AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

TV9 Kannada News Live: ಎಲ್ಲ ಮತದಾರರು ನಿಮ್ಮ ಮತದ ಹಕ್ಕು ಉಳಿಸಿಕೊಳ್ಳಿ: ಡಿಕೆ ಶಿವಕುಮಾರ್ ಕರೆ

Karnataka News Today Live Updates: ಮುಂಬೈ ಸರಣಿ ಹತ್ಯಾಕಾಂಡದ ಭೀಕರ ಸಂಚು ಭೇದಿಸಿದ ಪೊಲೀಸರು. ಇತ್ತ ಬೆಂಗಳೂರಿನಲ್ಲಿ ಮೊದಲ ದಿನವೇ 11 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಿ ದಾಖಲೆ ಬರೆಯಲಾಗಿದೆ. ಪ್ರಿಯಾ ಸುದೀಪ್ ಅವರಿಂದ ಹೊಸ ಕಥೆಗಾರರಿಗೆ ಸುವರ್ಣ ಅವಕಾಶ. ದೇಶ-ವಿದೇಶ, ಸಿನಿಮಾ ಹಾಗೂ ರಾಜ್ಯದ ಇಂದಿನ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ಸ್ ಇಲ್ಲಿದೆ.

TV9 Kannada News Live: ಎಲ್ಲ ಮತದಾರರು ನಿಮ್ಮ ಮತದ ಹಕ್ಕು ಉಳಿಸಿಕೊಳ್ಳಿ: ಡಿಕೆ ಶಿವಕುಮಾರ್ ಕರೆ
Dk Shivakumar
ಭಾವನಾ ಹೆಗಡೆ
| Edited By: |

Updated on:Jun 29, 2026 | 11:00 PM

Share

ವಾಣಿಜ್ಯ ನಗರಿ ಮುಂಬೈನಲ್ಲಿ ಮೊಹರಂ ಮೆರವಣಿಗೆ ವೇಳೆ 15,000 ಜನರನ್ನು ವಿಷದ ಗುಳಿಗೆ ನೀಡಿ ಕೊಲ್ಲಲು ಸಂಚು ರೂಪಿಸಿದ್ದ ಬಿಬಿಎ ಪದವೀಧರ ಫಯ್ಯಾಜ್ ಪ್ರೇಮ್‌ಜಿಯನ್ನು ಪೊಲೀಸರು 14,900 ವಿಷದ ಕ್ಯಾಪ್ಸೂಲ್‌ಗಳೊಂದಿಗೆ ಬಂಧಿಸಿ, ಭೀಕರ ಹತ್ಯಾಕಾಂಡವನ್ನು ಕೂದಲೆಳೆಯ ಅಂತರದಲ್ಲಿ ತಪ್ಪಿಸಿದ್ದಾರೆ. ಇತ್ತ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನದ ಮೊದಲ ದಿನವೇ ದಾಖಲೆಯ 11 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಹಾಕಲಾಗಿದ್ದು, ಶೇ. 96.4 ರಷ್ಟು ಪ್ರಗತಿ ಸಾಧಿಸಲಾಗಿದೆ. ಇನ್ನು ಸ್ಯಾಂಡಲ್‌ವುಡ್‌ನಲ್ಲಿ ನಟ ಕಿಚ್ಚ ಸುದೀಪ್ ಪತ್ನಿ ಪ್ರಿಯಾ ಸುದೀಪ್ ಅವರು ತಮ್ಮ ‘ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ’ ಮೂಲಕ ಹೊಸ ಕಥೆಗಾರರಿಗೆ ಮುಕ್ತ ವೇದಿಕೆ ಕಲ್ಪಿಸಿದ್ದಾರೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

LIVE NEWS & UPDATES

The liveblog has ended.
  • 29 Jun 2026 11:00 PM (IST)

    ರೆಡಿಯೋ ನಿರ್ವಹಣಾ ಅಧಿಕಾರಿ ಎತ್ತಂಗಡಿ

    ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಡಿಯೋ ನಿರ್ವಹಣಾ ಅಧಿಕಾರಿ ಅರ್ಜುನ್​​ ದೇವ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅಯೋಧ್ಯೆಯಲ್ಲಿ 17 ವರ್ಷ ಸೇವೆ ಸಲ್ಲಿಸಿದ್ದ ಅರ್ಜುನ್ ದೇವ್​ ಅವರನ್ನು ಅಯೋಧ್ಯೆಯಿಂದ ಗೋರಖ್‌ಪುರಕ್ಕೆ ವರ್ಗಾಯಿಸಲಾಗಿದೆ.

  • 29 Jun 2026 10:58 PM (IST)

    ಜು.6ರಂದು ಅಯೋಧ್ಯೆ ರಾಮ ಮಂದಿರ ಟ್ರಸ್ಟ್​ ಸಭೆ

    ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಜು.6ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಟ್ರಸ್ಟ್​ ಸಭೆ ಕರೆಯಲಾಗಿದೆ. ಈ ಮೊದಲು ಜುಲೈ 11ರಂದು ಸಭೆ ನಿಗದಿ ಮಾಡಲಾಗಿತ್ತು. ಆದ್ರೆ 5 ದಿನಗಳ ಮೊದಲೇ ಸಭೆ ನಡೆಸುವ ರಾಮಮಂದಿರ ಟ್ರಸ್ಟ್ ಮುಂದಾಗಿದ್ದು, ಚಂಪತ್ ರಾಯ್, ಅನಿಲ್ ಮಿಶ್ರಾ ಅವರನ್ನು ಟ್ರಸ್ಟ್​ ಸದಸ್ಯತ್ವದಿಂದ ವಾಜಾ ಮಾಡುವ ಸಾಧ್ಯತೆಗಳಿವೆ.

  • 29 Jun 2026 10:57 PM (IST)

    ರೈತನ ಹೊಲದಲ್ಲಿ ಭೋಜನ ಸವಿದ ಕೇಂದ್ರ ಸಚಿವ

    ಇಂದು ಜೇಷ್ಠ ಪೂರ್ಣಿಮಾ, ಕಾರಹುಣ್ಣಿಮೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಶೇಖಾವತ್ ಅವರು ರೈತನ ಹೊಲದಲ್ಲಿ ಭೋಜನ ಸವಿದು ಗಮನಸೆಳೆದರು. ಕಾರ್ಯನಿಮಿತ್ತ ಬೆಳಗಾವಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅವರು, ಹಿಂತಿರುಗುವ ವೇಳೆ ಧಾರವಾಡ ತಾಲೂಕಿನ ತೇಗೂರು ಗ್ರಾಮದ ಬಳಿಯ ಹೊಲದಲ್ಲಿ ರೈತರು ಊಟ ಮಾಡೋದನ್ನು ಗಮನಿಸಿ ತಾವು ಸಹ ಅವರ ಜೊತೆ ಭೋಜನ ಮಾಡಿದರು. ಸಚಿವ ಊಟ ಮಾಡುತ್ತಿರೋ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಕೇಂದ್ರ ಸಚಿವ ಪ್ರಲ್ಹಾದ ಜೋಶಿ

  • 29 Jun 2026 09:38 PM (IST)

    ಬಿಗ್​ಬಾಸ್​ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್‌ಗೆ ಕಹಿ ಅನುಭವ

    ಬಿಗ್​ಬಾಸ್​ ಮಾಜಿ ಸ್ಪರ್ಧಿ ದಿವ್ಯಾ ಸುರೇಶ್‌ ರಸ್ತೆಯಲ್ಲಿ ಹೋಗುವಾಗ ಯುವಕನೋರ್ವ ಅಸಭ್ಯ ವರ್ತನೆ ತೋರಿರುವ ಘಟನೆ ನಡೆದಿದೆ. ಕಾರಿನತ್ತ ನಡೆದುಕೊಂಡು ಹೋಗುವಾಗ ಹಿಂಬಾಲಿಸಿ ವಿಕೃತ ಚೇಷ್ಟೆ ಅಸಭ್ಯ ವರ್ತನೆ ತೋರಿದ್ದಾನೆ. ಭಾನುವಾರ ತಡರಾತ್ರಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಈ ಬಗ್ಗೆ ದಿವ್ಯಾ ಸಾಮಾಜಿಕ ಜಾಲತಾಣದಲ್ಲಿ ಕಹಿ ಘಟನೆ ಬಗ್ಗೆ ಹಂಚಿಕೊಂಡಿದ್ದಾರೆ. ಅಲ್ಲದೇ ಸದ್ಯ ಘಟನೆ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.

