ಕರ್ನಾಟಕ ಬಿಜೆಪಿ ಭಿನ್ನಮತಕ್ಕೆ ಬ್ರೇಕ್ ಹಾಕಲು ಅಖಾಡಕ್ಕಿಳಿದ ವರಿಷ್ಠರು: ಅಶೋಕ್ ಜತೆ ರಾಜ್ಯ ಸಹ ಉಸ್ತುವಾರಿ ಮಹತ್ವದ ಸಭೆ
ಕರ್ನಾಟಕ ಬಿಜೆಪಿ ಆಂತರಿಕ ಸಂಘರ್ಷಕ್ಕೆ ಕೊನೆ ಹಾಡಲು ಕೊನೆಗೂ ಬಿಜೆಪಿ ಹೈಕಮಾಂಡ್ ಮುಂದಾಗಿದೆ. ಇದರ ಅಂಗವಾಗಿ ಬಿಜೆಪಿ ಕರ್ನಾಟಕ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಬೆಂಗಳೂರಿಗೆ ಭೇಟಿ ನೀಡಿ ಪ್ರತಿಪಕ್ಷ ನಾಯಕ ಆರ್ ಅಶೋಕ್ ಜೊತೆಗೆ ಮಹತ್ವದ ಸಭೆ ನಡೆಸಿದ್ದಾರೆ. ಸಭೆಯ ನಂತರ ಉಭಯ ನಾಯಕರು ಹೇಳಿದ್ದೇನು ಎಂಬ ವಿವರ ಇಲ್ಲಿದೆ.

ಬೆಂಗಳೂರು, ಫೆಬ್ರವರಿ 7: ಮೂರ್ನಾಲ್ಕು ದಿನಗಳ ಹಿಂದೆ ಭುಗಿಲೆದ್ದಿದ್ದ ಬಿಜೆಪಿ ಆಂತರಿಕ ಸಂಘರ್ಷ ಒಮ್ಮೆಯೇ ಶಾಂತವಾಗಿದೆ. ನಾವು ವರಿಷ್ಠರನ್ನ ಭೇಟಿ ಮಾಡುತ್ತೇವೆ, ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ದೂರು ಕೊಡುತ್ತೇವೆ ಎಂದು ಹಲ್ಲು ಮಸೆದುಕೊಂಡೇ ಹೋಗಿದ್ದ ಬಂಡಾಯ ಬಣವೂ ಎಲ್ಲೋ ಒಂದು ಕಡೆ ಥಂಡಾ ಹೊಡೆದಂತಿದೆ. ಆದರೂ ತೆರೆಮರೆಯಲ್ಲಿ ರಾಜಕೀಯ ಆಟಗಳು ಮಾತ್ರ ನಿಲ್ಲುತ್ತಿಲ್ಲ. ಒಂದು ಕಡೆ ಡ್ಯಾಮೇಜ್ ಕಂಟ್ರೋಲ್ ಕಥೆ ಅನಾವರಣ ಆಗುತ್ತಿದ್ದರೆ ಮತ್ತೊಂದೆಡೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅಸಮಾಧಾನದ ಮಾತುಗಳನ್ನಾಡುತ್ತಿದ್ದಾರೆ.
ರಾಜ್ಯ ಬಿಜೆಪಿ ಸಹ ಉಸ್ತುವಾರಿ ಬೆಂಗಳೂರಿಗೆ ಎಂಟ್ರಿ
ಮೊನ್ನೆ ಮೊನ್ನೆಯಷ್ಟೇ ದೂರಿನ ಮೂಟೆಗಳನ್ನು ಹೊತ್ತು ಬಂಡಾಯ ಬಣದ ನಾಯಕರ ತಂಡ ದೆಹಲಿಗೆ ದಾಂಗುಡಿ ಇಟ್ಟಿತ್ತು. ಎರಡ್ಮೂರು ದಿನಗಳ ಕಾಲ ಅಲ್ಲಿಯೇ ಠಿಕಾಣಿ ಹೂಡಿತ್ತು. ಈ ಬೆಳವಣಿಗೆಗಳ ಬೆನ್ನಲ್ಲೇ ಇಂದು ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ, ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿಯಲ್ಲಿ ಅಶೋಕ್ ಜತೆ ಮಹತ್ವದ ಮೀಟಿಂಗ್ ನಡೆಸಿ, ರಾಜ್ಯದಲ್ಲಾಗುತ್ತಿರುವ ಬೆಳವಣಿಗಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.
ಸಭೆ ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್, ಪಕ್ಷದಲ್ಲಿ ಸ್ವಲ್ಪ ಅಡೆತಡೆ ಆಗಿದೆ. ಇದರಿಂದ ನಮಗೂ ನೋವಾಗಿದೆ ಎಂದರು.
ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಮಾತನಾಡಿ, ಪಕ್ಷದಲ್ಲಿ ಎಲ್ಲೂ ಗಂಭೀರತೆ ಕಾಪಾಡಿ ಎನ್ನುವ ಮೂಲಕ ಒಳಬೇಗುದಿಯ ಕಿಚ್ಚು ಹಚ್ಚಿದವರಿಗೆ ತಿರುಗೇಟು ಕೊಟ್ಟಿದ್ದಾರೆ.
