
ಬೆಂಗಳೂರು, ಆಗಸ್ಟ್ 22: ರಾಜ್ಯದ ಸರ್ಕಾರಿ ಉದ್ಯಾನವನಗಳ ಜಾಗವನ್ನು ಇತರೆ ಸಾರ್ವಜನಿಕ ಉದ್ದೇಶಗಳಿಗೂ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ತಿದ್ದುಪಡಿ ಮಸೂದೆಗೆ ಸಚಿವ ಸಂಪುಟ ಅನುಮೋದನೆ ನೀಡಿರುವುದಕ್ಕೆ ಇದೀಗ ವಿರೋಧ ವ್ಯಕ್ತವಾಗಿದೆ. ಈ ಜನವಿರೋಧಿ ತೀರ್ಮಾನವನ್ನು ತಕ್ಷಣವೇ ಹಿಂಪಡೆಯುವಂತೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಸಿಎಂ ಡಿ.ಕೆ. ಶಿವಕುಮಾರ್ಗೆ (DK Shivakumar) ಪತ್ರದ ಮೂಲಕ ಆಗ್ರಹಿಸಿದ್ದಾರೆ. ನಗರದ ಹಸಿರು ವಲಯ ಹಾಗೂ ಸಾರ್ವಜನಿಕರ ಶ್ವಾಸಕೋಶದಂತಿರುವ ಉದ್ಯಾನವನಗಳ ಜಾಗವನ್ನು ಇತರ ಯೋಜನೆಗಳಿಗೆ ಬಲಿ ಕೊಡುವುದು ಪರಿಸರ ಮತ್ತು ನಾಗರಿಕರ ಹಿತದೃಷ್ಟಿಯಿಂದ ಮಾರಕವಾಗಲಿದ್ದು, ಸರ್ಕಾರ ಈ ನಿರ್ಧಾರವನ್ನು ಮರುಪರಿಶೀಲಿಸಬೇಕೆಂದು ಒತ್ತಾಯಿಸಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ‘ಸಿಎಂ ಡಿಕೆ ಶಿವಕುಮಾರ್ ಅವರೇ, ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿರುವ ಐತಿಹಾಸಿಕ ಬೆಂಗಳೂರಿನ ಭವಿಷ್ಯವನ್ನೇ ಹಾಳು ಮಾಡಲು ಅದ್ಹೇಗೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ? ಬೆಂಗಳೂರು ‘ಗಾರ್ಡನ್ ಸಿಟಿ’ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದು ನಿಮ್ಮ ಸರ್ಕಾರದ ಭಿಕ್ಷೆಯಿಂದಲ್ಲ, ತಲೆಮಾರುಗಳ ಜನರ ಪರಿಶ್ರಮದಿಂದ, ಉಳಿದಿರುವ ಹಸಿರಿನಿಂದ. ಇಂದು ಅದೇ ಸಾರ್ವಜನಿಕ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಲು ಅವಕಾಶ ಮಾಡಿಕೊಡುವ ಮೂಲಕ ಬೆಂಗಳೂರಿನ ಭವಿಷ್ಯವನ್ನೇ ಹಾಳುಗೆಡವಲು ಹೊರಟಿದ್ದೀರಿ’ ಎಂದು ಕಿಡಿಕಾರಿದ್ದಾರೆ.
ಮಾನ್ಯ CM ಶ್ರೀ ಡಿ.ಕೆ. ಶಿವಕುಮಾರ್ ಅವರೇ,
ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿರುವ ಐತಿಹಾಸಿಕ ಬೆಂಗಳೂರಿನ ಭವಿಷ್ಯವನ್ನೇ ಹಾಳು ಮಾಡಲು ಅದ್ಹೇಗೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ ?
ಬೆಂಗಳೂರು ‘ಗಾರ್ಡನ್ ಸಿಟಿ’ ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದು ನಿಮ್ಮ ಸರ್ಕಾರದ ಭಿಕ್ಷೆಯಿಂದಲ್ಲ, ತಲೆಮಾರುಗಳ ಜನರ ಪರಿಶ್ರಮದಿಂದ, ಉಳಿದಿರುವ… pic.twitter.com/20yRbOii4i
— Tejasvi Surya (@Tejasvi_Surya) August 22, 2026
‘ಪಾರ್ಕ್‌ಗಳು ರಿಯಲ್ ಎಸ್ಟೇಟ್‌ಗಾಗಿ ಮೀಸಲಿಟ್ಟ ಖಾಲಿ ಜಾಗವಲ್ಲ. ಅವು ಬೆಂಗಳೂರಿನ ಶ್ವಾಸಕೋಶ. ಈಗಾಗಲೇ ಕಾಂಕ್ರೀಟೀಕರಣ, ವಾಯುಮಾಲಿನ್ಯ, ಹೆಚ್ಚುತ್ತಿರುವ ನಗರ ಉಷ್ಣತೆ ಹಾಗೂ ಮಳೆನೀರು ಸಮಸ್ಯೆಯಿಂದ ಬೆಂಗಳೂರು ನಲುಗುತ್ತಿದೆ. ಇಂತಹ ಸಂದರ್ಭದಲ್ಲಿ ಉಳಿದಿರುವ ಹಸಿರು ಪ್ರದೇಶಗಳ ಮೇಲೂ ಕಣ್ಣು ಹಾಕುವುದು ಯಾವ ರೀತಿಯ ಅಭಿವೃದ್ಧಿ? ಇಂದು 5% ಜಾಗಕ್ಕೆ ಬಾಗಿಲು ತೆರೆದರೆ, ನಾಳೆ ಮತ್ತಷ್ಟು ಹಸಿರು ಪ್ರದೇಶಗಳ ಮೇಲೆ ಇದೇ ಒತ್ತಡ ಬರಲಿದೆ. ಒಮ್ಮೆ ಪಾರ್ಕ್ ಕಳೆದುಕೊಂಡರೆ, ಅದನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ಯಾವುದೇ ಯೋಜನೆಗೆ ಜಾಗ ಬೇಕಿದ್ದರೆ ಪರ್ಯಾಯ ಸರ್ಕಾರಿ ಜಾಗಗಳನ್ನು ಹುಡುಕಿ. ಬೆಂಗಳೂರಿನ ಹಸಿರನ್ನೇ ಬಲಿಕೊಡುವ ಸುಲಭ ದಾರಿ ಹಿಡಿಯಬೇಡಿ’ ಎಂದಿದ್ದಾರೆ.