  • 29 Jun 2026 09:36 PM (IST)

    ಚಾರ್ಮಾಡಿ ಘಾಟಿನಲ್ಲಿ ಕೆಲಕಾಲ ಟ್ರಾಫಿಕ್​ ಜಾಮ್

    ಭಾರಿ ಮಳೆಯಿಂದಾಗಿ ಚಾರ್ಮಾಡಿ ಘಾಟಿನಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ಟ್ರಾಫಿಕ್ ಉಂಟಾಗಿದೆ. ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿನ 9ನೇ ತಿರುವಿನಲ್ಲಿ ಮರ ಬಿದ್ದಿದೆ. ಪರಿಣಾಮ ಕೆಲ ಕಾಲ ವಾಹನ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಯ್ತು.

  • 29 Jun 2026 07:54 PM (IST)

    ನಿಮ್ಮ ಹಕ್ಕು ಉಳಿಸಿಕೊಳ್ಳದಿದ್ರೆ ರ್ಕಾರದ ಸೌಲಭ್ಯಗಳಿಂದ ವಂಚಿತ

    ನಿಮ್ಮ ಹಕ್ಕು ಉಳಿಸಿಕೊಳ್ಳದಿದ್ರೆ ಸರ್ಕಾರದ ಸೌಲಭ್ಯಗಳಿಂದ ನೀವು ವಂಚಿತರಾಗುತ್ತೀರಿ. ನಾಳೆಯಿಂದ ಪ್ರತೀ ಮನೆಗೆ ಫಾರಂದು ತಂದು ಕೊಡುತ್ತಾರೆ. ಮನೆಯಲ್ಲಿರದಿದ್ರೆ ವಾರಸುದಾರರು ಫಾರಂನಲ್ಲಿ ಬಿಎಲ್ಒಗಳಿಗೆ ಸಹಿ ಹಾಕಿ ಕೊಡಬೇಕು. ನಮ್ಮ ಚುನಾವಣಾ ಆಯೋಗದ ಪ್ರತಿನಿಧಿಗಳು ಹಾಗೂ ಬಿಎಲ್ಎಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಾರೆ. ಅರ್ಜಿ ತುಂಬಿ ಕೊಡದಿದ್ರೆ ಮತದಾನ ಹಕ್ಕು ಕಳೆದುಕೊಳ್ತೀರಿ. ಕಡ್ಡಾಯವಾಗಿ ಫಾರಂ ತುಂಬಿ ಕೊಡಲೇಬೇಕಾಗುತ್ತದೆ ಎಂದು ಡಿಕೆ ಶಿವಕುಮಾರ್ ಅವರು ಸಾರ್ವಜನಕರಿಗೆ ಕಿವಿ ಮಾತು  ಹೇಳಿದ್ದಾರೆ.

  • 29 Jun 2026 07:53 PM (IST)

    ಎಲ್ಲ ಮತದಾರರು ನಿಮ್ಮ ಮತದ ಹಕ್ಕು ಉಳಿಸಿಕೊಳ್ಳಿ: ಡಿಕೆಶಿ ಕರೆ

    ನಾಳೆಯಿಂದ  (ಜೂನ್ 30) ಎಸ್​ಐಆರ್ ಪ್ರಕ್ರಿಯೆ ಪ್ರಾರಂಭವಾಗುತ್ತಿರುವ ಬಗ್ಗೆ ಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದು, ಅನೇಕ ರಾಜ್ಯಗಳಲ್ಲಿ ನಡೆದಿದ್ದನ್ನ ನೀವು ನೋಡಿದ್ದೀರಿ. ಅಧಿಕಾರಿಗಳು ಮನೆಗೆ ಭೇಟಿ ನೀಡಿ ಮಾಹಿತಿ ಪಡೀತಾರೆ. ಎಲ್ಲ ಮತದಾರರು ನಿಮ್ಮ ಮತದ ಹಕ್ಕು ಉಳಿಸಿಕೊಳ್ಳಿ. ನಿಮ್ಮ ಬದುಕಿನ ಹಕ್ಕನ್ನು ಉಳಿಸಿಕೊಳ್ಳಿ ಎಂದು ಕರೆ ನೀಡಿದ್ದಾರೆ.

  • 29 Jun 2026 07:28 PM (IST)

    ಉತ್ತರ ಕನ್ನಡ ಜಿಲ್ಲೆಯಲ್ಲಿ ಜು.2ರವರೆಗೆ ಆರೆಂಜ್ ಅಲರ್ಟ್

    ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಜು.2ರವರೆಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಅಬ್ಬರದ ಮಳೆಗೆ ನಿನ್ನೆ (ಜೂನ್ 29) ಹಲವೆಡೆ ಭಾರಿ ಅವಾಂತರ ಆಗಿದ್ದು, 3 ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಹೀಗಾಗಿ ನದಿ ದಡ ಹಾಗೂ ಕಡಲತೀರಕ್ಕೆ ಹೋಗದಂತೆ ಕಟ್ಟೆಚ್ಚರ ವಹಿಸಬೇಕೆಂದು ಡಿಸಿ ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದಾರೆ.

  • 29 Jun 2026 06:34 PM (IST)

    ವಿಕೃತಿ ಮೆರೆದ ಬೆಂಗಳೂರಿನ ಅಮೃತಹಳ್ಳಿ ಠಾಣೆ PSI ಅರೆಸ್ಟ್​

    ಕೊಲೆ ಕೇಸ್​ನಲ್ಲಿ ಅಪ್ರಾಪ್ತ ಬಾಲಕರನ್ನು ಕರೆತಂದು ಹಲ್ಲೆ ಮಾಡಿ ವಿಕೃತಿ ಮೆರೆದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಅಮೃತಹಳ್ಳಿ ಠಾಣೆ PSI ಪ್ರವೀಣ್​ ನನ್ನು ಬಂಧಿಸಲಾಗಿದೆ. ಅಪ್ರಾಪ್ತ ಬಾಲಕರನ್ನು ಕರೆತಂದಿದ್ದ ಸಬ್​ ಇನ್ಸ್​ಪೆಕ್ಟರ್ ಪ್ರವೀಣ್, ಖಾಸಗಿ ಸ್ಥಳದಲ್ಲಿ ಇರಿಸಿ ಹಲ್ಲೆ ಮಾಡಿದ್ದರು. ಅಲ್ಲದೇ ಘಟನೆಯನ್ನು ಮೊಬೈಲ್​ನಲ್ಲೂ ರೆಕಾರ್ಡ್ ಮಾಡಿಟ್ಟುಕೊಂಡಿದ್ದ. ಕೆಲ ತಿಂಗಳ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ಸಂಬಂಧ ಪೋಕ್ಸೋ ಮತ್ತು ಅಸಭ್ಯ ವರ್ತನೆ ಪ್ರಕರಣ ದಾಖಲಾಗಿದೆ.

  • 29 Jun 2026 06:00 PM (IST)

    ಟೈರ್​ ಸ್ಫೋಟಗೊಂಡು ಸಾರಿಗೆ ಬಸ್ ಪಲ್ಟಿ​, 67 ಮಂದಿಗೆ ಗಾಯ

    ಟೈರ್​ ಸ್ಫೋಟಗೊಂಡು ಸಾರಿಗೆ ಬಸ್ ಪಲ್ಟಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಮಧುವನಹಳ್ಳಿ ಬೈಪಾಸ್ ಬಳಿ ನಡೆದಿದ್ದು, ಘಟನೆಯಲ್ಲಿ 67 ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ. ಮಲೆಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್​​​ನ ಟೈರ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ, ಸದ್ಯ ಗಾಯಾಳುಗಳಿಗೆ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.

