ವಿಜಯೇಂದ್ರ ದಿಲ್ಲಿಗೆ ಹೋಗುವ ಮೊದಲೇ ಅಭ್ಯರ್ಥಿಗಳ ಘೋಷಣೆ: ಅಚ್ಚರಿ ಮೂಡಿಸಿದ ಹೈಕಮಾಂಡ್ ನಡೆ

ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಇದೇ ನವೆಂಬರ್ 13ರಂದು ನಡೆಯಲಿದೆ. ಚನ್ನಪಟ್ಟಣ, ಸಂಡೂರು ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳಿಗೆ ಬೈ ಎಲೆಕ್ಷನ್ ನಡೆಯಲಿದ್ದು, ಇದಕ್ಕೆ ಬಿಜೆಪಿ ಈಗಾಗಲೇ ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಆದ್ರೆ, ಹೈಕಮಾಂಡ್​ ಕರ್ನಾಟಕ ಬಿಜೆಪಿ ನಾಯಕರನ್ನು ದೂರ ಇಟ್ಟಿದ್ಯಾ ಎನ್ನುವ ಚರ್ಚೆಗಳು ಶುರುವಾಗಿವೆ.

ವಿಜಯೇಂದ್ರ ದಿಲ್ಲಿಗೆ ಹೋಗುವ ಮೊದಲೇ ಅಭ್ಯರ್ಥಿಗಳ ಘೋಷಣೆ: ಅಚ್ಚರಿ ಮೂಡಿಸಿದ ಹೈಕಮಾಂಡ್ ನಡೆ
ಅಶೋಕ್, ವಿಜಯೇಂದ್ರ
Follow us
ಕಿರಣ್​ ಹನಿಯಡ್ಕ
| Updated By: ರಮೇಶ್ ಬಿ. ಜವಳಗೇರಾ

Updated on: Oct 20, 2024 | 5:37 PM

ಬೆಂಗಳೂರು, (ಅಕ್ಟೋಬರ್ 20): ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ಇದೇ ನವೆಂಬರ್ 13ರಂದು ಉಪಚುನಾವಣೆ ನಡೆಯಲಿದೆ. ಹೀಗಾಗಿ ಬಿಜೆಪಿ ಸಂಡೂರು ಮತ್ತು ಶಿಗ್ಗಾಂವಿ ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದ್ರೆ, ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ್​, ಕರ್ನಾಟಕ ನಾಯಕರನ್ನು ದೂರ ಇಟ್ಟಿದೆ ಎನ್ನುವ ಮಾತುಗಳಿ ಕೇಳಿಬಂದಿವೆ. ಹೌದು..ಇದಕ್ಕೆ ಪೂರಕವೆಂಬಂತೆ ಸಂಭವ್ಯ ಅಭ್ಯರ್ಥಿಗಳ ಪಟ್ಟಿ ಹಿಡಿದುಕೊಂಡು ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ದೆಹಲಿಗೆ ತೆರಳಬೇಕಿತ್ತು. ಆದ್ರೆ, ಹೈಕಮಾಂಡ್​, ವಿಜಯೇಂದ್ರ ದಿಲ್ಲಿಗೆ ಬರುವುದಕ್ಕೂ ಮೊದಲೇ ಅಭ್ಯರ್ಥಿ ಪಟ್ಟಿಯನ್ನು ಘೋಷಣೆ ಮಾಡಿದೆ. ಇದು ರಾಜ್ಯ ಬಿಜೆಪಿಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

