ಈಶಾ ಫೌಂಡೇಷನ್: ಸದ್ಗುರು ಜಗ್ಗಿ ವಾಸುದೇವ್ರಿಂದ ಬೃಹತ್ ನಾಗಮಂಟಪ ಉದ್ಘಾಟನೆ
ಇಂದು ಈಶಾ ಫೌಂಡೇಷನ್ನ ಸದ್ಗುರು ಜಗ್ಗಿ ವಾಸುದೇವ್ ಅವರು ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಈಶಾ ಫೌಂಡೇಷನ್ ಶಿವನ ಪ್ರತಿಮೆಯ ಮುಂಭಾಗ ನಾಗಮಂಟಪವನ್ನು ಉದ್ಘಾಟನೆ ಮಾಡಿದರು.
ಚಿಕ್ಕಬಳ್ಳಾಪುರ: ಇಂದು ಈಶಾ ಫೌಂಡೇಷನ್ನ (Isha Foundation) ಸದ್ಗುರು ಜಗ್ಗಿ ವಾಸುದೇವ್ (Jaggi Vasudev) ಅವರು ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಈಶಾ ಫೌಂಡೇಷನ್ ಶಿವನ ಪ್ರತಿಮೆಯ ಮುಂಭಾಗ ನಾಗಮಂಟಪವನ್ನು (Naga Statue) ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) , ಸಚಿವ ಡಾ.ಕೆ.ಸುಧಾಕರ್ (K Sudhakar) ಭಾಗಿಯಾಗಿದ್ದರು.
ಈಶಾ ಫೌಂಡೇಷನ್ವತಿಯಿಂದ ತಮಿಳುನಾಡಿನ ಕೊಯಮತ್ತೂರು ಬಳಿ ನಿರ್ಮಾಣವಾಗಿರುವ ಆದಿಯೋಗಿ ಪ್ರತಿಮೆಯಂತೆ ಚಿಕ್ಕಬಳ್ಳಾಪುರದ ಜಾಲಾರಿ ನರಸಿಂಹಸ್ವಾಮಿ ಬೆಟ್ಟದ ತಪ್ಪಲಲ್ಲಿ ಈಶಾ ಫೌಂಡೇಷನ್ನ ಸದ್ಗುರು ಜಗ್ಗಿ ವಾಸುದೇವ್ ಅವರು 112 ಅಡಿಗಳ ಶಿವನಮೂರ್ತಿ ನಿರ್ಮಾಣ ಮಾಡಲು ಅಡಿಗಲ್ಲು ಹಾಕಿದ್ದಾರೆ.
ಇದರ ಮೊದಲ ಹೆಜ್ಜೆಯಾಗಿ ನಾಗಮಂಟಪವನ್ನು ಇಂದು ಉದ್ಘಾಟನೆ ಮಾಡಲಾಯಿತು. ಈ ನಾಗಮಂಟಪ ತಮಿಳುನಾಡಿನಿಂದ ಬೃಹತ್ ಲಾರಿಯಲ್ಲಿ ಚಿಕ್ಕಬಳ್ಳಾಪುರಕ್ಕೆ ಆಗಮಿಸಿತು. ನಾಗ ವಿಗ್ರಹ ಸಾಗುವ ಮಾರ್ಗದಲ್ಲಿ ಎಲ್ಲಡೆ ಪೂಜೆ ಪುನಸ್ಕಾರ ಹಾಡು ನೃತ್ಯ ಶಿವಾನಾಮ ಕೇಳಿಬಂತು.
ನಾಗಶಿಲೆಯು ಚಿಕ್ಕಬಳ್ಳಾಪುರ ನಗರದ ಒಕ್ಕಲಿಗ ಕಲ್ಯಾಣ ಮಂಟಪದಿಂದ ಬಿಬಿ ರಸ್ತೆ ಎಂ.ಜಿ.ರಸ್ತೆ ದಿನ್ನೇಹೊಸಹಳ್ಳಿ ರಸ್ತೆ ಸೂಸೆಪಾಳ್ಯಾ ಹನುಮಂತಪುರ ಗ್ರಾಮಗಳ ಮೂಲಕ ಈಶಾ ಫೌಂಡೇಷನ್ ನ ನೂತನ ಆಶ್ರಮಕ್ಕೆ ತೆರಳಿತು. ದಾರಿ ಮಧ್ಯೆ ಜನ ನಾಗಶಿಲೆಗೆ ಕೈಮುಗಿದು ಆರತಿ ಬೆಳಗಿ ಪೂಜೆ ಪುನಸ್ಕಾರ ಮಾಡಿದರು.