  • 29 Jun 2026 05:52 PM (IST)

    ಸದಾನಂದಗೌಡ ದೆಹಲಿಗೆ ತೆರಳುವ ಸಾಧ್ಯತೆ

    ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರರನ್ನು ಕಿತ್ತು ಬಿಸಾಕಿ ಎನ್ನುವ ಆಡಿಯೋ ವೈರಲ್ ಆಗಿದೆ. ಇದು ಡಿವಿ ಸದಾನಂದಗೌಡ ಅವರದ್ದು ಎನ್ನಲಾಗಿದ್ದು, ಬಿಜೆಪಿಯಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ ಸದಾನಂದಗೌಡ ಇಂದು (ಜೂನ್ 29) ರಾತ್ರಿಯೇ ದೆಹಲಿಗೆ ತೆರಳಲಿದ್ದು, ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಸ್ಪಷ್ಟನೆ ನೀಡುವ ಸಾಧ್ಯತೆಗಳಿವೆ.

  • 29 Jun 2026 05:40 PM (IST)

    ಗೋವಾ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಂತೆ ಪತ್ರ

    ಗೋವಾ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಪತ್ರ ಬರೆದಿದ್ದಾರೆ.ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಅನುಷ್ಠಾನ ನೆಪದಲ್ಲಿ ಗೋವಾದಲ್ಲಿ ಹಲವು ದಶಕಗಳಿಂದ ಕಾರ್ಯನಿರ್ವಹಿಸ್ತಿರುವ ಕನ್ನಡ ಮಾಧ್ಯಮ ಶಾಲೆ ಮುಚ್ಚಲು ಅಲ್ಲಿನ ಸರ್ಕಾರ ಸಿದ್ಧತೆ ನಡೆಸಿದೆ. ಇದು ಸಾಂವಿಧಾನಿಕ ಆಶಯಗಳಿಗೆ ವಿರುದ್ಧವಾಗಿದೆ. ಉನ್ನತ ಮಟ್ಟದ ನಿಯೋಗವೊಂದನ್ನು ಗೋವಾಕ್ಕೆ ಕಳುಹಿಸಿ ಅಲ್ಲಿನ ಸಿಎಂ ಮತ್ತು ಶಿಕ್ಷಣ ಸಚಿವರೊಂದಿಗೆ ಚರ್ಚೆ ನಡೆಸಿ ಕನ್ನಡ ಶಾಲೆ ಮುಚ್ಚುವ ಪ್ರಕ್ರಿಯೆಗೆ ಕೂಡಲೇ ತಡೆ ತರಬೇಕು ಎಂದು ಮುಖ್ಯಂತ್ರಿ ಡಿಕೆ ಶಿವಕುಮಾರ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

  • 29 Jun 2026 05:34 PM (IST)

    ನಾವು ಇದುವರೆಗೂ ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿಲ್ಲ

    ರಾಜ್ಯದಲ್ಲಿ ಮಳೆ ಕೊರತೆ ಮಧ್ಯೆ ರೈತರ ಬೆಳೆಗಳಿಗೆ ಮಾತ್ರವಲ್ಲ, ಕೆಲವೆಡೆ ಕುಡಿಯಲು ನೀರಿಲ್ಲ. ಇದರ ಮಧ್ಯೆ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಆರೋಪಿಸಿದ್ದಾರೆ. ಆದ್ರೆ, ಇದನ್ನು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಳ್ಳಿಹಾಕಿದ್ದಾರೆ. ನಾವು ಇದುವರೆಗೂ ತಮಿಳುನಾಡಿಗೆ ನೀರು ಬಿಟ್ಟಿಲ್ಲ. ತಮಿಳುನಾಡಿಗೆ ಬಿಡುವುದಕ್ಕೆ ನಮ್ಮಲ್ಲಿ ನೀರು ಸಹ ಇಲ್ಲ. ಕುಡಿಯುವ ನೀರಿಗೆ ನಮ್ಮ ಮೊದಲ ಆದ್ಯತೆ ಇದೆ. ಮೋಡ ಬಿತ್ತನೆಗೆ ನಿನ್ನೆ ಪ್ರಸ್ತಾಪವನ್ನೂ ಕೊಟ್ಟಿದ್ದಾರೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ಮಾಡುತ್ತೇವೆ ಎಂದರು. ಮತ್ತಷ್ಟು ಓದಿ

  • 29 Jun 2026 04:37 PM (IST)

    ಚಂದ್ರದ್ರೋಣ ಪರ್ವತದ ಸಾಲಿನಲ್ಲಿ ಮತ್ತೊಂದು ವಿವಾದ

    ಚಿಕ್ಕಮಗಳೂರಿನ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ‌ದರ್ಗಾ ಬಳಿ ವಿವಾದ ಸೃಷ್ಟಿಯಾಗಿದೆ. ಮಾಣಿಕ್ಯಧಾರಾಕ್ಕೆ ತೆರಳುವ ಮಾರ್ಗದಲ್ಲಿ ಹಸಿರು ಚಾದರ ಹಾಕಿ ಮುಸ್ಲಿಮರು ಆಚರಣೆ ಮಾಡಿರುವುದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ. ಗೋರಿಗಳ ನಿರ್ಮಾಣ, ಹಸಿರು ಬಟ್ಟೆಯ ಚಾದರ ಹಾಕಿ ಆಚರಣೆಗೆ ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಹೊಸ‌ ಆಚರಣೆ ನಡೆಸಲಾಗುತ್ತಿದೆ ಎಂದು ಇನಾಂ ದತ್ತಾತ್ರೇಯ ಬಾಬಾ ಬುಡನ್ ‌ಸ್ವಾಮಿ‌ದರ್ಗಾ ಮುಂಭಾಗ ಪ್ರತಿಭಟನೆ ನಡೆಸಿವೆ.

  • 29 Jun 2026 04:05 PM (IST)

    ಅಯೋಧ್ಯ ರಾಮ ಮಂದಿರದ ಹಣಕಾಸು ಉಸ್ತುವಾರಿಗೆ ಕೊಕ್

    ಅಯೋಧ್ಯ ರಾಮ ಮಂದಿರದ ಹಣಕಾಸು ಮತ್ತು ದಾನಪಾತ್ರೆ ಎಣಿಕೆ ಉಸ್ತುವಾರಿ ಸುಭಾಶ್ ಶ್ರೀವಾತ್ಸವ್ ಅವರಿಗೆ ಕೊಕ್ ನೀಡಲಾಗಿದೆ. ಪೊಲಿಸ್ ಬಂಧನ ಹಿನ್ನಲೆ ಮಂದಿರದ ಜವಾಬ್ದಾರಿಯಿಂದ ವಜಾ ಮಾಡಲಾಗಿದ್ದು, ನಿವೃತ್ತ ಸೇನಾಧಿಕಾರಿಗಳಿಗೆ ಸಂಪೂರ್ಣ ಎಣಿಕೆ ಹೊಣೆ ನೀಡಲು ಮಂದಿರ ಆಡಳಿತ ತೀರ್ಮಾನ ಮಾಡಿದೆ. ಈಗ ಇನ್ನುಷ್ಟು ಬಿಗಿಗೊಳಿಸಿ ಎಣಿಕೆ ಕಾರ್ಯಕ್ಕೆ ತೀರ್ಮಾನಿಸಿದೆ. ಎಣಿಕೆ ಸಿಬ್ಬಂದಿ ಚೆಕ್ಕಿಂಗ್, ಸಿಸಿಟಿವಿ ಮಾನಿಟರಿಂಗ್, ಸಿಬ್ಬಂದಿ ಚಲನವಲನದ ಮೇಲೆ ನಿಗಾವಹಿಸಿ ಪ್ರತಿ ನಿತ್ಯವು ನಡೆಯುತ್ತಿರುವ ಹುಂಡಿ ಎಣಿಕೆಗೆ ಬಿಗಿ ಮಾನದಂಡ ವಿಧಿಸಿದ ಟ್ರಸ್ಟ್, ಎಸ್ ಬಿ ಐ ನಿಂದಲೇ ಎಣಿಕೆ ಕಾರ್ಯನಿರ್ವಹಣೆ ಮಾಡಲಿದೆ.

