Breaking News Today Live: ಪರಿಷತ್ 5 ಸ್ಥಾನ ಗೆಲ್ಲಲು ಕಾಂಗ್ರೆಸ್ ಬಿಗ್ ಪ್ಲಾನ್, ಡಿಕೆಶಿ ತಂತ್ರಗಾರಿಕೆ ಹೇಗಿದೆ ಗೊತ್ತಾ?
Karnataka News Today Live Updates: ವಿಧಾನಪರಿಷತ್ ಚುನಾವಣೆ ಕಣ, ಲಿಯೋನೆಲ್ ಮೆಸ್ಸಿ ಹ್ಯಾಟ್ರಿಕ್ ದಾಖಲೆ, ನಟ ದೊಡ್ಡಣ್ಣ ಸಾವಿನ ಸುಳ್ಳು ಸುದ್ದಿಗೆ ಸೈಬರ್ ಪೊಲೀಸ್ ಕೇಸ್ ಮತ್ತು ಟಿಎಂಸಿ ರಾಜಕೀಯ ಬಿಕ್ಕಟ್ಟು ಸೇರಿದಂತೆ ದೇಶ-ವಿದೇಶ, ಸಿನಿಮಾ, ಕ್ರೀಡೆಯ ಕ್ಷಣಕ್ಷಣದ ಲೈವ್ ಅಪ್ಡೇಟ್ಸ್ ಇಲ್ಲಿದೆ.

ರಾಜ್ಯ ರಾಜಕಾರಣದ ದಿಕ್ಕನ್ನೇ ಬದಲಿಸಬಲ್ಲ ವಿಧಾನಪರಿಷತ್ ಚುನಾವಣೆಯ ಮಹಾ ಕಣಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಜೂನ್ 18ರ ಮಹಾಸಮರಕ್ಕೆ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಭರ್ಜರಿ ಲೆಕ್ಕಾಚಾರ ನಡೆಸಿವೆ. ಇತ್ತ, ಅಂತರರಾಷ್ಟ್ರೀಯ ಫುಟ್‌ಬಾಲ್ ಅಂಗಳದಲ್ಲಿ ಅರ್ಜೆಂಟೀನಾದ ಮಾಂತ್ರಿಕ ಲಿಯೋನೆಲ್ ಮೆಸ್ಸಿ ಹ್ಯಾಟ್ರಿಕ್ ಗೋಲುಗಳ ಭರ್ಜರಿ ದಾಖಲೆಯೊಂದಿಗೆ ಹೊಸ ಇತಿಹಾಸ ಬರೆದಿದ್ದಾರೆ. ಇನ್ನು ಸ್ಯಾಂಡಲ್‌ವುಡ್ ಹಿರಿಯ ನಟ ದೊಡ್ಡಣ್ಣ ಅವರ ನಿಧನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳ ವಿರುದ್ಧ ಸೈಬರ್ ಕ್ರೈಮ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಬಿಸಿ ಮುಟ್ಟಿದೆ. ರಾಷ್ಟ್ರೀಯ ರಾಜಕಾರಣದಲ್ಲಿ ತೃಣಮೂಲ ಕಾಂಗ್ರೆಸ್‌ನ (TMC) ಬಿಕ್ಕಟ್ಟು ತಾರಕಕ್ಕೇರಿದ್ದು, ಬಂಡಾಯ ಸಂಸದರು ವಿಲೀನಗೊಳ್ಳಲಿರುವ NCPI ಪಕ್ಷಕ್ಕೆ ಜ್ಯೋತಿಪ್ರಕಾಶ್ ಚಟರ್ಜಿ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.
