TV9 Kannada News Live: ಮತ್ತೆ ಶುರುವಾಯ್ತು ಸಂಪುಟ ಸರ್ಕಸ್: ಡಿಕೆಶಿ, ಕೆಪಿಸಿಸಿ ಅಧ್ಯಕ್ಷ, ಸಿದ್ದರಾಮಯ್ಯ ನಾಳೆ ದಿಲ್ಲಿಗೆ
Karnataka News Today Live Updates: ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಸರ್ಕಾರಿ ಗೌರವಗಳೊಂದಿಗಿನ ಅಂತ್ಯಕ್ರಿಯೆಯ ಲೈವ್ ಮಾಹಿತಿ ಇಲ್ಲಿದೆ. ಇದರೊಂದಿಗೆ ಬೆಂಗಳೂರಿನ ಸೊಪ್ಪು-ತರಕಾರಿಗಳಲ್ಲಿ ಸೀಸದ ವಿಷ ಪತ್ತೆಯಾದ ಆಘಾತಕಾರಿ ವರದಿ ಹಾಗೂ ದೆಹಲಿಯಲ್ಲಿ ಉಪವಾಸ ನಿರತರಾಗಿರುವ ಸೋನಮ್ ವಾಂಗ್ಚುಕ್ ಸತ್ಯಾಗ್ರಹದ ಕ್ಷಣಕ್ಷಣದ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ ಇಲ್ಲಿದೆ.

Breaking News Today Live Updates in Kannada: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತಿಮ ಸಂಸ್ಕಾರವು ಇಂದು ಮಧ್ಯಾಹ್ನ 3 ಗಂಟೆಗೆ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಲಿದ್ದು, ಕೇಂದ್ರ ಸಚಿವರು ಸೇರಿದಂತೆ ಹಲವು ಪ್ರಮುಖ ಬಿಜೆಪಿ-ಜೆಡಿಎಸ್ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ. ಮತ್ತೊಂದೆಡೆ, ಬೆಂಗಳೂರಿನಲ್ಲಿ ವಾಯುಮಾಲಿನ್ಯದ ಪ್ರಮಾಣ 70 AQI ದಾಟಿದ್ದು, ನಗರದ ಸುತ್ತಮುತ್ತ ಬೆಳೆಯುವ ಬದನೆ, ತೊಂಡೆಕಾಯಿ ಹಾಗೂ ಹಸಿರೆಲೆ ಸೊಪ್ಪುಗಳಲ್ಲಿ ಅಪಾಯಕಾರಿ ಸೀಸದ (Lead) ವಿಷ ಪತ್ತೆಯಾಗಿರುವುದು ಗ್ರಾಹಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಇನ್ನು, ನೀಟ್ ಹಗರಣ ಖಂಡಿಸಿ 21 ದಿನಗಳಿಂದ ಉಪವಾಸ ನಿರತರಾಗಿ ಆಸ್ಪತ್ರೆ ಸೇರಿರುವ ಸಮಾಜ ಸೇವಕ ಸೋನಮ್ ವಾಂಗ್ಚುಕ್ ಸತ್ಯಾಗ್ರಹ ಅಂತ್ಯಕ್ಕೆ ಅವರ ಪತ್ನಿ ಕಠಿಣ ಷರತ್ತುಗಳನ್ನು ವಿಧಿಸಿದ್ದು, ಖಾಸಗಿ ಆಸ್ಪತ್ರೆಗೆ ಸ್ಥಳಾಂತರ ಕೋರಿದ್ದ ಅವರ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
Tv9 Kannada Live TV ಇಲ್ಲಿ ವೀಕ್ಷಿಸಿ
LIVE NEWS & UPDATES
-
ಸಿದ್ದರಾಮಯ್ಯ ಜತೆ ನಾಳೆ ದಿಲ್ಲಿಗೆ ಎಂದ ಡಿಕೆಶಿ
ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಸಿದ್ದರಾಮಯ್ಯ, ನಾನು ನಾಳೆ ನವದೆಹಲಿಗೆ ಹೋಗುತ್ತಿದ್ದೇವೆ. ಸಂಜೆ ನಾನು ದೆಹಲಿಗೆ ಹೋಗಬೇಕಿತ್ತು. ಆದರೆ ಮಾತು ಕೊಟ್ಟಿದ್ದರಿಂದ ಕಾರ್ಯಕ್ರಮಕ್ಕೆ ಬಂದೆ, ನಾಳೆ ಹೋಗುತ್ತೇನೆಂದ ಸಿಎಂ ಡಿಕೆ ಶಿವಕುಮಾರ್.