  • 29 Jun 2026 03:56 PM (IST)

    ನಮಗೆ ಪರ್ಯಾಯ ವ್ಯವಸ್ಥೆ ಮಾಡಿ ಅಂಗಡಿ ಎತ್ತಿಸಿ

    ಫುಟ್ ಪಾತ್ ಗಳ ಒತ್ತುವರಿ ತೆರವು ಮಾಡಲು ಬೀದಿ ಬದಿ ವ್ಯಾಪಾರಿಗಳ ಮೀನಮೇಷ ಎಣಿಸುತ್ತಿದ್ದು,ನಮಗೆ ಪರ್ಯಾಯ ವ್ಯವಸ್ಥೆ ಮಾಡಿ ಅಂಗಡಿ ಎತ್ತಿಸಿ ಎಂದು GBA ಅಧಿಕಾರಿಗಳಿಗೆ ಬೀದಿ ಬದಿ ವ್ಯಾಪಾರಿಗಳ ಮನವಿ ಮಾಡಿದ್ದಾರೆ. ನಾವು ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡಿದ್ದೇವೆ . ಈ ವ್ಯಾಪಾರ ಮಾಡಿಕೊಂಡು ಜೀವನ ಕಟ್ಟಿಕೊಂಡಿದ್ದೇವೆ . ನಾವು ಪಾದಚಾರಿಗಳಿಗೆ ತೊಂದರೆ ಕೊಡಲ್ಲ. ಒಂದಷ್ಟು ಜಾಗದಲ್ಲಿ ಮಾತ್ರ ಅಂಗಡಿ ಹಾಕಿಕೊಂಡಿದ್ದೇ ಎನ್ನುವುದು ಬೀದಿ ವ್ಯಾಪಾರಿಯ ಮಾತು.

  • 29 Jun 2026 03:50 PM (IST)

    ಜುಲೈ 1 ರಿಂದ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ

    ಜುಲೈ 1 ರಿಂದ ಬೃಹತ್ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಲಿದೆ. ಹೀಗಾಗಿ ಜಿಬಿಎ ಸ್ವಯಂ ಪ್ರೇರಿತರಾಗಿ ಫುಟ್ ಪಾತ್ ಅತಿಕ್ರಮಣ ತೆರವು ಮಾಡಲು ನೀಡಿದೆ.ಫುಟ್ ಪಾತ್ ಗಳ ಒತ್ತುವರಿ ತೆರವು ಮಾಡಲು ಬೀದಿ ಬದಿ ವ್ಯಾಪಾರಿಗಳ ಮೀನಮೇಷ ಎಣಿಸುತ್ತಿದ್ದಾರೆ. ಜಿಬಿಎ ಕೇಂದ್ರ ಕಚೇರಿ ಕಾರ್ಪೊರೇಷನ್ ಸರ್ಕಲ್ ಬಳಿಯ ಪಾದಚಾರಿ ಮಾರ್ಗ ಒತ್ತುವರಿ ಮಾಡಲಾಗಿದ್ದು, ಜುಲೈ 1 ರಿಂದ ಫುಟ್ ಪಾತ್ ಒತ್ತುವರಿ ತೆರವು ಕಾರ್ಯಾಚರಣೆಗೆ ಅಧಿಕಾರಿಗಳ ಸಿದ್ಧತೆ ನಡೆಸಿದ್ದಾರೆ.

  • 29 Jun 2026 03:15 PM (IST)

    ಬಿಜೆಪಿ ವಕ್ತಾರ ಎಂ.ಜಿ.ಮಹೇಶ್ ಉಚ್ಚಾಟನೆ

    ಪಕ್ಷದ ಸಂಘಟನೆಯಲ್ಲಿ ಅಶಿಸ್ತು ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಬಿಜೆಪಿ ವಕ್ತಾರ ಮಹೇಶ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಲಾಗಿದೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕೀಳುಮಟ್ಟದ, ಅವಹೇಳನಕಾರಿ ಆರೋಪ ಹಿನ್ನೆಲೆಯಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ರಾಜ್ಯ ಬಿಜೆಪಿ ಶಿಸ್ತು ಸಮಿತಿ ಆದೇಶ ಹೊರಡಿಸಿದೆ.

  • 29 Jun 2026 03:12 PM (IST)

    SIR ಬಗ್ಗೆ ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಮಾಹಿತಿ

    ಜೂನ್ 30ರಿಂದ ಜುಲೈ 29ರವರೆಗೆ ಕರ್ನಾಟಕದಲ್ಲಿ SIR ಪ್ರಕ್ರಿಯೆ ನಡೆಯಲಿದ್ದು, ಚುನಾವಣಾ ಆಯೋಗವು SIR ಗೆ ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಿದೆ. ಬಗ್ಗೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನ್ಬುಕುಮಾರ್ ಮಾಹಿತಿ ನೀಡಿದ್ದಾರೆ. ಜೂನ್ 30ರಿಂದ ಜುಲೈ 29ರವರೆಗೆ BLOಗಳು ಮನೆಮನೆಗೆ ಭೇಟಿ ನೀಡಲಿದ್ದು, ಜುಲೈ 27ರಂದು ಮತಗಟ್ಟೆಗಳ ತಾರ್ಕಿಕ ಮರುಹೊಂದಾಣಿಕೆ ವಿಂಗಡಣೆ ಮಾಡಲಾಗುತ್ತದೆ. ಆಗಸ್ಟ್ 5ರಂದು ಕರಡು ಮತದಾರರ ಪಟ್ಟಿ ಬಿಡುಗಡೆಯಾಗುತ್ತಿದ್ದು, ಆಗಸ್ಟ್ 5 ರಿಂದ ಸೆಪ್ಟೆಂಬರ್ 4 ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ, ಆಗಸ್ಟ್ 5ರಿಂದ ಅಕ್ಟೋಬರ್ 3 ರವರೆಗೆ ನೋಟಿಸ್ ಹಂತ ಮತ್ತು ಆಕ್ಷೇಪಣೆಗಳ ವಿಲೇವಾರಿಯಾಗಲಿದ್ದು, ಅಕ್ಟೋಬರ್ 7 ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಾಗಲಿದೆ ಎಂದು ತಿಳಿಸಿದರು.

  • 29 Jun 2026 03:08 PM (IST)

    ಭಟ್ಕಳದಲ್ಲಿ ಕೊಮುಗಲಭೆಯ ಸುಳಿವು ನೀಡಿದ ಗುಪ್ತಚರ ಇಲಾಖೆ

    ಮುರಿನ್ ಕಟ್ಟೆ ವಿವಾದದ ಬಳಿಕ ಭೂದಿ ಮುಚ್ಚಿದ ಕೆಂಡದಂತ ಪರಿಸ್ಥಿತಿ ಇದ್ದು, ಗುಪ್ತಚರ ಇಲಾಖೆಯು, ಭಟ್ಕಳದಲ್ಲಿ ಕೊಮುಗಲಭೆಯ ಸುಳಿವು ನೀಡಿದೆ. ಗುಪ್ತಚರ ಇಲಾಖೆ ವರದಿ ದಾಖಲಾಗುತ್ತಿದ್ದಂತೆ ಎಚ್ಚೆತ್ತ ಉತ್ತರ ಕನ್ನಡ ಜಿಲ್ಲಾಡಳಿತ, ಭಟ್ಕಳದ 60 ರೌಡಿ ಶಿಟರ್ ಗಳಿಗೆ ತಹಶಿಲ್ದಾರ ನೊಟೀಸ್ ನೀಡಿದ್ದು, ದುರ್ವತನೆ ತೊರುವುದಿಲ್ಲವೆಂದು ಬಾಂಡ್ ಬರೆದುಕೊಡುವಂತೆ ಭಟ್ಕಳ ತಹಶಿಲ್ದಾರ ಪ್ರವೀಣ ಕರಾಂಡೆ ಸೂಚಿಸಿದೆ. ಗಣೇಶ್ ಹಬ್ಬ, ಈದ ಮಿಲಾದ ಹಾಗೂ ಯಾವುದೇ ಹಬ್ಬ ಸಂದರ್ಭದಲ್ಲಿ ಕೊಮು ಗಲಭೆಗಳಲ್ಲಿ ಭಾಗಿ ಆಗುವುದಿಲ್ಲವೆಂದು ಸುಮಾರು 50,000 ರೂಪಾಯಿ ಮುಚ್ಚಳಿಕೆ ಬಾಂಡ್ ಬರೆಸಿಕೊಳ್ಳಲಾಗುತ್ತಿದೆ.

