AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಾತಿ ಗಣತಿ: ಸಮೀಕ್ಷೆಯಲ್ಲ ಶಿಕ್ಷೆ ಎನ್ನುತ್ತಾರೆ ಗಣತಿದಾರರು, ಅನುಭವಿಸುವ ಸಮಸ್ಯೆಗಳು ಏನೇನು ಗೊತ್ತೇ?

ಕರ್ನಾಟಕ ಸರ್ಕಾರದ ಜಾತಿ ಗಣತಿ ಸಮೀಕ್ಷೆಯಲ್ಲಿ ಗಣತಿದಾರರು, ವಿಶೇಷವಾಗಿ ಶಿಕ್ಷಕರು, ಎದುರಿಸಿದ ತೀವ್ರ ಸಮಸ್ಯೆಗಳನ್ನು ಶಿಕ್ಷಕಿಯೊಬ್ಬರ ಪತಿ ಸಾಮಾಜಿಕ ಮಾಧ್ಯಮದಲ್ಲಿ ವಿವರಿಸಿದ್ದಾರೆ. ಕರ್ತವ್ಯದ ಒತ್ತಡ, ಸಮೀಕ್ಷಾ ಆ್ಯಪ್‌ನ ತಾಂತ್ರಿಕ ಅಡಚಣೆಗಳು, ಸಾರ್ವಜನಿಕರಿಂದ ಎದುರಾದ ಸಹಕಾರ ಕೊರತೆ ಹಾಗೂ ಮಾನಸಿಕ ಒತ್ತಡದ ಕುರಿತು ಅವರು ವಿವರಿಸಿದ್ದು, ಸರ್ಕಾರ ಇಂಥದ್ದೊಂದು ಕಾರ್ಯಕ್ಕೆ ಮುಂದಾದರೆ ಅದಕ್ಕೆ ಪೂರಕ ವಾತಾವರಣ ಒದಗಿಸಿಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಜಾತಿ ಗಣತಿ: ಸಮೀಕ್ಷೆಯಲ್ಲ ಶಿಕ್ಷೆ ಎನ್ನುತ್ತಾರೆ ಗಣತಿದಾರರು, ಅನುಭವಿಸುವ ಸಮಸ್ಯೆಗಳು ಏನೇನು ಗೊತ್ತೇ?
ಸಾಂದರ್ಭಿಕ ಚಿತ್ರ
ಗಣಪತಿ ಶರ್ಮಾ
|

Updated on: Oct 07, 2025 | 2:03 PM

Share

ಬೆಂಗಳೂರು, ಅಕ್ಟೋಬರ್ 7: ಕರ್ನಾಟಕ (Karnataka) ಸರ್ಕಾರದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ (Caste Census) ಶುರುವಾದಾಗಿನಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗಣತಿದಾರರು ಕೂಡ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಆರಂಭದಿಂದಲೇ ವರದಿಗಳಾಗಿದ್ದವು. ಇದೀಗ, ಉದ್ಯಮಿ ವೀರಕಪುತ್ರ ಎಂ ಶ್ರೀನಿವಾಸ ಎಂಬವರು ಗಣತಿದಾರರ ಸಮಸ್ಯೆಗಳ ಬಗ್ಗೆ ಎಳೆಎಳೆಯಾಗಿ ಸಾಮಾಜಿಕ ಮಾಧ್ಯಮ ಫೇಸ್​​ಬುಕ್​​ನಲ್ಲಿ ಬರೆದುಕೊಂಡಿದ್ದಾರೆ. ಶ್ರೀನಿವಾಸ ಅವರ ಪತ್ನಿ ಶಿಕ್ಷಕಿಯಾಗಿದ್ದು, ಅವರೂ ಗಣತಿ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಗಣತಿ ವಿಚಾರವಾಗಿ ಕುಟುಂಬದ ಎದುರಾದ ಸಮಸ್ಯೆಗಳಿಂದ ತೊಡಗಿ, ಸಮೀಕ್ಷಾ ಕಾರ್ಯದ ವೇಳೆ ಏನೇನು ತೊಂದರೆಗಳಾದವು ಎಂಬುದನ್ನು ಅವರು ಫೇಸ್​ಬುಕ್ ಸಂದೇಶದಲ್ಲಿ ಉಲ್ಲೇಖಿಸಿದ್ದಾರೆ.

