
ರಾಮ ಮಂದಿರದ ಹುಂಡಿ ಹಣ ದುರ್ಬಳಕೆ ಸಂಬಂಧ ಎಸ್‌ಐಟಿ ತನಿಖೆ ಚುರುಕುಗೊಳಿಸಿದೆ. ಮತ್ತೊಂದೆಡೆ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಕರ್ನಾಟಕ ಸಚಿವ ಸಂಪುಟ ಸಭೆಯಲ್ಲಿ ಹಲವು ಪ್ರಮುಖ ವಿಚಾರಗಳು ಚರ್ಚೆಯಾಗುವ ನಿರೀಕ್ಷೆ ಇದೆ. ಕರಾವಳಿ ಕರ್ನಾಟಕದಲ್ಲಿ ವರುಣಾರ್ಭಟ ಶುರುವಾಗಿದ್ದು, ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಇವೆಲ್ಲವೂ ಸೇರಿದಂದತೆ ರಾಜ್ಯ, ದೇಶ, ಸಿನಿಮಾ ಮತ್ತು ಕ್ರೀಡಾ ಸುದ್ದಿಗಳ ಇಂದಿನ ಕ್ಷಣ ಕ್ಷಣದ ಮಾಹಿತಿ ಇಲ್ಲಿ ಸಿಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಾಳೆಯೂ (ಜುಲೈ 03) ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿಯಿಂದ ಪದವಿಪೂರ್ವ ಕಾಲೇಜು ವರೆಗೆ ರಜೆ ಘೋಷಿಸಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ದರ್ಶನ್ ಆದೇಶ ಹೊರಡಿಸಿದ್ದಾರೆ. ಆದೇಶವನ್ನು ಉಲ್ಲಂಘಿಸುವ ಶಾಲೆ-ಕಾಲೇಜುಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ. ನದಿ, ಸಮುದ್ರ ತೀರ ಪ್ರದೇಶಕ್ಕೆ ತೆರಳದಂತೆಯು ಸೂಚನೆ ನೀಡಲಾಗಿದೆ. ಹಾಗೇ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ ನೀಡಿದ್ದಾರೆ.
ಮಾದಪಟ್ಟಣ ಬಳಿ ಕಲ್ಲು ಕ್ವಾರಿಯಲ್ಲಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ 2 ಕ್ವಾರಿ ಮಾಲೀಕರು, ಮ್ಯಾನೇಜರ್ಗಳ ವಿರುದ್ಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದ್ದು, ಪ್ರಾಥಮಿಕ ತನಿಖೆ ವೇಳೆ ಬ್ಲಾಸ್ಟ್ ಆಗಿಲ್ಲ ಎನ್ನುವುದು ಪತ್ತೆಯಾಗಿದೆ. ಸದ್ಯಕ್ಕೆ ಇಬ್ಬರು ಮ್ಯಾನೇಜರ್, ಚಾಲಕ, ಇನ್ಚಾರ್ಜ್ ಸೇರಿ ಒಟ್ಟು ನಾಲ್ವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಮಾಗಡಿ ರಸ್ತೆಯ ಮಾದಪಟ್ಟಣ ಬಳಿ ಕಲ್ಲು ಕ್ವಾರಿಯಲ್ಲಿ ದುರಂತ ಗಾಯಗೊಂಡಿರುವರನ್ನು ಬೆಂಗಳೂರಿನ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಇದೀಗ ಸಿಎಂ ಡಿಕೆ ಶಿವಕುಮಾರ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಇನ್ನು ಇದೇ ವೇಳೆ ಮತನಾಡಿದ ಡಿಕೆಶಿ, ಬೆಳಗ್ಗೆ 7ರ ಸುಮಾರಿಗೆ ಘಟನೆ ನಡೆದಿದ್ದು 7 ಜನ ಮೃತಪಟ್ಟಿದ್ದಾರೆ. ಐವರು ಗಾಯಗೊಂಡಿದ್ದಾರೆ, ಒಬ್ಬರ ಸ್ಥಿತಿ ಬಹಳ ಗಂಭೀರವಾಗಿದೆ. ಯಾದಗಿರಿ, ಛತ್ತೀಸ್ಗಢ ಮೂಲದ 7 ಜನರು ಮೃತಪಟ್ಟಿದ್ದಾರೆ. ಮೃತರ ಕುಟುಂಬ ಸದಸ್ಯರ ಜೊತೆ ಅಧಿಕಾರಿಗಳು ಚರ್ಚಿಸಿದ್ದು, ಮೃತದೇಹಗಳನ್ನು ಕಳುಹಿಸಲು ವ್ಯವಸ್ಥೆ ಮಾಡುತ್ತೇವೆ. ಸರ್ಕಾರದ ನಿಯಮಾನುಸಾರ ಪರಿಹಾರ ನೀಡುತ್ತೇವೆ. ಕಲ್ಲು ಕ್ವಾರಿಗಳ ಮಾಲೀಕರ ಜೊತೆ ಅಧಿಕಾರಿಗಳು ಮಾತನಾಡಿದ್ದು, ಮೃತರ ಕುಟುಂಬಗಳಿಗೆ ಮಾಲೀಕರಿಂದಲೂ ಪರಿಹಾರ ಕೊಡಿಸ್ತೇವೆ ಎಂದರು.