LIVE NEWS & UPDATES
-
ಬಿಜೆಪಿ ಶಾಸಕರಿಗೆ ಖಡ್ ಸೂಚನೆ
ನಾಳೆ (ಜೂನ್ 18) ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 29 ಮತ ನಿಗದಿ ಮಾಡಿದೆ. ಅಲ್ಲದೇ ಬಿಜೆಪಿ ತಮ್ಮ ಶಾಸಕರಿಗೆ ಖಡಕ್ ಸೂಚನೆ ನೀಡಲಾಗಿದೆ. ನಾಳೆ ಬೆಳಗ್ಗೆ 8.30ಕ್ಕೆ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಕಚೇರಿಗೆ ಬರುವಂತೆ ಬಿಜೆಪಿ ಶಾಸಕರಿಗೆ ಸೂಚನೆ ನೀಡಲಾಗಿದೆ. ಇನ್ನು ಬಿಜೆಪಿ ಚುನಾವಣಾ ಏಜೆಂಟ್ ಆಗಿ ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಕಾರ್ಯನಿರ್ವಹಿಸಲಿದ್ದಾರೆ.
-
ಬಿಜೆಪಿ-ಜೆಡಿಎಸ್ ನಾಯಕರ ಮಹತ್ವದ ಚರ್ಚೆ
ನಾಳೆ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ನಾಯಕರು, ಬಿಜೆಪಿಗರನ್ನು ಭೇಟಿ ಮಾಡಿ ಮಹತ್ವದ ಚರ್ಚೆ ಮಾಡಿದ್ದಾರೆ. ವಿಧಾನ ಪರಿಷತ್ ಜೆಡಿಎಸ್ ನಾಯಕ ಎಸ್.ಎಲ್. ಭೋಜೇಗೌಡ, ಜೆಡಿಎಸ್ ಅಭ್ಯರ್ಥಿ ಗೋವಿಂದರಾಜ್, ಸಂಸದ ಮಲ್ಲೇಶ್ ಬಾಬು ಮತ್ತು ಮಾಜಿ ಎಂಎಲ್ಸಿ ಚೌಡರೆಡ್ಡಿ ಅವರು ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಚುನಾವಣೆ ಸಂಬಂಧ ಮಹತ್ವದ ಚರ್ಚೆ ಮಾಡಿದ್ದಾರೆ.
-
-
ಆಟೋಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ 6 ಮಹಿಳೆಯರು ಸಾವು
ಉತ್ತರ ಪ್ರದೇಶದ ಬದೌನ್ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಆರು ಜನ ಮಹಿಳೆ ಸಾವನ್ನಪ್ಪಿದ್ದಾರೆ. ಬರೇಲಿ-ಮಥುರಾ ಹೆದ್ದಾರಿಯಲ್ಲಿ ಆಟೋಗೆ ಟ್ರ್ಯಾಕ್ಟರ್ ಡಿಕ್ಕಿಯಾಗಿ 6 ಮಹಿಳೆಯರು ಮೃತಪಟ್ಟಿದ್ದಾರೆ. ಮದುವೆಗೆ ಸಂಬಂಧಿಕರನ್ನ ಆಹ್ವಾನಿಸಲು ತೆರಳುವಾಗ ಈ ದುರ್ಘಟನೆ ಸಂಭವಿಸಿದೆ. ಪ್ರೇಮಾದೇವಿ(32), ಗಂಗಾಶ್ರೀ(32), ರಾಜಕುಮಾರಿ(50), ರೇವತಿ (80), ನಾರಾಯಣಿ(30), ಆರತಿ(30) ಮೃತರು
-
ಜೆಡಿಎಸ್ ಶಾಸಕರೂ ಸಹ ಹೋಟೆಲ್ಗೆ ಶಿಫ್ಟ್
