ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅನುಮತಿಯ ಚರ್ಚೆ; ವನ್ಯ ಪ್ರಾಣಿಗಳ ಜೀವಕ್ಕೆ ಕಂಟಕ?
ಕೇರಳದ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಚುನಾಯಿತರಾದರೆ ಚಾಮರಾಜನಗರದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಪ್ರದೇಶದಲ್ಲಿ ವಾಹನಗಳು ಸಂಚರಿಸಲು NH766 ಅನ್ನು ರಾತ್ರಿ ಸಂಚಾರಕ್ಕಾಗಿ ಮುಕ್ತಗೊಳಿಸುವ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಆದರೆ, ಇದಕ್ಕೆ ಪರಿಸರವಾದಿಗಳು, ವನ್ಯಜೀವಿ ಪ್ರೇಮಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೇರಳದ ವಯನಾಡಿನಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವುದರಿಂದ ವಯನಾಡು ಲೋಕಸಭಾ ಉಪ ಚುನಾವಣೆ ಕಾವು ಪಡೆದಿದೆ. ಈ ಚುನಾವಣೆಯಲ್ಲಿ ಬಹುತೇಕ ಕರ್ನಾಟಕ ಮತ್ತು ವಯನಾಡಿನ ಸಂಪರ್ಕದ ವಿಷಯವನ್ನೂ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಒಂದುವೇಳೆ ವಯನಾಡಿನಲ್ಲಿ ಪ್ರಿಯಾಂಕಾ ಗಾಂಧಿ ಗೆದ್ದರೆ ವಯನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸುವ ಬಂಡೀಪುರದಲ್ಲಿ ರಾತ್ರಿ ವಾಹನ ಸಂಚಾರಕ್ಕೆ ಅವಕಾಶ ನೀಡುವುದಾಗಿ ಕರ್ನಾಟಕ ಸರ್ಕಾರದ ಕಾಂಗ್ರೆಸ್ ನಾಯಕರು ಭರವಸೆ ನೀಡಿರುವುದರಿಂದ ಬಂಡಿಪುರದಲ್ಲಿ ವನ್ಯ ಜೀವಿಗಳ ಸುರಕ್ಷತೆ ಬಗ್ಗೆ ಮತ್ತೊಮ್ಮೆ ಆತಂಕ ಹೆಚ್ಚಾಗಿದೆ.
ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಕರ್ನಾಟಕ ಸರ್ಕಾರ ರಾತ್ರಿ ಸಂಚಾರವನ್ನು ನಿಷೇಧ ಮಾಡಿದೆ. ಆದರೆ ಕೇರಳ ಸರ್ಕಾರ 2009ರಿಂದಲೂ ಈ ಮಾರ್ಗದಲ್ಲಿ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡುವಂತೆ ಕರ್ನಾಟಕ ಸರ್ಕಾರಕ್ಕೆ ಒತ್ತಾಯಿಸುತ್ತಲೇ ಬಂದಿದೆ. ಆದರೆ, ವನ್ಯಜೀವಿಗಳ ಸುರಕ್ಷತೆ ಮತ್ತು ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ರಾತ್ರಿ ವೇಳೆ ಸಂಚಾರಕ್ಕೆ ನಿರ್ಬಂಧ ಹೇರಲಾಗಿತ್ತು.
ಇದನ್ನೂ ಓದಿ: ಮೈಸೂರು ದಸರಾ ಗಜಪಡೆಯಲ್ಲಿ ಗಮನ ಸೆಳೆಯುತ್ತಿವೆ ಬಂಡೀಪುರದ ಮೂರು ಆನೆಗಳು! ಏನಿವುಗಳ ವಿಶೇಷ?