-
ಮತ್ತೆ ಶುರುವಾಯ್ತು ಸಂಪುಟ ಸರ್ಕಸ್
ಮತ್ತೆ ಸಂಪುಟ ಸರ್ಕಸ್ ಶುರುವಾಗಿದೆ. ಹೀಗಾಗಿ ಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯನವರು ನಾಳೆ (ಜುಲೈ 21) ದೆಹಲಿಗೆ ತೆರಳಲಿದ್ದು, ಸಂಪುಟ ವಿಸ್ತರಣೆ ಸಂಬಂಧ ವರಿಷ್ಠರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
-
-
ಮಣ್ಣಲ್ಲಿ ಮಣ್ಣಾದ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರು ಮಣ್ಣಲ್ಲಿ ಮಣ್ಣಾದರು. ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಚೆನ್ನಮ್ಮ ಶನಿವಾರ ನಿಧನರಾಗಿದ್ದು, ಇಂದು (ಜುಲೈ 20) ಅವರ ಅಂತ್ಯಕ್ರಿಯೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಚೆನ್ನಮ್ಮನವರ ಅಂತ್ಯಕ್ರಿಯೆ ನೆರವೇರಿಸಲಾಯ್ತು. ಇನ್ನು ಚೆನ್ನಮ್ಮರ ಅಂತಿಮ ವಿಧಿವಿಧಾನ ಕಾರ್ಯಗಳನ್ನು ಕಿರಿಯ ಪುತ್ರ ಹೆಚ್ಡಿ ರಮೇಶ್ ಅವರು ನೆರವೇರಿಸಿದರು.
-
ಅಂತಿಮ ವಿಧಿವಿಧಾನ ಪೂರೈಸಿದ ಕಿರಿಯ ಮಗ ಹೆಚ್.ಡಿ.ರಮೇಶ್
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಅಂತಿಮ ಅಂತಿಮ ವಿಧಿವಿಧಾನವನ್ನು ಕಿರಿಯ ಮಗ ಹೆಚ್.ಡಿ.ರಮೇಶ್ ನೆರವೇರಿಸಿದರು. ರಂಗನಾಥ ದೇಗುಲ, ನಿಮಿಷಾಂಬ ದೇವಸ್ಥಾನ, ದೇವೇಶ್ವರ ದೇಗುಲ, ಚಾಮುಂಡೇಶ್ವರಿ ದೇಗುಲದಿಂದ ತಂದಿದ್ದ ಪ್ರಸಾದ ಸಮರ್ಪಿಸಿ ಪೂಜೆ ಸಲ್ಲಿಸಿದರು. ಬಳಿಕ ಪಲ್ಲಕ್ಕಿಯಲ್ಲಿ ಚೆನ್ನಮ್ಮನವರ ಪಾರ್ಥಿವ ಶರೀರ ಇರಿಸಿ ಗೋವಿಂದ ನಾಮಸ್ಮರಣೆಯೊಂದಿಗೆ ಸಮಾಧಿ ಗುಂಡಿ ಪ್ರದಕ್ಷಿಣೆ ಹಾಕಿದರು. ಈ ವೇಳೆ ಪಾರ್ಥಿವ ಶರೀರಕ್ಕೆ ಮಕ್ಕಳು, ಮೊಮ್ಮಕ್ಕಳು, ಆಪ್ತರು, ಬಂಧುಗಳು ಹೆಗಲುಕೊಟ್ಟರು.
-
ಪಾರ್ಥಿವ ಶರೀರ ಮೇಲೆ ಹೊದಿಸಿದ್ದ ರಾಷ್ಟ್ರಧ್ವಜ ಕುಟುಂಬಕ್ಕೆ ಹಸ್ತಾಂತರ
ಚೆನ್ನಮ್ಮ ದೇವೇಗೌಡ್ರಿಗೆ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯ್ತು. ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಗೌರವ ನಮನ ಸಲ್ಲಿಸಲಾಗಿದ್ದು, ಬಳಿಕ ಪಾರ್ಥಿವ ಶರೀರದ ಮೇಲೆ ಹೊದಿಸಲಾಗಿದ್ದ ರಾಷ್ಟ್ರಧ್ವಜವನ್ನು ತೆಗೆದು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಯ್ತು. ಖುದ್ದು ಸಿಎಂ ಡಿಕೆ ಶಿವಕುಮಾರ್ ಅವರೇ ರಾಷ್ಟ್ರಧ್ವಜವನ್ನು ದೇವೇಗೌಡರ ಕೈಗೆ ಹಸ್ತಾಂತರ ಮಾಡಿದರು.
-
-
ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ
ಬೆಂಗಳೂರಿನ ಹಲವೆಡೆ ಭಾರೀ ಮಳೆಯಾಗುತ್ತಿದೆ. ಬಸವನಗುಡಿ, ಶಾಂತಿನಗರ, ಟೌನ್ಹಾಲ್, ಮೆಜೆಸ್ಟಿಕ್ , ಜಯನಗರ, ಮಲ್ಲೇಶ್ವರಂ ಸೇರಿದಂತೆ ಹಲವು ಕಡೆಗಳಲ್ಲಿಧಾರಾಕಾರ ಮಳೆಯಾಗುತ್ತಿದ್ದು, ದ್ವಿಚಕ್ರ ವಾಹನಗಳ ಸವಾರರು ಪರದಾಡುವಂತಾಗಿದೆ.