ವಿಧಾನ ಪರಿಷತ್ ಚುನಾವಣೆ ನಾಳೆ ಅಂದರೆ ಜೂನ್ 18ರಂದು ನಡೆಯಲಿದ್ದು, ಆಡಳಿತಾರೂಢ ಕಾಂಗ್ರೆಸ್ ಶಾಸಕರು ರೆಸಾರ್ಟ್ ಸೇರಿಕೊಂಡಿದ್ದಾರೆ. ಪರಿಷತ್ ಕಣದಲ್ಲಿ ಏಳನೇ ಅಭ್ಯರ್ಥಿ ಅಖಾಡಕ್ಕಿಳಿಸಿರುವುದು ಮೇಲ್ಮನೆ ಚುನಾವಣೆ ರಂಗೇರಿದೆ. ಕಾಂಗ್ರೆಸ್ ಶಾಸಕರು ರೆಸಾರ್ಟ್ನಲ್ಲಿ ತಂಗಿದ್ದರೆ, ಇತ್ತ ಜೆಡಿಎಸ್ ಸಹ ತನ್ನ ಶಾಸಕರನ್ನು ಹೋಟೆಲ್ಗೆ ಕಳುಹಿಸಲು ಮುಂದಾಗಿದೆ. ಬೆಂಗಳೂರು ಗ್ರಾಮಾಂತರ ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ jw marriot ಹೋಟೆಲ್ ನಲ್ಲಿ ಜೆಡಿಎಸ್ ಶಾಸಕರಿಗೆ 16 ರೂಮ್ ಬುಕ್ ಮಾಡಲಾಗಿದ್ದು, ಈ ಹೋಟೆಲ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ಡಿ ಕುಮಾರಸ್ವಾಮಿ ಸಹ ಭೇಟಿ ನೀಡಲಿದ್ದಾರೆ. ಈ ವೇಳೆ ಶಾಸಕರ ಜತೆ ಮತದಾನದ ಬಗ್ಗೆ ಚರ್ಚೆ ಮಾಡಲಿದ್ದಾರೆ.
-
ವಿಧಾನಪರಿಷತ್ 5 ಸ್ಥಾನ ಗೆಲ್ಲಲು ಕಾಂಗ್ರೆಸ್ ಬಿಗ್ ಪ್ಲಾನ್
ಕಾಂಗ್ರೆಸ್ ತನ್ನ ಪಾಲಿನ ನಾಲ್ಕು ಸ್ಥಾನಗಳ ಜೊತೆ ಇನ್ನೊಂದು ಹೆಚ್ಚುವರಿ ಸ್ಥಾನವನ್ನು ಗೆಲ್ಲಲು ಕಾಂಗ್ರೆಸ್ ಕಸರತ್ತು ನಡೆಸಿದ್ದು, ಇದಕ್ಕೆ ಬೇಕಾದ ಎಲ್ಲಾ ಕಾರ್ಯತಂತ್ರಗಳನ್ನು ಮಾಡುತ್ತಿದೆ. ಕೈ ಶಾಸಕರು ನಾಳೆ (ಜೂನ್ 18) ನೇರವಾಗಿ ರೆಸಾರ್ಟ್ನಿಂದ ವಿಧಾನಸೌಧಕ್ಕೆ ಬಂದು ಮತದಾನ ಮಾಡಲಿದ್ದಾರೆ. ಇದಕ್ಕೆ ಐವರು ಅಭ್ಯರ್ಥಿಗಳಿಗೆ ಐದು ಪ್ರತ್ಯೇಕ ಬಸ್ ವ್ಯವಸ್ಥೆ ಮಾಡಲಾಗಿದೆ. ಇನ್ನು ಯಾವ ಅಭ್ಯರ್ಥಿ ಪರ ಯಾರು ಮತ ಚಲಾವಣೆ ಮಾಡಬೇಕು ಎಂದು ಶಾಸಕರ ವರ್ಗೀಕರಣ ಸಹ ಮಾಡಲಾಗಿದ್ದು, ವರ್ಗೀಕರಣದ ಪ್ರಕಾರವೇ ವಿಧಾನಸೌಧಕ್ಕೆ ಪ್ರತ್ಯೇಕ ಬಸ್ ನಲ್ಲಿ ತೆರಳಲು ಸೂಚನೆ ನೀಡಲಾಗಿದೆ. ಐವರು ಅಭ್ಯರ್ಥಿಗಳಲ್ಲಿ ಮೂರು ಅಭ್ಯರ್ಥಿಗಳಿಗೆ 28 ಮತಗಳು, ಇಬ್ಬರು ಅಭ್ಯರ್ಥಿಗಳಿಗೆ 29 ಮತ ಹಾಕಲು ಸದ್ಯಕ್ಕೆ ನಿರ್ಧರಿಸಲಾಗಿದೆ.ಯಾವುದೇ ಅಭ್ಯರ್ಥಿ ಸೋತರೆ, ಅಡ್ಡ ಮತದಾನ ಮಾಡಿದರೆ ಎಂದು ಸುಲಭವಾಗಿ ಪತ್ತೆ ಮಾಡಲು ಈ ವ್ಯವಸ್ಥೆ ಮಾಡಲಾಗಿದೆ.