2+1 ಸೂತ್ರ ಸಿದ್ದಪಡಿಸಿದ ಬಿಜೆಪಿ ಹೈಕಮಾಂಡ್, ರಾಜ್ಯ ನಾಯಕರು ಸಂಭಾವ್ಯ ಪಟ್ಟಿ ಕಳಿಸೋ ಮುನ್ನವೇ ಟಿಕೆಟ್ ಘೋಷಿಸಿದೆ. ಚನ್ನಪಟ್ಟಣವನ್ನ ಜೆಡಿಎಸ್ ನಿರ್ಧಾರಕ್ಕೆ ಬಿಟ್ಟು, ಶಿಗ್ಗಾಂವಿ, ಸಂಡೂರು ಅಭ್ಯರ್ಥಿಯನ್ನ ಫೈನಲ್ ಮಾಡಿದೆ. ರಾಜ್ಯ ನಾಯಕರ ಜೊತೆ ಚರ್ಚಿಸಿದೇ ಘೋಷಿಸಿದೆ. ಚನ್ನಪಟ್ಟಣ ಅಭ್ಯರ್ಥಿ ಬಗ್ಗೆ ಬಿಜೆಪಿ ಪಾತ್ರವಿಲ್ಲ ಎಂಬ ಸುಳಿವನ್ನೂ ಬಿಎಸ್‌ವೈ ನೀಡಿದ್ದಾರೆ. ಹಾಗಾದ್ರೆ, ಶಿಗ್ಗಾಂವಿ ಮತ್ತು ಸಂಡೂರಿನಲ್ಲಿ ಯಾವ ಮಾನದಂಡದಲ್ಲಿ ಟಿಕೆಟ್ ಘೋಷಿಸಿದ್ರು ಅಂತಾ ನೋಡೋದಾದ್ರೆ , ಶಿಗ್ಗಾಂವಿಯಲ್ಲಿ ಹೈಕಮಾಂಡ್ ಆಂತರಿಕ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಪರ ಮತದಾರರು ಒಲವು ಹೊಂದಿರೋದು ಗೊತ್ತಾಗಿತ್ತು. ಬಿಎಸ್‌ವೈ ಸೇರಿ ರಾಜ್ಯ ನಾಯಕರು ಬೊಮ್ಮಾಯಿ ಪುತ್ರನ ಸ್ಪರ್ಧೆಗೆ ಒಪ್ಪಿಗೆ ಇದ್ದ ಕಾರಣ ಹೈಕಮಾಂಡ್ ಅಂತಿಮ ಮುದ್ರೆ ಒತ್ತಿದೆ.

ಇದನ್ನೂ ಓದಿ: ಚನ್ನಪಟ್ಟಣ ಬೈ ಎಲೆಕ್ಷನ್: ಜೆಡಿಎಸ್​ನಿಂದಲೇ ಸ್ಪರ್ಧಿಸುವಂತೆ ಯೋಗೇಶ್ವರ್​ಗೆ ಹೆಚ್​​ಡಿಕೆ ಆಫರ್

ಅತ್ತ ಸಂಡೂರಿನಲ್ಲಿ ಜನಾರ್ದನ ರೆಡ್ಡಿ, ಪ್ರಹ್ಲಾದ್ ಜೋಶಿ ಬೆಂಬಲದಿಂದ ಬಂಗಾರು ಹನುಮಂತುಗೆ ಸಂಡೂರು ಟಿಕೆಟ್ ಸಿಕ್ಕಿದೆ. ಹನುಮಂತು ಗೆಲ್ಲಿಸಿಕೊಂಡು ಬರುವ ಭರವಸೆಯನ್ನ ರೆಡ್ಡಿ ನೀಡಿದ್ದಾರೆ. ಹೀಗಾಗಿ ಹನುಮಂತುಗೆ ಮಣೆ ಹಾಕಲಾಗಿದೆ. ಇದರ ಜೊತೆಗೆ ಚನ್ನಪಟ್ಟಣವನ್ನೂ ಜೆಡಿಎಸ್ ನಿರ್ಧಾರಕ್ಕೆ ಬಿಟ್ಟು ಮೂರು ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಬಿಜೆಪಿ ಕೈತೊಳೆದುಕೊಂಡಿದೆ. ಯಾವುದೇ ಕ್ಷಣದಲ್ಲಿ ಚನ್ನಪಟ್ಟಣ ಟಿಕೆಟ್ ಘೋಷಣೆಯಾಗಲಿದ್ದು, ಯಾರು ಎನ್ನುವುದೇ ಕುತೂಹಲ ಮೂಡಿಸಿದೆ.

ರಾಜ್ಯ ನಾಯಕರನ್ನು ದೂರ ಇಟ್ಟಿತಾ ಹೈಕಮಾಂಡ್?