-
ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದಿಪ್ಕೆ ಪೊಲೀಸ್ ವಶಕ್ಕೆ
ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಭಾರೀ ಹೈಡ್ರಾಮಾವೇ ನಡೆದಿದೆ. ಇನ್ನು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದ ಕಾಕ್ರೋಚ್ ಜನತಾ ಪಾರ್ಟಿ ಸ್ಥಾಪಕ ಅಭಿಜೀತ್ ದಿಪ್ಕೆ ಅವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
-
ಚೆನ್ನಮ್ಮರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಕೆ
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಪತ್ನಿ ಚೆನ್ನಮ್ಮ ಅವರ ಅಂತ್ಯಕ್ರಿಯೆ ಪ್ರಕ್ರಿಯೆ ನಡೆದಿದ್ದು, ಹಾಸನ ಜಿಲ್ಲಾಡಳಿತವು ಚೆನ್ನಮ್ಮರಿಗೆ ಸಕಲ ಸರ್ಕಾರಿ ಗೌರವ ಸಲ್ಲಿಕೆ ಮಾಡಿದೆ. ಇನ್ನು ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಸಿಎಂ ಡಿಕೆ ಶಿವಕುಮಾರ್, ಕೇಂದ್ರ ಸಚಿವರಾದ ಶಿವರಾಜ್ ಸಿಂಗ್ ಚೌಹಾಣ್, ಜೋಶಿ, ವಿ ಸೋಮಣ್ಣ ಅವರು ಅಂತಿಮ ನಮನ ಸಲ್ಲಿಸಿದರು.
-
ಅಂತ್ಯಕ್ರಿಯೆ ಸ್ಥಳ ತಲುಪಿದ ಚೆನ್ನಮ್ಮ ಪಾರ್ಥಿವ ಶರೀರ
ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಮಾವಿನಕೆರೆ ಬೆಟ್ಟದ ತಪ್ಪಲಿನ ಜಮೀನಿನಲ್ಲಿ ಚೆನ್ನಮ್ಮನವರ ಅಂತ್ಯಕ್ರಿಯೆ ನಡೆಯಲಿದೆ. ಹೀಗಾಗಿ ಸಮಾದಿ ಸ್ಥಳಕ್ಕೆ ಕುಮಾರಸ್ವಾಮಿ ಸೇರಿದಂತೆ ಕುಟುಂಬಸ್ಥರು ಆಗಮಿಸಿದ್ದಾರೆ. ಇನ್ನು ಚೆನ್ನಮ್ಮ ಪಾರ್ಥಿವ ಶರೀರ ಅಂತ್ಯಕ್ರಿಯೆ ಸ್ಥಳ ತಲುಪಿದ್ದು,ಇನ್ನೇನು ಕೆಲವೇ ಕ್ಷಣಗಳಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.
-
ಸಿಎಂ ಕಾರ್ಯದರ್ಶಿಯಾಗಿ ನಕುಲ್ ಎಸ್ ಎಸ್ ನೇಮಕ
ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ನಕುಲ್ ಎಸ್ ಎಸ್ ನೇಮಕ ಮಾಡಲಾಗಿದೆ. ಇದರೊಂದಿಗೆ ರಾಜೇಂದ್ರ ಚೋಳನ್ ಸಿಎಂ ಕಾರ್ಯದರ್ಶಿ ಸ್ಥಾನದ ಹೆಚ್ಚುವರಿ ಜವಾಬ್ದಾರಿಯಿಂದ ಬಿಡುಗಡೆ ಮಾಡಲಾಗಿದೆ. ಇನ್ನು ಡಾ.ರಾಮ್ ಪ್ರಸಾತ್ ಮನೋಹರ್ ಅವರಿಗೆ ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿ ವಹಿಸಲಾಗಿದೆ.
-
ಸಮಾದಿ ಸ್ಥಳಕ್ಕೆ ಕುಮಾರಸ್ವಾಮಿ ಆಗಮನ
ಚೆನ್ನಮ್ಮ ದೇವೇಗೌಡರ ಅಂತ್ಯಕ್ರಿಯೆ ಪ್ರಕ್ರಿಯೆಗಳು ಆರಂಭವಾಗಿದ್ದು, ಸ್ವಾಮೀಜಿಗಳು ಪೂಜೆ ಪುನಸ್ಕಾರಗಳನ್ನು ಕೈಗೊಂಡಿದ್ದಾರೆ. ಹೀಗಾಗಿ ಸಮಾದಿ ಸ್ಥಳಕ್ಕೆ ಹೆಚ್ಡಿ ಕುಮಾರಸ್ವಾಮಿ ಆಗಮಿಸಿದ್ದು, ಇನ್ನೇನು ಕೆಲವೇ ಕ್ಷಣಗಳಲ್ಲಿ ಚೆನ್ನಮ್ಮನ ಅಂತ್ಯಕ್ರಿಯೆ ನೆರವೇರಲಿದೆ.