-
-
ಬಿರನೂರಿನಲ್ಲಿ 20ಕ್ಕೂ ಹೆಚ್ಚು ಜನರು ಅಸ್ವಸ್ಥ
ಯಾದಗಿರಿ ಜಿಲ್ಲೆ ಶಹಾಪುರ ತಾಲೂಕಿನ ಬಿರನೂರಿನಲ್ಲಿ 20ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿರುವ ಘಟನೆ ನಡೆದಿದೆ. ಕಲುಷಿತ ನೀರು ಸೇವನೆಯಿಂದಾಗಿ ಬಿರನೂರು ಗ್ರಾಮದ 20ಕ್ಕೂ ಹೆಚ್ಚು ಜನರಿಗೆ ವಾಂತಿ ಬೇಧಿಯಿಂದ ಅಸ್ವಸ್ಥಗೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಗ್ರಾಮಕ್ಕೆ ಟಿಹೆಚ್ಒ ರಮೇಶ್ ಗುತ್ತೇದಾರ ಭೇಟಿ ನೀಡ ಪರಿಶೀಲನೆ ನಡೆಸಿದ್ದಾರೆ.
-
ನಾಳೆ ಬಳ್ಳಾರಿ ಜಿಲ್ಲೆ ಬಂದ್‌ಗೆ ಕರೆ
ಸರ್ಕಾರದ ವಿರುದ್ಧ ಬೀದಿಗಿಳಿಯಲು ಡತಿನಿ ಭೂ ಸಂತ್ರಸ್ತ ಹೋರಾಟ ಸಮಿತಿ ಸಜ್ಜಾಗಿದ್ದು, ನಾಳೆ (ಜೂನ್ 18) ಬಳ್ಳಾರಿ ಬಂದ್‌ಗೆ ಕರೆ ನೀಡಿದೆ. ಕೈಗಾರಿಕೆ ಹೆಸರಿನಲ್ಲಿ ರೈತರ ಭೂಮಿ ವಶಕ್ಕೆ ಪಡೆದು 15 ವರ್ಷ ಕಳೆದರೂ ಸಹಇನ್ನೂ ಸಿಗದ ಸೂಕ್ತ ಪರಿಹಾರ ಸಿಕ್ಕಿಲ್ಲ. ಹೀಗಾಗಿ ನ್ಯಾಯಕ್ಕಾಗಿ ನಾಳೆ ಬಳ್ಳಾರಿ ಜಿಲ್ಲೆ ಸ್ತಬ್ಧಗೊಳಿಸಲು ಹೋರಾಟಗಾರರರು ನಿರ್ಧರಿಸಿದ್ದಾರೆ.