ಜಾಲಾರಿ ನರಸಿಂಹಸ್ವಾಮಿ ಕ್ಷೇತ್ರದ ಬಳಿ ಈಗಾಗಲೇ ಈಶಾ ಫೌಂಡೇಷನ್ 110 ಎಕರೆ ರೈತರ ಭೂಮಿಯನ್ನು ಖರೀದಿ ಮಾಡಿದ್ದು, ಭೂಮಿ ವಿಸ್ತರಣೆ ಕಾರ್ಯ ಮುಂದುವರೆದಿದೆ. ಮುಂದಿನ ಸಂಕ್ರಾಂತಿ ಹಬ್ಬಕ್ಕೆ ಆದಿಯೋಗಿ ಶಿವನ ವಿಗ್ರಹ ಪ್ರತಿಷ್ಠಾಪನೆ ಮಾಡುವ ಬಗ್ಗೆ ಜಗ್ಗಿ ವಾಸುದೇವನ್ ಅನುಯಾಯಿಗಳ ಬಳಿ ಹೇಳಿದ್ದಾರಂತೆ.
ಸದ್ಗುರು ಜಿಲ್ಲೆಯನ್ನು ಆಧ್ಯಾತ್ಮಿಕ ಪ್ಲಾನೆಟ್ ಮಾಡಬೇಕೆಂದುಕೊಂಡಿದ್ದಾರೆ: ಸಿಎಂ ಬೊಮ್ಮಾಯಿ
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸದ್ಗುರು ಜಗ್ಗಿ ವಾಸುದೇವ್ ಒಬ್ಬ ಉತ್ತಮ ಕಲಾವಿದರು. ಆಧ್ಯಾತ್ಮಿಕ ಪ್ಲಾನೆಟ್ ಮಾಡಬೇಕೆಂದು ಅವರಿಗೆ ಚಿಂತನೆ ಇದೆ. ಜ್ಞಾನ, ಕರ್ಮದಿಂದ ಸಾಧನೆ ಮಾಡುವವರಿಗೆ ಅವಕಾಶ ಕೊಡುತ್ತಿದ್ದಾರೆ. ಬಹಳಷ್ಟು ಜನರಿಗೆ ನಾಗರಿಕತೆಯ ಸಂಸ್ಕೃತಿಯೇ ಗೊತ್ತಿಲ್ಲ ಎಂದು ಹೇಳಿದರು.
ಸದ್ಗುರು ವಾಸುದೇವ್ ಈ ಜಿಲ್ಲೆಯನ್ನು ಬಂದು ಅಧ್ಯಾತ್ಮಿಕ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಸದ್ಗುರುಗೆ ನಮ್ಮ ಸರ್ಕಾರ ಎಲ್ಲ ರೀತಿಯ ಸಹಕಾರ ಕೊಡಲಿದೆ. ಸುಧಾಕರ್ ಯಾವ ಘಳಿಗೆಯಲ್ಲಿ ಗುರೂಜಿಯನ್ನು ಜಿಲ್ಲೆಗೆ ಕರೆದರೋ, ಚಿಕ್ಕಬಳ್ಳಾಪುರ-ಕೋಲಾರ ಕೆರೆಗಳೆಲ್ಲವೂ ತುಂಬಿ ಕೋಡಿ ಹರಿದಿವೆ. ಮರುಭೂಮಿ ಇದೀಗ ಕೃಷಿಭೂಮಿಯಾಗಿ ಬದಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಸದ್ಗುರು ತಂಡದ ಕೆಲಸ ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ: ಡಾ. ಕೆ ಸುಧಾಕರ
ಸದ್ಗುರು ತಂಡದ ಕೆಲಸ ನೋಡಿ ನಾನು ಮೂಕವಿಸ್ಮಿತನಾಗಿದ್ದೇನೆ. ಒಂದು ಜಿಲ್ಲೆಯಿಂದ 2 ಭಾರತರತ್ನ ನೀಡಿದ ಮಣ್ಣಿನ ಭೂಮಿ ನಮ್ಮದು. ಆಧ್ಯಾತ್ಮಕ ಇತಿಹಾಸವಿರುವ ಜಿಲ್ಲೆಯ ಪಟ್ಟಿಗೆ ಇದು ಸಹ ಸೇರಿದೆ. ಸಂಕ್ರಾಂತಿಗೆ ಸಿಎಂ ಬೊಮ್ಮಾಯಿ ಅವರು 112 ಅಡಿ ಎತ್ತರ ಶಿವನ ಮೂರ್ತಿ ಉದ್ಘಾಟಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಪ್ರಪಂಚದ ಪ್ರಮುಖ ಆಧ್ಯಾತ್ಮಕ ಕೇಂದ್ರವಾಗುತ್ತೆ ಎಂದು ಹೇಳಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:19 pm, Sat, 8 October 22