ಗುಡ್ಡ ಕುಸಿತ ಹಿನ್ನೆಲೆ ನಂದಿಬೆಟ್ಟಕ್ಕೆ 20 ದಿನ ಪ್ರವೇಶ ಬಂದ್: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ

ರಸ್ತೆ ಕೊಚ್ಚಿ ಹೋಗಿದ್ದು, ಶಾಶ್ವತ ಕಾಮಗಾರಿ ಮುಗಿಯತನಕ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಗಿರಿಧಾಮದ ಮೇಲೆರುವ ವಸತಿ ಗೃಹಗಳಿಗೆ ಅವಕಾಶ ಇಲ್ಲ. ನಿನ್ನೆ ರಾತ್ರಿ ತಂಗಿದ್ದವರನ್ನು ಪರ್ಯಾಯ ಮಾರ್ಗದ ಮೂಲಕ ಕೆಳಗಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಗುಡ್ಡ ಕುಸಿತ ಹಿನ್ನೆಲೆ ನಂದಿಬೆಟ್ಟಕ್ಕೆ 20 ದಿನ ಪ್ರವೇಶ ಬಂದ್: ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ.ಆರ್

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮಲ್ಲಿ ಗುಡ್ಡ ಕುಸಿದು ರಸ್ತೆ ಕೊಚ್ಚಿ ಹೋದ ಹಿನ್ನಲೆಯಲ್ಲಿ ಪ್ರವಾಸಿಗರ ಹಿತದೃಷ್ಟಿಯಿಂದ 20 ದಿನಗಳ ಕಾಲ ನಂದಿ ಗಿರಿಧಾಮ ಬಂದ್ ಮಾಡಲು ನಿರ್ಧರಿಸಲಾಗಿದೆ ಎಂದು ಟಿವಿ9 ಡಿಜಿಟಲ್​ಗೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಲತಾ.ಆರ್ ಹೇಳಿಕೆ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ರಸ್ತೆ ಕೊಚ್ಚಿ ಹೋಗಿದ್ದು, ಶಾಶ್ವತ ಕಾಮಗಾರಿ ಮುಗಿಯತನಕ ಪ್ರವೇಶ ನಿರ್ಬಂಧಿಸಲಾಗಿದೆ. ಹೀಗಾಗಿ ಗಿರಿಧಾಮದ ಮೇಲೆರುವ ವಸತಿ ಗೃಹಗಳಿಗೆ ಅವಕಾಶ ಇಲ್ಲ. ನಿನ್ನೆ ರಾತ್ರಿ ತಂಗಿದ್ದವರನ್ನು ಪರ್ಯಾಯ ಮಾರ್ಗದ ಮೂಲಕ ಕೆಳಗಿಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಜಲಾವೃತಗೊಂಡ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ
ಚಿಕ್ಕಬಳ್ಳಾಪುರ ನಗರದಲ್ಲಿ ಭಾರಿ ಮಳೆಯ ಪರಿಣಾಮ ಜಿಲ್ಲೆಯ ಜೈಭೀಮ್ ಬಡಾವಣೆ, ಶಾಂತಿನಗರ ಹಾಗೂ ಶನಿಮಹಾತ್ಮ ದೇಗುಲ ಬಳಿಯ ಬಡಾವಣೆ ಜಲಾವೃತವಾಗಿದೆ.  ಇದರಿಂದಾಗಿ ಮನೆಗಳಲ್ಲಿದ್ದ ಅಪಾರ ಪ್ರಮಾಣದ ವಸ್ತುಗಳು ನೀರುಪಾಲಾಗಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡದ ಹಿನ್ನೆಲೆ ಜಲಾವೃತವಾಗಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯ ಚಿಕ್ಕಬಳ್ಳಾಪುರ ಡಿಸಿ ಆರ್.ಲತಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