-
ಅಫ್ಘಾನಿಸ್ತಾನ ವಿರುದ್ಧ ಶುಭ್ಮನ್ ಗಿಲ್ ಭರ್ಜರಿ ಶತಕ
ಅಫ್ಘಾನಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡದ ನಾಯಕ ಶುಭ್ಮನ್ ಗಿಲ್ ಭರ್ಜರಿ ಶತಕ ಸಿಡಿಸಿದ್ದಾರೆ. ಉತ್ತರ ಪ್ರದೇಶದ ಲಖನೌನಲ್ಲಿ ನಡೆಯುತ್ತಿರುವ 2ನೇ ಪಂದ್ಯದಲ್ಲಿ ಗಿಲ್ ಸೆಂಚುರಿ ಬಾರಿಸಿದ್ದು, ಈ ಮೂಲಕ ಏಕದಿನ ಪಂದ್ಯದಲ್ಲಿ 9ನೇ ಶತಕ ದಾಖಲಿಸಿದ್ದಾರೆ
-
ಕಂಡಕಂಡವರ ಅಶ್ಲೀಲ ಚಿತ್ರ ಶೇರ್ ಮಾಡಿದ್ರೆ FIR ಫಿಕ್ಸ್
ಬೇರೆಯವರ ಖಾಸಗಿ ಚಿತ್ರ ವೈರಲ್ ಮಾಡೋ ಮುನ್ನ ಇನ್ಮುಂದೆ ಹುಷಾರ್ ಆಗಿರಬೇಕು. ಯಾಕಂದ್ರೆ, ಕಂಡಕಂಡವರ ಅಶ್ಲೀಲ ಚಿತ್ರ ಶೇರ್ ಮಾಡಿದ್ರೆ ಎಫ್ಐಆರ್ ದಾಖಲಾಗುತ್ತೆ. ಹೌದು…ಬೇರೆಯವರ ಖಾಸಗಿ ಚಿತ್ರ ವೈರಲ್ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ. ಸಂತ್ರಸ್ತರು ಮೊದಲು ಖಾಸಗಿ ದೃಶ್ಯ ಚಿತ್ರೀಕರಣಕ್ಕೆ ಒಪ್ಪಿದ್ದರು ಎಂದ ಮಾತ್ರಕ್ಕೆ ಇಂತ ಕಾರಣ ಕೊಟ್ಟು ದೂರು ಸ್ವೀಕರಿಸದೇ ಇರಬಾರದು. ಚಿತ್ರೀಕರಣದ ಒಪ್ಪಿಗೆಗೂ ಮತ್ತು ಹಂಚಿಕೆ ಅಥವಾ ಪ್ರಸಾರದ ಒಪ್ಪಿಗೆಗೂ ವ್ಯತ್ಯಾಸವಿದೆ. ಇದು ಕಾನೂನು ಪ್ರಕಾರ ಸಂಜ್ಞೆಯ ಅಪರಾಧವಾಗುತ್ತದೆ ಎಂದಿದ್ದಾರೆ. ಮತ್ತಷ್ಟು ಓದಿ
-
ಸಂಶೋಧನಾ ವಿದ್ಯಾರ್ಥಿಗೆ ಕಿರುಕುಳ: ಕವಿವಿ ಪ್ರಾಧ್ಯಾಪಕ ಅಮಾನತು
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ (ಕವಿವಿ) ಸಸ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ದೇವರಾಜನ್ ತಂಗುದೊರೈ ಅವರನ್ನು ಅಮಾನತುಗೊಳಿಸಲಾಗಿದೆ. ಸಂಶೋಧನಾ ವಿದ್ಯಾರ್ಥಿಗೆ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯದ ಕುಲಸಚಿವರು ಪ್ರಾಧ್ಯಾಪಕನನ್ನು ಅಮಾನತುಗೊಳಿಸಿ ಅಧಿಕೃತ ಆದೇಶ ಹೊರಡಿಸಿದ್ದಾರೆ.
-
ಕೇರಳದ ‘ಪ್ರಿಯದರ್ಶಿನಿ’ ಯೋಜನೆ: ಮಂಗಳೂರಿನಲ್ಲಿ ಸಿಗಲಿದ್ದಾರೆ ಉದ್ಯೋಗಿಗಳು!
ಕೇರಳ ಸರ್ಕಾರದ ಮಹಿಳೆಯರ ‘ಪ್ರಿಯದರ್ಶಿನಿ’ ಉಚಿತ ಬಸ್ ಪ್ರಯಾಣ ಯೋಜನೆ ಗಡಿ ದಾಟಿ ವಿಸ್ತರಣೆಯಾಗುತ್ತಿರುವುದರಿಂದ ಮಂಗಳೂರಿನ ಉದ್ಯಮಗಳಿಗೆ ವರದಾನವಾಗಲಿದೆ. ಕಾಸರಗೋಡು ಭಾಗದ ಸಾವಿರಾರು ಮಹಿಳೆಯರು ಇನ್ಮುಂದೆ ಉಚಿತವಾಗಿ ಮಂಗಳೂರಿಗೆ ಬಂದು ಕೆಲಸ ಮಾಡಲು ಸಾಧ್ಯವಾಗಲಿದ್ದು, ಇದರಿಂದ ನಗರದ ಚಿಲ್ಲರೆ ವ್ಯಾಪಾರ ಮತ್ತು ಆರೋಗ್ಯ ವಲಯಗಳಲ್ಲಿ ದೀರ್ಘಕಾಲದಿಂದ ಇದ್ದ ಕಾರ್ಮಿಕರ ಕೊರತೆ ಶೀಘ್ರದಲ್ಲೇ ನೀಗುವ ನಿರೀಕ್ಷೆಯಿದೆ. ಮತ್ತಷ್ಟು ಓದಿ.