ಏಕಾಏಕಿ ಸಮೀಕ್ಷೆಯ ಕರ್ತವ್ಯಕ್ಕೆ ಹಾಜರಾಗಬೇಕೆಂದು ಸರ್ಕಾರ ಆದೇಶ ಹೊರಡಿಸಿದ್ದರಿಂದ, ಪೂರ್ವ ಸಿದ್ಧತೆ ಇಲ್ಲದೆ ಮನೆಯಲ್ಲಿ ಉಂಟಾದ ಸಮಸ್ಯೆಗಳ ಬಗ್ಗೆ ಅವರು ಪ್ರಸ್ತಾಪಿಸಿದ್ದಾರೆ. ಆದರೆ, ಕರ್ತವ್ಯಕ್ಕೆ ಮೊದಲ ಆದ್ಯತೆ ನೀಡುವ ನಮ್ಮಂಥವರಿಗೆ ಇದು ದೊಡ್ಡದಲ್ಲ ಎಂದೂ ಹೇಳಿಕೊಂಡಿರುವ ಅವರು ನಂತರ ಏನೇನಾಯ್ತು ಎಂಬುದನ್ನು ವಿವರಿಸಿದ್ದಾರೆ.

‘ಸಮೀಕ್ಷೆ ವೇಳೆ ಪತ್ನಿಗೆ ಅನಾರೋಗ್ಯ ಕಾಡಿತು. ಆದರೆ, ನಿಗದಿತ ಡೆಡ್​ಲೈನ್ ಒಳಗೆ ಕೆಲ ಮಾಡಿ ಮುಗಿಸಲೇಬೇಕಾದ ಅನಿವಾರ್ಯತೆ ಇರುವ ಕಾರಣ ಪತ್ನಿ ಜತೆ ನಾನೂ ಸಮೀಕ್ಷೆಗೆ ಹೋಗಿದ್ದೆ. ಆದರೆ, ಸಮೀಕ್ಷೆಗೆ ತೆರಳಿದಾಗಲೇ ಅದರ ನಿಜವಾದ ಕಷ್ಟದ ಅರಿವಾಯಿತು. ನಿಜವಾಗಿಯೂ ಮಾನಸಿಕ ಒತ್ತಡ ಶುರುವಾಯಿತು. ಸಮೀಕ್ಷೆ ಅನ್ನೋದು ಶಿಕ್ಷೆಯಂತಾಗಿಬಿಟ್ಟಿತು. ಆರಂಭದ ಮೂರ್ನಾಲ್ಕು ದಿನ ಆಪ್‌ ಸರಿಯಾಗಿ ವರ್ಕ್‌ ಆಗುತ್ತಿರಲಿಲ್ಲ. ಆನಂತರ ಆ ಸಮಸ್ಯೆ ಬಗೆಹರಿದು, ಸಮೀಕ್ಷೆಗೆ ಹೋದಾಗ ಅಲ್ಲಿನ ಸಮಸ್ಯೆಗಳು ಆಪ್ ಸಮಸ್ಯೆಗಿಂತ ದೊಡ್ಡದೆನಿಸಿಬಿಟ್ಟವು. ಅವುಗಳ ಕಾರಣಕ್ಕೆ ಶೋಭಾ ಹೈರಾಣಾಗಿದ್ದು ನಮಗೆಲ್ಲಾ ಕಾಣ್ತಿತ್ತು. ಸರ್ವೇ ಮಾಡುವುದು ಕಷ್ಟವಾಗಿರಲಿಲ್ಲ ಆದರೆ ಅಲ್ಲಿನ ಒತ್ತಡವನ್ನು ಎದುರಿಸುವುದು ಕಷ್ಟವಾಗಿತ್ತು’ ಎಂದು ಅವರು ಉಲ್ಲೇಖಿಸಿದ್ದಾರೆ.

