ಕೇಂದ್ರದ 4,500 ಇ-ಬಸ್ ಪಡೆಯಲು ರಾಜ್ಯ ಹಿಂದೇಟು ಹಾಕ್ತಿರೋದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಸಾರಿಗೆ ಸಚಿವ ಭೈರತಿ ಸುರೇಶ್

ಕೇಂದ್ರ ಸರ್ಕಾರದ ‘ಪಿಎಂ ಇ-ಡ್ರೈವ್’ ಯೋಜನೆ ಅಡಿಯಲ್ಲಿ ಬಿಎಂಟಿಸಿಗೆ ಹಂಚಿಕೆಯಾಗಿರುವ 4500 ಎಲೆಕ್ಟ್ರಿಕ್ ಬಸ್ಸುಗಳನ್ನು ಪಡೆಯಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದಕ್ಕೆ ಅಸಲಿ ಕಾರಣ ಏನೆಂಬುದನ್ನು ಸಾರಿಗೆ ಸಚಿವ ಭೈರತಿ ಸುರೇಶ್ ಬಿಚ್ಚಿಟ್ಟಿದ್ದಾರೆ. ಆರ್ಥಿಕ ನಷ್ಟ ಹಾಗೂ ತಾರತಮ್ಯದ ಒಪ್ಪಂದವೇ ಪ್ರಮುಖ ಕಾರಣ ಎಂದು ಅವರು ಹೇಳಿದ್ದಾರೆ.

ಕೇಂದ್ರದ 4,500 ಇ-ಬಸ್ ಪಡೆಯಲು ರಾಜ್ಯ ಹಿಂದೇಟು ಹಾಕ್ತಿರೋದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಸಾರಿಗೆ ಸಚಿವ ಭೈರತಿ ಸುರೇಶ್
ತೇಜಸ್ವಿ ಸೂರ್ಯಗೆ ಭೈರತಿ ಸುರೇಶ್ ಕೌಂಟರ್
Image Credit source: tv9
Edited By:

Updated on: Jul 01, 2026 | 2:21 PM

ಮುಖ್ಯಾಂಶಗಳು

  • ಕೇಂದ್ರದ ಇ-ಬಸ್ಸುಗಳಿಂದ ರಾಜ್ಯಕ್ಕೆ ಭಾರಿ ನಷ್ಟ
  • ಬಸ್ ಓಡದಿದ್ದರೂ ಕೊಡಬೇಕು ಕೋಟಿ ಕೋಟಿ ಬಾಡಿಗೆ
  • ಪ್ರತಿವರ್ಷ ₹3,000 ಕೋಟಿ ಪಾವತಿಸುವ ಕಠಿಣ ಷರತ್ತು

ಬೆಂಗಳೂರು, ಜುಲೈ 1: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಿಎಂ ಇ-ಡ್ರೈವ್ (PM E-Drive)’ ಯೋಜನೆಯಡಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (BMTC) ನೀಡಲು ಉದ್ದೇಶಿಸಿರುವ 4,500 ಎಲೆಕ್ಟ್ರಿಕ್ ಬಸ್ಸುಗಳನ್ನು ಪಡೆದುಕೊಳ್ಳಲು ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿರುವುದರ ಹಿಂದಿನ ಅಸಲಿ ಆರ್ಥಿಕ ಲೆಕ್ಕಾಚಾರವನ್ನು ಸಾರಿಗೆ ಸಚಿವ ಭೈರತಿ ಸುರೇಶ್ ಬಹಿರಂಗಪಡಿಸಿದ್ದಾರೆ. ಕೇಂದ್ರದ ಈ ನಿಯಮಾವಳಿಗಳಿಂದ ರಾಜ್ಯ ಸಾರಿಗೆ ಸಂಸ್ಥೆಗೆ ಭಾರಿ ನಷ್ಟ ಉಂಟಾಗಲಿದ್ದು, ಬಸ್ಸುಗಳು ಸಂಚಾರ ನಡೆಸದೆ ಶೆಡ್‌ನಲ್ಲಿ ನಿಂತರೂ ಕೋಟ್ಯಂತರ ರೂಪಾಯಿ ಬಾಡಿಗೆ ಪಾವತಿಸಬೇಕಾದ ಕಠಿಣ ಷರತ್ತುಗಳು ಇರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವರ್ಷಕ್ಕೆ 3,000 ಕೋಟಿ ರೂ. ಬಾಡಿಗೆ, ಕಲೆಕ್ಷನ್ ಮಾತ್ರ 2,000 ಕೋಟಿ ರೂ!