-
ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದ ಜಮೀರ್
ಡಿಕೆ ಸುರೇಶ್ ಭೇಟಿ ಬಳಿಕ ಮಾತನಾಡಿದ ಮಾಜಿ ಸಚಿವ ಜಮೀರ್ ಅಹ್ಮದ್, ನಮ್ಮದು ಹೈಕಮಾಂಡ್ ಪಕ್ಷ. ಮೊದಲ ಪಟ್ಟಿಯಲ್ಲಿ ಸಚಿವ ಸ್ಥಾನ ಸಿಗದಿದ್ದರೂ, ಎರಡನೇ ಪಟ್ಟಿಯಲ್ಲಿ ಸಿಗುವ ವಿಶ್ವಾಸವಿದೆ. ಬೆಂಬಲಿಗರ ಪ್ರತಿಭಟನೆ ಸಹಜ, ನನಗೇನೂ ಬೇಸರವಿಲ್ಲ ಎಂದರು. ಇದೇ ವೇಳೆ, ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ನ ಐದೂ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
-
ಬಾಲಕನ ಮೇಲೆ ರಾಟ್‌ವೀಲರ್ ನಾಯಿ ದಾಳಿ!
ಬೆಂಗಳೂರಿನ ಮಹದೇವಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕನೊಬ್ಬನ ಮೇಲೆ ರಾಟ್‌ವೀಲರ್ (Rottweiler) ತಳಿಯ ನಾಯಿ ಏಕಾಏಕಿ ದಾಳಿ ನಡೆಸಿದೆ. ಸೋನಿ ಮೌನ್ ಎಂಬುವರ ಮಗ ಸೈಕಲ್ ತೆಗೆದುಕೊಳ್ಳುತ್ತಿದ್ದಾಗ, ಶ್ಯಾಮ್ ಎಂಬುವರು ಸಾಕಿದ್ದ ನಾಯಿ ಈ ಕೃತ್ಯ ಎಸಗಿದೆ. ಈ ಬಗ್ಗೆ ನಾಯಿ ಮಾಲೀಕ ಶ್ಯಾಮ್‌ನನ್ನು ಪ್ರಶ್ನಿಸಿದರೆ, “ಏನು ಮಾಡಿಕೊಳ್ಳುತ್ತೀರೋ ಮಾಡಿಕೊಳ್ಳಿ” ಎಂದು ಉಡಾಫೆ ಉತ್ತರ ನೀಡಿದ್ದಾನೆ. ಸದ್ಯ ಈ ಘಟನೆಗೆ ಸಂಬಂಧಿಸಿದಂತೆ ಮಹದೇವಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಗುಜರಾತ್‌ನಲ್ಲಿ ಭೀಕರ ರಸ್ತೆ ಅಪಘಾತ: ಮಗು ಸೇರಿ 6 ಸಾವು, 30 ಜನರಿಗೆ ಗಾಯ
ಗುಜರಾತ್‌ನ ವಡೋದರದ ಕೋಟಂಬಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್ ಒಂದಕ್ಕೆ ಖಾಸಗಿ ಸ್ಲೀಪರ್ ಕೋಚ್ ಬಸ್ ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಮಗು ಸೇರಿದಂತೆ ಆರು ಜನರು ದುರ್ಮರಣ ಹೊಂದಿದ್ದು, ೩೦ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಈ ಐಷಾರಾಮಿ ಬಸ್ ರಾಜಸ್ಥಾನದಿಂದ ಸೂರತ್‌ಗೆ ಪ್ರಯಾಣಿಸುತ್ತಿದ್ದಾಗ ಈ ದುರಂತ ಸಂಭವಿಸಿದೆ.