-
ರಾಜೀವ್ ಚೌಕ್ ಸೇರಿ ಪ್ರಮುಖ ಮೆಟ್ರೋ ನಿಲ್ದಾಣಗಳು ಬಂದ್
ಪ್ರತಿಭಟನೆಗಳ ತೀವ್ರತೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯ ರಾಜೀವ್ ಚೌಕ್ ಸೇರಿದಂತೆ ಹಲವು ಪ್ರಮುಖ ಮೆಟ್ರೋ ನಿಲ್ದಾಣಗಳನ್ನು ಬಂದ್ ಮಾಡಲಾಗಿದೆ. ಮೆಟ್ರೋ ನಿಲ್ದಾಣಗಳ ಒಳಗೆ ಪ್ರತಿಭಟನಾಕಾರರು ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದ್ದರೂ, ಆಕ್ರೋಶಗೊಂಡ ನೂರಾರು ವಿದ್ಯಾರ್ಥಿಗಳು ಮೆಟ್ರೋ ನಿಲ್ದಾಣದ ಗೇಟ್‌ಗಳನ್ನು ಜಿಗಿದು ಒಳನುಗ್ಗಿದ್ದಾರೆ. ನಿಲ್ದಾಣದ ಒಳಗೆ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಾ ಆಕ್ರೋಶ ಹೊರಹಾಕುತ್ತಿರುವ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.
-
ಇರಾನ್‌ನಲ್ಲಿ ಸುನ್ನಿ ಧರ್ಮಗುರುವಿನ ಬರ್ಬರ ಹತ್ಯೆ
ಇರಾನ್‌ನ ಆಗ್ನೇಯ ಭಾಗದಲ್ಲಿ ಪ್ರಭಾವಿ ಸುನ್ನಿ ಧರ್ಮಗುರುವೊಬ್ಬರನ್ನು ಗುಂಡಿಕ್ಕಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಬೈಕ್‌ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದು, ಹತ್ಯೆಯ ಬೆನ್ನಲ್ಲೇ ಇರಾನ್‌ನ ಆಗ್ನೇಯ ಪ್ರಾಂತ್ಯದಲ್ಲಿ ತೀವ್ರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಘಟನಾ ಸ್ಥಳಕ್ಕೆ ಧಾವಿಸಿರುವ ಭದ್ರತಾ ಪಡೆಗಳು ಹಂತಕರ ಪತ್ತೆಗಾಗಿ ತೀವ್ರ ಜಾಲ ಬೀಸಿವೆ.
-
ಚೆನ್ನಮ್ಮ ಅಂತ್ಯಕ್ರಿಯೆ ಆರಂಭ
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಪತ್ನಿ ಚೆನ್ನಮ್ಮ ಅವರ ಅಂತಿಮ ಸಂಸ್ಕಾರದ ವಿಧಿವಿಧಾನಗಳು ಕಣ್ಣನ್ ಸ್ವಾಮಿ ನೇತೃತ್ವದಲ್ಲಿ ಆರಂಭವಾಗಿವೆ. ಸಮಾಧಿ ಸ್ಥಳದಲ್ಲಿ ಮಂತ್ರಘೋಷಗಳು ಮೊಳಗುತ್ತಿದ್ದು, ಅಂತಿಮ ಕ್ರಿಯೆಯಲ್ಲಿ ಭಾಗಿಯಾಗಲು ಬಸವರಾಜ ಬೊಮ್ಮಾಯಿ, ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಹಾಗೂ ಸ್ವಾಮೀಜಿಗಳು ಆಗಮಿಸಿದ್ದಾರೆ.
-
ಎಬೋಲಾ ಆತಂಕ: ರಾಜ್ಯದಲ್ಲಿ ಹೈ ಅಲರ್ಟ್, ಸಾಂಕ್ರಾಮಿಕ ರೋಗ ತಡೆಗೆ ಶಾಸಕರ ಸಮಿತಿ ರಚನೆ!
ಆಫ್ರಿಕಾ ದೇಶಗಳಲ್ಲಿ ಎಬೋಲಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ. ಆರೋಗ್ಯಸೌಧದಲ್ಲಿ ನಡೆದ ಸಭೆಯ ಬಳಿಕ ಮಾತನಾಡಿದ ಅವರು, ಸಾಂಕ್ರಾಮಿಕ ರೋಗ ತಡೆಗಟ್ಟಲು ಶಾಸಕರ ಸಮಿತಿ ರಚಿಸಲಾಗುವುದು ಹಾಗೂ ಆಫ್ರಿಕಾ, ಕಾಂಗೋ, ಉಗಾಂಡದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯ ಹೆಲ್ತ್ ಸ್ಕ್ರೀನಿಂಗ್ ನಡೆಸಲಾಗುವುದು ಎಂದರು.
-
ಮುಂಗಾರು ಅಧಿವೇಶನ ಆರಂಭದಲ್ಲೇ ಹೈಡ್ರಾಮಾ!
