source: Google
ಪ್ರಸನ್ನ ಹೆಗಡೆ
|

Updated on:Apr 04, 2026 | 4:18 PM

Share

ಬೆಂಗಳೂರು, ಏಪ್ರಿಲ್​​ 04: SSLC ಹಿಂದಿ ಪರೀಕ್ಷೆಗೆ ಅಂಕಗಳ ಬದಲು ಗ್ರೇಡ್​ ನೀಡುವ ರಾಜ್ಯ ಸರ್ಕಾರದ ನಿರ್ಧಾರ ಮರುಪರಿಶೀಲಿಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿಗೆ ರಾಜ್ಯಪಾಲರು ಪತ್ರ ಬರೆದಿರುವ ವಿಚಾರವೀಗ ಕರ್ನಾಟಕ ರಕ್ಷಣಾ ವೇದಿಕೆಯ ಆಕ್ರೋಶಕ್ಕೆ ಕಾರಣವಾಗಿದೆ. ಈ ಸಂಬಂಧ ಸೋಮವಾರ ಬೆಳಗ್ಗೆ 11 ಗಂಟೆಗೆ ಲೋಕಭವನ ಮುತ್ತಿಗೆಗೆ ಕರವೇ ಮುಂದಾಗಿದ್ದು, ರಾಜ್ಯದ ಮೂಲೆ ಮೂಲೆಗಳಿಂದ ಕಾರ್ಯಕರ್ತರು ಆಗಮಿಸಲಿದ್ದಾರೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ನಾರಾಯಣಗೌಡ ತಿಳಿಸಿದ್ದಾರೆ.

ರಾಜ್ಯಪಾಲರ ಪತ್ರದ ಬಗ್ಗೆ ಕಿಡಿ ಕಾರಿರುವ ನಾರಾಯಣಗೌಡ, ಈ ಹಸ್ತಕ್ಷೇಪ ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಿದೆ. ನಿಮ್ಮ ಅಧಿಕಪ್ರಸಂಗವನ್ನು ಕರ್ನಾಟಕದ ಜನತೆ ಒಪ್ಪಿಕೊಳ್ಳುವುದಿಲ್ಲ. ರಾಜ್ಯಪಾಲರು ಸರ್ಕಾರದ ಪದನಿಮಿತ್ತ ಮುಖ್ಯಸ್ಥರು ಎಂಬುದನ್ನು ನೀವು ಮರೆತಿದ್ದೀರಿ. ನೀವು ನಮ್ಮಿಂದ ನೇರವಾಗಿ ಆಯ್ಕೆಯಾದ ಜನಪ್ರತಿನಿಧಿಯಲ್ಲ. ಒಂದು ಸರ್ಕಾರ ಬಹುಮತದೊಂದಿಗೆ ಸದೃಢವಾಗಿ ಕಾರ್ಯ ನಿರ್ವಹಿಸುತ್ತಿರುವಾಗ ಈ ರೀತಿ ಮಾಡೋದು ತಪ್ಪು. ದೈನಂದಿನ ಆಡಳಿತದಲ್ಲಿ ಮೂಗು ತೂರಿಸಲು ನಿಮಗೆ ಯಾವುದೇ ನೈತಿಕ ಅಧಿಕಾರವಿಲ್ಲ, ಸಾಂವಿಧಾನಿಕ ಹೊಣೆಗಾರಿಕೆಯಿಲ್ಲ. ಅದು ನಿಮ್ಮ ವ್ಯಾಪ್ತಿಯ ಕೆಲಸವೂ ಅಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ: SSLC ಪರೀಕ್ಷೆಯ ತೃತೀಯ ಭಾಷೆ ಅಂಕಕ್ಕೆ ಕೊಕ್; ನಿರ್ಧಾರ ಪರಿಶೀಲಿಸುವಂತೆ ಸಿಎಸ್​​ಗೆ ರಾಜ್ಯಪಾಲರ ಪತ್ರ