ಇನ್ನು ಶಿಗ್ಗಾಂವಿ, ಸಂಡೂರು ಅಭ್ಯರ್ಥಿ ಆಯ್ಕೆಯಲ್ಲಿ ಹೈಕಮಾಂಡ್, ಸಾರ್ವತ್ರಿಕ ಚುನಾವಣೆ ನಿಲುವನ್ನೇ ಅನುಸರಿಸಿದಂತಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಇಂದು(ಅಕ್ಟೋಬರ್ 20) ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಜೊತೆ ದೆಹಲಿಗೆ ತೆರಳಬೇಕಿತ್ತು. ಹಾಗೇ ವಿಪಕ್ಷ ನಾಯಕರಾದ ಆರ್ ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಅವರು ಸಹ ದಿಲ್ಲಿಗೆ ಪ್ರಯಾಣ ಬೆಳಸಬೇಕಿತ್ತು. ಆದ್ರೆ, ರಾಜ್ಯ ನಾಯಕರು ಬರುವುದಕ್ಕೂ ಮೊದಲೇ ಹೈಕಮಾಂಡ್​ ತಾನೇ ಶಿಗ್ಗಾಂವಿ ಮತ್ತು ಸಂಡೂರು ಕ್ಷೇತ್ರದ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಅಧಿಕೃತವಾಗಿ ಘೋಷಣೆ ಮಾಡಿಬಿಟ್ಟಿದೆ.

ರಾಜ್ಯ ನಾಯಕರ ಜತೆ ವಿಸ್ತೃತ ಚರ್ಚೆ ನಡೆಸದೇ. ಹಾಗೇ ರಾಜ್ಯ ಘಟಕದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಬರುವುದಕ್ಕೂ ಮೊದಲೇ ಮಟ್ಟದಲ್ಲೇ 2+1 ಸೂತ್ರ ರೆಡಿ ಮಾಡಿಯಾಗಿದ್ದು, ಈ ಪೈಕಿ ಒಂದನ್ನು ಕುಮಾರಸ್ವಾಮಿಗೆ ಬಿಟ್ಟು ಉಳಿದ ಎರಡು ಕ್ಷೇತ್ರಗಳಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಇದು ರಾಜ್ಯ ನಾಯಕರಿಗೆ ಶಾಕ್ ಕೊಟ್ಟಂತಾಗಿದೆ. ಈ ಮೂಲಕ ರಾಜ್ಯ ನಾಯಕರನ್ನು ಹೈಕಮಾಂಡ್ ದೂರ ಇಟ್ಟಿದೆ ಎನ್ನುವುದನ್ನು ಹೇಳಬಹುದು.

ಜೆಡಿಎಸ್​​ನಿಂದ ಸ್ಪರ್ಧಿಸುತ್ತಾರಾ ಯೋಗೇಶ್ವರ್?

ಇನ್ನು ಚನ್ನಪಟ್ಟಣ ಮೈತ್ರಿ ಅಭ್ಯರ್ಥಿ ಇನ್ನೂ ಗೊಂದಲದ ಗೂಡಾಗಿದೆ. ಜೆಡಿಎಸ್​ ಕ್ಷೇತ್ರವಾಗಿದ್ದರಿಂದ ಅಭ್ಯರ್ಥಿ ಆಯ್ಕೆಯನ್ನೂ ಸಹ ಬಿಜೆಪಿ ನಾಯಕರು ಕುಮಾರಸ್ವಾಮಿ ಹೆಗಲಿಗೆ ಹಾಕಿದ್ದಾರೆ. ಆದ್ರೆ, ಕುಮಾರಸ್ವಾಮಿಗೆ ಬಿಜೆಪಿಯ ಸಿಪಿ ಯೋಗೇಶ್ವರ್​ ಅವರ ಚಿಂತೆಯಾಗಿದೆ. ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಅವರನ್ನ ಕಣಕ್ಕಿಳಸಬೇಕೆಂದು ಕುಮಾರಸ್ವಾಮಿಯವರ ಆಸೆ ಇತ್ತು. ಆದ್ರೆ, ಎಚ್​ಡಿಕೆಗೆ ಯೋಗೇಶ್ವರ್ ಬಂಡಾಯದ ಭಯ ಕಾಡಿದೆ. ಹೀಗಾಗಿ ಕುಮಾರಸ್ವಾಮಿ ಅವರೇ ಸಿಪಿ ಯೋಗೇಶ್ವರ್​ ಅವರಿಗೆ ಒಂದು ಆಫರ್ ಕೊಟ್ಟಿದ್ದಾರೆ. ಅದೇನೆಂದರೆ ಸಿಪಿ ಯೋಗೇಶ್ವರ್ ಅವರೇ ಜೆಡಿಎಸ್​​ ಚಿಹ್ನೆಯಿಂದ ಸ್ಪರ್ಧೆ ಮಾಡಬೇಕೆಂದು ಎಚ್​ಡಿಕೆ ಬೇಡಿಕೆ ಇಟ್ಟಿದ್ದಾರೆ.

