ತಾಳೆ ಬೆಳೆದು ತಿಂಗಳಿಗೆ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿರುವ ರೈತ
ಹತ್ತಾರು ಸಮಸ್ಯೆಯ ನಡುವೇಯೂ ಇಲ್ಲೋಬ್ಬ ರೈತ ತಾಳೆ ಬೆಳೆಯುವುದರ ಮೂಲಕ ಸೈ ಎನಿಸಿಕೊಂಡಿದ್ದು ತಿಂಗಳಿಗೆ ಸಾವಿರಾರು ರೂಪಾಯಿ ದುಡಿಯುತ್ತಿದ್ದಾರೆ.
ಬೀದರ್: ಜಿಲ್ಲೆಯ ರೈತರು ಒಂದಲ್ಲಾ ಒಂದು ಸಂಕಷ್ಟಕ್ಕೆ ಸಿಲುಕುತ್ತಲೇ ಇರುತ್ತಾರೆ. ಸದಾ ಸಂಕಷ್ಟದಲ್ಲಿ ಬದುಕು ಸಾಗಿಸುವ ಇಲ್ಲಿನ ರೈತರ ಗೋಳು ಕೇಳುವವರು ಯಾರು ಎಂಬಂತಾಗಿದೆ. ಆಗಾಗ ಸಾಲದ ಬಾಧೆಗೆ ನೇಣಿಗೆ ಕೊರಳು ಕೋಡುವ ಇಲ್ಲಿನ ರೈತರ ಗೋಳು ಯಾರಿಗೂ ಕೇಳಿಸುವುದೇ ಇಲ್ಲ. ಆದರೆ ಇಂತಹ ಹತ್ತಾರು ಸಮಸ್ಯೆಯ ನಡುವೇಯೂ ಇಲ್ಲೋಬ್ಬ ರೈತ ತಾಳೆ ಬೆಳೆಯುವುದರ ಮೂಲಕ ಸೈ ಎನಿಸಿಕೊಂಡಿದ್ದಲ್ಲದೆ ತಿಂಗಳಿಗೆ ಸಾವಿರಾರು ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಒಮ್ಮೆ ಆದಾಯ ಬರಲು ತೊಡಗಿದರೆ ಮೂವತ್ತು ವರ್ಷಗಳ ಕಾಲ ನಿರಂತರ ಆದಾಯ ಕೊಡುವ ತಾಳೆ ಕೃಷಿ ಕಡೆಗೆ ಜಿಲ್ಲೆಯಲ್ಲಿ ಗಮನ ಹರಿಸಿದವರು ವಿರಳ. ಇಂತಹ ವಿರಳರಲ್ಲಿ ಬೀದರ್ ಜಿಲ್ಲೆಯ ಚಿಟ್ಟಗುಪ್ಪ ತಾಲ್ಲೂಕಿನ ಮಾರುತಿ ಧೋಬಿ ಒಬ್ಬರು.
ಚಿಟ್ಟಗುಪ್ಪ ಗ್ರಾಮದ ರೈತ ಮಾರುತಿ ತನ್ನ 5 ಎಕರೆ ಪ್ರದೇಶದಲ್ಲಿ 4 ವರ್ಷಗಳ ಹಿಂದೆ ತಾಳೆ ಹಾಕಿದ್ದರು. ಎರಡೂವರೆ ವರ್ಷದಲ್ಲಿ ಹಣ್ಣು ಬರಲು ಆರಂಭಗೊಂಡರೂ ಅದರಲ್ಲಿ ಅಷ್ಟು ಪ್ರಮಾಣದಲ್ಲಿ ತಾಳೆ ಇಳುವರಿ ಬಂದಿರಲಿಲ್ಲ. ಆದರೆ ಈಗ ಕಳೆದೊಂದು ವರ್ಷದಿಂದ ಪೂರ್ಣಪ್ರಮಾಣದಲ್ಲಿ ತಾಳೆ ಇಳುವರಿ ಕೊಡಲು ಆರಂಭಿಸಿದ್ದು, ಈಗ ಪ್ರತಿ ತಿಂಗಳು 70 ರಿಂದ 80 ಸಾವಿರಕ್ಕೂ ಅಧಿಕ ಆದಾಯ ಪಡೆದುಕೊಂಡು ನೆಮ್ಮದಿಯ ಜೀವನ ಕಂಡುಕೊಂಡಿದ್ದಾರೆ. ಅವರ ಸಾಧನೆ ಹಲವು ರೈತರಿಗೆ ಪ್ರೇರಣೆ ನೀಡುವಂತಾಗಿದೆ.
