ಸ್ವಾತಂತ್ರ ಬಂದು 75 ವರ್ಷವಾದ್ರೂ ಅಂಧಕಾರದಲ್ಲಿವೆ 80 ಕುಟುಂಬಗಳು, ಬ್ಯಾಟರಿ ಬೆಳಕಲ್ಲೇ ಮಕ್ಕಳ ವ್ಯಾಸಂಗ
ಅವ್ರೆಲ್ಲಾ ಕಾಡನ್ನೆ ನಂಬಿ ಜೀವನ ಸಾಗಿಸುವ ಕಾಡಿನ ಮಕ್ಕಳು. ಕಾಡಲ್ಲೇ ಹುಟ್ಟಿ ಕಾಡಲ್ಲೇ ಬೆಳೆದು ಕಾಡಲ್ಲೇ ತಮ್ಮ ಉಸಿರು ಚೆಲ್ಲೊ ಪ್ರಕೃತಿ ಮಕ್ಕಳ ಪರಿಸ್ಥಿತಿ ಈಗ ಘನ ಘೋರವಾಗಿದೆ. ಸ್ವಾತಂತ್ರ ಬಂದು 75 ವರ್ಷ ಕಳೆದ್ರು ಇನ್ನೂ ಅಂಧಕಾರದಲ್ಲಿ ಕಾಲ ಕಳೆಯುವ ದುಸ್ಥಿತಿ ಮುಂದುವರೆದಿದೆ. ಸರ್ಕಾರದ ಯಾವ ಭಾಗ್ಯಗಳು ಸಹ ಇವರಿಗೆ ತಲುಪುತ್ತಿಲ್ಲ. ಕತ್ತಲಾದ್ರೆ ಸಾಕು ಕಾಡು ಪ್ರಾಣಿಗಳಿಂದ ಜೀವ ಉಳಿಸಿಕೊಳ್ಳುವ ದುಸ್ಥಿತಿ ಈ ಸೋಲಿಗರದ್ದು.
ಚಾಮರಾಜನಗರ, ಫೆ.20: ಜಿಲ್ಲೆಯ ಹನೂರು ತಾಲೂಕಿನ ಕಾಡಂಚಿನ ಪ್ರದೇಶವಾದ ಪಾಲಾರ್ (Palar) ಗ್ರಾಮದಲ್ಲಿನ ಜನರ ಸ್ಥಿತಿ ಹೇಳತೀರದ್ದು. ಸ್ವಾತಂತ್ರ ಬಂದು ಬರೋಬ್ಬರಿ 75 ವರ್ಷ ಕಳೆದ್ರು ಈ ಗ್ರಾಮದ 80 ಸೋಲಿಗ ಮನೆಗಳಿಗೆ ವಿದ್ಯುತ್ ಭಾಗ್ಯವೇ ಇಲ್ಲ (No Electricity Connection). ಇನ್ನು ಅಂಧಕಾರದಲ್ಲಿ ಕಾಲ ಕಳೆಯುತ್ತಿದ್ರು ಸರ್ಕಾರ ಈ ಗ್ರಾಮಕ್ಕೆ ವಿದ್ಯುತ್ ಸಂಪರ್ಕವೇ ನೀಡಿಲ್ಲ. ಕತ್ತಲಾದ್ರೆ ಸಾಕು ಚಿಮಣಿ, ಬುಡ್ಡಿ, ಬ್ಯಾಟರಿ ಬೆಳಕಲ್ಲೇ ಕಾಲ ಕಳೆಯುತ್ತಿದ್ದಾರೆ.