ಆದರೆ, ಇದೀಗ ಪ್ರಿಯಾಂಕಾ ಗಾಂಧಿ ವಾದ್ರಾ ವಯನಾಡ್ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದು, ಒಂದು ವೇಳೆ ಅವರು ಗೆಲುವು ಸಾಧಿಸಿದರೆ ಬಂಡೀಪುರ ರಾತ್ರಿ ಸಂಚಾರ ನಿರ್ಬಂಧ ತೆರವು ಮಾಡಲಾಗುತ್ತದೆ ಎನ್ನುವ ಚರ್ಚೆಗಳು ನಡೆದಿವೆ. ಆದರೆ, ಇದಕ್ಕೆ ಪರಿಸರವಾದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್ ರಾತ್ರಿ 9ರಿಂದ ಬೆಳಿಗ್ಗೆ 6ರವರೆಗೆ ಬಂಡೀಪುರದಲ್ಲಿ ಸಂಚಾರವನ್ನು ನಿಷೇಧಿಸಿದೆ. ಏಕೆಂದರೆ ಬಂಡೀಪುರವು ಹುಲಿ ಸಂರಕ್ಷಿತ ಸ್ಥಳವಾಗಿದೆ. ಇಲ್ಲಿ ಆನೆಗಳು, ಹುಲಿಗಳು, ಕಾಡುನಾಯಿಗಳು, ಜಿಂಕೆಗಳು, ಸರೀಸೃಪಗಳು ಮತ್ತು ರಾತ್ರಿಯ ಪಕ್ಷಿಗಳು ವಯನಾಡ್, ಕೊಲ್ಕತ್ತಾ, ಗುಂಡ್ಲುಪೇಟೆ ಕಡೆಗೆ ವೇಗವಾಗಿ ಚಲಿಸುವ ವಾಹನಗಳ ಶಬ್ದಕ್ಕೆ ಹೆದರಿ ಪ್ರಾಣ ಉಳಿಸಿಕೊಳ್ಳಲು ಓಡಿಹೋಗುತ್ತವೆ ಎಂದು ಹಿರಿಯ ಪರಿಸರವಾದಿ ಜೋಸೆಫ್ ಹೂವಾರ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವಯನಾಡ್ ಉಪಚುನಾವಣೆಗೆ ಪ್ರಿಯಾಂಕಾ ಗಾಂಧಿ ಪ್ರಚಾರ; ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
2022ರ ಡಿಸೆಂಬರ್ ತಿಂಗಳಲ್ಲಿ ಟ್ರಕ್ ಡಿಕ್ಕಿ ಹೊಡೆದು ಗರ್ಭಿಣಿ ಆನೆ ಸಾವನ್ನಪ್ಪಿತು. ಮರಣೋತ್ತರ ಪರೀಕ್ಷೆಯ ಸಮಯದಲ್ಲಿ ತಾಯಿಯ ಗರ್ಭದಿಂದ ಸತ್ತ ಆನೆಯ ಮರಿಯನ್ನು ಹೊರತೆಗೆದಾಗ ಅಪಘಾತದ ತನಿಖೆ ನಡೆಸುತ್ತಿರುವ ಜನರು ಕೂಡ ಕಣ್ಣೀರು ಹಾಕಿದ್ದರು. ಈ ಅಪಘಾತವಾಗದಿದ್ದರೆ ಇನ್ನು ಒಂದು ವಾರದಲ್ಲೇ ಆನೆ ಮರಿ ಜನಿಸುತ್ತಿತ್ತು. ಆದರೆ, ದಾರಿ ತಪ್ಪಿದ ಟ್ರಕ್ ಚಾಲಕ ಎರಡು ಜೀವಗಳನ್ನು ಕಿತ್ತುಕೊಂಡಿದ್ದ.
ಅರಣ್ಯವು ವನ್ಯಜೀವಿ ಪ್ರಭೇದಗಳಿಗೆ ಸೇರಿದೆ ಎಂಬುದನ್ನು ನೆನಪಿನಲ್ಲಿಡೋಣ. ನಾವು ಅವರ ಜಾಗಕ್ಕೆ ನುಗ್ಗುತ್ತಿದ್ದೇವೆ ಎಂಬುದನ್ನು ಮರೆಯಬಾರದು. ಹೀಗಾಗಿ, ಬಂಡೀಪುರದಲ್ಲಿ ರಾತ್ರಿ ವೇಳೆ ಮುಕ್ತವಾಗಿ ಸಂಚರಿಸುವ ಪ್ರಾಣಿಗಳ ಜೀವಕ್ಕೆ ಕುತ್ತು ತರುವ ವಾಹನಗಳ ಸಂಚಾರಕ್ಕೆ ಅವಕಾಶ ನೀಡುವುದು ಒಳ್ಳೆಯದಲ್ಲ ಎಂದು ಪರಿಸರವಾದಿ ಜೋಸೆಫ್ ಮನವಿ ಮಾಡಿದ್ದಾರೆ.
ಇನ್ನಷ್ಟು ಕರ್ನಾಟಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