ರಾಜ್ಯದ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಬದಲಾವಣೆ ಮಾಡುವ ಸಂವಿಧಾನಬದ್ಧ ಹಕ್ಕು ರಾಜ್ಯ ಸರ್ಕಾರಕ್ಕಿದೆ. ಸರ್ಕಾರ ಈಗ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತರುತ್ತಿರುವುದಕ್ಕೆ ಸಾಕಷ್ಟು ಕಾರಣಗಳಿವೆ. ಇದರ ಸಾಧಕ ಬಾಧಕಗಳನ್ನು ನಮ್ಮ ಜನಪ್ರತಿನಿಧಿಗಳು ನೋಡಿಕೊಳ್ಳುತ್ತಾರೆ. ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘದವರು ನಿಮಗೆ ಕೊಟ್ಟಿದ್ದ ಮನವಿಗೆ ತುರ್ತಾಗಿ ಪ್ರತಿಕ್ರಿಯಿಸಿರುವುದನ್ನು ಕೇಳಿ ನಮಗೆ ಆಶ್ಚರ್ಯವಾಯಿತು. ಬೆಂಗಳೂರಿನಲ್ಲಿ ಇಂಥದ್ದೊಂದು ಸಂಘ ಇದೆ ಎಂಬುದೇ ನಮಗೆ ತಿಳಿದಿರಲಿಲ್ಲ. ಈ ರೀತಿಯ ನಾಟಕಗಳನ್ನು ನಾವು ಎಷ್ಟೋ ನೋಡಿದ್ದೇವೆ. ಇಂತಹ ಕುತಂತ್ರಗಳು ಕರ್ನಾಟಕಕ್ಕೆ ಹೊಸದೇನೂ ಅಲ್ಲ. ಮರೆಯಲ್ಲಿ ನಿಂತು ಬಾಣ ಬಿಡುವ ಈ ಹೇಡಿಗಳು ಬೀದಿಗೆ ಬರಲಿ ಎಂದು ನಾವೂ ಕಾಯುತ್ತಿದ್ದೇವೆ ಎಂದಿದ್ದಾರೆ.

ಅಲ್ಲದೆ, ತ್ರಿಭಾಷಾ ನೀತಿ ಅನ್ವಯ ಕನ್ನಡವನ್ನು ಮೂರನೇ ಭಾಷೆಯನ್ನಾಗಿ ಅಲ್ಲಿನ ಮಕ್ಕಳಿಗೆ ಕಲಿಸಲು ಹೇಳಿ. ನಿಮಗೆ ಆ ಧೈರ್ಯವಿಲ್ಲದಿದ್ದರೆ ಕನ್ನಡಿಗರ ಹಿತಾಸಕ್ತಿಗೆ ವಿರುದ್ಧವಾಗಿ ಕರ್ನಾಟಕದ ನೆಲದಲ್ಲಿ ನಿಂತು ಮಾತನಾಡಬೇಡಿ. ತೃತೀಯ ಭಾಷೆಯ ಮೇಲಿನ ಪ್ರೇಮವನ್ನು ಉತ್ತರ ಭಾರತದ ರಾಜ್ಯಗಳಲ್ಲಿ ಉಕ್ಕಿ ಹರಿಸಿ. ಪಾಪ, ಅಲ್ಲಿನ ಮಕ್ಕಳು ಇದುವರೆಗೆ ಎರಡೇ ಭಾಷೆಗಳನ್ನು ಓದಿಕೊಂಡು ಬಂದಿದ್ದಾರೆ. ನೀವು ಹಿಂದಿ ಸಾಮ್ರಾಜ್ಯ ಶಾಹಿಯ ಲಾಬಿಯ ಪರವಾಗಿ ಮಾತನಾಡುತ್ತಿದ್ದೀರಿ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ನಮ್ಮ ನೆಲದಲ್ಲಿ ನಿಮಗೆ ಐಶಾರಾಮಿ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದೇವೆ. ಕನ್ನಡಿಗರ ತೆರಿಗೆ ದುಡ್ಡಿನಲ್ಲಿ ರಾಜಭವನ ನಡೆಯುತ್ತಿದೆ. ಹೀಗಾಗಿ ತಿಂದ ಮನೆಗೆ ಕನ್ನ ಹಾಕುವುದು ಸರಿಯಲ್ಲ ಎಂದೂ ನಾರಾಯಣಗೌಡ ಎಚ್ಚರಿಸಿದ್ದಾರೆ.

ವರದಿ: ನಟರಾಜ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 4:06 pm, Sat, 4 April 26

Follow Us