ಬೆಂಗಳೂರು ದಕ್ಷಿಣದ ಮಾಗಡಿ ರಸ್ತೆಯ ಮಾದಪಟ್ಟಣ ಬಳಿ ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ದುರಂತದಲ್ಲಿ ಗಾಯಗೊಂಡಿರುವವರನ್ನು RR ಆಸ್ಪತ್ರೆಗೆ ದಾಖಲಾಗಿದೆ. ಇದೀಗ ಸಚಿವ ಕೃಷ್ಣಭೈರೇಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.
ಬೆಂಗಳೂರು ಜಿಲ್ಲಾ ಕುಷ್ಟರೋಗ ಅಧಿಕಾರಿ ಡಾ.ಭುಜಬಲಿ ಯಲದುರ್ಗಿ ಅವರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. KPME ಲೈಸೆನ್ಸ್ ಅನುಮತಿಗೆ 30,000 ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಇಂದು (ಜುಲೈ 02) ಮುಂಗಡವಾಗಿ 15 ಸಾವಿರ ರೂಪಾಯಿ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಕ್ರೀಡಾ ಉಡುಪು ಹಾಗೂ ಶೂಗಳನ್ನು ಖರೀದಿಗೆ ಸಚಿವ ಸಂಪು ಒಪ್ಪಿಗೆ ನೀಡಿದ್ದು, 33.06 ಕೋಟಿ ರೂಪಾಯಿ ಅಂದಾಜು ಮೊತ್ತದಲ್ಲಿ ಖರೀದಿಸಲು ಅನುಮೋದನೆ ನೀಡಿದೆ.
ಸಾರಿಗೆ ಇಲಾಖೆಯ 4 ನಿಗಮದ ಸಿಬ್ಬಂದಿಯ ಬಹು ಬೇಡಿಕೆಯನ್ನು ಕೊನೆಗೂ ರಾಜ್ಯ ಸರ್ಕಾರ ಈಡೇರಿಸಿದೆ. KSRTC, BMTC, NWKRTC, KKRTC ಸಿಬ್ಬಂದಿ ಮೂಲ ವೇತನ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಮೂಲ ವೇತನದಲ್ಲಿ ಶೇಕಡಾ 12.5ರಷ್ಟು ಹೆಚ್ಚಿಸಿದ್ದು, 2025ರ ಮಾರ್ಚ್ 31ರ ಮೂಲ ವೇತನದ ಮೇಲೆ ಅನ್ವಯವಾಗಲಿದೆ. ಇನ್ನು 2026ರ ಜುಲೈ 1ರ ವೇತನದಲ್ಲಿ ಜಾರಿಗೆ ಬರುವಂತೆ ಆದೇಶಿಸಿದೆ.