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ನೀಟ್ ಪೇಪರ್ ಲೀಕ್ ಹಾಗೂ ಅಯೋಧ್ಯೆ ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣಗಳ ಚರ್ಚೆಗೆ ಆಗ್ರಹಿಸಿ ವಿಪಕ್ಷಗಳು ಭಾರಿ ಗದ್ದಲ ಸೃಷ್ಟಿಸಿವೆ. ರಾಜ್ಯಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಮೇಲಿನ ದೆಹಲಿ ಪೊಲೀಸರ ಲಾಠಿಚಾರ್ಜ್ ಅನ್ನು ತೀವ್ರವಾಗಿ ಖಂಡಿಸಿದರು. ವಿಪಕ್ಷಗಳ ತೀವ್ರ ಪ್ರತಿಭಟನೆ ಹಾಗೂ ಗದ್ದಲದ ಹಿನ್ನೆಲೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸದನಗಳ ಕಲಾಪಗಳನ್ನು ಮುಂದೂಡಲಾಯಿತು. ಮತ್ತಷ್ಟು ಓದಿ
-
ಫಿಫಾ ಫೈನಲ್ ವೀಕ್ಷಿಸಿದ ಸಿಎಂ ಶಿವಕುಮಾರ್
ಸಿಎಂ ಡಿ.ಕೆ. ಶಿವಕುಮಾರ್ ಯುವಕರೊಂದಿಗೆ ಫಿಫಾ ಫೈನಲ್ ವೀಕ್ಷಿಸಿ, ಕ್ರೀಡೆಗೆ ಉತ್ತೇಜನ ನೀಡಲು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಜೋಡೋ ಯುವಕರ ಸಂಘ’ ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಎನ್.ಎ. ಹ್ಯಾರಿಸ್ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 10,000 ಯುವಕರ ಕ್ರೀಡಾ ಬೆಳವಣಿಗೆಗೆ ಬೃಹತ್ ಅನುದಾನ ಮೀಸಲಿಟ್ಟಿರುವುದಾಗಿ ತಿಳಿಸಿದರು. ಮತ್ತಷ್ಟು ಓದಿ
-
ಕೈಕೊಟ್ಟ ಮುಂಗಾರು: ಮನನೊಂದು ಮೆಕ್ಕೆಜೋಳ ಬೆಳೆ ನಾಶ ಮಾಡಿದ ವಿಜಯನಗರದ ರೈತ!
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಬಿತ್ತನೆ ಮಾಡಿದ್ದ ಮೆಕ್ಕೆಜೋಳ ಬೆಳೆ ಒಣಗಿ ಹೋಗಿದ್ದು, ಇದರಿಂದ ಮನನೊಂದ ರೈತನೊಬ್ಬ ತನ್ನ ಕೈಯಾರೆ ಬೆಳೆಯನ್ನು ನಾಶ ಮಾಡಿರುವ ಆಘಾತಕಾರಿ ಘಟನೆ ಹೂವಿನಹಡಗಲಿ ತಾಲೂಕಿನ ಹೊಳಗುಂದಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಮೈಲಾರಿ ಎಂಬ ರೈತ ಜಮೀನಿನಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿ ಮಳೆಗಾಗಿ ಕಾದು ಕುಳಿತಿದ್ದರು. ಆದರೆ ತೀವ್ರ ಮಳೆ ಕೊರತೆಯಿಂದಾಗಿ ಬೆಳೆ ಸಂಪೂರ್ಣ ಒಣಗಿ ಹೋಗಿದೆ. ಇದರಿಂದ ಕಂಗಾಲಾದ ರೈತ, ಒಣಗಿದ ಬೆಳೆಯನ್ನು ತಾನೇ ನಾಶಪಡಿಸಿದ್ದಾರೆ. ಮಳೆ ಇಲ್ಲದೆ ಬೆಳೆ ನಾಶವಾಗುತ್ತಿರುವ ದೃಶ್ಯಗಳು ತಾಲೂಕಿನಾದ್ಯಂತ ಕಂಡುಬರುತ್ತಿದ್ದು, ಸರ್ಕಾರ ತಕ್ಷಣವೇ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ, ಸೂಕ್ತ ಬೆಳೆ ಹಾನಿ ಪರಿಹಾರ ನೀಡಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
-
ಸೋನಂ ವಾಂಗ್ಚುಕ್ ಸತ್ಯಾಗ್ರಹಕ್ಕೆ ಬೆಂಬಲ: ಧಾರವಾಡದಲ್ಲಿ ಭಾರಿ ಪ್ರತಿಭಟನೆ!
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಸೋನಂ ವಾಂಗ್ಚುಕ್ ಅವರಿಗೆ ಧಾರವಾಡದಲ್ಲಿ ಬೆಂಬಲ ವ್ಯಕ್ತವಾಗಿದೆ. ವಿವಿಧ ಸಂಘಟನೆಗಳ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
-
ಜಾಗತಿಕ ಸವಾಲುಗಳ ನಡುವೆಯೂ ಶೇ 7.7 ಆರ್ಥಿಕ ಪ್ರಗತಿ: ಪ್ರಧಾನಿ ಮೋದಿ ಶ್ಲಾಘನೆ!