ನಾಲ್ಕು ವರ್ಷದ ಹಿಂದೆ ಖಾಸಗಿ ಕಂಪೆನಿಯಿಂದ ಉಚಿತ ತಾಳೆ ಸಸಿ ಪಡೆದು ಸರ್ಕಾರದ ಸಹಾಯ ಧನ ಪಡೆದು ತಾಳೆ ಗಿಡ ಬೆಳೆದಿದ್ದರು. ಇದಕ್ಕೆ ಒಟ್ಟು ನಾಲ್ಕು ಲಕ್ಷ ಖರ್ಚು ಮಾಡಲಾಗಿದೆ. ಒಂದು ಬಾರಿ ಖರ್ಚು ಮಾಡಿದರೆ ನಿರಂತರ ಆದಾಯ ಕೈ ಸೇರುತ್ತದೆ. ತಾಳೆ ಗಿಡ ಹಾಕಿದಾಗ ಎರಡೂವರೆ ವರ್ಷಕ್ಕೆ ಸ್ವಲ್ಪ ಹಣ್ಣು ಬಂದಿದೆ. ಇಷ್ಟು ಕಡಿಮೆ ಬಂದರೆ ಬದುಕೋದು ಹೇಗೆ ಎಂದು ಹಲವರು ಪ್ರಶ್ನಿಸಿದರೂ ತಲೆಕೆಡಿಸಿಕೊಂಡಿಲ್ಲ. ಮತ್ತೆರಡು ವರ್ಷದ ನಂತರ ಹಣ್ಣು ಚೆನ್ನಾಗಿ ಬಂದು ಇದೀಗ ತಿಂಗಳಿಗೆ ಉತ್ತಮ ಆದಾಯ ಬರುತ್ತಿದೆ ಎಂದು ರೈತ ಮಾರುತಿ ಹೇಳುತ್ತಾರೆ.
ಇನ್ನೂ ಮಾರುತಿ ಧೋಳೆ ತಮ್ಮ ಐದು ಎಕರೆಯಷ್ಟು ಜಮೀನಿನಲ್ಲಿ 285 ಸಸಿಗಳನ್ನ ನಾಟಿ ಮಾಡಿದ್ದಾರೆ. ಒಂದು ಗಿಡ ವರ್ಷಕ್ಕೆ ಸರಾ 25 ರಿಂದ 30 ಕೇಜಿಯಷ್ಟು ತಾಳೆ ಬೀಜವನ್ನ ಕೊಡುತ್ತದೆ. ತಿಂಗಳಿಗೆ 70 ರಿಂದ 80 ಸಾವಿರ ರೂಪಾಯಿ ಆದಾಯ ಕಟ್ಟಿಟ್ಟ ಬುತ್ತಿ. ಇನ್ನೂ ತಾಳೆ ಸಸಿ ನಾಟಿ ಮಾಡುವಾಗ ಅದಕ್ಕೆ ಖರ್ಚು ಬರುತ್ತದೆ. ನಂತರ ಯಾವುದೆ ಖರ್ಚಿಲ್ಲ, ಶೂನ್ಯ ಬಂಡವಾಳದಲ್ಲಿಯೇ ಮೂವತ್ತು ವರ್ಷಗಳ ಕಾಲ ಆದಾಯ ಪಡೆಯಬಹುದು. ಇನ್ನೂ ತಾಳೆ ಬೆಳೆಗಾರರಿಗೆ ತೋಟಗಾರಿಕೆ ಇಲಾಖೆಯಿಂದ ಪ್ರೋತ್ಸಾಹ ಸಿಗುತ್ತದೆ. ಆದರೆ ಅದು ಧನ ಸಹಾಯ ನೀಡುವುದಿಲ್ಲ. ಬದಲಾಗಿ ಸಸಿ ಉಚಿತವಾಗಿ ಒದಗಿಸುತ್ತದೆ.