ಖಾಲಿಯಿರುವ ದೈಹಿಕ ಶಿಕ್ಷಕರ ಹುದ್ದೆ ತುಂಬುವಂತೆ ಒತ್ತಾಯಿಸಿ ಧಾರವಾಡ ಡಿಸಿ ಕಚೇರಿ ಬಳಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸಿದ್ದಾರೆ. ಕಳೆದ 15 ವರ್ಷಗಳಿಂದ ದೈಹಿಕ ಶಿಕ್ಷಕರ ನೇಮಕಾತಿ ನಡೆದಿಲ್ಲ. ಇದರಿಂದ ಹುದ್ದೆಯ ಆಕಾಂಕ್ಷಿಗಳ ವಯಸ್ಸು ಮೀರುತ್ತಿದೆ. ದೈಹಿಕ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳ ಭವಿಷ್ಯದ ಮೇಲೂ ಪರಿಣಾಮ ಉಂಟಾಗಿದೆ ಎಂದು ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದ್ದಾರೆ. ಧಾರವಾಡ ಡಿಸಿ ಮೂಲಕ ರಾಜ್ಯ ಸರ್ಕಾರಕ್ಕೆ ಈ ಸಂಬಂಧ ಮನವಿಪತ್ರವನ್ನೂ ರವಾನಿಸಲಾಗಿದೆ.
ಯಾದಗಿರಿ ಜಿಲ್ಲಾ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಮಧ್ಯಾಹ್ನ 1ರಿಂದ 3 ಗಂಟೆಯೊಳಗೆ ಬಾಂಬ್ ಸ್ಫೋಟಿಸೋದಾಗಿ ಮಧ್ಯಾಹ್ನ 12.30ಕ್ಕೆ ಜಿಲ್ಲಾ ನ್ಯಾಯಾಧೀಶರಿಗೆ ಇ-ಮೇಲ್ ಸಂದೇಶ ಬಂದಿದ್ದು, ಅನಾಮಧೇಯ ವ್ಯಕ್ತಿಯ ವಿಳಾಸದಿಂದ ಸಂದೇಶ ರವಾನೆಯಾಗಿದೆ. ನ್ಯಾಯಾಲಯದ ಕಟ್ಟಡದಿಂದ ನ್ಯಾಯಾಧೀಶರು, ವಕೀಲರು, ಕಕ್ಷಿದಾರರು, ಸಿಬ್ಬಂದಿ, ಜನರನ್ನು ಹೊರಗೆ ಕಳಿಸಿ ಬಾಂಬ್ ಸ್ಕ್ವಾಡ್, ಶ್ವಾನದಳದ ಸಿಬ್ಬಂದಿಯಿಂದ ಪರಿಶೀಲನೆ ನಡೆದಿದೆ.
ಕೋಮುಗಲಭೆ ಪ್ರಕರಣಗಳು ಸೇರಿದಂತೆ ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಹಿಂಪಡೆಯಲು ಮುಂದಾಗಿದ್ದ ರಾಜ್ಯ ಸರ್ಕಾರದ ಮಹತ್ವದ ತೀರ್ಮಾನಕ್ಕೆ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಮಧ್ಯಂತರ ತಡೆಯಾಜ್ಞೆ ನೀಡಿದೆ. ಸರ್ಕಾರದ ಈ ಕ್ರಮವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾದ ಬೆನ್ನಲ್ಲೇ ನ್ಯಾಯಾಲಯ ಈ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರವು 2026ರ ಮೇ 27ರಂದು ಒಟ್ಟು 52 ಕ್ರಿಮಿನಲ್ ಪ್ರಕರಣಗಳನ್ನು ಅಧಿಕೃತವಾಗಿ ವಾಪಸ್ ಪಡೆಯಲು ತೀರ್ಮಾನಿಸಿ ಆದೇಶ ಹೊರಡಿಸಿತ್ತು. ಇನ್ನಷ್ಟು ಓದಿ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಅವರ್ಸಾ ಗ್ರಾಮದ ಬಳಿ ಖಾಸಗಿ ಬಸ್ ಪಲ್ಟಿಯಾಗಿರುವ ಘಟನೆ ನಡೆದಿದೆ. ಅಪಘಾತದಲ್ಲಿ ಪ್ರಯಾಣಿಕರಿಗೆ ಗಾಯಗಳಾಗಿದ್ದು, ಬೆಂಗಳೂರಿನಿಂದ ಗೋವಾ ಕಡೆಗೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಘಟನೆ ನಡೆದಿದೆ. ಬಸ್ಸಿನಲ್ಲಿ 25 ಜನ ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಗಾಯಾಳುಗಳನ್ನು ಅಂಕೋಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಮಾದಪಟ್ಟಣ ಬಳಿಯ ಕಲ್ಲು ಕ್ವಾರಿಯಲ್ಲಿ ದುರಂತ ಪ್ರಕರಣ ಸಂಬಂಧ ಮೃತರ ಕುಟುಂಬಕ್ಕೆ ಕ್ರಶರ್ ಮಾಲೀಕರಿಂದಲೇ ತಲಾ 10 ಲಕ್ಷ ಪರಿಹಾರ ಕೊಡಿಸುತ್ತೇವೆ. ಗಾಯಗೊಂಡವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲು ಕ್ವಾರಿ ಮಾಲೀಕರು ಸಹ ಒಪ್ಪಿಕೊಂಡಿದ್ದಾರೆ. ಅಲ್ಲದೆ ರಾಮನಗರ ಸುತ್ತಮುತ್ತಲಿನ 52 ಕಲ್ಲು ಕ್ವಾರಿಗಳನ್ನು ಸದ್ಯಕ್ಕೆ ಬಂದ್ ಮಾಡೋದಾಗಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ರಂಗಪ್ಪ ಮಾಹಿತಿ ನೀಡಿದ್ದಾರೆ.