-
ಹೈದರಾಬಾದ್ ರಸ್ತೆಗೆ ಡೊನಾಲ್ಡ್ ಟ್ರಂಪ್ ಹೆಸರು!
ಅಮೆರಿಕದೊಂದಿಗಿನ ವ್ಯಾಪಾರ ಸಂಬಂಧ ಬಲಪಡಿಸಲು ಹೈದರಾಬಾದ್‌ನ ರಸ್ತೆಯೊಂದಕ್ಕೆ ‘ಡೊನಾಲ್ಡ್ ಟ್ರಂಪ್ ಅವೆನ್ಯೂ’ ಎಂದು ಹೆಸರಿಡಲು ತೆಲಂಗಾಣ ಸರ್ಕಾರ ನಿರ್ಧರಿಸಿದೆ. ಆದರೆ, ಸರ್ಕಾರದ ಈ ನಡೆಗೆ ಎಡಪಕ್ಷಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಟ್ರಂಪ್ ನೀತಿಗಳನ್ನು ವಿರೋಧಿಸುವ ಕಾಂಗ್ರೆಸ್, ಸದ್ಯ ಅವರದ್ದೇ ಹೆಸರಿಡಲು ಮುಂದಾಗಿರುವುದು ಸಿದ್ಧಾಂತಕ್ಕೆ ವಿರುದ್ಧ ಎಂದು ಹಲವರು ಪ್ರಶ್ನಿಸಿದ್ದು, ಇದು ರಾಜ್ಯದಲ್ಲಿ ದೊಡ್ಡ ರಾಜಕೀಯ ಚರ್ಚೆ ಹುಟ್ಟುಹಾಕಿದೆ. ಮತ್ತಷ್ಟು ಓದಿ.
-
ಡಿಕೆಶಿ ನಿವಾಸಕ್ಕೆ ಅತಿ ಹಿಂದುಳಿದ ಸ್ವಾಮೀಜಿಗಳ ನಿಯೋಗ ಭೇಟಿ
ಬೆಂಗಳೂರಿನ ಸದಾಶಿವನಗರದಲ್ಲಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ಇಂದು ಅತಿ ಹಿಂದುಳಿದ ವರ್ಗಗಳ ಸ್ವಾಮೀಜಿಗಳ ನಿಯೋಗ ಭೇಟಿ ನೀಡಿದೆ. ಶ್ರೀ ಪ್ರಣವಾನಂದ ಸ್ವಾಮೀಜಿ ನೇತೃತ್ವದ ಈ ನಿಯೋಗವು ಡಿಕೆಶಿ ಅವರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಕುರಿತು ಪ್ರಮುಖ ಚರ್ಚೆ ನಡೆಸಿತು.
-
ಆರ್‌ಎಸ್‌ಎಸ್ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ
ಜಾರ್ಖಂಡ್‌ನ ರಾಂಚಿಯಲ್ಲಿರುವ ಆರ್‌ಎಸ್‌ಎಸ್ (RSS) ಕಚೇರಿಯ ಮೇಲೆ ದುಷ್ಕರ್ಮಿಯೊಬ್ಬ ಪೆಟ್ರೋಲ್ ಬಾಂಬ್ ಎಸೆದು ಪರಾರಿಯಾಗಿದ್ದಾನೆ. ಘಟನೆ ಬೆನ್ನಲ್ಲೇ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ದಾಳಿ ನಡೆಸಿ ತಪ್ಪಿಸಿಕೊಂಡಿರುವ ಆರೋಪಿಯ ಪತ್ತೆಗಾಗಿ ರಾಂಚಿ ಪೊಲೀಸರು ಸದ್ಯ ತೀವ್ರ ಶೋಧ ಕಾರ್ಯ ಕೈಗೊಂಡಿದ್ದಾರೆ.