ಕನಿಷ್ಠ ಒಂದು ವಾರ ಬಂದ್: ಚಿಕ್ಕಬಳ್ಳಾಪುರ ತಹಶೀಲ್ದಾರ್
ರಾತ್ರಿಯಿಡೀ ಸುರಿದ ಮಳೆಗೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗಿರಿಧಾಮದ ಗುಡ್ಡಗಳು ಕುಸಿದಿವೆ. ಇದರಿಂದಾಗಿ ರಸ್ತೆ ಸಂಚಾರ ಬಂದ್​ ಆಗಿದೆ. ಪರಿಣಾಮ ಈ ವಾರದ ಕೊನೆಗೆ ನಂದಿ ಗಿರಿಧಾಮ ನೋಡಲು ಹೋಗುವವರಿಗೆ ನಿರಾಸೆಯಾಗಿದೆ. ಸದ್ಯ ಸ್ಥಳಕ್ಕೆ ಚಿಕ್ಕಬಳ್ಳಾಪುರ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುಡ್ಡ ಕುಸಿತದಿಂದ ಗಿರಿಧಾಮದ ರಸ್ತೆ ಕೊಚ್ಚಿ ಹೋಗಿದೆ. ರಸ್ತೆ ಸಂಚಾರಕ್ಕೆ ಪೂರಕವಾಗಿ ಮಾಡಲು ಒಂದು ವಾರ ಸಮಯ ಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಚಿಕ್ಕಬಳ್ಳಾಪುರದ ನಂದಿ ಗಿರಿಧಾಮದ ಬಳಿ ತೆರವು ಕಾರ್ಯ
ನಂದಿ ಗಿರಿಧಾಮದ ರಂಗಪ್ಪ ವೃತ್ತದ ಬಳಿ ಗುಡ್ಡ ಕುಸಿತ ಹಿನ್ನೆಲೆ ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಮಣ್ಣು ತೆರವು ಕಾರ್ಯಾಚರಣೆ ಪ್ರಾರಂಭವಾಗಿದೆ. ಸ್ಥಳಕ್ಕೆ ಪಿಡಬ್ಲ್ಯೂಡಿ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಚ್ಚಿ ಹೋದ ರಸ್ತೆಯನ್ನು ಜೆಸಿಬಿ ಮೂಲಕ ದುರಸ್ಥಿ ಮಾಡಲು ಅಧಿಕಾರಿಗಳು ಮುಂದಾಗಿದ್ದು, ಪಿಡಬ್ಲ್ಯೂಡಿ ಇಂಜಿನಿಯರ್ ಸಂತೋಷ ನೇತೃತ್ವದಲ್ಲಿ ರಸ್ತೆ ದುರಸ್ಥಿ ಕಾರ್ಯ ಆರಂಭವಾಗಿದೆ.

ಗಿರಿಧಾಮದ ವಸತಿ ಗೃಹದಲ್ಲಿ ತಂಗಿರುವ ಪ್ರವಾಸಿಗರಿಗೆ ಪರ್ಯಾಯ ವ್ಯವಸ್ಥೆ
ನಂದಿ ಗಿರಿಧಾಮದಲ್ಲಿ ಗುಡ್ಡ ಕುಸಿದು ರಸ್ತೆ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಗಿರಿಧಾಮದಿಂದ ಬೆಂಗಳೂರಿಗೆ ಬರಲು ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಕಾರುಗಳು ಕೆಳಗೆ ಬರಲಾಗದೆ ಇದ್ದಿದ್ದರಿಂದ ಕಾಲ್ನಡಿಗೆಯಲ್ಲಿ ಸುಲ್ತಾನ ಪೇಟೆ ಮಾರ್ಗವಾಗಿ ಕೆಳಗೆ ಇಳಿಯಲು ಕೆಎಸ್​​ಟಿಡಿಸಿ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.

30ಕ್ಕೂ ಹೆಚ್ಚು ಜನ ಪ್ರವಾಸಿಗರು ಬೆಟ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಸುಲ್ತಾನಪೇಟೆಯಿಂದ ಬೆಂಗಳೂರು ತಲುಪಲು ಕೆಎಸ್​​ಟಿಡಿಸಿಯ ಬಸ್​ಗಳಲ್ಲಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ ಎಂದು ಕೆಎಸ್​​ಟಿಡಿಸಿ ಹಿರಿಯ ಅಧಿಕಾರಿ ಟಿವಿ9 ಡಿಜಿಟಲ್​ಗೆ ಮಾಹಿತಿ ನೀಡಿದ್ದಾರೆ.

ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ
ಚಿಕ್ಕಬಳ್ಳಾಪುರದಲ್ಲಿ ರಾತ್ರಿಯಿಡೀ ಸುರಿದ ಮಳೆಗೆ ಅವಾಂತರ ಸೃಷ್ಟಿಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಜೈಭೀಮ್ ನಗರ ಬಡಾವಣೆಯಲ್ಲಿ ಮನೆಗಳಿಗೆ ನೀರು ನುಗ್ಗಿದ್ದು,
ನಗರಸಭೆ ಅಧಿಕಾರಿಗಳ ವಿರುದ್ಧ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
ನಂದಿ ಬೆಟ್ಟದಲ್ಲಿ ಭಾರೀ ಭೂಕುಸಿತ, ಕನಿಷ್ಠ ಒಂದು ವಾರ ಬಂದ್: ಚಿಕ್ಕಬಳ್ಳಾಪುರ ತಹಶೀಲ್ದಾರ್

ರಾತ್ರಿಯಿಡಿ ಸುರಿದ ಧಾರಾಕಾರ ಮಳೆಗೆ ನಂದಿ ಬೆಟ್ಟದಲ್ಲಿ ಗುಡ್ಡ ಕುಸಿತ: ಪ್ರವಾಸಿಗರನ್ನು ವಾಪಸ್ ಕಳಿಸುತ್ತಿರುವ ಪೊಲೀಸರು

 

Read Full Article

Click on your DTH Provider to Add TV9 Kannada