ಮಾದಪಟ್ಟಣ ಸಮೀಪ ಕಲ್ಲು ಕ್ವಾರಿಯಲ್ಲಿ ದುರಂತ ಪ್ರಕರಣ ಸಂಬಂಧ ‘ಎಕ್ಸ್’ ಮೂಲಕ ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. ಕಲ್ಲು ಕ್ವಾರಿಯ ಬಂಡೆ ಕುಸಿದು ಏಳು ಜನ ಕಾರ್ಮಿಕರು ಮೃತಪಟ್ಟಿರುವ ಘಟನೆ ನನಗೆ ಅತೀವ ನೋವುಂಟು ಮಾಡಿದೆ. ಮೃತಪಟ್ಟ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ. ಗಾಯಗೊಂಡವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರ ತಕ್ಷಣವೇ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಜೊತೆಗೆ ಇನ್ನಿತರ ತುರ್ತು ನೆರವು ಒದಗಿಸಬೇಕು. ಕ್ವಾರಿಗಳನ್ನು ಕಟ್ಟುನಿಟ್ಟಿನ ಸುರಕ್ಷತಾ ನಿಯಮ ಜಾರಿಗೆ ಆದೇಶಿಸಬೇಕು. ಕಠಿಣ ಕ್ರಮ ಆಗದ ಕಾರಣ ಈ ರೀತಿಯ ದುರಂತ ಮರುಕಳಿಸುತ್ತಿದೆ ಎಂದವರು ಹೇಳಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕಲ್ಲು ಕ್ವಾರಿಯ ಬಂಡೆ ಕುಸಿದು ಏಳು ಜನ ಕಾರ್ಮಿಕರು ಧಾರುಣ ಸಾವನ್ನಪ್ಪಿರುವ ಘಟನೆ ನನಗೆ ಅತೀವ ನೋವುಂಟು ಮಾಡಿದೆ. ಮೃತಪಟ್ಟ ಕಾರ್ಮಿಕರ ಆತ್ಮಕ್ಕೆ ಚಿರಶಾಂತಿ ಕೋರುತ್ತೇನೆ ಹಾಗೂ ಗಾಯಗೊಂಡವರು ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ರಾಜ್ಯ ಸರಕಾರ ನೊಂದ ಕುಟುಂಬ ಕುಟುಂಬಗಳಿಗೆ…
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) July 2, 2026
ಮಾದಪಟ್ಟಣ ಸಮೀಪ ಕಲ್ಲು ಕ್ವಾರಿಯಲ್ಲಿ ದುರಂತ ಪ್ರಕರಣ ಸಂಬಂಧ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ಕೇಂದ್ರ ಸಚಿವೆ ಮತ್ತು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಂಜೆ ವಿಚಾರಿಸಿದ್ದಾರೆ.