ಕಳೆದ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಲೇಬೆೇಕೆಂಬ ದೃಷ್ಟಿಯಿಂದ ದೇವೇಗೌಡರ ಅಳಿಯ ಮಂಜುನಾಥ್‌ರನ್ನ ಬಿಜೆಪಿಯಿಂದಲೇ ಕಣಕ್ಕಿಳಿಸಿದ್ವಿ. ಈಗ ಚನ್ನಪಟ್ಟಣ ನಮ್ಮ ಬಳಿಯೇ ಉಳಿಬೇಕು ಅಂದ್ರೆ, ಬಿಜೆಪಿ ಔದಾರ್ಯ ತೋರಬೇಕು ಎಂದು ಹೆಚ್‌ಡಿಕೆ ಹೇಳಿದ್ದಾರೆ. ಅಂದ್ರೆ, ಪರೋಕ್ಷವಾಗಿ ಯೋಗೇಶ್ವರ್ ಜೆಡಿಎಸ್ ಚಿಹ್ನೆಯಿಂದ ನಿಲ್ಲಲಿ ಎನ್ನುವುದು ಕುಮಾರಸ್ವಾಮಿ ಮಾತಿನ ಅರ್ಥವಾಗಿದೆ. ಆದ್ರೆ, ಸೈನಿಕನ ಯಾವ ನಿರ್ಧಾರ ಮಾಡುತ್ತಾರೆ ಎನ್ನುವುದೇ ನಿಗೂಢವಾಗಿದೆ.

ಯೋಗೇಶ್ವರ್​ಗೆ ಎಚ್​ಡಿಕೆ ಈ ಆಫರ್​​ ಕೊಡಲು ಕಾರಣ?

ಯೋಗೇಶ್ವರ್​ ಅವರು ಜೆಡಿಎಸ್​ನಿಂದಲೇ ಸ್ಪರ್ಧಿಸಲು ಎನ್ನುವ ಕುಮಾರಸ್ವಾಮಿ ಆಫರ್​ ಹಿಂದನ ಕಾರಣಗಳೇನು ಎನ್ನುವುದನ್ನು ನೋಡುವುದಾದರೆ, ಈಗಾಗಲೇ ಶಿಗ್ಗಾಂವಿ ಸಂಡೂರಿಗೆ ಬಿಜೆಪಿ ಅಭ್ಯರ್ಥಿ ಘೋಷಿಸಿದೆ. ಚನ್ನಪಟ್ಟಣದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಿಪಿವೈ ಕಣಕ್ಕಿಳಿದ್ರೆ, ಮೂರು ಕ್ಷೇತ್ರದಲ್ಲಿ ಬಿಜೆಪಿಯೇ ಸ್ಪರ್ಧೆ ಮಾಡಿದಂತಾಗುತ್ತೆ. ಇದ್ರಿಂದ ಚನ್ನಪಟ್ಟಣ ಜೆಡಿಎಸ್ ಕಾರ್ಯಕರ್ತರದಲ್ಲಿ ಅಸಮಾಧಾನ ಉಂಟಾಗಿ ಹಿನ್ನಡೆಯಾಗಬಹುದು. ಹೀಗಾಗಿ ಮೈತ್ರಿ ಧರ್ಮ ಪಾಲನೆಗೆ ಮುಂದಾಗಿರೋ ಬಿಜೆಪಿ ಜೆಡಿಎಸ್, ಯೋಗೇಶ್ವರ್‌ರನ್ನ ಜೆಡಿಎಸ್ ಚಿಹ್ನೆಯಡಿ ಕಣಕ್ಕಿಳಿಸುವ ಸಾಧ್ಯತೆ ಇದೆ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.