ಕಬ್ಬು, ಭತ್ತ, ಮೆಕ್ಕೆಜೋಳ ಸಹಿತ ಯಾವುದೇ ಬೆಳೆಗಳಿಗಿಂತ ಅಧಿಕ ಲಾಭ ಮತ್ತು ಕಡಿಮೆ ಚಿಂತೆ ತಾಳೆ ಬೆಳೆಯಲ್ಲಿದೆ. ಜನರು ತಾಳೆ ಕೃಷಿಗೆ ಮುಂದಾಗಬೇಕು. ಬೆರೆ ಕೃಷಿಗೆ ಮಾಡಬೇಕಾದ ಕೆಲಸದ ಅರ್ಧವೂ ಇಲ್ಲಿಲ್ಲ ಎಂಬುದನ್ನು ಅವರು ನೋಡುತ್ತಿಲ್ಲ. ತಾಳೆ ಕೃಷಿ ಮಾಡುವವರಿಗೆ ತೋಟಗಾರಿಕೆ ಇಲಾಖೆಯು ಪ್ರೋತ್ಸಾಹ ಧನ ಸಹ ನೀಡುತ್ತದೆ. ಹನಿ ನೀರಾವರಿ ವ್ಯವಸ್ಥೆಗೂ ಸಬ್ಸಿಡಿ ಸಿಗುತ್ತದೆ. ಈ ಬೆಳೆಯಿಂದ ರೈತರು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಶಿವಪುತ್ರ ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಐದು ಎಕರೆ ಜಮೀನಿನಲ್ಲಿ ಬೆಳೆದಿರುವ ತಾಳೆ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆಯಲಾಗಿದೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆ ಬೆಳೆಯುವ ನೈಸರ್ಗಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಕಳೆದ ಎರಡು ದಶಕದಿಂದ ಕೃಷಿ ಕಾಯಕದಲ್ಲಿ ತೋಡಗಿಕೊಂಡಿರುವ ಇವರು ಜಿಲ್ಲೆ ಹಾಗೂ ರಾಜ್ಯ ರೈತರಿಗೆ ಮಾದರಿಯಾಗಿ ನಿಂತಿದ್ದಾರೆ. ಕಡಿಮೆ ನೀರನ್ನ ಬಳಸಿಕೊಂಡು ಹತ್ತಾರು ಎಕರೆ ನೀರಾವರಿ ಮಾಡುವುದು ಹೇಗೆ ಎನ್ನುವುದನ್ನ ಈ ಕುಟುಂಬ ತೋರಿಸಿಕೊಟ್ಟಿದೆ. ಒಟ್ಟಾರೆ ಸದಾ ಕಬ್ಬು ಬೆಳೆದು ಕೈಸುಟ್ಟುಕೊಳ್ಳುವ ಗಡಿ ಜಿಲ್ಲೆಯ ರೈತರಿಗೆ ಇವರು ಮಾದರಿಯಾಗಿದ್ದಾರೆ. ಕೆಲಸ ಯಾವುದಾದರೇನು ಶ್ರದ್ದೆಯಿಂದ ಮಾಡಿದ್ದರೆ ಇನ್ನೋಬ್ಬರಿಗೆ ಮಾದರಿಯಾಗುವುದರಲ್ಲಿ ಅನುಮಾನವಿಲ್ಲ ಎಂಬುದನ್ನು ಮಾರುತಿ ತೋರಿಸಿದ್ದಾರೆ.
ವರದಿ: ಸುರೇಶ್ ನಾಯಕ್ ಟಿವಿ9 ಬೀದರ್
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:33 pm, Fri, 28 October 22