-
ಪ್ರಕಾಶ್ ರಾಜ್ ಸುದ್ದಿಗೋಷ್ಠಿ: ಪ್ರೆಸ್ ಕ್ಲಬ್ ಸುತ್ತ ಪೊಲೀಸ್ ಭದ್ರತೆ
ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಟ ಪ್ರಕಾಶ್ ರಾಜ್ ಹಮ್ಮಿಕೊಂಡಿರುವ ಸುದ್ದಿಗೋಷ್ಠಿ ಹಿನ್ನೆಲೆಯಲ್ಲಿ ವಿಧಾನ ಸೌಧ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು 25ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಕೇವಲ ಪತ್ರಕರ್ತರಿಗೆ ಮಾತ್ರ ಪ್ರವೇಶವಿದ್ದು, ಪೊಲೀಸರು ಸೂಕ್ತ ತಪಾಸಣೆ ಮತ್ತು ಪರಿಶೀಲನೆ ನಡೆಸಿದ ಬಳಿಕವಷ್ಟೇ ಸುದ್ದಿಗೋಷ್ಠಿಗೆ ಪ್ರವೇಶಿಸಲು ಅವಕಾಶ ನೀಡುತ್ತಿದ್ದಾರೆ.
-
ಬೆಳಗಾವಿಯಲ್ಲಿ ಒಣಗುವ ಹಂತದಲ್ಲಿ ಭತ್ತದ ಬೆಳೆ
ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಬೆಳಗಾವಿ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಎಕರೆಗೆ 40-50 ಸಾವಿರ ರೂ. ಖರ್ಚು ಮಾಡಿ ಬಿತ್ತಿದ್ದ ಇಂದ್ರಾಣಿ, ಬಾಸೂಮತಿ ಭತ್ತದ ಪೈರುಗಳು ತೇವಾಂಶವಿಲ್ಲದೆ ಒಣಗುತ್ತಿವೆ. ಮುಂದಿನ ನಾಲ್ಕು ದಿನಗಳಲ್ಲಿ ಮಳೆಯಾಗದಿದ್ದರೆ ಬೆಳೆ ಸಂಪೂರ್ಣ ನಾಶವಾಗಲಿದೆ. ಜಿಲ್ಲೆಯಲ್ಲಿ ಸದ್ಯ ಶೇ 50.76ರಷ್ಟು ಮಾತ್ರ ಬಿತ್ತನೆಯಾಗಿದ್ದು, ಯಳ್ಳೂರ, ಶಹಾಪುರ ಭಾಗದ ಅನ್ನದಾತರು ಆತಂಕಗೊಂಡಿದ್ದಾರೆ.
-
ಶಾಸಕ ಜಿ.ಎಸ್. ಪಾಟೀಲ್‌ಗೆ ಸಚಿವ ಸ್ಥಾನಕ್ಕಾಗಿ ‘ಸ್ವಾಭಿಮಾನ ನಡಿಗೆ’ ಪಾದಯಾತ್ರೆ
ರೋಣ ಶಾಸಕ ಜಿ.ಎಸ್. ಪಾಟೀಲ್ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಅವರ ಮಗ ಮಿಥುನ್ ಪಾಟೀಲ್ ನೇತೃತ್ವದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ತುಮಕೂರಿನ ಸಿದ್ದಗಂಗಾ ಮಠದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್‌ವರೆಗೆ ಎರಡು ದಿನಗಳ ‘ಸ್ವಾಭಿಮಾನ ನಡಿಗೆ’ ಪಾದಯಾತ್ರೆ ಆರಂಭಿಸಿದ್ದಾರೆ. ಸುಮಾರು 20 ಮಠಾಧಿಪತಿಗಳು ಚಾಲನೆ ನೀಡಿದ ಈ ಪಾದಯಾತ್ರೆಯಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಿದ್ದು, ಇಂದು ನೆಲಮಂಗಲದಲ್ಲಿ ತಂಗಿ, ನಾಳೆ ಸಂಜೆ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ.
Published On - Jun 17,2026 9:37 AM