  • 29 Jun 2026 03:04 PM (IST)

    ಆಡಿಯೋ ಬಗ್ಗೆ ಸದಾನಂದಗೌಡ ಸ್ಪಷ್ಟನೆ

    ಇನ್ನು ಈ ಆಡಿಯೋ ವೈರಲ್ ಆಗುತ್ತಿದ್ದಂತೆಯೇ ಈ ಬಗ್ಗೆ ಮಾತನಾಡಿರುವ ನೀಡಿರುವ ಡಿವಿಎಸ್, ಆಡಿಯೋ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಈ ಆಡಿಯೋ ಬಗ್ಗೆ ನನಗೆ ಗೊತ್ತಿಲ್ಲ, ಹಾಗಾಗಿ ಉತ್ತರ ಕೊಡುವುದಿಲ್ಲ. ಆಡಿಯೋ ಬಗ್ಗೆ ಸತ್ಯ ಸಂಗತಿ ಹೊರಬರಲಿ. ನನ್ನ ಬಗ್ಗೆ ಬಹಳ ದಿನದಿಂದ ಚರ್ಚೆ ಆಗುತ್ತಿತ್ತು. ಕೋರ್ ಕಮಿಟಿ ಸಭೆಯಲ್ಲಿ ಕೆಲವು ಮಾತುಗಳನ್ನು ಹೇಳಿದ್ದೇನೆ. ಕೇಂದ್ರ ನಾಯಕರು, ರಾಜ್ಯ ನಾಯಕರು ಕೇಳಿದ್ರೆ ಉತ್ತರ ಕೊಡುತ್ತೇನೆ ಎಂದು ಸ್ಪಷ್ಟಪಡಿಸಿದರು.

  • 29 Jun 2026 02:54 PM (IST)

    ಅಶಿಸ್ತು ಹಿನ್ನೆಲೆ ಬಿಜೆಪಿ ವಕ್ತಾರ ಎಂ.ಜಿ. ಮಹೇಶ್ 6 ವರ್ಷ ಪಕ್ಷದಿಂದ ಉಚ್ಚಾಟನೆ!

    ಪಕ್ಷದ ಆಂತರಿಕ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕೀಳುಮಟ್ಟದ ಹಾಗೂ ಅವಹೇಳನಕಾರಿ ಆರೋಪ ಮಾಡಿ ಅಶಿಸ್ತು ಪ್ರದರ್ಶಿಸಿದ ಹಿನ್ನೆಲೆಯಲ್ಲಿ, ಬಿಜೆಪಿ ರಾಜ್ಯ ವಕ್ತಾರ ಎಂ.ಜಿ. ಮಹೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಲಾಗಿದೆ. ಸಭೆಯಲ್ಲಿ ಅವರು ವರ್ತಿಸಿದ ರೀತಿಗೆ ಸಂಬಂಧಿಸಿದಂತೆ ನೀಡಿದ್ದ ಸ್ಪಷ್ಟೀಕರಣವು ತೃಪ್ತಿಕರವಾಗಿಲ್ಲದ ಕಾರಣ, ಬಿಜೆಪಿ ಶಿಸ್ತು ಸಮಿತಿಯು ಅವರನ್ನು ಪಕ್ಷದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಿ ಈ ಕಠಿಣ ಕ್ರಮ ಕೈಗೊಂಡಿದೆ. ಉಚ್ಚಾಟನೆಯ ಆದೇಶದ ಪ್ರತಿಯನ್ನು ಶಿಸ್ತು ಸಮಿತಿಯ ಅಧ್ಯಕ್ಷರಾದ ಲಿಂಗರಾಜ್ ಪಾಟೀಲ್ ಅವರು ಹೊರಡಿಸಿದ್ದಾರೆ.

  • 29 Jun 2026 02:52 PM (IST)

    ನಾಳೆಯಿಂದ ‘SIR’ ಪ್ರಕ್ರಿಯೆ ಆರಂಭ!

    ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿ ಪರಿಷ್ಕರಿಸಲಿದ್ದಾರೆ. ಆಗಸ್ಟ್ 5ಕ್ಕೆ ಕರಡು ಪಟ್ಟಿ ಬಿಡುಗಡೆಯಾಗಲಿದ್ದು, ಅಕ್ಟೋಬರ್ 7ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

  • 29 Jun 2026 02:48 PM (IST)

    ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೆ ಹುಸಿ ಬಾಂಬ್ ಬೆದರಿಕೆ: ಇ-ಮೇಲ್ ಬೆನ್ನಲ್ಲೇ ತಪಾಸಣೆ!

    ಶಿವಮೊಗ್ಗ ಜಿಲ್ಲಾ ನ್ಯಾಯಾಲಯಕ್ಕೆ ಒಂದೇ ವಾರದಲ್ಲಿ ಎರಡನೇ ಬಾರಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದ್ದು, ಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಒಂದು ಗಂಟೆಗೆ ಕೋರ್ಟ್ ಸ್ಫೋಟಿಸುವುದಾಗಿ ವಿದೇಶದಿಂದ ಜಿಲ್ಲಾ ನ್ಯಾಯಾಧೀಶರಿಗೆ ಇ-ಮೇಲ್ ಬಂದ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಅಲರ್ಟ್ ಆಗಿದ್ದಾರೆ. ಸ್ಥಳಕ್ಕೆ ಶ್ವಾನ ದಳ ಹಾಗೂ ಬಾಂಬ್ ನಿಷ್ಕ್ರಿಯ ದಳದೊಂದಿಗೆ ಧಾವಿಸಿದ ಜಯನಗರ ಠಾಣೆ ಪೊಲೀಸರು ಇಡೀ ನ್ಯಾಯಾಲಯದ ಆವರಣವನ್ನು ತೀವ್ರ ತಪಾಸಣೆಗೆ ಒಳಪಡಿಸಿದ್ದು, ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಲಾಗಿದೆ.

  • 29 Jun 2026 02:43 PM (IST)

    ಸೆಶೆಲ್ಸ್ ಗಣಪತಿ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ; ಗಾಂಧಿ ಸ್ಮಾರಕಕ್ಕೆ ನಮನ!

    ಭಾರತ-ಸೆಶೆಲ್ಸ್ ಬಾಂಧವ್ಯ ವೃದ್ಧಿಯ ಹಿನ್ನೆಲೆಯಲ್ಲಿ ಸೆಶೆಲ್ಸ್‌ನ 50ನೇ ಸ್ವಾತಂತ್ರ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಪ್ರಧಾನಿ ನರೇಂದ್ರ ಮೋದಿ, ಅಲ್ಲಿನ ಐತಿಹಾಸಿಕ ಅರುಲ್ಮಿಗು ನವಶಕ್ತಿ ವಿನಾಯಗರ್ ದೇವಸ್ಥಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಇದೇ ವೇಳೆ ಮಹಾತ್ಮಾ ಗಾಂಧೀಜಿ ಸ್ಮಾರಕಕ್ಕೂ ನಮನ ಸಲ್ಲಿಸಿದ ಅವರು, ಉಭಯ ದೇಶಗಳ ಸಾಂಸ್ಕೃತಿಕ ಹಾಗೂ ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸಿದರು.

    ಫೋಟೋಗಳನ್ನು ನೋಡಿ

  • 29 Jun 2026 02:35 PM (IST)

    ರಾಮಮಂದಿರ ದೇಣಿಗೆ ಕಳ್ಳತನ ವಿವಾದ: 70-80 ಜನರಿಗೆ ನೋಟಿಸ್!