ಮಧ್ಯಾಹ್ನ 1.30ರಿಂದ 3ರೊಳಗೆ ಬಾಂಬ್ ಸ್ಫೋಟಿಸೋದಾಗಿ ಚಿಕ್ಕಮಗಳೂರು ನ್ಯಾಯಾಲಯಕ್ಕೆ ಬೆದರಿಕೆ ಸಂದೇಶ ಬಂದಿದೆ. ದಿ ಗರ್ಲ್ ಹೂ ಕ್ರೈಡ್ ವುಲ್ಫ್ ಹೆಸರಿನ ಇ-ಮೇಲ್ನಲ್ಲಿ ಸಂದೇಶ ರವಾನೆಯಾಗಿದ್ದು, 13 ವಿಷಯುಕ್ತ ಅನಿಲ, RDX ಬಾಂಬ್‌ಗಳು ಸ್ಫೋಟಗೊಳ್ಳಲಿವೆ. ಮಧ್ಯಾಹ್ನದೊಳಗೆ ಕೋರ್ಟ್ನಲ್ಲಿರುವ ನ್ಯಾಯಾಧೀಶರು, ಜನರನ್ನು ಸ್ಥಳಾಂತರಿಸಿ ಎಂದು ತಿಳಿಸಲಾಗಿದೆ. ಈ ಹಿನ್ನೆಲೆ ಜಿಲ್ಲಾ ನ್ಯಾಯಾಲಯಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ನೂತನ ಎಂಎಲ್ ಸಿಗಳ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಸಿಎಂ ಡಿಕೆಶಿ, ಡಿಸಿಎಂ ಪರಮೇಶ್ವರ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ.
ಕಲ್ಲುಕ್ವಾರಿ ದುರಂತಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸಂತಾಪ ಸೂಚಿಸಿದ್ದಾರೆ. 7 ಕಾರ್ಮಿಕರು ಮೃತಪಟ್ಟಿರುವುದು ತೀವ್ರ ದುಃಖವನ್ನುಂಟು ಮಾಡಿದೆ. ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ. ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.
ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣದಲ್ಲಿ ಕ್ರಷರ್ ಬಂಡೆ ಕುಸಿದು 7 ಮಂದಿ ಕಾರ್ಮಿಕರು ಮೃತಪಟ್ಟಿರುವುದು ತೀವ್ರ ದುಃಖವನ್ನುಂಟು ಮಾಡಿದೆ.
ಭಗವಂತ ಮೃತರ ಆತ್ಮಕ್ಕೆ ಚಿರಶಾಂತಿ ದಯಪಾಲಿಸಲಿ, ಕುಟುಂಬಸ್ಥರಿಗೆ ನೋವು ಭರಿಸುವ ಶಕ್ತಿ ನೀಡಲಿ ಹಾಗೂ ಗಾಯಾಳುಗಳು ಶೀಘ್ರವೇ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ.
ಕಲ್ಲು ಕ್ವಾರಿಗಳಲ್ಲಿ ಕೆಲಸ…
— DK Shivakumar (@DKShivakumar) July 2, 2026
ರಾಜ್ಯದಲ್ಲಿ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಸಂದೇಶ ಪ್ರಕರಣಗಳು ಮುಂದುವರಿದಿದ್ದು, ಇದೀಗ ಮೈಸೂರು ಜಿಲ್ಲಾ ನ್ಯಾಯಲಯಕ್ಕೆ ಇ- ಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿದೆ. ಮೈಸೂರುರಿನ ಚಾಮರಾಜಪುರಂನಲ್ಲಿ ಇರುವ ಇದೇ ನ್ಯಾಯಾಲಯದಲ್ಲಿ 8 ವರ್ಷದ ಹಿಂದೆ ಶೌಚಾಲಯದಲ್ಲಿ ಕುಕ್ಕರ್ ಬಾಂಬ್ ಸ್ಫೋಟವಾಗಿತ್ತು.