ಸಂಸತ್ತಿನ ಮುಂಗಾರು ಅಧಿವೇಶನ ಆರಂಭಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪಶ್ಚಿಮ ಏಷ್ಯಾದ ಸಂಘರ್ಷ ಸೇರಿದಂತೆ ಜಾಗತಿಕ ಸವಾಲುಗಳ ನಡುವೆಯೂ ಭಾರತ ಶೇಕಡಾ 7.7 ರಷ್ಟು ಬಲಿಷ್ಠ ಆರ್ಥಿಕ ಬೆಳವಣಿಗೆ ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದಿದ್ದಾರೆ. ಇದೇ ವೇಳೆ ದೇಶದ ಭದ್ರತೆ ಹಾಗೂ ಇತ್ತೀಚೆಗೆ ಐತಿಹಾಸಿಕ ರಾಕೆಟ್ ಉಡಾವಣೆ ಯಶಸ್ಸು ಕಂಡ ಖಾಸಗಿ ಬಾಹ್ಯಾಕಾಶ ಸಂಸ್ಥೆ ‘ಸ್ಕೈರೂಟ್’ ಸಾಧನೆಯನ್ನು ಪ್ರಧಾನಿ ಮುಕ್ತಕಂಠದಿಂದ ಶ್ಲಾಘಿಸಿದರು. ವೀಡಿಯೋ ನೋಡಿ
-
ದೆಹಲಿಯಲ್ಲಿ ‘ಚಲೋ ಸಂಸದ್’ ಪ್ರತಿಭಟನೆ ವೇಳೆ ಭಾರಿ ಘರ್ಷಣೆ: ಪೊಲೀಸರಿಂದ ಲಾಠಿ ಪ್ರಹಾರ!
ಸಂಸತ್ತಿನ ಮುಂಗಾರು ಅಧಿವೇಶನದ ಮೊದಲ ದಿನವೇ ನೀಟ್ ಅಕ್ರಮ ಖಂಡಿಸಿ ಹಾಗೂ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ CJP ಹಮ್ಮಿಕೊಂಡಿದ್ದ “ಚಲೋ ಸಂಸದ್” ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದೆ. ಜಂತರ್ ಮಂತರ್‌ನಿಂದ ಸಂಸತ್ತಿನತ್ತ ಮುನ್ನುಗ್ಗುತ್ತಿದ್ದ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾಗ ಭಾರಿ ಘರ್ಷಣೆ ಸಂಭವಿಸಿದ್ದು, ನಿಷೇಧಾಜ್ಞೆ ಉಲ್ಲಂಘಿಸಿದವರ ವಿರುದ್ಧ ಕಠಿಣ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ. ವೀಡಿಯೋ ನೋಡಿ
-
ಚಲಿಸುವ ಸರ್ಕಾರಿ ಬಸ್‌ನಲ್ಲೇ ಹೃದಯಾಘಾತ: ಧಾರವಾಡದ ಶಿಕ್ಷಕ ದುರ್ಮರಣ!
ಕಲಬುರಗಿಯಿಂದ ಧಾರವಾಡಕ್ಕೆ ಪ್ರಯಾಣಿಸುತ್ತಿದ್ದ ಸಾರಿಗೆ ಬಸ್‌ನಲ್ಲಿ ಪ್ರಯಾಣಿಕರೊಬ್ಬರಿಗೆ ದಿಢೀರ್ ಹೃದಯಾಘಾತ ಸಂಭವಿಸಿದೆ. ಮೃತರನ್ನು ಧಾರವಾಡ ಮೂಲದ ಶಿಕ್ಷಕ ಸತೀಶ್ ಮರಬ್ಬ ಎಂದು ಗುರುತಿಸಲಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ.
-
ಅದಿರು ಲಾರಿಗಳ ದರ್ಬಾರ್‌ಗೆ ಬ್ರೇಕ್: 32 ಮೈನಿಂಗ್ ಲಾರಿಗಳು ಸೀಜ್!
ಸಂಡೂರು ತಾಲೂಕಿನ ಸೀನಪ್ಪ ಕ್ಯಾಂಪ್‌ನಿಂದ NMDC ಸಿ ಬ್ಲಾಕ್ ವರೆಗಿನ ಮಾರ್ಗದಲ್ಲಿ ನಿಯಮ ಮೀರಿ ಸಂಚರಿಸುತ್ತಾ ನಿರಂತರ ಟ್ರಾಫಿಕ್ ಜಾಮ್ ಹಾಗೂ ಸರಣಿ ಅಪಘಾತಗಳಿಗೆ ಕಾರಣವಾಗಿದ್ದ 32 ಅದಿರು ಲಾರಿಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ನಿತ್ಯ ಸಾರ್ವಜನಿಕರು ಹಾಗೂ ನಂದಿಹಳ್ಳಿ ಪಿಜಿ ಸೆಂಟರ್ ವಿದ್ಯಾರ್ಥಿಗಳಿಗೆ ಕಿರಿಕಿರಿ ಉಂಟುಮಾಡುತ್ತಿದ್ದ ಲಾರಿಗಳ ವಿರುದ್ಧ ಕಾರ್ಯಾಚರಣೆ ನಡೆಸಿರುವ ಸಂಡೂರು ಪೊಲೀಸರು, 42 ಚಾಲಕರು ಹಾಗೂ ಮಾಲೀಕರ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.