ಕಾಡುಗಳ್ಳ ವೀರಪ್ಪನ್ಗೆ ಸಹಾಯ ಮಾಡ್ತಾರೆ ಎಂಬ ಆರೋಪಕ್ಕೆ ಅಂದಿನ ರಾಜ್ಯ ಸರ್ಕಾರ ಈ ಸೋಲಿಗರನ್ನ ಕಾಡಿನಿಂದ ನಾಡಿಗೆ ಶಿಫ್ಟ್ ಮಾಡಿತ್ತು. 80 ಕುಟುಂಬಗಳು ಪಾಲಾರ್ ಗ್ರಾಮಕ್ಕೆ ಬಂದು ನೆಲೆಸಿದ್ರು. ಆದರೆ ಆಗಿನಿಂದಲೂ ಸಹ ಈ ಗ್ರಾಮಸ್ಥರಿಗೆ ಯಾವುದೇ ಮೂಲಭೂತ ಸೌಕರ್ಯವನ್ನ ರಾಜ್ಯ ಸರ್ಕಾರ ನೀಡಿಲ್ಲ. ಕತ್ತಲಾದ್ರೆ ಒಂದೆಡೆ ಕಾಡು ಪ್ರಾಣಿಗಳ ಕಾಟ ಮತ್ತೊಂದೆಡೆ ವಿದ್ಯಾರ್ಥಿಗಳಿಗೆ ವ್ಯಾಸಾಂಗ ಮಾಡಲು ವಿದ್ಯುತ್ ಇಲ್ಲ. ಚಿಕ್ಕ ಬ್ಯಾಟರಿ ಬೆಳಕಿನಲ್ಲೇ ಪರೀಕ್ಷೆಗೆ ತಯಾರಿ ನಡೆಸಬೇಕು. ಬ್ಯಾಟರಿ ಬಂದ್ ಆದ್ರೆ ಮನೆಯ ಆಚೆ ಬೆಂಕಿ ಹಚ್ಚಿ ಅದರಿಂದ ಬರುವ ಬೆಳಕಿನಲ್ಲಿ ವ್ಯಾಸಾಂಗ ಮಾಡುವ ಪರಿಸ್ಥಿತಿ ಈ ಕಾಡಿನ ಮಕ್ಕಳದ್ದು. ದುರಂತ ಅಂದ್ರೆ ಗ್ರಾಮದ 100 ಮೀಟರ್ ದೂರದಲ್ಲಿ ವಿದ್ಯುತ್ ಕಂಬಗಳಿದ್ರು ಈ ಗ್ರಾಮಕ್ಕೆ ಮಾತ್ರ ವಿದ್ಯುತ್ ಸಂಪರ್ಕವಿಲ್ಲ. ಕೆಲ ಎನ್ಜಿಓಗಳು ಸೋಲಾರ್ ವ್ಯವಸ್ಥೆ ಮಾಡಿವೆ. ಆದ್ರೆ ಅದು ಕೂಡ ಕೆಟ್ಟಿ ಹೋಗಿ ಸಾಕಷ್ಟು ವರ್ಷಗಳೇ ಕಳೆದು ಹೋಗಿವೆ.
ಇದನ್ನೂ ಓದಿ: SSLC PUC Exam 2024 Time Table: ದ್ವಿತೀಯ ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟ
ದಿನ ನಿತ್ಯ ಕಾಡು ಪ್ರಾಣಿಗಳ ಜೊತೆ ಸಂಘರ್ಷ ನಡೆಸಿಯೇ ಈ ಸೋಲಿಗರು ಬದುಕನ್ನ ಸಾಗಿಸುವ ಅನಿವಾರ್ಯತೆ ಎದುರಾಗಿದೆ. ರಾಜ್ಯ ಸರ್ಕಾರ ಈಗಾಗ್ಲೆ ರಾಜ್ಯಾದ್ಯಂತ 200 ಯ್ಯೂನಿಟ್ ವಿದ್ಯುತ್ ಉಚಿತವಾಗಿ ನೀಡಿದರೂ ಆ ಯೋಜನೆ ಈ ಜನರಿಗೆ ತಲುಪೇ ಇಲ್ಲಾ. 2024 ಬಂದ್ರೂ ಇನ್ನು ಕಾಡಂಚಿನ ಗ್ರಾಮದ ಮಕ್ಕಳು ಅಂಧಕಾರದಲ್ಲೇ ಕಾಲ ಕಳೆಯುತ್ತಿರುವುದು ಮಾತ್ರ ನಿಜಕ್ಕೂ ದುರಂತವೇ ಸರಿ. ರಾಜ್ಯ ಸರ್ಕಾರ ಈ ವರದಿಯನ್ನ ನೋಡಿ ನಮ್ಮ ಬಾಳನ್ನ ಬೆಳಗಲಿ ಎಂದು ಗ್ರಾಮಸ್ಥರು ಕಾಯುತ್ತಿದ್ದು ಆದಷ್ಟು ಬೇಗ ರಾಜ್ಯ ಸರ್ಕಾರ ಈ ಗಿರಿಜನರಿಗೆ ಸೂಕ್ತ ಮೂಲ ಭೂತ ಸೌಕರ್ಯ ನೀಡಲಿ ಎಂಬುದೆ ನಮ್ಮ ಆಶಯವಾಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