ಕರ್ನಾಟಕ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಹೇಳಿದ್ದೇನು?
‘‘ನಾನು ಮತ್ತೊಮ್ಮೆ ಹೇಳುದುವಕ್ಕೆ ಇಷ್ಟ ಪಡುತ್ತೇನೆ. ನಾನು ಎ ಅಥವಾ ಬಿ ಅಂತ ಹೇಳುತ್ತಿಲ್ಲ. ಇದು ಪ್ರತಿಯೊಬ್ಬರಿಗೂ ಅನ್ವಯ ಆಗುತ್ತದೆ. ಗಂಭೀರತೆ ಹಾಗೂ ಶಾಂತಿಯನ್ನು ಕಾಪಾಡಿ. ಪ್ರತಿಯೊಬ್ಬರಿಗೆ ಗೌರವ ಕೊಡಿ. ಕಾರ್ಯಕರ್ತರಿಗೆ ಮತ್ತೊಮ್ಮೆ ಹೇಳುತ್ತೇನೆ. ಶಾಂತಿಯುತ ವಾತಾವರಣ ಕಾಪಾಡಿಕೊಳ್ಳಿ, ಸಹಭಾಗಿತ್ವ, ಅಣ್ಣತಮ್ಮರಂತಹ ವಾತಾವರಣ ನಿರ್ಮಿಸಿ. ಎಂತಹದ್ದೇ ಸಮಸ್ಯೆಯನ್ನಾದರೂ ಬಗೆಹರಿಸುವಂತಹ ನಾಯಕತ್ವ ನಮ್ಮಲ್ಲಿ ಇದೆ. ಪಕ್ಷ ಈ ಎಲ್ಲಾ ಸಮಸ್ಯೆಗಳ ಇತ್ಯರ್ಥಕ್ಕೆ ಮುಂದಾಗಲಿದೆ’’ ಎಂದು ಕರ್ನಾಟಕ ರಾಜ್ಯ ಬಿಜೆಪಿ ಸಹ ಉಸ್ತುವಾರಿ ಸುಧಾಕರ್ ರೆಡ್ಡಿ ಹೇಳಿದರು.
ಇದೀಗ ವಿಜಯೇಂದ್ರ Vs ತಟಸ್ಥ ಟೀಮ್ ಸಮರ
ಗುರುವಾರವಷ್ಟೇ ವಿಜಯೇಂದ್ರ, ಬಿಜೆಪಿ ತಟಸ್ಥ ಗುಂಪಿಗೆ ತಮ್ಮದೇ ಧಾಟಿಯಲ್ಲಿ ಕುಟುಕಿದ್ದರು. ತಟಸ್ಥ ಗುಂಪಿನ ಬಗ್ಗೆಯೂ ಗೊತ್ತಿದೆ ಅಂತ ಲೇವಡಿ ಮಾಡಿದ್ದರು. ಇದಕ್ಕೆ ತಿರುಗೇಟು ಎಂಬಂತೆ ಮಾತನಾಡಿರುವ ಮುರುಗೇಶ್ ನಿರಾಣಿ, ತಟಸ್ಥ ಗುಂಪಿನ ಜತೆ ಮಾತನಾಡಬೇಕು, ಸಮಸ್ಯೆ ಸರಿ ಮಾಡಿಕೊಳ್ಳಬೇಕು ಎಂದಿದ್ದಾರೆ. ಅಲ್ಲದೆ, ಪರೋಕ್ಷವಾಗಿ ವಿಜಯೇಂದ್ರಗೆ ಕಾಲೆಳೆದಿದ್ದಾರೆ.
ಇದನ್ನೂ ಓದಿ: ಯತ್ನಾಳ್ ಬಣದ ಲಿಂಗಾಯತ ಅಸ್ತ್ರಕ್ಕೆ ಆರಂಭದಲ್ಲೇ ಹಿನ್ನಡೆ: ಗುಂಪುಗಾರಿಕೆ ಮಾಡಲ್ಲ, ಸಭೆ ನಡೆಸಲ್ಲ ಎಂದ ಬೊಮ್ಮಾಯಿ
ಎಂಎಲ್ಸಿ ರವಿಕುಮಾರ್ ಮಾತನಾಡಿ, ಬಹಿರಂಗ ಮಾತುಗಳು ಒಳ್ಳೇಯದಲ್ಲ ಎಂದು ಗರಂ ಆದರು.
ಇಷ್ಟೆಲ್ಲಾ ಬೆಳವಣಿಗೆಗಳ ನಡುವೆ, ಸೋಮವಾರ ಶ್ರೀರಾಮುಲು ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್ ಬುಲಾವ್ ಹಿನ್ನೆಲೆ, ದೆಹಲಿಗೆ ತೆರಳಿಲಿದ್ದು, ರಾಮುಲು ನಡೆ ತೀವ್ರ ಕುತೂಹಲ ಮೂಡಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