ಬೆಂಗಳೂರು ದಕ್ಷಿಣ ತಾಲೂಕಿನ ಮಾದಪಟ್ಟಣ ಗ್ರಾಮದ ಬಳಿ ದುರಂತ ಸಂಬಂಧ ಇನ್ನಷ್ಟು ಮಾಹಿತಿ ಬಯಲಾಗಿದೆ. ಬಸವೇಶ್ವರ ಕ್ವಾರಿಯಿಂದ ಕಾವೇರಿ ಕಲ್ಲು ಕ್ವಾರಿಗೆ ಬಂಡೆ ಬಿದ್ದಿದ್ದು, ಎರಡೂ ಕ್ವಾರಿಗಳು ಅಕ್ಕ-ಪಕ್ಕ ಇದೆ. ಜೆಸಿಬಿ ಮೂಲಕ ಒಂದು ಮೃತದೇಹ ಹೊರಕ್ಕೆ ತೆಗೆಯಲಾಗಿದ್ದು, ಘಟನಾ ಸ್ಥಳದಲ್ಲಿನ 6 ಮೃತ ದೇಹಕ್ಕಾಗಿ ಕಾರ್ಯಚರಣೆ ಮುಂದುವರಿದಿದೆ. ಕಾವೇರಿ ಕ್ವಾರಿಗೆ ಸೋಕೊ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಮಾದಪಟ್ಟಣ ಬಳಿಯ ಕಲ್ಲು ಕ್ವಾರಿಯಲ್ಲಿ ದುರಂತಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳೇ ಹೊಣೆ ಎಂದು ಯಶವಂತಪುರ ಶಾಸಕ ಸೋಮಶೇಖರ್ ಹೇಳಿದ್ದಾರೆ. ನನ್ನ ಕ್ಷೇತ್ರದಲ್ಲಿ ಅಕ್ರಮ ಕ್ರಷರ್ ನಡೆಸ್ತಿದ್ದಾರೆ. ಗರ್ಭಿಣಿ ಚಿರತೆ ಸತ್ತಾಗಲೇ ಅಕ್ರಮದ ಬಗ್ಗೆ ನಾನು ಧ್ವನಿ ಎತ್ತಿದ್ದೆ. ಅಸೆಂಬ್ಲಿಯಲ್ಲಿಯೂ ಅಕ್ರಮ ಗಣಿಗಾರಿಕೆ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಕಲ್ಲುಕ್ವಾರಿ ದುರಂತದಲ್ಲಿ 8 ಮಂದಿ ಮೃತಪಟ್ಟಿರುವ ಮಾಹಿತಿ ಇದೆ. ಮೃತಪಟ್ಟವರು ಎಲ್ಲಿಯವರು ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ. ಮೃತರ ಕುಟುಂಬಕ್ಕೆ ಕ್ರಷರ್ ಮಾಲೀಕರಿಂದಲೇ ತಲಾ 1 ಕೋಟಿ ಪರಿಹಾರ ಕೊಡಿಸಬೇಕು. ದುರಂತದ ಬಗ್ಗೆ ಸಿಎಂ ಡಿಕೆಶಿ ಭೇಟಿಯಾಗಿ ಚರ್ಚೆ ಮಾಡುತ್ತೇನೆ ಎಂದವರು ತಿಳಿಸಿದ್ದಾರೆ.
ಅಕ್ರಮವಾಗಿ ಕೇರಳ ಲಾಟರಿ ಮಾರುತ್ತಿದ್ದ ಇಬ್ಬರ ಬಂಧಿಸಿರುವ ಪೊಲೀಸರು ಲಕ್ಷಾಂತರ ರೂಪಾಯಿ ಮೌಲ್ಯದ ಕೇರಳ ಲಾಟರಿ ಜಪ್ತಿ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಗುಂಡ್ಲುಪೇಟೆ ಹಾಗೂ ಸಂತೇಮರಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರತ್ಯೇಕ ಪ್ರಕರಣ ದಾಖಲಾಗಿವೆ. ಗುಂಡ್ಲುಪೇಟೆಯಲ್ಲಿ 55 ಸಾವಿರ ಮೌಲ್ಯದ 1,100 ಲಾಟರಿ ಟಿಕೆಟ್, ಸಂತೇಮರಹಳ್ಳಿ 57 ಸಾವಿರ ಮೌಲ್ಯದ 1,140 ಲಾಟರಿ ಟಿಕೆಟ್ ವಶಕ್ಕೆ ಪಡೆಯಲಾಗಿದೆ. ಮೈಸೂರು ಮೂಲದ ಚಿನ್ನತಂಬಿನಾಯ್ಡು (86) ಹಾಗೂ ಯಳಂದೂರಿನ ಮಹೇಶ್ (25) ಬಂಧಿತ ಆರೋಪಿಗಳಾಗಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣ ಸಂಬಂಧ ಜುಲೈ 6ರಂದು ಶ್ರೀರಾಮ ಮಂದಿರ ಟ್ರಸ್ಟ್ ಮಹತ್ವದ ಸಭೆ ಕರೆದಿದೆ. ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಮುಖರು ಇದರಲ್ಲಿ ಭಾಗಿಯಾಗಲಿದ್ದು, ಚಂಪತ್ ರಾಯ್, ಡಾ.ಅನಿಲ್ ಮಿಶ್ರಾ ರಾಜೀನಾಮೆ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಬೈಲಾಗಳ ಪ್ರಕಾರ ಇಬ್ಬರ ರಾಜೀನಾಮೆ ಅಂಗೀಕಾರದ ಬಗ್ಗೆ ತೀರ್ಮಾನ ನಡೆಯಲಿದೆ. ರಾಜೀನಾಮೆ ಅಂಗೀಕಾರಕ್ಕೆ 2/3ರಷ್ಟು ಸದಸ್ಯರ ಬಹುಮತ ಕಡ್ಡಾಯವಾಗಿದ್ದು, ಬೈಲಾ ಪ್ರಕಾರ ಪದಾಧಿಕಾರಿಗಳನ್ನು ತೆಗೆಯಲು ಮಾತ್ರ ಅವಕಾಶ ಇದೆ. ಪ್ರಸ್ತುತ ಟ್ರಸ್ಟ್‌ನ 14 ಸದಸ್ಯರಲ್ಲಿ ಇಬ್ಬರು ಈಗಾಗಲೇ ರಾಜೀನಾಮೆ ಹಿನ್ನೆಲೆ ಬಾಕಿ ಉಳಿದ 12 ಟ್ರಸ್ಟಿಗಳ ಅಭಿಪ್ರಾಯ, ಮತ ನಿರ್ಣಾಯಕ ಆಗಲಿದೆ.
ಬಂಡೆ ಕುಸಿದು ಏಳು ಜನ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾವೇರಿ ಕ್ರಷರ್ನಲ್ಲಿ ನಡೆದಿದೆ. ಘಟನೆ ಬಗ್ಗೆ ಇನ್ನಷ್ಟೇ ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ. ಇನ್ನಷ್ಟು ಮಾಹಿತಿ
ರಾಮ ಮಂದಿರ ಹುಂಡಿ ಎಣಿಕೆ ಕಳ್ಳತನ ಪ್ರಕರಣ ಸಂಬಂಧ ಎಸ್‌ಐಟಿ ಟ್ರಸ್ಟ್‌ನ ಐದು ವರ್ಷಗಳ ಲೆಕ್ಕಪರಿಶೋಧನೆಗೆ ಮುಂದಾಗಿದೆ. ಪ್ರತಿಯೊಂದು ಹಣಕಾಸಿನ ವಹಿವಾಟನ್ನು ತನಿಖೆಗೆ ಒಳಪಡಿಸಲಾಗಿದ್ದು, ಪರಿಶೀಲನೆ ವೇಳೆ ಟ್ರಸ್ಟ್ ಅಧಿಕಾರಿಗಳ ಬಾಗಿ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಹಿರಿಯ ಟ್ರಸ್ಟ್ ಅಧಿಕಾರಿಗಳು ಕಳ್ಳತನದಲ್ಲಿ ಭಾಗಿ ಬಗ್ಗೆ ಎಸ್‌ಐಟಿಗೆ ಮಾಹಿತಿ ಸಿಕ್ಕಿದೆ ಎನ್ನಲಾಗಿದ್ದು, ಜುಲೈ 15ರಂದು ಎಸ್‌ಐಟಿಯಿಂದ ಈ ಸಂಬಂಧ ಯೋಗಿ ಸರ್ಕಾರಕ್ಕೆ ವರದಿ ಸಲ್ಲಿಕೆ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ಎಸ್‌ಐಟಿ ಅಧಿಕಾರಿಗಳು ನಿರಂತರವಾಗಿ ಅಯೋಧ್ಯೆಯಲ್ಲಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
Published On - 9:08 am, Thu, 2 July 26