-
ಲೋಕಸಭೆ ಕಲಾಪ ಮಧ್ಯಾಹ್ನ 12 ಗಂಟೆಗೆ ಮುಂದೂಡಿಕೆ!
ಅಯೋಧ್ಯೆ ಶ್ರೀರಾಮ ಮಂದಿರದ ಹುಂಡಿ ಹಣ ಕಳ್ಳತನ ಹಾಗೂ ನೀಟ್-ಯುಜಿ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳ ಕುರಿತು ಚರ್ಚೆಗೆ ಆಗ್ರಹಿಸಿ ವಿರೋಧ ಪಕ್ಷದ ನಾಯಕರು ಸದನದಲ್ಲಿ ಭಾರಿ ಗದ್ದಲ ಸೃಷ್ಟಿಸಿದರು. ವಿಪಕ್ಷಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸ್ಪೀಕರ್ ಓಂ ಬಿರ್ಲಾ ಅವರು ಲೋಕಸಭೆ ಕಲಾಪವನ್ನು ಮಧ್ಯಾಹ್ನ 12 ಗಂಟೆಗೆ ಮುಂದೂಡಿದರು.
-
ಚೆನ್ನಮ್ಮ ಪಾರ್ಥಿವ ಶರೀರಕ್ಕೆ ಪೂಜೆ ಮುಕ್ತಾಯ: ಕಂಬನಿ ಮಿಡಿದ ರೇವಣ್ಣ ಕುಟುಂಬ!
ಹೊಳೆನರಸೀಪುರದಲ್ಲಿರುವ ಹೆಚ್.ಡಿ.ರೇವಣ್ಣ ನಿವಾಸದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಪಾರ್ಥಿವ ಶರೀರಕ್ಕೆ ರಾಜಕೀಯ ಗಣ್ಯರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಪೂಜಾ ಕಾರ್ಯಗಳು ಮುಕ್ತಾಯಗೊಂಡಿವೆ. ರೇವಣ್ಣ ಸೇರಿದಂತೆ ಮಕ್ಕಳು ಮತ್ತು ಮೊಮ್ಮಕ್ಕಳು ಅಂತಿಮ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿ ಕಣ್ಣೀರಿಟ್ಟರು.
-
ಕಿಚ್ಚ ಸುದೀಪ್ ಗ್ಯಾರೇಜ್‌ಗೆ ಹೊಸ ಇವಿ ಎಂಟ್ರಿ: ಮಹೀಂದ್ರಾ ‘BE 6’ ಕಾರು ಖರೀದಿ!
ಸ್ಯಾಂಡಲ್‌ವುಡ್ ಬಾದ್‌ಶಾ ಕಿಚ್ಚ ಸುದೀಪ್ ತಮ್ಮ ಐಷಾರಾಮಿ ಕಾರುಗಳ ಸಂಗ್ರಹಕ್ಕೆ ಹೊಸ ಎಲೆಕ್ಟ್ರಿಕ್ ಕಾರನ್ನು ಸೇರ್ಪಡೆಗೊಳಿಸಿದ್ದಾರೆ. ಮಹೀಂದ್ರಾ ಕಂಪನಿಯ ಅತ್ಯಾಧುನಿಕ ‘BE 6’ ಮಾದರಿಯ ಇವಿ ಕಾರನ್ನು ಅವರು ಅದ್ದೂರಿಯಾಗಿ ಮನೆಗೆ ತಂದಿದ್ದು, ಡೆಲಿವರಿ ಪಡೆಯುತ್ತಿರುವ ಈ ವಿಶೇಷ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
-
ಜೈಲಿನಿಂದಲೇ ಅಜ್ಜಿ ಅಂತ್ಯಕ್ರಿಯೆ ವೀಕ್ಷಣೆ: ಪೆರೋಲ್‌ಗೆ ಅರ್ಜಿ ಸಲ್ಲಿಸದ ಪ್ರಜ್ವಲ್!
ಅತ್ಯಾಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಪ್ರಜ್ವಲ್ ರೇವಣ್ಣ, ಅಜ್ಜಿ ಚೆನ್ನಮ್ಮ ಅವರ ಅಂತ್ಯಕ್ರಿಯೆಗೆ ಪೆರೋಲ್‌ಗೆ ಅರ್ಜಿ ಸಲ್ಲಿಸಿಲ್ಲ. ಇತರ ಪ್ರಕರಣಗಳು ಟ್ರಯಲ್‌ನಲ್ಲಿ ಇರುವುದರಿಂದ ಪೆರೋಲ್ ಸಿಗುವುದು ಕಷ್ಟವಾಗಿದ್ದು, ಜೈಲು ಅಧಿಕಾರಿಗಳಿಗೆ ಮನವಿ ಮಾಡಿದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ಅಂತ್ಯಕ್ರಿಯೆ ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಜೈಲಾಧಿಕಾರಿ ಅನ್ಶು ಕುಮಾರ್ ತಿಳಿಸಿದ್ದಾರೆ.