    ಅಯೋಧ್ಯೆ ರಾಮಮಂದಿರದ ದೇಣಿಗೆ ಕಳ್ಳತನ ಹಾಗೂ ಅವ್ಯವಹಾರ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಮುಖರಾದ ಅನಿಲ್ ಮಿಶ್ರಾ ಮತ್ತು ಗೋಪಾಲ್ ರಾವ್ ಸೇರಿದಂತೆ ಸುಮಾರು 70 ರಿಂದ 80 ಜನರಿಗೆ ತನಿಖಾಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ. ಬ್ಯಾಂಕ್ ಸಿಬ್ಬಂದಿ ಭಾಗಿಯಾಗಿರುವ ಈ ಕೋಟ್ಯಂತರ ರೂಪಾಯಿ ಲೂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿಚಾರಣೆ ಹಾಗೂ ಮಾಹಿತಿ ಕಲೆಹಾಕಲು ಈ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.

  • 29 Jun 2026 02:32 PM (IST)

    ನಿವೃತ್ತ ದೈಹಿಕ ಶಿಕ್ಷಕನಿಗೆ ಹೊಸ ಬೈಕ್ ಉಡುಗೊರೆ ನೀಡಿದ ಹಳೆ ವಿದ್ಯಾರ್ಥಿಗಳು!

    ಕೊಪ್ಪಳ ಜಿಲ್ಲೆ ಕುಕನೂರು ತಾಲೂಕಿನ ಮಸಬಹಂಚಿನಾಳದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೆಯ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಗುರುವಿಗೆ ಅಪೂರ್ವ ‘ಗುರು ಕಾಣಿಕೆ’ ನೀಡಿದ್ದಾರೆ. ಇತ್ತೀಚೆಗಷ್ಟೇ ಸೇವೆಯಿಂದ ನಿವೃತ್ತರಾದ ದೈಹಿಕ ಶಿಕ್ಷಕ ಜೆ.ಎಂ. ನದಾಫ್ ಅವರ ಸನ್ಮಾನದ ನೆನಪಿಗಾಗಿ ವಿದ್ಯಾರ್ಥಿಗಳೆಲ್ಲರೂ ಒಟ್ಟಾಗಿ ಹೊಸ ಬೈಕ್ ಒಂದನ್ನು ಉಡುಗೊರೆಯಾಗಿ ನೀಡುವ ಮೂಲಕ ಗುರುಭಕ್ತಿ ಮೆರೆದಿದ್ದಾರೆ. ವಿದ್ಯಾರ್ಥಿಗಳ ಈ ಪ್ರೀತಿಗೆ ಶಿಕ್ಷಕರು ಭಾವುಕರಾಗಿದ್ದು, ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ. ಮತ್ತಷ್ಟು ಓದಿ

  • 29 Jun 2026 02:18 PM (IST)

    ಅಯೋಧ್ಯೆ ರಾಮಮಂದಿರ ದೇಣಿಗೆ ಲೂಟಿ: 15 ಸಾವಿರ ಸಂಬಳದ ಯುವಕನ ಕೋಟಿ ಕೋಟಿ ಆಸ್ತಿ ಕಂಡು ಪೊಲೀಸರೇ ಶಾಕ್!

    ಅಯೋಧ್ಯೆ ರಾಮಮಂದಿರದ ಕೋಟ್ಯಂತರ ರೂಪಾಯಿ ದೇಣಿಗೆ ಲೂಟಿ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಉತ್ತರ ಪ್ರದೇಶ ಪೊಲೀಸರು ಆರೋಪಿಗಳ ಆಸ್ತಿ ಮುಟ್ಟುಗೋಲು ಪ್ರಕ್ರಿಯೆ ಆರಂಭಿಸಿದ್ದಾರೆ. ಈ ವೇಳೆ ಬ್ಯಾಂಕ್‌ನ ಔಟ್‌ಸೋರ್ಸಿಂಗ್ ಉದ್ಯೋಗಿ, 22 ವರ್ಷದ ಅನುಕಲ್ಪ್ ಮಿಶ್ರಾ ಎಂಬಾತನ ಭಾರಿ ಆಸ್ತಿ ಕಂಡು ಅಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ತಿಂಗಳಿಗೆ ಕೇವಲ 15 ಸಾವಿರ ರೂಪಾಯಿ ಸಂಬಳ ಪಡೆಯುತ್ತಿದ್ದ ಈತ, ರಾಮನ ಹಣವನ್ನು ಕದ್ದು ಅಲ್ಪಾವಧಿಯಲ್ಲೇ ಕೋಟ್ಯಾಧಿಪತಿಯಾಗಿದ್ದ ಸತ್ಯ ತನಿಖೆಯಲ್ಲಿ ಬಯಲಾಗಿದೆ. ಸದ್ಯ ಆತನ ಆದಾಯದ ಮೂಲವನ್ನು ಮೀರಿದ ಆಸ್ತಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮತ್ತಷ್ಟು ಓದಿ

  • 29 Jun 2026 02:13 PM (IST)

    ಉದ್ಯಮಿ ಹಣ ದರೋಡೆ: ಐವರ ಬಂಧನ!

    ಡ್ರೈವರ್ ಮಾಹಿತಿಯಂತೆ ಉದ್ಯಮಿಯಿಂದ 1.05 ಕೋಟಿ ರೂ. ದರೋಡೆ ಮಾಡಿದ್ದ ಐವರನ್ನು ಮಾದನಾಯಕನಹಳ್ಳಿ ಪೊಲೀಸರು ಬಂಧಿಸಿ, 85.50 ಲಕ್ಷ ರೂ. ಜಪ್ತಿ ಮಾಡಿದ್ದಾರೆ.

  • 29 Jun 2026 12:41 PM (IST)

    ತಹಶೀಲ್ದಾರ್ ಜೀಪ್ ಡಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು!

    ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 75ರ ಈಶ್ವರಹಳ್ಳಿ ಕೂಡಿಗೆ ಸರ್ಕಲ್ ಬಳಿ ಸಕಲೇಶಪುರ ತಹಶೀಲ್ದಾರ್ ಸುಪ್ರಿತಾ ಅವರ ಜೀಪ್ ಬೈಕ್‌ಗೆ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಹಾಸನ ಪೆನ್‌ಷನ್ ಮೊಹಲ್ಲಾದ ಜಮ್ಶಿದ್ (58) ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬ ಸವಾರ ನದೀಮ್ ತೀವ್ರವಾಗಿ ಗಾಯಗೊಂಡಿದ್ದಾರೆ. ಕೆಲಸ ನಿಮಿತ್ತ ಬೈಕಿನಲ್ಲಿ ತೆರಳುತ್ತಿದ್ದ ಇವರಿಗೆ ತಹಶೀಲ್ದಾರ್ ಇದ್ದ ಜೀಪ್ ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

  • 29 Jun 2026 12:33 PM (IST)

    ಚನ್ನಪಟ್ಟಣದಲ್ಲಿ ಕೆಂಪೇಗೌಡರ ಬ್ಯಾನರ್​ಗೆ ಬೆಂಕಿ!

    ದೇವನಹಳ್ಳಿ ಗ್ರಾಮದಲ್ಲಿ ಕಿಡಿಗೇಡಿಗಳು ನಾಡಪ್ರಭು ಕೆಂಪೇಗೌಡರ ಜಯಂತಿ ಬ್ಯಾನರ್‌ಗೆ ಬೆಂಕಿ ಹಚ್ಚಿದ್ದು, ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಶಿಕ್ಷೆಗೆ ಆಗ್ರಹಿಸಿದ್ದಾರೆ.