ಒಟ್ಟು 6,000 ಕೋಟಿ ರೂಪಾಯಿ ಮೌಲ್ಯದ 4,500 ಎಲೆಕ್ಟ್ರಿಕ್ ಬಸ್ಸುಗಳನ್ನು ಒಪ್ಪಂದದ ಅಡಿಯಲ್ಲಿ ಪಡೆಯಲು ಪ್ರತಿವರ್ಷ ಅಂದಾಜು 3,000 ಕೋಟಿ ರೂಪಾಯಿ ಬಾಡಿಗೆಯನ್ನು ಖಾಸಗಿ ಆಪರೇಟರ್‌ಗಳಿಗೆ ಪಾವತಿಸಬೇಕಾಗುತ್ತದೆ. ಆದರೆ, ಈ ಬಸ್ಸುಗಳಿಂದ ಬಿಎಂಟಿಸಿಗೆ ವಾರ್ಷಿಕವಾಗಿ ಕೇವಲ 2,000 ಕೋಟಿ ರೂಪಾಯಿ ಮಾತ್ರ ಆದಾಯ ಸಂಗ್ರಹವಾಗಲಿದೆ. ಅಂದರೆ, ಪ್ರತಿವರ್ಷ ಸುಮಾರು 1,000 ಕೋಟಿ ರೂಪಾಯಿ ನಷ್ಟವನ್ನು ರಾಜ್ಯ ಸರ್ಕಾರವೇ ಭರಿಸಬೇಕಾಗುತ್ತದೆ. ಒಟ್ಟಾರೆ 7 ವರ್ಷಗಳ ಅವಧಿಗೆ ಬರೋಬ್ಬರಿ 21,000 ಕೋಟಿ ರೂಪಾಯಿ ಬಾಡಿಗೆ ನೀಡಬೇಕಾದ ಹೊಣೆಗಾರಿಕೆ ರಾಜ್ಯದ ಮೇಲಿದ್ದು, ಇದರಲ್ಲಿ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ಪ್ರತಿ ಬಸ್ಸಿಗೆ ಕೇವಲ 30 ರಿಂದ 40 ಲಕ್ಷ ರೂಪಾಯಿ ಮಾತ್ರ ಎಂದು ಸಚಿವರು ವಿವರಿಸಿದ್ದಾರೆ.

ಬಸ್ಸುಗಳು ಕೆಟ್ಟು ನಿಂತರೂ ಹಣ ಪಾವತಿಸಬೇಕು!

ಕೇಂದ್ರದ ನಿಯಮಾವಳಿಗಳ ಪ್ರಕಾರ, ತಾಂತ್ರಿಕ ದೋಷ ಅಥವಾ ರಿಪೇರಿಯಿಂದಾಗಿ ಇ-ಬಸ್ಸುಗಳು ರಸ್ತೆಗೆ ಇಳಿಯದೆ ನಿಂತುಕೊಂಡರೂ ಸಹ ಒಪ್ಪಂದದ ಅನ್ವಯ ನಿಗದಿತ ಬಾಡಿಗೆ ಹಣವನ್ನು ಪಾವತಿಸಲೇಬೇಕು. ‘ಬಸ್ಸುಗಳು ಸಂಚಾರ ನಡೆಸಲಿ ಅಥವಾ ಇಲ್ಲದಿರಲಿ, ನಾವು ಖಾಸಗಿ ಕಂಪನಿಗಳಿಗೆ ವರ್ಷಕ್ಕೆ 2,850 ಕೋಟಿ ರೂಪಾಯಿ ನೀಡಬೇಕು ಎನ್ನುವುದು ಎಷ್ಟು ಸರಿ?’ ಎಂದು ಸಚಿವರು ಪ್ರಶ್ನಿಸಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಆರೋಪಕ್ಕೆ ತಿರುಗೇಟು

ಎರಡು ದಿನ ಹಿಂದಷ್ಟೇ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಕತ್ರಿಗುಪ್ಪೆಯಿಂದ ಬನಶಂಕರಿವರೆಗೆ ಬಿಎಂಟಿಸಿ ಬಸ್‌ನಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಸಂಚರಿಸಿ, ಪ್ರಯಾಣಿಕರ ಅಹವಾಲುಗಳನ್ನು ಆಲಿಸಿದ್ದರು. ನಂತರ ಮಾತನಾಡಿ, ಕೇಂದ್ರ ಸರ್ಕಾರ ನೀಡಿರುವ 4,500 ಬಸ್ಸುಗಳ ಪ್ರಸ್ತಾವನೆಗೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡದೆ ವಿಳಂಬ ಮಾಡುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು.

ಇದನ್ನೂ ಓದಿ: ಕೇಂದ್ರದ 4,500 ಎಲೆಕ್ಟ್ರಿಕ್ ಬಸ್‌ಗಳಿಗೆ ರಾಜ್ಯ ಸರ್ಕಾರ ಗ್ರೀನ್ ಸಿಗ್ನಲ್ ನೀಡಿಲ್ಲವೇಕೆ: ಕಾರಣ ಬಿಚ್ಚಿಟ್ಟ ತೇಜಸ್ವಿ ಸೂರ್ಯ

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಭೈರತಿ ಸುರೇಶ್, ‘ಸಂಸದ ತೇಜಸ್ವಿ ಸೂರ್ಯ ಮಾತನಾಡಿದ್ದಕ್ಕೆಲ್ಲಾ ಉತ್ತರ ಕೊಡಲು ನಾನು ಇಲ್ಲಿ ಕೂತಿಲ್ಲ. ರಾಜ್ಯದ ಹಣಕಾಸು ಹಿತದೃಷ್ಟಿಯಿಂದ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸದ್ಯದಲ್ಲೇ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:45 am, Wed, 1 July 26

Loading...
Unable to load recommendations.
Follow Us