ಇದನ್ನೂ ಓದಿ: ಉದ್ಯಾನವನಗಳ ಮೇಲೆ ಸರ್ಕಾರದ ಕಣ್ಣು: ಶೇ 5ರಷ್ಟು ಜಾಗ ಸಾರ್ವಜನಿಕ ಬಳಕೆಗೆ, ಬೆಂಗಳೂರಿಗರ ತೀವ್ರ ವಿರೋಧ
‘ಕೆಂಪೇಗೌಡರು ಕಟ್ಟಿದ ಬೆಂಗಳೂರು, ತಲೆಮಾರುಗಳು ಉಳಿಸಿದ ಬೆಂಗಳೂರು ಯಾರೊಬ್ಬರ ರಿಯಲ್ ಎಸ್ಟೇಟ್ ಪ್ರಯೋಗಾಲಯವಲ್ಲ. ಬೆಂಗಳೂರು ನಿಮ್ಮ ರಾಜಕೀಯ ಪ್ರಯೋಗಗಳಿಗೆ, ನಿಮ್ಮ ಸರ್ಕಾರದ ಅಸಮರ್ಥ ಯೋಜನೆಗಳಿಗೆ ಅಥವಾ ರಿಯಲ್ ಎಸ್ಟೇಟ್ ಲಾಬಿಯ ಹಿತಾಸಕ್ತಿಗಳಿಗೆ ಬಲಿಯಾಗಲು ನಾವು ಬಿಡುವುದಿಲ್ಲ. ಡಿಕೆ ಶಿವಕುಮಾರ್ ಅವರೇ, ಬೆಂಗಳೂರಿನ ಹಸಿರನ್ನು ಮಾರಾಟಕ್ಕಿಡುವ ನಿರ್ಧಾರವನ್ನು ತಕ್ಷಣ ಹಿಂಪಡೆಯಿರಿ. ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರಿನ ಉಸಿರನ್ನು ಕಸಿದುಕೊಳ್ಳಲು ಯಾವುದೇ ಕಾರಣಕ್ಕೂ ಬೆಂಗಳೂರಿನ ಜನತೆ ಸಿದ್ಧರಿಲ್ಲ’ ಎಂದು ಹೇಳಿದ್ದಾರೆ.
‘ಈ ಕ್ರಮಕ್ಕೆ ತಡೆ ಹಾಕುವಂತೆ ಹಾಗೂ ವಿಷಯವನ್ನು ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಪ್ರಬಲವಾಗಿ ಪ್ರಸ್ತಾಪಿಸಿ, ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುವಂತೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರಿಗೆ ನಾನು ಮನವಿ ಮಾಡಿದ್ದೇನೆ. ಇಂದು ಶೇ.5 ಎನ್ನುತ್ತಾರೆ. ನಾಳೆ ಇನ್ನಷ್ಟು ಜಾಗಕ್ಕೆ ಬೇಡಿಕೆ ಬರಬಹುದು. ಹೀಗೆ ಹಂತ ಹಂತವಾಗಿ ಉದ್ಯಾನವನಗಳ ವಾಣಿಜ್ಯೀಕರಣಕ್ಕೆ ಬಾಗಿಲು ತೆರೆದರೆ, ಬೆಂಗಳೂರಿನ ‘ಗಾರ್ಡನ್ ಸಿಟಿ’ ಎಂಬ ಹೆಗ್ಗಳಿಕೆ ಕೇವಲ ಇತಿಹಾಸದ ಪುಟಗಳಲ್ಲಿ ಉಳಿಯುವ ಅಪಾಯವಿದೆ’ ಎಂದಿದ್ದಾರೆ.
ಇದನ್ನೂ ಓದಿ: ಹಳ್ಳ ಹಿಡಿದ ಬಿ-ಖಾತೆಯಿಂದ ಎ-ಖಾತೆ ನೀಡುವ ಯೋಜನೆ: ಆಗಿದ್ದೇನು?
‘ಉದ್ಯಾನವನ ಎಂದರೆ ಕೇವಲ ಖಾಲಿ ಜಾಗವಲ್ಲ. ಅದು ಮಕ್ಕಳ ಆಟದ ಮೈದಾನ. ವಯೋವೃದ್ಧರ ನಡಿಗೆಯ ಸ್ಥಳ. ಜನರ ಆರೋಗ್ಯದ ಆಧಾರ. ನಗರದ ಪರಿಸರದ ರಕ್ಷಣಾ ಕವಚ. ಈ ಕುರಿತು ಪಕ್ಷಾತೀತವಾಗಿ ವಿರೋಧಿಸುವ ಅನಿವಾರ್ಯತೆ ಇದ್ದು, ಇದು ನಮ್ಮೆಲ್ಲರ ನೈತಿಕ ಜವಾಬ್ದಾರಿ ಕೂಡ’ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:34 pm, Sat, 22 August 26