  • 29 Jun 2026 12:28 PM (IST)

    ಗುಟ್ಕಾ, ಪಾನ್ ಮಸಾಲಾದಲ್ಲಿ ಡ್ರಗ್ಸ್ ಪತ್ತೆಯಾದ್ರೆ ಸಂಪೂರ್ಣ ಬ್ಯಾನ್: ಸಿಎಂ ಎಚ್ಚರಿಕೆ

    ಕರ್ನಾಟಕದಲ್ಲಿ ಮಾರಾಟವಾಗುವ ಪಾನ್ ಮಸಾಲಾ, ಗುಟ್ಕಾ ಹಾಗೂ ಅಡಿಕೆ ಉತ್ಪನ್ನಗಳಲ್ಲಿ ಕಿಕ್ ನೀಡಲು ಮಾದಕ ದ್ರವ್ಯಗಳನ್ನು (ಡ್ರಗ್ಸ್) ಮಿಶ್ರಣ ಮಾಡುತ್ತಿರುವ ಮಾಹಿತಿ ಸಿಕ್ಕಿದ್ದು, ಇದು ಪತ್ತೆಯಾದಲ್ಲಿ ಇಂತಹ ಉತ್ಪನ್ನಗಳನ್ನು ರಾಜ್ಯದಲ್ಲಿ ಸಂಪೂರ್ಣವಾಗಿ ನಿಷೇಧಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕಠಿಣ ಎಚ್ಚರಿಕೆ ನೀಡಿದ್ದಾರೆ. ‘ಮಾದಕ ಮುಕ್ತ ಕರ್ನಾಟಕ’ ನಿರ್ಮಾಣವೇ ಸರ್ಕಾರದ ಗುರಿಯಾಗಿದ್ದು, ಯುವ ಪೀಳಿಗೆಯನ್ನು ವ್ಯಸನದಿಂದ ಮುಕ್ತಗೊಳಿಸಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಮತ್ತಷ್ಟು ಓದಿ

  • 29 Jun 2026 12:16 PM (IST)

    ಜಿ ರಾಮ್ ಜಿ ಸ್ಕೀಂ: ಕೇಂದ್ರದ ನೀತಿಗೆ ಪ್ರಿಯಾಂಕ್ ಖರ್ಗೆ ಅಸಮಾಧಾನ!

    ಯೋಜನೆಯ ಶೇ 40ರಷ್ಟು ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹೇರಿರುವುದು ಅಸಂವಿಧಾನಿಕವಾಗಿದ್ದು, ಬಿಜೆಪಿ ಆಡಳಿತದ ರಾಜ್ಯಗಳೂ ಇದನ್ನು ವಿರೋಧಿಸುತ್ತಿವೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.

  • 29 Jun 2026 12:13 PM (IST)

    ಜಮಖಂಡಿ ಹೊರವಲಯದಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆ!

    ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ಬಿದರಿ ಗ್ರಾಮದ ಹೊರವಲಯದಲ್ಲಿ ನವಜಾತ ಗಂಡು ಶಿಶುವಿನ ಶವ ಪತ್ತೆಯಾಗಿದೆ. ಮಗುವನ್ನು ಊರ ಹೊರಗೆ ಎಸೆದು ಹೋಗಿರುವ ಕೃತ್ಯ ಕಂಡ ಸ್ಥಳೀಯರು ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಜಮಖಂಡಿ ಆರೋಗ್ಯಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

  • 29 Jun 2026 12:11 PM (IST)

    ನಿಜವಾದ ಮತದಾರರಿಗೆ ಅನ್ಯಾಯವಾಗಬಾರದು ಎಂದ ಸಚಿವ ಪ್ರಿಯಾಂಕ್ ಖರ್ಗೆ

    ಚುನಾವಣಾ ಆಯೋಗದ ಸಾಫ್ಟ್‌ವೇರ್ ಆಧಾರಿತ ಮತದಾರರ ಪಟ್ಟಿ ಪರಿಷ್ಕರಣೆಯಿಂದ (SIR) ನಿಜವಾದ ಬಡ ಮತದಾರರ ಹಕ್ಕಿಗೆ ಚ್ಯುತಿ ಬರಬಾರದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

  • 29 Jun 2026 12:07 PM (IST)

    ಯಶ್ ಮುಂದಿನ ಚಿತ್ರದ ಕಥೆ ಲೀಕ್? ಐಎಂಡಿಬಿಯಲ್ಲಿ ಪೊಲೀಸ್ ಪಾತ್ರದ ಸುಳಿವು!

    ರಾಕಿಂಗ್ ಸ್ಟಾರ್ ಯಶ್ ಅವರ ಮುಂದಿನ ಸಿನಿಮಾ ಕುರಿತು ಐಎಂಡಿಬಿ (IMDb) ನಲ್ಲಿ ರೋಚಕ ಮಾಹಿತಿ ಲೀಕ್ ಆಗಿದೆ. ಮಿಲಿಟರಿ ಅಧಿಕಾರಿಯೊಬ್ಬ ಪೊಲೀಸ್ ಆಗುವ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನರ್ತನ್ ನಿರ್ದೇಶನ ಹಾಗೂ ತೃಪ್ತಿ ಡಿಮ್ರಿ ನಾಯಕಿ ಎಂಬ ಸುದ್ದಿ ಹರಿದಾಡುತ್ತಿದ್ದು, ‘ಟಾಕ್ಸಿಕ್’ ನಂತರದ ಈ ಅಪ್ಡೇಟ್ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮತ್ತಷ್ಟು ಓದಿ

  • 29 Jun 2026 12:06 PM (IST)

    2 ಕೋಟಿ ರೂ. ಮೌಲ್ಯದ ಹೈಡ್ರೋ ಗಾಂಜಾ ಜಪ್ತಿ; ಕೇರಳ ಮೂಲದ ಆರೋಪಿ ಬಂಧನ!

    ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನಲ್ಲಿ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಕೇರಳ ಮೂಲದ ಮೊಹಮ್ಮದ್ ಉಮರ್ ಉಲ್ಲಾ ಫಾರೂಕ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿಂದ 2 ಕೋಟಿ ರೂಪಾಯಿ ಮೌಲ್ಯದ 2 ಕೆಜಿ ಹೈಡ್ರೋ ಗಾಂಜಾ ವಶಪಡಿಸಿಕೊಳ್ಳಲಾಗಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಫಾರಿಸ್‌ಗಾಗಿ ತಲಾಶ್ ನಡೆಸಲಾಗುತ್ತಿದೆ. ಖಾಸಗಿ ಕಂಪನಿ ನೌಕರರಾಗಿದ್ದ ಇವರು ಡ್ರಗ್ಸ್ ದಂಧೆಗೆ ಇಳಿದಿದ್ದರು.

  • 29 Jun 2026 12:05 PM (IST)

    ರಸ್ತೆ ದಾಟಲು ಪರದಾಟ, ಜನರ ಕಷ್ಟ ಕೇಳಿದ ಸಂಸದ ತೇಜಸ್ವಿ ಸೂರ್ಯ

    ಬನಶಂಕರಿ ಸ್ಕೈವಾಕ್ ಯೋಜನೆ ರದ್ದತಿಯಿಂದ ಸಾರ್ವಜನಿಕರ ರಸ್ತೆ ದಾಟುವ ಕಷ್ಟ ಆಲಿಸಿದ ಸಂಸದ ತೇಜಸ್ವಿ ಸೂರ್ಯ, ಸರ್ಕಾರದ ಆದ್ಯತೆಗಳ ವಿರುದ್ಧ ಜನಾಕ್ರೋಶ ವ್ಯಕ್ತಪಡಿಸಿದರು.

  • 29 Jun 2026 12:02 PM (IST)

    ರಾಮ್ ಮಂದಿರ ದೇಣಿಗೆ ವಿವಾದ: ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಣೆ!

    ರಾಮ್ ಮಂದಿರ ಚಂದಾ ಅವ್ಯವಹಾರದ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿಯ ತುರ್ತು ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇಷ್ಟೊಂದು ಅವಸರ ಏಕಿದೆ? ಎಂದು ಪ್ರಶ್ನಿಸಿದ ನ್ಯಾಯಪೀಠ, ಬೇಸಿಗೆ ರಜೆ ಬಳಿಕ ವಿಚಾರಣೆ ನಡೆಸಲು ನಿರ್ಧರಿಸಿದೆ. ಸದ್ಯ ಉತ್ತರ ಪ್ರದೇಶ ಸರ್ಕಾರದ ಎಸ್‌ಐಟಿ ತನಿಖೆ ಪ್ರಗತಿಯಲ್ಲಿದೆ. ಮತ್ತಷ್ಟು ಓದಿ 

  • 29 Jun 2026 11:37 AM (IST)

    ಲಗೇಜ್ ಬ್ಯಾಗ್‌ನಲ್ಲಿ ತರುತ್ತಿದ್ದ 21 ಕೋಟಿ ರೂ. ಮೌಲ್ಯದ ಡ್ರಗ್ಸ್ ಜಪ್ತಿ

    ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಲಗೇಜ್ ಟ್ರ್ಯಾಲಿ ಬ್ಯಾಗ್‌ನಲ್ಲಿ ಅಡಗಿಸಿಟ್ಟು ಡ್ರಗ್ಸ್ ಸಾಗಿಸುತ್ತಿದ್ದ ಮೂವರು ನೈಜೀರಿಯಾ ಮೂಲದ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಬರೋಬ್ಬರಿ 21 ಕೋಟಿ ರೂಪಾಯಿ ಮೌಲ್ಯದ 10 ಕೆಜಿ 270 ಗ್ರಾಂ ಎಂಡಿಎಂಎ (MDMA) ಕ್ರಿಸ್ಟಲ್, 4 ಮೊಬೈಲ್ ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

  • 29 Jun 2026 11:12 AM (IST)

    ಪಾಕ್-ಅಫ್ಘಾನ್ ಗಡಿಯಲ್ಲಿ ಸೇನಾ ದಾಳಿ: 35ಕ್ಕೂ ಹೆಚ್ಚು ನಾಗರಿಕರ ಸಾವು!

    ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ಭೀಕರ ಹಿಂಸಾಚಾರ ಭುಗಿಲೆದ್ದಿದ್ದು, ಪಾಕ್ ನಡೆಸಿದ ಭೂ ಕಾರ್ಯಾಚರಣೆಯಲ್ಲಿ ಮಕ್ಕಳು, ವೃದ್ಧರು ಸೇರಿ 35ಕ್ಕೂ ಹೆಚ್ಚು ನಾಗರಿಕರು ಬಲಿಯಾಗಿದ್ದಾರೆ. ಕರಾಚಿ ದಾಳಿಗೆ ಪ್ರತೀಕಾರವಾಗಿ ನಡೆದ ಈ ದಾಳಿಗೆ ಅಫ್ಘಾನಿಸ್ತಾನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಇಸ್ಲಾಮಾಬಾದ್ ಮತ್ತು ಕಾಬೂಲ್ ನಡುವಿನ ಗಡಿ ಉದ್ವಿಗ್ನತೆ ಅಪಾಯಕಾರಿ ಮಟ್ಟಕ್ಕೆ ತಲುಪಿದೆ.

  • 29 Jun 2026 11:11 AM (IST)

    ನೆಲಮಂಗಲ: ಲಾರಿ ಚಕ್ರಕ್ಕೆ ಸಿಲುಕಿ ಎಂಬಿಎ ವಿದ್ಯಾರ್ಥಿ ದುರ್ಮರಣ!

    ಶಿರಾ ತಾಲೂಕಿನ ಬಡಮಾರನಹಳ್ಳಿಯ ಶಶಿಕುಮಾರ್ (24) ಎಂಬಿಎ ವಿದ್ಯಾರ್ಥಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸ್ಕಿಡ್ ಆಗಿ ಲಾರಿ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ದಯಾನಂದ ಸಾಗರ್ ಕಾಲೇಜಿನಲ್ಲಿ ಓದುತ್ತಿದ್ದ, ಪೊಲೀಸ್ ಆಗುವ ಕನಸು ಹೊತ್ತಿದ್ದ ದಂಪತಿಯ ಏಕೈಕ ಮಗ ನಿನ್ನೆ ರಾತ್ರಿ ಬೆಂಗಳೂರಿಗೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ನೆಲಮಂಗಲ ಸಂಚಾರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

  • 29 Jun 2026 11:10 AM (IST)

    ಫಿಫಾ ವಿಶ್ವಕಪ್ 2026: ರೌಂಡ್ ಆಫ್ 32 ಹಂತಕ್ಕೆ ಲಗ್ಗೆ ಇಟ್ಟ ಮೆಸ್ಸಿ ಪಡೆ!

    48 ತಂಡಗಳೊಂದಿಗೆ ಆರಂಭವಾದ ಫಿಫಾ ವಿಶ್ವಕಪ್ ರೋಚಕ ಘಟ್ಟ ತಲುಪಿದ್ದು, ಅರ್ಜೆಂಟೀನಾ ಸೇರಿದಂತೆ 32 ತಂಡಗಳು ಮುಂದಿನ ಸುತ್ತಿಗೆ ಲಗ್ಗೆ ಇಟ್ಟಿವೆ. ಈ ನಾಕೌಟ್ ಹಂತದಲ್ಲಿ ಗೆಲ್ಲುವ ತಂಡಗಳು ರೌಂಡ್ ಆಫ್ 16 ಪ್ರವೇಶಿಸಲಿದ್ದು, ಲಿಯೋನೆಲ್ ಮೆಸ್ಸಿ ಪಡೆಯ ಫೈನಲ್ ಹಾದಿ ಸುಲಭವಾಗಿದೆ ಎಂದು ವಿಶ್ಲೇಷಿಸಲಾಗಿದೆ. ಮತ್ತಷ್ಟು ಓದಿ

  • 29 Jun 2026 10:35 AM (IST)

    ಚಲಿಸುವ ಕಾರಿನಲ್ಲಿ ಬೆಂಕಿ; ಪ್ರಯಾಣಿಕರು ಪಾರು!

    ಬೆಳಗಾವಿಯ ರಾಮದೇವ ಹೋಟೆಲ್ ಬಳಿ ಚಲಿಸುತ್ತಿದ್ದ ಕಾರಿನಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಚಾಲಕನ ಸಮಯಪ್ರಜ್ಞೆಯಿಂದ ಕಾರಿನಲ್ಲಿದ್ದ ನಾಲ್ಕೂ ಜನರು ತಕ್ಷಣ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕ್ಷಣಾರ್ಧದಲ್ಲೇ ಕಾರು ಸುಟ್ಟು ಕರಕಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.

  • 29 Jun 2026 10:34 AM (IST)

    ಮಂಗಳೂರು: ಹೆದ್ದಾರಿಯಲ್ಲಿ ಸಿನೆಮಾ ಶೈಲಿ ದರೋಡೆ!

    ಮಹಾರಾಷ್ಟ್ರದಿಂದ ಮದುವೆ ಮುಗಿಸಿ ಹಿಂತಿರುಗುತ್ತಿದ್ದ ಕೇರಳದ ಚಿನ್ನದ ವ್ಯಾಪಾರಿ ವಿಕಾಸ್ ಕುಟುಂಬವನ್ನು ಬೈಕಂಪಾಡಿ ಹೆದ್ದಾರಿಯಲ್ಲಿ ಕಾರುಗಳಿಂದ ಅಡ್ಡಗಟ್ಟಿದ ದರೋಡೆಕೋರರು, ಅವರ ಪತ್ನಿ-ಮಗನನ್ನು ಬೆದರಿಸಿ ಕಾರಿನಲ್ಲಿದ್ದ 20 ಲಕ್ಷ ರೂ. ಮೌಲ್ಯದ ಚಿನ್ನ ಹಾಗೂ ನಗದಿನೊಂದಿಗೆ ಪರಾರಿಯಾಗಿದ್ದಾರೆ.

  • 29 Jun 2026 10:12 AM (IST)

    ಭಾರಿ ಪ್ರವಾಹಕ್ಕೆ ಸಿಲುಕಿ ತತ್ತರಿಸಿದ ಅಸ್ಸಾಂ: 22,000ಕ್ಕೂ ಹೆಚ್ಚು ಜನರಿಗೆ ಸಂಕಷ್ಟ!

    ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೀಕರ ಜಲಪ್ರಳಯ ಸೃಷ್ಟಿಯಾಗಿದೆ. ಧೆಮಾಜಿ, ದಿಬ್ರುಗಢ ಸೇರಿದಂತೆ ಆರು ಜಿಲ್ಲೆಗಳ 22,000ಕ್ಕೂ ಹೆಚ್ಚು ಜನರ ಜೀವನ ಅಸ್ತವ್ಯಸ್ತಗೊಂಡಿದ್ದು, ಆಸ್ತಿಪಾಸ್ತಿ ನಷ್ಟವಾಗಿದೆ. ಮನೆಗಳನ್ನು ಕಳೆದುಕೊಂಡ ಕುಟುಂಬಗಳು ಬೀದಿಗೆ ಬಿದ್ದಿದ್ದು, ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ.

Published On - Jun 29,2026 10:08 AM

Follow Us