ವೀರಕಪುತ್ರ ಎಂ ಶ್ರೀನಿವಾಸ ಬರಹದ ಪೋಸ್ಟ್ ಇಲ್ಲಿದೆ ನೋಡಿ

‘ಒಂದೊಂದು ಮನೆಯನ್ನೂ ಬಿಸಿಲಲ್ಲೂ ಹುಡುಕಿ ಹೋಗಬೇಕಿತ್ತು. ಕಷ್ಟಪಟ್ಟು ಮನೆ ಹುಡುಕಿ, ಬಾಗಿಲು ತಟ್ಟಿದಾಗ ಅವರ ವರ್ತನೆಗಳು ಮಾತ್ರ ಉಪೇಂದ್ರರ ಸಿನಿಮಾದ ಚಿತ್ರಕತೆ ತರ ವಿಚಿತ್ರವಾಗಿರುತ್ತಿದ್ದವು. ಕೆಲವರು ನನ್ನ ಶ್ರೀಮತಿಯನ್ನು ಶತ್ರುವನ್ನು ನೋಡುವಂತೆ ನೋಡುತ್ತಿದ್ದರು. ಒಬ್ಬಾಕೆಯಂತೂ ಗೆಟ್ ಔಟ್ ಎನ್ನುವಂತೆ ಕಿರುಚಿ ಮುಖದ ಮೇಲೆ ಬಾಗಿಲು ಹಾಕಿಬಿಟ್ಟಳು. ಇನ್ನೂ ಕೆಲವರಂತೂ ಮನೆಯಾಚೆಯೇ ನಿಲ್ಲಿಸಿ ಮಾತನಾಡುತ್ತಿದ್ದರು. ಒಬ್ಬರಿಗೆ ನಲ್ವತ್ತು ಪ್ರಶ್ನೆ. ಒಂದು ಮನೆಯಲ್ಲಿ ಐದು ಜನರಿದ್ದರೆ ಇನ್ನೂರು ಪ್ರಶ್ನೆ ಕೇಳಬೇಕಿತ್ತು. ಜೊತೆಗೆ ಮನೆಯವರಿಗೆಲ್ಲಾ ಸೇರಿ ಮತ್ತೆ ಇಪ್ಪತ್ತು ಹೆಚ್ಚುವರಿ ಪ್ರಶ್ನೆಗಳು!’ ಎಂದು ಅವರು ಗಣತಿದಾರರ ಸಮಸ್ಯೆಗಳನ್ನು ತೆರೆದಿಟ್ಟಿದ್ದಾರೆ.

ಇದನ್ನೂ ಓದಿ: ಜಾತಿಗಣತಿ: ‘ಸಾಮಾನ್ಯ ಬ್ರಾಹ್ಮಣ’ ಆಯ್ಕೆ ಇಲ್ಲದ್ದಕ್ಕೆ ಧಾರವಾಡದಲ್ಲಿ ಆಕ್ಷೇಪ

‘ಸರ್ಕಾರ ಅದೇನಾದರೂ ಮಾಡಿಕೊಳ್ಳಲಿ! ಅದು ನನ್ನ ಆದ್ಯತೆ ಅಲ್ಲ. ಆದರೆ ಶಿಕ್ಷಕರ ಅಥವಾ ಸಮೀಕ್ಷರ ಸ್ಥಿತಿ ಮಾತ್ರ ತೀರಾ ಕೆಟ್ಟದಾಗಿದೆ. ಅದನ್ನು ಸರಿಪಡಿಸಬೇಕಿತ್ತು ಎಂಬುದು ನನ್ನ ಕಾಳಜಿ. ಇಡೀ ದಿನ ಹತ್ತಾರು ಮನೆಯವರ ಗುಣ ಸ್ವಭಾವಗಳನ್ನು ನೋಡಿದಾಗ ಅನ್ನಿಸಿದ್ದು ಇದು ಸಮೀಕ್ಷೆಯಲ್ಲ ಶಿಕ್ಷೆ ಅಂತ. ಸರ್ಕಾರದ ಯಾವುದೇ ಯೋಜನೆ ಆಗಲಿ ಘೋಷಿಸುವುದು ದೊಡ್ಡದಲ್ಲ. ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಿಕೊಡಬೇಕು. ಯೋಜನೆಯ ಜಾರಿಗೂ ಮುನ್ನ ಜಾಗೃತಿ ಮೂಡಿಸಬೇಕು. ಶಿಕ್ಷಕರಿಗೆ/ಸಮೀಕ್ಷರಿಗೆ ಮಾನದಂಡಗಳನ್ನು ರೂಪಿಸಿದಂತೆ ನಾಗರೀಕರ ಜವಬ್ದಾರಿಗಳನ್ನೂ ಮನದಟ್ಟುಮಾಡಿಸಬೇಕು. ಶಿಕ್ಷಕರು ಮನೆ ಮನೆಗೆ ಹೋಗುತ್ತಿರುವುದು ಭಿಕ್ಷೆ ಕೇಳಲಿಕ್ಕೆ ಅಲ್ಲ ಅನ್ನೋದು ಎಲ್ಲರಿಗೂ ತಿಳಿದಿರಬೇಕು’ ಎಂಬುದಾಗಿ ಶ್ರೀನಿವಾಸ ಅವರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