-
ಚೆನ್ನಮ್ಮ ಅಂತ್ಯಕ್ರಿಯೆ ಮಾರ್ಗಸೂಚಿ: ಪಡುವಲಹಿಪ್ಪೆಯ ಜಮೀನಿನಲ್ಲಿ ಅಂತ್ಯಸಂಸ್ಕಾರಕ್ಕೆ ನಿರ್ಧಾರ
ಮಾಜಿ ಪ್ರಧಾನಿ ದೇವೇಗೌಡರ ಪತ್ನಿ ಚೆನ್ನಮ್ಮ ಅವರ ಪಾರ್ಥಿವ ಶರೀರವನ್ನು ಹೊಳೆನರಸೀಪುರದ ರೇವಣ್ಣ ನಿವಾಸದಿಂದ ವಿವಿಧ ದೇವಾಲಯಗಳು ಹಾಗೂ ಪಡುವಲಹಿಪ್ಪೆಯ ಹಳೆಯ ಮನೆಗೆ ಕೊಂಡೊಯ್ದು ಪೂಜೆ ಸಲ್ಲಿಸಲಾಗುತ್ತದೆ. 1962ರಲ್ಲಿ ತಾಯಿಯ ಒಡವೆ ಮಾರಿ ಖರೀದಿ ಮಾಡಿದ್ದ, ಅಮ್ಮನಿಗೆ ಅಚ್ಚುಮೆಚ್ಚಾಗಿದ್ದ ಪಡುವಲಹಿಪ್ಪೆ ಗ್ರಾಮದ ಜಮೀನಿನ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಹೆಚ್.ಡಿ.ರೇವಣ್ಣ ತಿಳಿಸಿದ್ದಾರೆ.
-
ಚೆನ್ನಮ್ಮ ಅಂತಿಮ ದರ್ಶನ ಮುಕ್ತಾಯ: ಹರದನಹಳ್ಳಿಗೆ ಪಾರ್ಥಿವ ಶರೀರ ರವಾನೆ
ಹೊಳೆನರಸೀಪುರದ ರೇವಣ್ಣ ನಿವಾಸದಲ್ಲಿ ಧಾರ್ಮಿಕ ವಿಧಿ-ವಿಧಾನಗಳ ಬಳಿಕ ಸಾರ್ವಜನಿಕ ಅಂತಿಮ ದರ್ಶನ ಮುಕ್ತಾಯಗೊಂಡಿದೆ. ನೂರಾರು ಜನರು ನೆರೆದಿರುವಾಗಲೇ ಪಾರ್ಥಿವ ಶರೀರವನ್ನು ಪ್ರಮುಖ ಬೀದಿಗಳ ಮೂಲಕ ಹರದನಹಳ್ಳಿಗೆ ರವಾನಿಸಲಾಗಿದ್ದು, ಅಂತಿಮ ದರ್ಶನಕ್ಕೆ ಅಲ್ಲಿಗೇ ಬರುವಂತೆ ಕುಟುಂಬಸ್ಥರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
-
ಸ್ಕೂಟರ್ ಡೂಮ್‌ನಲ್ಲಿದ್ದ ನಾಗರಹಾವಿನ ಸುರಕ್ಷಿತ ರಕ್ಷಣೆ!
ತಾಲ್ಲೂಕಿನ ಚಿಕ್ಕಹಸಾಳ ಗ್ರಾಮದ ಮುನಿಕೃಷ್ಣ ಎಂಬುವರ ಸ್ಕೂಟರ್ ಡೂಮ್ (ಹೆಡ್‌ಲೈಟ್ ಭಾಗ) ಒಳಗಡೆ ನಾಗರಹಾವೊಂದು ಸೇರಿಕೊಂಡಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಪ್ರಸಿದ್ಧ ಉರಗರಕ್ಷಕ ನಾಗರಾಜ್ ಅವರು ಸ್ಕೂಟರ್‌ನಲ್ಲಿದ್ದ ಹಾವನ್ನು ಅತ್ಯಂತ ಜಾಣ್ಮೆಯಿಂದ ರಕ್ಷಿಸಿ, ನಂತರ ಅರಣ್ಯ ಪ್ರದೇಶದ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
-
Hubballi Rain Update: ಸಂಶಿ ಗ್ರಾಮದಲ್ಲಿ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ!
ಸಮರ್ಪಕ ಮಳೆಯಾಗದೆ ಕಂಗಾಲಾಗಿರುವ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಸಂಶಿ ಗ್ರಾಮಸ್ಥರು ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ. ಗ್ರಾಮದ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ರೈತರು ವಿಶೇಷ ಪೂಜೆ ನೆರವೇರಿಸಿದ್ದು, ನಂತರ ಗ್ರಾಮದಾದ್ಯಂತ ದೇವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಸಿ ವರುಣದೇವನಿಗಾಗಿ ಜಂಟಿ ಪ್ರಾರ್ಥನೆ ಸಲ್ಲಿಸಿದರು.
Published On - Jul 20,2026 8:55 AM




